ಜಾತಿ ಗಣತಿ ವರದಿಯನ್ನು ನಮ್ಮ ಸರ್ಕಾರ ಖಂಡಿತವಾಗಿಯೂ ಜಾರಿಗೊಳಿಸುತ್ತದೆ: ಸಿದ್ದು
ಮಾಡಿ ಸಾರ್. ನಿಮ್ಮ ಇಂದಿನ ಈ ಮಾತಿನಿಂದ ನನಗೆ ನೆನಪಾದ ಒಂದು ಪ್ರಂಸಗ ಹೇಳಬೇಕೆನಿಸಿದೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
೧೯೮೫-೮೬, ನಾನು ಮಧುಗಿರಿ ತಾಲ್ಲೂಕ್ ಕೊಡಿಗೇನಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿ.ನಮ್ಮ ಶಾಲೆಯ ಬಾಜೂ ಬಸ್ಟ್ರಾಂಡ್. ಅಲ್ಲಿ ಸಂತೆಯ ದಿನ ಹಾವಾಡಿಸುವವರು ಬರುತ್ತಿದ್ದರು. ನಾನು ಹಾವಾಡಿಸುವವರನ್ನು ನೋಡಲು ಹೋಗುತ್ತಿದ್ದೆ.
ಅಲ್ಲಿ ಹೀಗೆ ನಡೆಯುತ್ತಿತ್ತು….
ನೋಡಿ ಸಾಮಿ, ಇದ್ರಲ್ಲಿ… ಈ ಬುಟ್ಟಿಯೊಳ್ಗೆ ನಾಗಪ್ಪ ಸಾಂಪ್ ಇದಾರೆ. ಈಗ ಬುಟ್ಟಿ ತೆಗೀತೀನಿ.. ಅದ್ಕೂ ಮುಂಚೆ ಹಾವಿಗೆ ಹಾಲು ಕೊಡಬೇಕು… ನಿಮ್ಮ ಕೈಲಾದ್ ಸಹಾಯ ಮಾಡಿ ಎಂದು ಹೇಳುತ್ತಿದ್ದ.
ಅಷ್ಟಲ್ಲದೆ ಅದೆಂಥದೋ ಕರಿ ಬಣ್ಣದ ಎರೇಸರ್ ತರದ ಒಂದು ತುಣುಕು ತೆಗೆದು ನೋಡಿ ಸ್ವಾಮಿ ಇದು ಜೀವ ಉಳಿಸೋ ಸಂಜೀವಿನಿ ಅಂತಿದ್ದ. ಮಾತು ಮುಂದುವರೆಸಿ “ ನೀವು ಹೊಲ, ಗದ್ದೆ, ಹಳ್ಳ, ದಿನ್ನೆ ಯಲ್ಲಿ ಸೆಕೆಂಡ್ ಶೋ ಸಿನೆಮಾ ಮುಗಿಸಿ ನಡೆದು ಹೋಗ್ತಿರ್ತಿರಾ,,,, ದಾರಿಗೆ ಅಡ್ಡ ನಾಗಪ್ಪ ಸಾಂಪ್ ಮಲಗಿರುತ್ತೆ, ಕೈದಲ್ಲಿ ಬ್ಯಾಟರಿ ಇಲ್ಲ , ಕಾಲ್ದಲ್ಲಿ ಚಪ್ಪಳಿ ಇಲ್ಲ, ನೀವು ಸಾಂಪ್ ತುಳಿದ್ ಬಿಡ್ತಾರೆ, ನಾಗಪ್ಪ ಹೆಡೆ ಬಿಚ್ಚಿ ಹೊಡೆದ್ ಬಿಡುತ್ತೆ. ಆಗ ನೀವೇನ್ ಮಾಡ್ಬೇಕಿಲ್ಲ. ಈ ಕರಿ ಕಲ್ಲನ್ನ ಸ್ವಲ್ಪ ಉಗುಳು ಹಾಕಿ, ಇಲ್ಲ ನೀರ್ ಹಾಕಿ ಕಲ್ಲಮೇಲೆ ಅರೆದು ಗಟಗಟಾ ಅಂತಾ ಕುಡಿದ್ ಬುಡಿ… ವಾಂತಿ ಆಗಿ ವಿಷ ಎಲ್ಲಾ ಹೊಲ್ಟೋಯ್ತದೆ, ಇದ್ಕೆ ಐದೇ ರೂಪಾಯಿ ಬೆಲೆ.
ಐದು ರೂಪಾಯಿಗೆ ಜೀವ ಉಳಿಸ್ಕೋಬೋದು.. ಅಂತಾ ಎಲ್ಲರಿಗೂ ಮಾರ್ತಿದ್ದ… ಅಷ್ಟು ಹೇಳಿ ಏಯ್ ಮಕ್ಕಳೆಲ್ಲಾ ಹಾತ್ ಬಜಾವ್ ಅಂತಿದ್ದ. ಅಂಗದ್ರೆ ಚಪ್ಪಾಳೆ ಹೊಡೀಬೇಕು ಎಂದು ಆಗಾಗಲೇ ನಮಗೂ ಗೊತ್ತಿದ್ದ ಕಾರಣ ಚಪ್ಪಾಳೆ ಹೊಡೀತಿದ್ವಿ…
ಇಷ್ಟೇಲ್ಲಾ ಆದ್ರೂ ಹಾವಾಡಿಸುವ ಮೊದಲಿಗೆ ಬುಟ್ಟಿಯೊಳಗೆ ನಾಗಪ್ಪ ಸಾಂಪ್ ಇದಾರೆ ಅಂತಾ ಹೇಳಿದ್ನಲ್ಲ, ಅದನ್ನ ಅವ ತೋರಿಸ್ತಲೇ ಇರ್ಲಿಲ್ಲ… ನಮಗೆಲ್ಲಾ ಬ್ರಮನಿರಸನ…
ಅದಿರ್ಲಿ ನಮ್ಮ ಮುಖ್ಯಮಂತ್ರಿಗಳು ಅದೇಕೆ ಜಾತಿ ಗಣತಿ ಎಂಬ ನಾಗಪ್ಪ ಸಾಂಪ್ ತೋರಿಸ್ತೀನಿ ಅಂತಾ ಆಗಾಗ ಮಾತಾಡ್ತಾರೆ. ಅವರಿಗೆ ಜಾತಿ ಗಣತಿ ವರದಿಯನ್ನು ಜಾರಿ ಮಾಡಲು ಇರಬಹುದಾದ ಅಡ್ಡಿ ಆದರೂ ಏನು.. ಖುದ್ದು ತಾವೇ ಮುಖ್ಯಮಂತ್ರಿ,, ಜಾರಿ ಮಾಡೋದಾದ್ರೆ ಮಾಡ್ಬೇಕಲ್ವಾ….
ಯಾರ ಅಪ್ಪಣೆ ಬೇಕು ಅವ್ರಿಗೆ ಮಸಾಲೆ ಅರಿಯಾಕೆ…
ಜಾರಿ ಮಾಡಬೇಕು… ಅದು ಬಿಟ್ಟು ನಮ್ಮೂರಿನ ಹಾವಾಡಿಗರ ತರ ಮಾತಾಡ್ತಾನೇ ಇದ್ರೆ ಏನು ಪ್ರಯೋಜನ….!?
– ನಾಗೇಶ್ ಕಾಳೇನಹಳ್ಳಿ, ಹಿರಿಯ ಪತ್ರಕರ್ತರು



