ಕುಮಾರಸ್ವಾಮಿ ಕೇಂದ್ರ ಮಂತ್ರಿಯಾದ್ರೆ ಪ್ರಜ್ವಲ್ ಕೇಸಿನ ಕಥೆ ಏನು?

2 years ago

ಇದುವರೆಗಿನ ತಮ್ಮ ರಾಜಕೀಯ ಜೀವನದಲ್ಲಿ ಎಂದೆಂದೂ ಮಿತ್ರ ಪಕ್ಷಗಳ ಹಂಗಿನಲ್ಲಿ ಸರ್ಕಾರವನ್ನು ಮುನ್ನಡೆಸಿದ ಅನುಭವವಿಲ್ಲದ ಮೋದಿಯವರಿಗೆ ಈ ಬಾರಿ ಪ್ರಧಾನಿ ಹುದ್ದೆ ಮುಳ್ಳಿನ ಗದ್ದುಗೆಯಂತೆ ಭಾಸವಾದರೆ ಅಚ್ಚರಿಯಿಲ್ಲ. ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ತರಹದ ಚೆಕ್ ಮೇಟ್ ಚತುರರು ಮೋದಿಯನ್ನು ಚೆನ್ನಾಗಿಯೇ ಆಟ ಆಡಿಸಲಿದ್ದಾರೆ. ಆದರೆ ಅವರೆಲ್ಲರಿಗಿಂತ ಮೋದಿ ಪಾಲಿಗೆ ತನ್ನ ಗದ್ದುಗೆಯ ಮೊದಲ ಮುಳ್ಳೆಂದರೆ ಅದು ಜೆಡಿಎಸ್ ನ ಕುಮಾರಸ್ವಾಮಿ!

ಸಮ್ಮಿಶ್ರ ಸರ್ಕಾರವನ್ನು ನಡೆಸೋದು ಎಷ್ಟು ಕಷ್ಟದ ಕೆಲಸ ಅನ್ನೋದು ಮೋದಿಯವರಿಗೆ ಕುಮಾರಸ್ವಾಮಿಯ ಅಧ್ಯಾಯದಿಂದಲೇ ಅರ್ಥವಾಗುವಂತೆ ಕಾಣುತ್ತೆ. ಅದಾಗಲೇ ತಾನು ಕೇಂದ್ರ ಕೃಷಿ ಮಂತ್ರಿಯಾಗುವ ಹಸಿಹಸಿ ಕನಸು ಹೊತ್ತು, ಪ್ರಮಾಣವಚನಕ್ಕೆ ಕುಮಾರಸ್ವಾಮಿ ತಯಾರಿ ನಡೆಸುತ್ತಿರುವುದು ಈಗ ಎಲ್ಲರಿಗೂ ತಿಳಿದಿರುವ ವಿಚಾರ. ಒಂದುವೇಳೆ, ಕೃಷಿ ಮಂತ್ರಿಗಿರಿ ಕೈತಪ್ಪಿದರೂ, ಯಾವುದಾದರೊಂದು ಕೇಂದ್ರ ಸಚಿವಗಿರಿ ಸಿಗುವ ಸಂಭವ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಆದರೆ ಮೋದಿಗೆ ಕುಮಾರಸ್ವಾಮಿ ವಿಚಾರದಲ್ಲಿ ತೊಡಕಾಗಿರುವುದು ಕುಖ್ಯಾತ ಪೆನ್ ಡ್ತೈವ್ ಲೈಂಗಿಕ ಹಗರಣದ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ. ದೇಶಾದ್ಯಂತ ಸಂಚಲನ ಮೂಡಿಸಿದ್ದ ಈ ಕಾಮಕಾಂಡವು ಉತ್ತರ ರಾಜ್ಯಗಳಲ್ಲೂ ಸಹಾ ಬಿಜೆಪಿಯ ಒಂದಷ್ಟು ಸೀಟುಗಳಿಗೆ ಅಡ್ಡಗಾಲು ಹಾಕಿದೆ ಅಂತ ಹೇಳಲಾಗುತ್ತೆ. ಪ್ರಕರಣವಿನ್ನೂ ಜನರ ಮನಸ್ಸಿನಲ್ಲಿ ಹಸಿರಾಗಿರುವಾಗಲೇ, ಆರೋಪಿಯ ಚಿಕ್ಕಪ್ಪನಾದ ಕುಮಾರಸ್ವಾಮಿಯನ್ನು ಮಂತ್ರಿ ಮಾಡಿಕೊಂಡರೆ ತನ್ನ ಸಂಪುಟಕ್ಕೆ ಎಂಥಾ ಇಮೇಜು ತಗುಲಿಕೊಳ್ಳಬಹುದು ಅನ್ನೋದು ಮೋದಿಯ ಚಿಂತೆಯಂತೆ!

ಹಾಗಂತ ಕುಮಾರಸ್ವಾಮಿಯನ್ನು ಪಕ್ಕಕ್ಕೆ ತಳ್ಳಿ, ಸಂಪುಟ ರಚಿಸುವ ಶಕ್ತಿಯೂ ಈಗ ಮೋದಿಯಲ್ಲಿ ಉಳಿದಿಲ್ಲ. ಜೆಡಿಎಸ್ ನಲ್ಲಿ ಇರುವುದು ಎರಡೇ ಸೀಟುಗಳಾದರೂ, ಆರಂಭದಲ್ಲೇ ಮಿತ್ರ ಪಕ್ಷವೊಂದರ ಜೊತೆಗೆ ವೈಮನಸ್ಸು ಸೃಷ್ಟಿಸಿಕೊಂಡರೆ, ಅದು ಉಳಿದ ಮಿತ್ರರಲ್ಲೂ ಅಪನಂಬುಗೆಗೆ ಕಾರಣವಾಗಬಹುದು ಅನ್ನೋ ಇಕ್ಕಟ್ಟು ಮೋದಿಯದ್ದು. ಮೋದಿಯವರಿಗೆ ಈಗ ತನ್ನ ಇಮೇಜು ಕಾಪಾಡಿಕೊಳ್ಳುವುದಕ್ಕಿಂತ ತನ್ನ ದುಬಾರಿ ಮಿತ್ರರ ಆಸ್ತಿ ಅಡವು ಕಾಯಲು ಅಧಿಕಾರದ ಅನಿವಾರ್ಯತೆ ಇದೆ. ಹಾಗಾಗಿ, ಕುಮಾರಸ್ವಾಮಿಯನ್ನು ಮಂತ್ರಿ ಮಾಡುವ ತೀರ್ಮಾನ ಕೈಗೊಂಡರೂ ಅಚ್ಚರಿಯಿಲ್ಲ. ಹಾಗೇನಾದರೂ ಆದಲ್ಲಿ, ಹಗಲುರಾತ್ರಿ ತಮ್ಮ ಕುಟುಂಬ ರಾಜಕಾರಣದ ಬಗ್ಗೆಯೇ ದಾಳ ಉರುಳಿಸುವ ಕುಮಾರಸ್ವಾಮಿ ಇಡೀ ಪೆನ್ ಡ್ರೈವ್ ಪ್ರಕರಣದ ತನಿಖೆಯನ್ನು ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಹಳ್ಳ ಹಿಡಿಸುವುದು ಗ್ಯಾರಂಟಿ. ಮೋದಿಗೆ ಇಲ್ಲಿಂದಲೇ ಕೆಟ್ಟ ಹೆಸರು ಜೋತು ಬೀಳಲಿದೆ.

ಈ ಎಲ್ಲಾ ಅಡೆತಡೆಗಳನ್ನು ಮೀರಲು ಮೋದಿ, ಇನ್ನೊಂದು ದಾರಿ ಕಂಡುಕೊಳ್ಳುವ ಬಗ್ಗೆಯೂ ಚರ್ಚೆಯಾಗುತ್ತಿದೆ. ದೇವೇಗೌಡರ ಕುಟುಂಬದವರೇ ಆದ, ಆದರೆ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿ ಗೆದ್ದಿರುವ ಡಾ. ಸಿ.ಎನ್. ಮಂಜುನಾಥ್ ಅವರನ್ನು ಕೇಂದ್ರ ಮಂತ್ರಿ ಮಾಡಿದರೆ ಈ ಯಾವ ಅಪವಾದಗಳೂ ಬಾರದು ಅನ್ನೋದು ಸದ್ಯದ ಎನ್ ಡಿ ಎ ಲೆಕ್ಕಾಚಾರವಂತೆ. ಆದರೆ ಇದಕ್ಕೆ ಕುಮಾರಸ್ವಾಮಿ ಒಪ್ಪುತ್ತಾರಾ? ಅನ್ನೋದೆ ಪ್ರಶ್ನೆ. ಅಧಿಕಾರವಿಲ್ಲದೆ ಭಣಗುಟ್ಟುತ್ತಿರುವ ಕುಮಾರಸ್ವಾಮಿಗೆ ಈಗ ತುರ್ತಾಗಿ ಅಧಿಕಾರ ಬೇಕಿದೆ. ಅದರಲ್ಲೂ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ವಿರುದ್ಧ ಸೆಡ್ಡು ಹೊಡೆಯುವ ವೈಯಕ್ತಿಕ ಜಿದ್ದಿಗಾದರೂ ಅವರಿಗೆ ಮಂತ್ರಿಗಿರಿ ಬೇಕು. ಅಂತದ್ದರಲ್ಲಿ, ಗೌಡರ ಅಳಿಯ ಮಂಜುನಾಥ್ ಅವರನ್ನ ಮಂತ್ರಿ ಮಾಡಿ, ನಿಮ್ಮನ್ನು ಸಂಪುಟದಿಂದ ಹೊರಗಿಡ್ತೀವಿ ಅಂತ ಹೇಳಿದ್ರೆ ಎರಡು ಸಲ ಓಪನ್ ಸರ್ಜರಿಯಾಗಿರುವ ಆ ಹಾರ್ಟು ಒಪ್ಪುವುದೇ?

ಒಂದೊಮ್ಮೆ ಆ ಒಪ್ಪಂದಕ್ಕೂ ಕುಮಾರಸ್ವಾಮಿ ಒಪ್ಪಿದರು ಅಂತಿಟ್ಟುಕೊಳ್ಳಿ, ಆಗಲೂ ದೇವೇಗೌಡರ ಕುಟುಂಬದ ಒಳಗಿನ ಆಂತರಿಕ ಕಲಹದ ಅಪಾಯ ತಪ್ಪಿದ್ದಲ್ಲ. ಮಂಜುನಾಥ್ ಅವರು ನುರಿತ ರಾಜಕಾರಣಿಯಲ್ಲ, ನಿಯಮ-ನಿಬಂಧನೆಗಳನ್ನು ಗಾಳಿಗೆ ತೂರಿ ವ್ಯವಹರಿಸುವ ಛಾತಿಯೂ ಅವರಿಗೆ ಇದ್ದಂತೆ ಕಾಣುತ್ತಿಲ್ಲ. ಶತಾಯತಗತಾ ಪ್ರಜ್ವಲ್ ಕೇಸು ಮುಚ್ಚಿಹಾಕಲು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಳ್ಳಬೇಕಾದ ಒತ್ತಡ ಅವರ ಮೇಲೆ ಬೀಳಲಿದೆ. ಯಾಕೆಂದರೆ ಅದು ದೇವೇಗೌಡರ ಕುಟುಂಬ ರಾಜಕಾರಣದ ಅಳಿವು ಉಳಿವಿನ ಪ್ರಶ್ನೆ. ಮಂಜುನಾಥ್ ಅವರನ್ನು ಹತ್ತಿರದಿಂದ ನೋಡಿರುವವರ ಪ್ರಕಾರ, ಆ ಮನುಷ್ಯ ಒಂದು ಹಂತದವರೆಗೆ ಇಂಥಾ ಗೈರ್ ಕಾನೂನಿ ಕೆಲಸಗಳನ್ನು ಮಾಡಬಹುದೇ ವಿನಾ, ಅದನ್ನೂ ಮೀರಿ ವ್ಯವಹರಿಸುವ ಒತ್ತಡಕ್ಕೆ ಸಿಲುಕಿದರೆ ಖಿನ್ನರಾಗಿಬಿಡುವ ಸಾಧ್ಯತೆ ಇದೆ. ಯಾಕೆಂದರೆ ಮಾನ, ಮರ್ಯಾದೆ, ಸಮಾಜದಲ್ಲಿ ಘನತೆ, ಒಳ್ಳೆಯ ಹೆಸರು ಎಂಬ ಚೌಕಟ್ಟುಗಳಿಗೆ ಕಟ್ಟುಬಿದ್ದ ಸೀದಾಸಾದಾ ವ್ಯಕ್ತಿ ಅವರು. ದೇವೇಗೌಡರ ಮಕ್ಕಳು, ಮೊಮ್ಮಕ್ಕಳಂತೆ ಗೇರ್ ಬದಲಿಸುವ ರಾಜಕೀಯ ಕುಟಿಲತೆ ಅವರಿಗಿಲ್ಲ. ಇದು ಕುಟುಂಬದೊಳಗಿನ ಬೇಗುದಿಗೂ ಕಾರಣವಾಗಬಹುದು.

ಆದರೆ ಒಂದಂತೂ ಸತ್ಯ. ಇವೆಲ್ಲ ಸೆಕೆಂಡರಿ ಪರಿಣಾಮಗಳು. ದೇವೇಗೌಡರ ಕುಟುಂಬದ ನಂಟಿನ ಯಾವುದೇ ವ್ಯಕ್ತಿ, ಅದು ಕುಮಾರಸ್ವಾಮಿ ಇರಬಹುದು ಅಥವಾ ಮಂಜುನಾಥ್ ಅವರೇ ಇರಬಹುದು, ಕೇಂದ್ರ ಮಂತ್ರಿಯಾದ್ರೆ ಪ್ರೈಮರಿ ಅಡ್ಡಪರಿಣಾಮ ಉಂಟಾಗೋದು ಪ್ರಜ್ವಲ್ ರೇವಣ್ಣನ ಲೈಂಗಿಕ ಕಾಮಕಾಂಡದ ತನಿಖೆಯ ಮೇಲೆ. ಅದಾಗದಂತೆ ತಡೆಯುವುದು ಈಗ ಪ್ರಜ್ಞಾವಂತ ನಾಗರಿಕ ಸಮಾಜದ ಮೇಲಿದೆ. ಅಭಿಯಾನವೋ, ಆಂದೋಲನವೋ, ಒಟ್ಟಿನಲ್ಲಿ ಕಳಂಕಿತ ಫ್ಯಾಮಿಲಿಯ ಯಾರೊಬ್ಬರನ್ನೂ ಕೇಂದ್ರ ಮಂತ್ರಿ ಮಾಡದಂತೆ ಕೂಗು ಮೊಳಗಬೇಕಿದೆ.

  • ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

Leave a Reply