ಸರ್ಕಾರಿ ಉಚಿತ ಕೊಡುಗೆ ಎಂದರೆ ಅದನ್ನು ಬೇಕಾಬಿಟ್ಟಿ ಹಂಚುವುದು, ಸಿಕ್ಕವರು ಕಿತ್ತು ತಿನ್ನುವುದೇ ಜಾಸ್ತಿ. ಆದರೆ ಈ ಬಾರಿ ಉಚಿತ ಕೊಡುಗೆಗಳ ಗಾತ್ರ ದೊಡ್ಡದಿರುವುದರಿಂದ, ಸರ್ಕಾರ ಸಹಜವಾಗಿಯೇ ಸ್ವಲ್ಪ “ತಲೆ ಖರ್ಚು” ಮಾಡಿದೆ. ಹಾಗಾಗಿ, ಎಲ್ಲ ಐದು ಗ್ಯಾರಂಟಿಗಳೂ ತಲುಪಬೇಕಾದ ಅರ್ಹರಿಗೆ ತಲುಪಲಿವೆ. ಸರ್ಕಾರ ಈ ಗ್ಯಾರಂಟಿಗಳನ್ನು ನೀಡಲು ಇಷ್ಟು ಪುಟ್ಟ ಸಮಯದಲ್ಲಿ ಸಿದ್ಧಪಡಿಸಿದ ನಿಯಮಗಳ ಚೌಕಟ್ಟು ನನಗೆ ಇಷ್ಟವಾಯಿತು. ಇದು ಈ ಸರ್ಕಾರದ ಎಫೀಷಿಯನ್ಸಿಯ ಪ್ರದರ್ಶನ ಕೂಡಾ ಹೌದು. ಇಂತಹ ನಿರ್ಧಾರಗಳು ಹಠಾತ್ ಆದಾಗ, ಸಣ್ಣಪುಟ್ಟ “ಹಿಚ್”ಗಳು ಇರುವುದು ಸಹಜ. ಅರ್ಹರೊಬ್ಬರಿಗೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ ಎಂಬ ಸಮಸ್ಯೆ ಖಂಡಿತಕ್ಕೂ ಎದುರಾಗಲಿದೆ. ಅದು ಪ್ರಾಕ್ಟಿಕಲ್ ಆಗಿ ಎದುರಾದಾಗ ಅದನ್ನು ಸರಿಪಡಿಸಲು ಅಧಿಕಾರಿಗಳಿದ್ದಾರೆ.
ಈ ಗ್ಯಾರಂಟಿಗಳು “ಭಕ್ತರು ಅಂದುಕೊಂಡಂತೆ” ಸಿಕ್ಕವರಿಗೆ ಸೀರುಂಡೆ ಅಲ್ಲ ಎಂದು ನಿಯಮಗಳ ಚೌಕಟ್ಟು ಸ್ಪಷ್ಟಪಡಿಸಿದೆ. ಜೊತೆಗೇ, ಅವು ತಲುಪಲಿರುವ ಸುಮಾರು ಮೂರರಿಂದ ಮೂರೂವರೆ ಕೋಟಿ ಮಂದಿ ಕರ್ನಾಟಕದ ನಾಗರಿಕರಿಗೆ ಈ ಕೊಡುಗೆಗಳನ್ನು ಅವರ ಸ್ವಾಭಿಮಾನಕ್ಕಾಗಲೀ, ಆತ್ಮಗೌರವಕ್ಕಾಗಲೀ ಸ್ವಲ್ಪವೂ ಧಕ್ಕೆ ಬರದಂತೆ ತಲುಪಿಸುವ ವ್ಯವಸ್ಥೆ ಮಾಡಿದ್ದು ಈವತ್ತಿನ ಪ್ರಕಟಣೆಯ ಬಲುದೊಡ್ಡ ಸಾಧನೆ.
ಕೋವಿಡ್ ಕಾಲದಲ್ಲಿ ದೇಶದ ಪ್ರಮುಖ ಅರ್ಥಶಾಸ್ತ್ರಜ್ಞರಾದ ಜೀನ್ ಡ್ರೆಝ್, ರಘುರಾಮ್ ರಾಜನ್ ಮತ್ತಿತರರು ಜನರ ಕೈಗೆ ನಗದು ನೀಡಿ ಎಂದದ್ದನ್ನು, ನಮ್ಮ ಮಾಧ್ಯಮಗಳು “ಹೆಲಿಕಾಪ್ಟರ್‌ನಲ್ಲಿ ದುಡ್ಡು ವಿತರಣೆ” ಎಂದು ಅರ್ಥ ಮಾಡಿಕೊಂಡಿದ್ದರು. ಆದರೆ ಕೊನೆಗೆ, ಜನರಿಗೆ ಕೋವಿಡ್ ಪ್ಯಾಕೇಜಿನಲ್ಲಿ ನಿಜಕ್ಕೂ ಸಿಕ್ಕಿದ್ದು ಮುಕ್ಕಾಲು ಪಾಲು ಕೈಗೆಟುಕದ ಕನ್ನಡಿಯೊಳಗಿನ ಗಂಟು. ಕೋವಿಡ್ ಮೊದಲೇ ಮಂದಗತಿಯಲ್ಲಿದ್ದ ಆರ್ಥಿಕತೆ ಈಗಷ್ಟೇ ಕಷ್ಟಪಟ್ಟು ಕೋವಿಡ್ ಪೂರ್ವ ಸ್ಥಿತಿ ತಲುಪಿದೆ. ಈಗ ಜನರ ಕೈಗೆ ನಗದು ಹಣ ಸಿಕ್ಕರೆ, ಅದು ಮಾರುಕಟ್ಟೆಯಲ್ಲಿ ಚಲಾವಣೆ ಆಗಿ, ಅದರ ಫಲವಾಗಿ ಆರ್ಥಿಕತೆ ಚಿಗುರಿಕೊಂಡರೆ, ಆ ಲಾಭ ಕೊನೆಗೆ ಸಿಗಲಿರುವುದು ದೇಶಕ್ಕೇ.
ಇನ್ನು, ಈ ಸವಲತ್ತುಗಳನ್ನು ಒದಗಿಸುವುದಕ್ಕೆ ಸರ್ಕಾರ ಸಂಪನ್ಮೂಲ ಕ್ರೋಢೀಕರಿಸುವುದಕ್ಕೆ ಸ್ವಲ್ಪ ಹೆಣಗಬೇಕಿದೆ. ಆದರೆ, ಅಂತಿಮವಾಗಿ ಇದು ಸರ್ಕಾರ ಊಹಿಸಿದಷ್ಟು ದೊಡ್ಡ ಹೊರೆ ಆಗದು ಎಂಬುದು ಈವತ್ತಿನ ನಿಯಮಗಳ ಚೌಕಟ್ಟು ತೋರಿಸಿಕೊಟ್ಟಿದೆ. ಅದು 50,000 ಕೋಟಿಗಳೇ ಆಗಲಿದೆ ಎಂದುಕೊಂಡರೂ, ಬೊಮ್ಮಾಯಿ ಸರ್ಕಾರ ತನ್ನ ಮೂರು ಲಕ್ಷ ಕೋಟಿ ರೂ.ಗಳ ಗಾತ್ರದ ಬಜೆಟ್‌ನಲ್ಲಿ 80,000 ಕೋಟಿ ರೂ.ಗಳನ್ನು ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಗೆ (Welfare and Inclusive Growth) ಹಾಗೂ ಇನ್ನೊಂದು 80,000 ಕೋಟಿ ರೂ.ಗಳನ್ನು ಮಹಿಳೆ-ಮಕ್ಕಳು-ಸಮಾಜ ಕಲ್ಯಾಣಕ್ಕೆಂದು ಮೀಸಲಿರಿಸಿದೆ. ಇದರಲ್ಲೇ ಆದ್ಯತೆಗಳ ಮರುಹೊಂದಾಣಿಕೆ ಮಾಡಿಕೊಳ್ಳಲು ಅವಕಾಶ ಇದೆ. ಒಟ್ಟಿನಲ್ಲಿ ತಲುಪಬೇಕಾದದ್ದು ಜನರಿಗೆ ತಲುಪುವುದನ್ನು ನಿಶ್ಚಿತಪಡಿಸಿದರೆ ಆಯಿತು.
ಸರ್ಕಾರಕ್ಕೆ, ಅದರಲ್ಲೂ ಸಿದ್ಧರಾಮಯ್ಯ ಅವರಿಗೆ ಹಣಕಾಸು ಸಚಿವರೂ ಆಗಿ ತನ್ನ ಎಫೀಷಿಯನ್ಸಿ ತೋರಿಸುವುದಕ್ಕೆ ಇದು ಸುಸಂದರ್ಭ. ಆರ್ಥಿಕ ಶಿಸ್ತು, ಆದಾಯ/ಕಂದಾಯ ಸಂಗ್ರಹದಲ್ಲಿ ಬಿಗಿತನ, ಮಿತವ್ಯಯ, ಭ್ರಷ್ಟಾಚಾರಕ್ಕೆ ಕಡಿವಾಣ – ಇಷ್ಟನ್ನು ನಿಶ್ಚಿತಪಡಿಸಿದರೆ ಎಲ್ಲವೂ ಸುಗಮ. ಜೊತೆಗೆ, ಈಗಿರುವುದು ಸಿಂಗಲ್ ಎಂಜಿನ್ ಸರ್ಕಾರ. ಹಾಗಾಗಿ ತನ್ನ ಪಾಲಿನ GST ಮೊತ್ತ, ಕೇಂದ್ರದಿಂದ ತನಗೆ ಬರಬೇಕಾಗಿರುವ ಹಣದ ಪಾಲಿಗೆ ಯಾರಿಗೂ ಜೀ…ಹುಜೂರ್ ಅನ್ನಬೇಕಾಗಿಲ್ಲ. ಸಿಗಬೇಕಾದದ್ದನ್ನು ಹಕ್ಕಿನಿಂದ ಕೇಳಿ ಪಡೆಯಲು ಅವಕಾಶ ಇದೆ.
ಇನ್ನು, #ಡಿಯರ್_ಮೀಡಿಯಾ ಮತ್ತು ಭಕ್ತವೃಂದ ತಮ್ಮ ದೇಶಸೇವೆಯ ಜೊತೆ ರಾಜ್ಯಸೇವೆಯನ್ನೂ ಹೇಗೆ ಮಾಡಬಹುದೆಂದರೆ:
>> ಹಿಂದಿನ ಸರ್ಕಾರದಂತೆ ಈ ಸರ್ಕಾರ ಕೂಡ 40% ಹಿಂದೆ ಬೀಳದಂತೆ ಕಣ್ಗಾವಲಿಡಿ. ನಿಮ್ಮ ಆ ನಿಗಾ, ಕನಿಷ್ಠ 25,000 ಕೋಟಿ ರೂ.ಗಳನ್ನು ರಾಜ್ಯದ ಬೊಕ್ಕಸಕ್ಕೆ ಉಳಿಸೀತು.
>> ರಾಜ್ಯಕ್ಕೆ ಸಾಲ ಆಗ್ತದೆ ಅಂತ ಕಳಕಳಿ ಇರುವವರು ದಯಮಾಡಿ ನಿಮ್ಮ ಉಚಿತ ಕೊಡುಗೆಗಳನ್ನು ಬಿಟ್ಟುಕೊಟ್ಟುಬಿಡಿ. ಅಗತ್ಯ ಇರುವವರು ಬಳಸಿಕೊಳ್ಳಲಿ ಬಿಡಿ. ಹಾಗೇ, ಯಾರಾದರೂ ಅರ್ಹರಿಗೆ ಈ ಕೊಡುಗೆಗಳು ಸಿಗದಿದ್ದರೆ, ಅದನ್ನು ಸರ್ಕಾರದ ಗಮನಕ್ಕೆ ತಂದು ಅವರಿಗೆ ಅದನ್ನು ಕೊಡಿಸಿ.
>> ದಯವಿಟ್ಟು, ಈ ಗ್ಯಾರಂಟಿಗಳ ಫಲಾನುಭವಿಗಳನ್ನು ಗೇಲಿ ಮಾಡುವ, ನಮ್ಮ ತೆರಿಗೆಯಲ್ಲಿ ಬಿಟ್ಟಿ ತಿನ್ನುತ್ತಾರೆಂದು ಕರುಬುವ ಕೆಲಸಕ್ಕೆ ಇಳಿಯಬೇಡಿ. ಇದೆಲ್ಲ ನೀವು “ಸಬ್ ಕಾ ಸಾತ್ ಸಬ್ ಕಾ ವಿಕಾಸ್” ಗೆ ದೊಡ್ಡ ಮನಸ್ಸಿನಿಂದ ಮಾಡಿರುವ ಪುಟ್ಟ “ದೇಶಸೇವೆ” ಎಂದು ತಿಳಿದು ದೇಶಭಕ್ತರಾಗಿ ಉಳಿದುಬಿಡಿ.
– ರಾಜಾರಾಂ ತಲ್ಲೂರ್




