ಬೆಂಗಳೂರು: ಐಪಿಎಲ್ ಕಪ್ ಗೆದ್ದ ಆರ್ ಸಿ ಬಿ ಕ್ರಿಕೆಟ್ ತಂಡದ ವಿಜಯೋತ್ಸವ ಆಚರಣೆ ವೇಳೆ ನಡೆದ ಕಾಲ್ತುಳಿತ ಪ್ರಕರಣ ಹನ್ನೊಂದು ಮಂದಿಯನ್ನು ಬಲಿ ಪಡೆದಿದೆ. 70ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇಂತಹ ದುರ್ಘಟನೆ ನಡೆಯಲು ಪ್ರಚಾರದ ಹಪಾಹಪಿತನ, ಹೊಂದಾಣಿಕೆಯ ಕೊರತೆ ಮತ್ತು ಜನಸಾಮಾನ್ಯರ ಅಂದಾಭಿಮಾನ ಪ್ರಮುಖ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಸಿನಿಮಾ ತಾರೆಯರು, ಕ್ರಿಕೆಟ್ ಕಲಿಗಳು ಎಂದರೆ ಅಭಿಮಾನಿಗಳ ಪಾಲಿಗೆ ಸ್ವರ್ಗದಿಂದ ಇಳಿದು ಬಂದವರು ದೇವ ಸಮಾನರು ಎಂಬ ನಂಬಿಕೆ ಇದೆ ಇವರನ್ನು ಹತ್ತಿರದಿಂದ ನೋಡಲು ಹಸ್ತಲಾಘವ ಮಾಡಲು ಮುಗಿ ಬೀಳುತ್ತಾರೆ. ತಮ್ಮ ನೆಚ್ಚಿನ ತಾರೆಯರನ್ನು ನೋಡಿ ಕಣ್ತುಂಬಿಕೊಳ್ಳಲು ಎಷ್ಟು ದೂರವಾದರೂ ಸರಿ ಹೊರಟು ನಿಲ್ಲುತ್ತಾರೆ. ಇಂತಹ ಅಂದಾಭಿಮಾನದ ಪರಿಣಾಮವಾಗಿಯೇ ಈ ದುರ್ಘಟನೆ ಸಂಭವಿಸಿದೆ.
ಸಿನಿಮಾ ತಾರೆಯರು ಮತ್ತು ಕ್ರಿಕೆಟ್ ಕಲಿಗಳು ಹಣಕ್ಕಾಗಿ ಆಟ ಆಡುತ್ತಾರೆ, ನಟಿಸುತ್ತಾರೆ ಎನ್ನುವ ಸಾಮಾನ್ಯ ವಿಷಯವನ್ನು ಮರೆತವರಂತೆ ಆಡುವ ಅಭಿಮಾನಿಗಳಿಂದಾಗಿ ಇಂತಹ ಘಟನೆ ನಡೆದಿದೆ. ಈ ಅಭಿಮಾನಿಗಳ ಹುಚ್ಚು ಹೊಳೆಯಲ್ಲಿ ತೇಲಿ ಹೋಗಿ ಪ್ರಚಾರ ಗಿಟ್ಟಿಸಿಕೊಳ್ಳಬೇಕು ಎಂದು ಸರ್ಕಾರದಲ್ಲಿದ್ದವರು ಯೋಚಿಸಿ ಯಾವುದೇ ಮುಂಜಾಗ್ರತೆ ಮತ್ತು ಪೂರ್ವ ತಯಾರಿ ಇಲ್ಲದೆ ಕಾರ್ಯರೂಪಕ್ಕೆ ಇಳಿದ ಪರಿಣಾಮ ಈ ಘಟನೆ ನಡೆದಿದೆ.
ದೊಡ್ಡ ಮಟ್ಟದ ಅಭಿಮಾನಿಗಳ ಪಡೆಯನ್ನು ಹೊಂದಿರುವ ತಂಡವನ್ನು ಅಭಿನಂದಿಸುವ ಮೂಲಕ ಬಾರಿ ಪ್ರಚಾರ ಗಿಟ್ಟಿಸಲು ಸರ್ಕಾರದ ಕೆಲವರು ಪ್ರಯತ್ನ ನಡೆಸಿದರೆ ಅವರ ಜೊತೆಗೆ ಪೈಪೋಟಿಗೆ ಬಿದ್ದವರಂತೆ ಕರ್ನಾಟಕ ಕ್ರಿಕೆಟ್ ಸಂಸ್ಥೆ ಕೂಡ ಇಂತಹ ಕಾರ್ಯಕ್ರಮ ಆಯೋಜಿಸಲು ಮುಂದಾಗಿದ್ದು ಈ ದುರಂತಕ್ಕೆ ಕಾರಣವಾಗಿದೆ.
ಐಪಿಎಲ್ ಟ್ರೋಫಿ ಗೆದ್ದು ಅಹಮದಾಬಾದ್ ನಿಂದ ವಿಶೇಷ ವಿಮಾನದಲ್ಲಿ ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ಬಂದ ಆಟಗಾರರನ್ನು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ರೋಡ್ ಶೋ ಮೂಲಕ ಕರೆ ತರಲು ಯೋಜಿಸಲಾಗಿತ್ತು. ಆದರೆ ಭದ್ರತೆಯ ಕಾರಣದಿಂದಾಗಿ ವಿಕ್ಟರಿ ಪರೇಡ್‌ಗೆ ಪೊಲೀಸ್ ಇಲಾಖೆ ಅನುಮತಿ ನೀಡಿರಲಿಲ್ಲ. ಆದರೆ ಸರ್ಕಾರ ರೋಡ್ ಶೋ ಬದಲಾಗಿ ವಿಧಾನಸೌಧದ ಮುಂಭಾಗದಲ್ಲಿ ಅಭಿನಂದನಾ ಕಾರ್ಯಕ್ರಮ ಸೇರ್ಪಡೆ ಮಾಡಿತ್ತು. ಆತುರಾತುರವಾಗಿ ಸರ್ಕಾರ ಈ ಕಾರ್ಯಕ್ರಮ ಆಯೋಜಿಸಿದರು ಕೂಡ ಪೊಲೀಸ್ ಇಲಾಖೆ ಇಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದಂತೆ ವ್ಯಾಪಕ ಮುಂಜಾಗ್ರತೆ ವಹಿಸಿ ಸಾಕಷ್ಟು ಪ್ರಮಾಣದಲ್ಲಿ ಭದ್ರತಾ ಕ್ರಮಗಳನ್ನು ಕೈಗೊಂಡಿತ್ತು. ಹೀಗಾಗಿ ಇಲ್ಲಿ ಕಾರ್ಯಕ್ರಮ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದೆ ನಡೆಯಿತು. ಜೊತೆಯಲ್ಲಿ ಮಳೆ ಸುರಿದ ಪರಿಣಾಮ ಅತ್ಯಂತ ಬೇಗ ಕಾರ್ಯಕ್ರಮ ಮುಕ್ತಾಯಗೊಂಡಿತು.
ಮತ್ತೊಂದೆಡೆಯಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆ ಆತುರದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಿಸುವ ತೀರ್ಮಾನ ಕೈಗೊಂಡಿದೆ. ಬೆಂಗಳೂರು ಪೊಲೀಸರು ಆರಂಭದಲ್ಲಿ ಇದಕ್ಕೆ ಅನುಮತಿ ನೀಡಲು ನಿರಾಕರಿಸಿದ್ದಾರೆ. ಆದರೆ ಕ್ರಿಕೆಟ್ ಆಡಳಿತ ಮಂಡಳಿ ವಿಧಾನ ಪರಿಷತ್ ಸದಸ್ಯರೊಬ್ಬರ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿದೆ. ಆರ್‌ಸಿಬಿ ತಂಡದಲ್ಲಿರುವ ಕೆಲವು ವಿದೇಶಿ ಆಟಗಾರರು ನಾಳೆ ತಮ್ಮ ದೇಶಗಳಿಗೆ ಮರಳುತ್ತಿದ್ದಾರೆ. ಹೀಗಾಗಿ ಅವರಿಲ್ಲದೆ ವಿಜಯೋತ್ಸವ ಆಚರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಹೀಗಾಗಿ ಇಂದೇ ವಿಜಯೋತ್ಸವ ಆಚರಿಸಲು ಅನುಮತಿ ಕೊಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಕ್ರೀಡಾ ಚಟುವಟಿಕೆಗಳ ಬಗ್ಗೆ ಹೆಚ್ಚು ಆಸಕ್ತಿ ಇರುವ ವಿಧಾನ ಪರಿಷತ್ ಸದಸ್ಯರೊಬ್ಬರು ಸಿಎಂ, ಡಿಸಿಎಂ ಮತ್ತು ಗೃಹ ಸಚಿವರ ಮೇಲೆ ಪ್ರಬಲವಾಗಿ ಒತ್ತಡ ಹೇರಿ ಕಾರ್ಯಕ್ರಮಕ್ಕೆ ಅನುಮತಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಬೆಂಗಳೂರು ಪೊಲೀಸರು ಭದ್ರತಾ ವೆಚ್ಚ ಎಂದು ಕ್ರಿಕೆಟ್ ಆಡಳಿತ ಮಂಡಳಿಗೆ 36 ಲಕ್ಷ ರೂಪಾಯಿ ಶುಲ್ಕ ವಿಧಿಸಲು ಮುಂದಾದರೂ ಕೂಡ ಅದನ್ನು ವಿಧಿಸದಂತೆ ತಡೆ ಹಿಡಿಯುವಲ್ಲಿ ಈ ವಿಧಾನ ಪರಿಷತ್ ಸದಸ್ಯರು ಪ್ರಮುಖ ಪಾತ್ರ ವಹಿಸಿದರು ಎಂದು ಗೊತ್ತಾಗಿದೆ.
ಇದಾದ ನಂತರ ಅನುಮತಿ ಗಿಟ್ಟಿಸಿಕೊಂಡ ಕ್ರಿಕೆಟ್ ಆಡಳಿತ ಮಂಡಳಿ ವಿಜಯೋತ್ಸವ ಆಚರಣೆ ವೀಕ್ಷಿಸಲು ಸಾರ್ವಜನಿಕರು ಯಾವುದೇ ಶುಲ್ಕ ಪಾವತಿಸದೆ ಕ್ರೀಡಾಂಗಣ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ಪ್ರಕಟಿಸಿತು. ಆನಂತರ ವೆಬ್ ಸೈಟ್ ಒಂದನ್ನು ನೀಡಿ ಇದರಲ್ಲಿ ನೋಂದಣಿ ಮಾಡಿಕೊಂಡರೆ ಉಚಿತವಾಗಿ ಪಾಸ್ ನೀಡಲಾಗುವುದು ಎಂದು ಹೇಳಿ ಪಾಸ್ ಇದ್ದವರಿಗೆ ಮಾತ್ರ ಕ್ರೀಡಾಂಗಣ ಪ್ರವೇಶಿಸಲು ಅವಕಾಶ ಎಂದು ಘೋಷಿಸಿತು. ಅದರಂತೆ ಸಾವಿರಾರು ಸಂಖ್ಯೆಯಲ್ಲಿ ಕ್ರೀಡಾಂಗಣದತ್ತ ಅಭಿಮಾನಿಗಳು ಧಾವಿಸಿ ಬಂದರು ಪಾಸ್ ಪಡೆದು ಕ್ರೀಡಾಂಗಣ ಪ್ರವೇಶಿಸಲು ಮಧ್ಯಾಹ್ನ ಮೂರು ಗಂಟೆಯವರೆಗೆ ಅಭಿಮಾನಿಗಳು ಸರದಿಯಲ್ಲೇ ನಿಂತುಕೊಂಡಿದ್ದರು.
ಈ ನಡುವೆ ವಿಧಾನಸೌಧದ ಮುಂಭಾಗದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಮಳೆಯ ಕಾರಣಕ್ಕೆ ಬೇಗನೆ ಮುಕ್ತಾಯಗೊಂಡಿದ್ದರಿಂದ ಅಲ್ಲಿ ಸೇರಿದ್ದ ಸಾವಿರಾರು ಸಂಖ್ಯೆಯ ಚಿನ್ನಸ್ವಾಮಿ ಕ್ರೀಡಾಂಗಣದ ಧಾವಿಸಿ ಬಂದರು.
ಸಾವಿರಾರು ಸಂಖ್ಯೆಯಲ್ಲಿ ಜನ ಕ್ರೀಡಾಂಗಣದತ್ತ ಧಾವಿಸಿ ಬರುತ್ತಿದ್ದರೂ ತಲೆಕೆಡಿಸಿಕೊಳ್ಳದ ಪೊಲೀಸರು ಕೆಲವು ಗೇಟ್‌ಗಳಿಂದ ಅಭಿಮಾನಿಗಳನ್ನು ಒಳಗಡೆ ಬಿಡುತ್ತಿದ್ದರು. ಕಾರ್ಯಕ್ರಮ ಉಚಿತ ಎಂದು ಹೇಳಿದ್ದರೂ ಯಾಕೆ ಉಳಿದ ಗೇಟ್‌ಗಳಿಂದ ಜನರನ್ನು ಒಳಗಡೆ ಬಿಡುತ್ತಿಲ್ಲ ಎಂದು 18, 19, 20 ಗೇಟ್‌ನಲ್ಲಿದ್ದ ಅಭಿಮಾನಿಗಳು ಆಯೋಜಕರು ಮತ್ತು ಪೊಲೀಸರನ್ನು ಪ್ರಶ್ನೆ ಮಾಡಲು ಆರಂಭಿಸಿದ್ದಾರೆ.
ಗೇಟ್‌ಗಳ ಬಳಿ ಅಭಿಮಾನಿಗಳ ಸಂಖ್ಯೆ ಜಾಸ್ತಿ ಆಗುತ್ತಿದ್ದಂತೆ ಕೆಲವರು ಸ್ಟೇಡಿಯಂ ಕಾಂಪೌಂಡ್ ಹತ್ತಿ ಒಳ ನುಗ್ಗಲು ಆರಂಭಿಸಿದ್ದಾರೆ. ಇದರಿಂದ ತಳ್ಳಾಟ ನೂಕಾಟ ಆರಂಭವಾಗುತ್ತಿದ್ದಂತೆ ದಿಢೀರ್ ಆಗಿ ಉಳಿದ ಗೇಟ್ ಓಪನ್ ಮಾಡಲಾಗಿದೆ. ಓಪನ್ ಮಾಡಿದ್ದೇ ತಡ ಜನ ಒಳಗಡೆ ನುಗ್ಗಲು ಓಡಿದ್ದಾರೆ. ಓಡುವ ವೇಳೆ ಕೆಳಗೆ ಕೆಲವರು ಬಿದ್ದಿದ್ದಾರೆ. ಬಿದ್ದವರ ಮೇಲೆ ಓಡಿದ್ದರಿಂದ ದುರಂತ ಸಂಭವಿಸಿದೆ. ಈ ವೇಳೆ ಕೇವಲ ಕೆಲವೇ ಸಂಖ್ಯೆಯಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಲಾಗದೆ ಪರದಾಡಿದ್ದಾರೆ.
ಹಿರಿಯ ಅಧಿಕಾರಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಪೊಲೀಸರು ಅತಿ ಗಣ್ಯ ವ್ಯಕ್ತಿಗಳು ಪಾಲ್ಗೊಂಡಿದ್ದ ವಿಧಾನಸೌಧದ ಮುಂಭಾಗದಲ್ಲಿನ ಸಮಾರಂಭದ ಭದ್ರತೆಗೆ ನಿಯೋಜನೆಗೊಂಡಿದ್ದು ಅವರೆಲ್ಲ ಕರ್ತವ್ಯ ಮುಗಿಸಿ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಬರಲು ಸಮಯ ಹಿಡಿದಿದೆ. ಆ ವೇಳೆಗಾಗಲೇ ಈ ದುರಂತ ಸಂಭವಿದೆ.




