ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಕೆಲಸ ಮಾಡುವವರೆಲ್ಲಾ ಯಾರು?: ರವಿಕೃಷ್ಣಾ ರೆಡ್ಡಿ ಪತ್ರ

2 years ago

ಬೆಂಗಳೂರು: ಕರ್ನಾಟಕ ರಾಷ್ಟ್ರ ಸಮಿತಿ ಸಂಸ್ಥಾಪಕ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅವರು ಬರೆದ ಪತ್ರದ ಪೂರ್ಣ ಪಾಠ ಇಲ್ಲಿದೆ.

ಮಾನ್ಯ ಮುಖ್ಯಮಂತ್ರಿಗಳೇ,
Chief Minister of Karnataka
ಮುಖ್ಯಮಂತ್ರಿಗಳ ಕಚೇರಿ/ಸಚಿವಾಲಯದಲ್ಲಿ (CMO) ಕೆಲಸ ಮಾಡುವವರೆಲ್ಲಾ ಯಾರು? ಏಜೆಂಟರೋ, ಡೀಲ್ ಮಾಸ್ಟರ್‌ಗಳೋ, ಬೌನ್ಸರ್‌ಗಳೋ, ಫಿಕ್ಸರ್‌ಗಳೋ, ತಮ್ಮ ವೈಯಕ್ತಿಕ ಬೇಕುಬೇಡಗಳನ್ನು ನೋಡಿಕೊಳ್ಳಲು ತಾವು ನೇಮಿಸಿಕೊಂಡಿರುವ ಖಾಸಗಿ ಸಿಬ್ಬಂದಿಯೋ
ಅಥವ
ಜನರಿಗೆ ಉತ್ತರದಾಯಿತ್ವ ಇರುವ ಜನರ ತೆರಿಗೆಯ ಹಣದಲ್ಲಿ ಸಂಬಳ ಪಡೆಯುವ ಸರ್ಕಾರಿ ನೌಕರರೋ?

ನಾವು KRS ಪಕ್ಷದ ವತಿಯಿಂದ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಈ ರಾಜ್ಯದ ಮಂತ್ರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಸಾರ್ವಜನಿಕ ವಿಚಾರದ ಕುರಿತು ಹತ್ತಾರು ಪತ್ರಗಳನ್ನು ಬರೆದಿದ್ದೇವೆ. ಆದರೆ ಯಾವುದೇ ಮಂತ್ರಿಯ ಕಚೇರಿಯಿಂದಾಗಲಿ ಅಥವ ಮುಖ್ಯಮಂತ್ರಿಯ ಕಚೇರಿಯಿಂದಾಗಲಿ, ನಾವು ಪ್ರಸ್ತಾಪಿಸಿರುವ ವಿಷಯಕ್ಕೆ ತೆಗೆದುಕೊಂಡಿರುವ ಕ್ರಮ/ತೀರ್ಮಾನ ಇರಲಿ, ಪತ್ರ ತಲುಪಿದೆ ಎನ್ನುವ ಕನಿಷ್ಠ ಉತ್ತರವೂ ಇಲ್ಲಿಯವರೆಗೆ ನಮಗೆ ಬಂದಿಲ್ಲ. ಇದೆಂತಹ ಆಡಳಿತ ವ್ಯವಸ್ಥೆ? ಎಂತಹ ಉತ್ತರದಾಯಿತ್ವ? ಪ್ರಜಾಪ್ರಭುತ್ವದಲ್ಲಿ ಇದು ಅಸಡ್ಡೆ ಅಥವ ದುರಹಂಕಾರ ಅಲ್ಲದೇ ಮತ್ತೇನು?

ಮುಖ್ಯಮಂತ್ರಿಗಳ ಕಚೇರಿ/ಸಚಿವಾಲಯದಲ್ಲಿ (CMO) ಹಿರಿಯ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳೂ ಸೇರಿದಂತೆ ನೂರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಾರೆ. ಇದರಲ್ಲಿ ಬಹುತೇಕರು ಯಾವಾಗಲೂ ಹೊರಗುತ್ತಿಗೆ ನೌಕರರೇ ಇರುತ್ತಾರಂತೆ. ನಿಜಕ್ಕೂ ಇವರು ಮಾಡುವ ಕೆಲಸಗಳಾದರೂ ಏನು? ಹಣ, ಪ್ರಭಾವ, ಜಾತಿ, ಕುಲ, ಗೋತ್ರಗಳ ಆಧಾರದ ಮೇಲೆ ಯಾವ್ಯಾವ ಸರ್ಕಾರಿ ಅಧಿಕಾರಿಗಳನ್ನು ಎಲ್ಲಿಗೆ ವರ್ಗಾವಣೆ ಮಾಡಬೇಕು ಎಂದು ನಿರ್ಧರಿಸುವುದೇ ಇಲ್ಲಿಯ ಬಹುತೇಕರ ಕೆಲಸ ಎಂದು ಹೇಳಲಾಗುತ್ತದೆ. ಅದರ ಜೊತೆಗೆ ಮುಖ್ಯಮಂತ್ರಿ ಸ್ಥಾನದ ಪ್ರಭಾವವನ್ನು ಬಳಸಿಕೊಂಡು ಹಣ, ವೈಯಕ್ತಿಕ, ಜಾತಿ, ರಾಜಕಾರಣ ಸೇರಿದಂತೆ ಯಾವೆಲ್ಲಾ ಕಾರಣಗಳಿಗೆ ಯಾರಿಗೆಲ್ಲಾ ಸರ್ಕಾರದಿಂದ ಏನೆಲ್ಲಾ ಅಕ್ರಮ ಅನುಕೂಲಗಳನ್ನು ಮಾಡಿಕೊಡಬಹುದು ಎನ್ನುವ ಯೋಜನೆ, ಪಿತೂರಿ, ಹಸ್ತಕ್ಷೇಪ ಮಾಡುವುದೂ ಸಹ ಇವರ ಪೂರ್ಣಾವಧಿ ಉದ್ಯೋಗ ಎನ್ನಲಾಗುತ್ತಿದೆ.

ಇದೆಲ್ಲಾ ನಿಜವೇ?

ಮುಖ್ಯಮಂತ್ರಿ ಸಚಿವಾಲಯದ ಬಹುತೇಕ ಸಿಬ್ಬಂದಿಗೆ ನಿರ್ದಿಷ್ಟ ಕೆಲಸವೇ ಇರುವುದಿಲ್ಲವಂತೆ. ಮ್ಯಾನೇಜ್ ಮಾಡುವುದೇ ಇವರ ಪ್ರಮುಖ ಉದ್ಯೋಗ. ಯಾರನ್ನು ಮತ್ತು ಏನನ್ನು ಇವರು ಮ್ಯಾನೇಜ್ ಮಾಡುತ್ತಾರೆ? ತಮ್ಮ ಈಗಿನ ಮುಖ್ಯಮಂತ್ರಿ ಸಚಿವಾಲಯದ ಸಿಬ್ಬಂದಿಯೂ ಸೇರಿದಂತೆ ಇತ್ತೀಚಿನ ಎಲ್ಲಾ ಮುಖ್ಯಮಂತ್ರಿಗಳ ಕಚೇರಿಯ ಸಿಬ್ಬಂದಿ ಬಹುತೇಕವಾಗಿ ಮುಖ್ಯಮಂತ್ರಿಗಳ ಸ್ವಕ್ಷೇತ್ರ, ಸ್ವಜಿಲ್ಲೆ, ಸ್ವಜಾತಿಗೆ ಸೇರಿದವರೇ ಆಗಿರುತ್ತಾರೆ ಎನ್ನುವ ಆರೋಪಗಳು ಇವೆ. ಇದೆಂತಹ ಮಾದರಿ? ಇದೆಂತಹ ನಡವಳಿಕೆ?

ಹಾಗೆಯೇ, ಮುಖ್ಯಮಂತ್ರಿಗಳ ಸಚಿವಾಲಯದ ಬಹುತೇಕ ಸಿಬ್ಬಂದಿ ಹೊರಗುತ್ತಿಗೆಯವರಂತೆ. ಅವರು ಮಾಡುತ್ತಿರುವ ಕೆಲಸಗಳನ್ನೇ ಮಾಡುವುದಕ್ಕೆ ಸರ್ಕಾರಿ ನೌಕರರೇ ಇರುವಾಗ ಈ #ಖಾಸಗಿಪಡೆ’ಯ ನೇಮಕ ಯಾಕಾಗಿ? ಸರ್ಕಾರಿ ನೌಕರರಿಗೆ ಗೌಪ್ಯತೆಯನ್ನು ಕಾಪಾಡುವ ಜವಾಬ್ದಾರಿಯೂ ಸೇರಿದಂತೆ ಉತ್ತರದಾಯಿತ್ವ ಮತ್ತು ನಿರ್ದಿಷ್ಟ ಜವಾಬ್ದಾರಿ ಮತ್ತು ಬಾಧ್ಯತೆಗಳು ಇರುತ್ತವೆ. ಈ ಖಾಸಗಿ ಪಡೆಗೆ ಅವು ಯಾವುವೂ ಅನ್ವಯಿಸುವುದಿಲ್ಲ. ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ಎನ್ನುವವರು ರೂಪಿಸುವ ವ್ಯವಸ್ಥೆಯೇ ಇದು?

ತಮ್ಮ ಸಚಿವಾಲಯದ ಈ ಕತೆಯೇ ರಾಜ್ಯ ಸರ್ಕಾರದ ಇತರೆ ಸಚಿವರ ಕಚೇರಿಗಳ ಕತೆಯೂ ಎಂದು ಹೇಳಲಾಗುತ್ತಿದೆ. ಎಲ್ಲೆಡೆಯೂ ಅದೇ ವ್ಯವಸ್ಥೆ ಇರುವ ಕಾರಣಕ್ಕಾಗಿಯೇ ನಾವು ಮಂತ್ರಿಗಳಿಗೆ ಅವರ ಇಲಾಖೆಯ ವಿಚಾರವಾಗಿ ಸಾರ್ವಜನಿಕ ಹಿತಾಸಕ್ತಿಯಿಂದ ಬರೆಯುವ ಪತ್ರಗಳಿಗೆ ಮಾರೋಲೆಯೇ ಇಲ್ಲ. ಇವರೆಲ್ಲರೂ ಅಧಿಕಾರ ಅನುಭವಿಸಲು ಮಂತ್ರಿಗಳಾಗಿರುವುದೋ ಅಥವ ಜನಪರವಾದ, ಪ್ರಜಾಸತ್ತಾತ್ಮಕವಾದ, ಸಂವಿಧಾನಬದ್ಧ ಆಡಳಿತ ನೀಡಲೋ?

ತಮ್ಮ ಕಾಲದಲ್ಲಿಯಾದರೂ ಇವೆಲ್ಲಾ ಬದಲಾಗಬಾರದೇ?

ಇವೆಲ್ಲವನ್ನೂ ಬದಲಾಯಿಸದೆ, ಆಡಳಿತದಲ್ಲಿ ದಕ್ಷತೆ ಮತ್ತು ಪಾರದಕ್ಷತೆ ತಾರದೆಯೇ, ತಾವು ಇನ್ನೆಂತಹ #ಕರ್ನಾಟಕಮಾದರಿ ಕಟ್ಟುತ್ತೀರಿ ಮತ್ತು ಆ ಕುರಿತು ಮಾತನಾಡುತ್ತಿದ್ದೀರಿ?

ಈ ಪತ್ರವನ್ನಾದರೂ ತಮ್ಮ ಕಚೇರಿಯ ಸಿಬ್ಬಂದಿ ಕಸದ ಬುಟ್ಟಿಗೆ ಹಾಕದೆ ತಮಗೆ ತಲುಪಿಸುತ್ತಾರೆ ಮತ್ತು ತಾವು ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಮೊದಲಿಗೆ ತಮ್ಮ ಕಛೇರಿಯಿಂದಲೇ ಆಡಳಿತ ಸುಧಾರಣೆಗಳಿಗೆ ನಾಂದಿ ಹಾಡುತ್ತೀರಿ ಎನ್ನುವ ವಿಶ್ವಾಸ ನನ್ನದು.

ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.

ವಂದನೆಗಳೊಂದಿಗೆ,
ರವಿ ಕೃಷ್ಣಾರೆಡ್ಡಿ
ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ

Leave a Reply