ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ: ರವಿಕೃಷ್ಣಾ ರೆಡ್ಡಿ

2 years ago

ದೃಷ್ಟಿ ಆಯಿತು!???

ಇನ್ನೊಬ್ಬರ ಕಣ್ಣುಕುಕ್ಕುವಂತೆಯಾಗಲಿ, ಅಸೂಯೆ ಪಡುವಂತೆಯಾಗಲಿ, ನಾನೆಲ್ಲಿ ಬದುಕಿದ್ದೇನೆ? ಅಂತಹದ್ದು ನಾವೇನು ಮಾಡಿದ್ದೇವೆ?

ಕಳೆದ ಮಂಗಳವಾರ ನಮ್ಮ ಬೈಕ್‌ಗೆ ನಾಯಿ ಅಡ್ಡ ಬಂದು, ನಮ್ಮ ಗಾಡಿ ಅದಕ್ಕೆ ಗುದ್ದಿ, ನಾನು ಮತ್ತು ಸುಪ್ರಿಯಾ ಕೆಳಗೆ ಬಿದ್ದಿದ್ದಕ್ಕೆ ಮತ್ತು ನನಗೆ ಗಾಯಗಳಾಗಿದ್ದಕ್ಕೆ ಕೆಲವರು ನಿಮಗೆ ದೃಷ್ಟಿ ಆಗಿದೆ, ಇನ್ನೇನೋ ಆಗಿದೆ ಎಂದು ಹೇಳುತ್ತಿದ್ದಾರೆ. ಅದು ಮಾಡಿಸಿ, ಇದು ಮಾಡಿಸಿ ಎನ್ನುತ್ತಾರೆ.

ಮೊದಲಿಗೆ, ನನಗೆ ಅಂತಹದರ ಬಗ್ಗೆ ನಂಬಿಕೆ ಇಲ್ಲ. ಅಂತಹದ್ದು ಸಾಧ್ಯ ಅಂತಲೂ ಅನ್ನಿಸಿಲ್ಲ. ಕೋಟ್ಯಾಂತರ ಜನರ ಅಸೂಯೆ ಅಥವ ಕೋಪ ಅಥವ ದ್ವೇಷಕ್ಕೆ ಗುರಿಯಾಗಿರುವವರು ಗುಂಡುಕಲ್ಲಿನ ಹಾಗೆ ಇರುವಾಗ ಇವೆಲ್ಲಾ ಭಯದಿಂದ ಉತ್ಪತ್ತಿಯಾದ ಭಾವನೆಗಳೇ ಹೊರತು ಬೇರೇನಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಮಾಡುವಂತಾದ್ದಾಗಲಿ, ಮಾಡಿಸುವಂತಾದ್ದಾಗಲಿ ಏನೂ ಇಲ್ಲ.

ಎರಡನೆಯದು, ನಾನು ಕೆಲವರ ಅಭಿಮಾನಕ್ಕೆ ಅಥವ ದ್ವೇಷಕ್ಕೆ ಕಾರಣ ಆಗುವ ರೀತಿಯಲ್ಲಿ ಬದುಕಿದ್ದೇನೆಯೇ ಹೊರತು ಅಸೂಯೆ ಪಡುವ ಹಾಗೇನೂ ಬದುಕಿಲ್ಲ. ನನ್ನ ಪಾಡಿಗೆ ನಾನು ನನ್ನ ಕೆಲಸ ಮಾಡುತ್ತ, ಅದರಲ್ಲಿಯೇ ನೆಮ್ಮದಿ ಮತ್ತು ಸಾರ್ಥಕತೆ ಕಂಡುಕೊಳ್ಳುತ್ತ ಬದುಕುತ್ತಿದ್ದೇನೆ.

ಅಂದಹಾಗೆ, ನನಗೆ ಸಾವಿನ ಬಗ್ಗೆ ಭಯವಿಲ್ಲ. ಇಲ್ಲಿಯವರೆಗೂ ನನ್ನ ಯೋಗ್ಯತಾನುಸಾರ ಕೆಲಸ ಮಾಡಿದ್ದೇನೆ. ಯಶಸ್ಸು ಎನ್ನುವುದು ದೇಶ-ಕಾಲ-ಶ್ರಮದ ಅಧೀನ. ಶ್ರಮ ನನ್ನದು. ದೇಶ ಮತ್ತು ಕಾಲ ನನ್ನ ಅಳವಿನಲ್ಲಿ ಇಲ್ಲ. ಹಾಗಾಗಿಯೇ ಬದುಕಿನ ಬಗ್ಗೆ ಅಂತಹ ದೊಡ್ಡ ವಿಷಾದಗಳಿಲ್ಲ, ತಕರಾರುಗಳಿಲ್ಲ.

ಜೀವನದಲ್ಲಿ ಏನೇನೋ ನಡೆಯುತ್ತದೆ. ಎಲ್ಲದಕ್ಕೂ ಅರ್ಥ ಇರಲೇಬೇಕು ಅಂತಿಲ್ಲ. ಇರಬಾರದು ಅಂತಲೂ ಇಲ್ಲ. ಇದೊಂದು ವಿಚಿತ್ರ ಪ್ರಪಂಚ. ಬದುಕಬೇಕು. ಅಷ್ಟೇ.

ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.

– ರವಿಕೃಷ್ಣಾ ರೆಡ್ಡಿ, ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ

Leave a Reply