ಸುಪ್ರೀಂಕೋರ್ಟ್‌ ಸ್ಪಷ್ಟ ಆದೇಶ ಹೊರಡಿಸದಿದ್ದರೆ ಪ್ರಜಾಪ್ರಭುತ್ವದ ಅವಸಾನದಲ್ಲಿ ಅನುಮಾನವಿಲ್ಲ

3 years ago

#SupremeCourt #issue #clear #order #doubt #demise #democracy #ksnagaraj #ncp #maharashtra #bjptrap

ಆಪರೇಷನ್ ಕಮಲ ಎಂಬ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕ್ಯಾನ್ಸರ್ ರೋಗಕ್ಕಿಂತ ಹೆಚ್ಚು ಅಪಾಯಕಾರಿಯಾಗಿರುವ ವ್ಯವಸ್ಥೆಯನ್ನು ಬಿ.ಜೆ.ಪಿ.ಯವರು ಮೊದಲು ಕರ್ನಾಟಕದಲ್ಲಿ ಪ್ರಯೋಗ ಮಾಡಿ ಇದರ ಯಶಸ್ಸಿನಿಂದ ಉತ್ತೇಜಿತರಾಗಿ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲೂ ಈ ಹೊಲಸು ತಂತ್ರಗಾರಿಕೆಯನ್ನು ಅನುಸರಿಸಿ ಸರ್ಕಾರಗಳನ್ನು ಕೆಡವಿ ಹಿಂಬಾಗಿಲಿನ ಮೂಲಕ ತಮ್ಮ ಸರ್ಕಾರಗಳನ್ನು ಸ್ಥಾಪನೆ ಮಾಡಿಕೊಂಡಿದ್ದಾರೆ.

ಈಗ ಮಹಾರಾಷ್ಟ್ರದಲ್ಲಿ ಪ್ರಬಲ ವಿರೋಧ ಪಕ್ಷವಾದ ಎನ್‌ಸಿಪಿಯನ್ನು ವಿಭಜಿಸುವುದರ ಮೂಲಕ ವಿರೋಧ ಪಕ್ಷರಹಿತವಾದ ಏಕವ್ಯಕ್ತಿಯ ಪ್ರಭುತ್ವವನ್ನು ಸ್ಥಾಪಿಸಿ ಪ್ರಜಾಪ್ರಭುತ್ವವನ್ನು ನಾಚಿಸುವಂತೆ ಮಾಡಿದ್ದಾರೆ. ದೇಶದಲ್ಲಿ ಬಿ.ಜೆ.ಪಿ.ಯವರು ಕಳೆದ ಒಂಭತ್ತು ವರ್ಷದಲ್ಲಿ ಅನೇಕ ರಾಜ್ಯಗಳಲ್ಲಿ ಅಧಿಕಾರದ, ಹಣದ ಆಮಿಷವನ್ನು ಒಡ್ಡಿ, ಪಕ್ಷಾಂತರವನ್ನು ಮಾಡಿಸಿ, ರಾಜೀನಾಮೆಗಳನ್ನು ಕೊಡಿಸಿ ಉಪ ಚುನಾವಣೆಗಳನ್ನು ಮಾಡುವುದು, ಕೆಲವು ಬಾರಿ ಸಭಾಧ್ಯಕ್ಷರ ಸಹಕಾರದಿಂದ ಪಕ್ಷಾಂತರ ಮಸೂದೆಯ ಕಾನೂನನ್ನು ಉಲ್ಲಂಘಿಸಿ ತಮ್ಮ ಇಷ್ಟಕ್ಕೆ ತಕ್ಕ ಹಾಗೇ ಬದಲಾಯಿಸಿಕೊಳ್ಳುತ್ತಿದ್ದಾರೆ.

ಕರ್ನಾಟಕ ರಾಜ್ಯ ಮತ್ತು ಮಹಾರಾಷ್ಟ್ರದಲ್ಲಿನ ವಿಚಾರಗಳಲ್ಲಿ ಸಭಾಧ್ಯಕ್ಷರುಗಳು ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ಪಕ್ಷಾಂತರಗೊಂಡ ಶಾಸಕರನ್ನು ಅನರ್ಹಗೊಳಿಸಿ ತಮ್ಮ ಅಧಿಕಾರವನ್ನು ಚಲಾಯಿಸಿದರು. ಆದರೆ ದೇಶದ ನ್ಯಾಯಾಲಯಗಳಲ್ಲಿ ಈ ವಿಚಾರಗಳು ಹಲವಾರು ತಿಂಗಳುಗಳ ಕಾಲ ವಿಚಾರಣೆಗಳನ್ನು ನಡೆಸಿ ಅಂತಿಮವಾಗಿ ಯಾವುದೇ ರೀತಿಯ ಸ್ಪಷ್ಟವಾದಂತಹ ಆದೇಶಗಳನ್ನು ನೀಡದೆ ಅಡ್ಡ ಗೋಡೆಯ ದೀಪ ಇಟ್ಟ ರೀತಿಯಲ್ಲಿ ತೀರ್ಪುಗಳನ್ನು ನೀಡಿರುತ್ತಾರೆ.

ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಈ ವಿಚಾರದಲ್ಲಿ ಸಷ್ಟವಾದಂತಹ ಅಭಿಪ್ರಾಯವನ್ನು ತಿಳಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ದೇಶದಲ್ಲಿ ವಿರೋಧ ಪಕ್ಷವೆಂಬುದೇ ಇರುವುದಿಲ್ಲ. ಚುನಾಯಿತ ಸರ್ಕಾರಗಳು ಅಸ್ತಿತ್ವದಲ್ಲಿಯೇ ಇರುವುದಿಲ್ಲ. ಜನಾಭಿಪ್ರಾಯಕ್ಕೆ ಬೆಲೆಯೇ ಇರುವುದಿಲ್ಲ, ಪಕ್ಷಾಂತರವೆಂಬ ಪಿಡುಗು ಪ್ರಜಾಪ್ರಭುತ್ವವನ್ನು ನುಂಗಿ ನೀರು ಕುಡಿಯುತ್ತದೆ. ಯಾವ ರೀತಿಯಲ್ಲಿ ಎಸ್.ಆರ್. ಬೊಮ್ಮಾಯಿಯವರ ಪ್ರಕರಣದಲ್ಲಿ ಬಹುಮತ ಸಾಬೀತು ಪಡಿಸುವ ವಿಚಾರದಲ್ಲಿ ನ್ಯಾಯಾಲಯ ಸ್ಪಷ್ಟವಾದಂತಹ ತೀರ್ಪನ್ನು ನೀಡಿ ರಾಜ್ಯಪಾಲರು ಸರ್ಕಾರಗಳನ್ನು ವಜಾ ಮಾಡದಂತೆ ರಕ್ಷಣೆಯನ್ನು ಕೊಟ್ಟಿದ್ದರೋ ಅಂತಹದೇ ಒಂದು ತೀರ್ಪು ಬಂದಲ್ಲಿ ಪಕ್ಷಾಂತರ ಮಾಡುವಂತಹ ದೊಡ್ಡ ರೋಗಕ್ಕೆ ಮದ್ದು ಸಿಗುತ್ತದೆ.

ಬಿ.ಜೆ.ಪಿ.ಯವರು ತನಿಖಾ ಸಂಸ್ಥೆಗಳಲ್ಲಿ ಮೊಕದ್ದಮೆಗಳನ್ನು ಎದುರಿಸುತ್ತಿರುವ ನಾಯಕರುಗಳನ್ನು ಹುಡುಕಿ ಹುಡುಕಿ ಅವರನ್ನು ಬೆದರಿಸಿ ತಮ್ಮ ಪಕ್ಷದತ್ತ ಸೆಳೆದುಕೊಳ್ಳುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಭ್ರಷ್ಟರು, ಅಯೋಗ್ಯರು, ದೇಶದ್ರೋಹಿಗಳು ಆಗಿರುತ್ತಾರೆ. ಅದೇ ಅವರು ಬಿ.ಜೆ.ಪಿ.ಯ ಧ್ವಜವನ್ನು ಹೆಗಲ ಮೇಲೆ ಹಾಕಿಕೊಂಡರೆ ಕ್ಷಣ ಮಾತ್ರದಲ್ಲಿ ಪವಿತ್ರ ಪಾವನರಾಗಿ ಪ್ರಾಮಾಣಿಕರು, ಯೋಗ್ಯರು ಮತ್ತು ದೇಶಪ್ರೇಮಿಗಳಾಗಿ ಪರಿವರ್ತನೆಯಾಗುತ್ತಾರೆ. ವಂಶಪಾರಂಪರ್ಯದ ರಾಜಕಾರಣದ ಮಾತು, ಭ್ರಷ್ಟಾಚಾರದ ಮಾತು ಪ್ರಾಸಬದ್ಧವಾಗಿ ಆಡುತ್ತಾ ಜನರನ್ನು ರಂಜಿಸುವ ಸಂಗತಿಗಳನ್ನಾಗಿಸಿಕೊಂಡಿರುವ ಬಿ.ಜೆ.ಪಿ.ಯವರಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಕವಡೆ ಕಾಸಿನ ಆಸಕ್ತಿ ಇಲ್ಲ. ಕೇವಲ ಅಧಿಕಾರದ ಹುಚ್ಚು ಇವರನ್ನು ಬಾಧಿಸುತ್ತಿದೆ. ಅಧಿಕಾರ ಕಳೆದುಕೊಂಡ ರಾಜ್ಯಗಳಲ್ಲಿ ತನಿಖಾ ಸಂಸ್ಥೆಗಳನ್ನು ಬಳಸಿ ಕಿರುಕುಳ ನೀಡುವುದು, ರಾಜ್ಯಪಾಲರ ಮೂಲಕ ಸಂವಿಧಾನ ವಿರೋಧಿ ಕೃತ್ಯಗಳನ್ನು ಮಾಡಿಸುತ್ತಾ ಸರ್ಕಾರಗಳನ್ನು ಅಭದ್ರಗೊಳಿಸುವಂತಹ ಕೆಟ್ಟ ಸಂಸ್ಕೃತಿಯನ್ನು ಮುಂದುವರಿಸಿದ್ದಾರೆ. ಈ ನಾಯಕರುಗಳ ಮಾತಿಗು ಮತ್ತು ನಡವಳಿಕೆಗು ಸಂಬಂಧವೇ ಇಲ್ಲ.

– ಕೆ.ಎಸ್.ನಾಗರಾಜ್, ಬೆಂಗಳೂರು

Leave a Reply