ಕೇಸರಿ ಶಾಲು, ಆಜಾನ್, ಹಲಾಲ್, ಜಟ್ಕಾ ಕಟ್ ಹುಯಿಲು ಈಗ ಏನಾದವು?: ಪ್ರಿಯಾಂಕ್ ಖರ್ಗೆ

3 years ago

What happened to saffron shawl, aazan, halal, jatka cut hair now?: Priyank Kharge

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ದೊಡ್ಡ ಗೋಲ್ ಮಾಲ್ ನಡೆದಿದೆ. ಇದರ ದಾಖಲೆಗಳು ಪೆನ್ಡ್ರೈವ್ ತಮ್ಮ ಬಳಿ ಇದೆ ಎನ್ನುತ್ತಿರುವ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಪೆನ್ಡ್ರೈವ್ ನೀಡಲಿ. ಅದರಲ್ಲಿ ಏನು ಇದೆ ಎಂಬುದನ್ನು ನಾವು ತನಿಖೆ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ವಿಚಾರವಾಗಿ ಕುಮಾರಸ್ವಾಮಿ ಯಾರನ್ನಾದರೂ ಹೆದರಿಸುವುದಕ್ಕೆ ಟ್ರೈ ಮಾಡುತ್ತಿದ್ದಾರಾ? ಬ್ಲಾಕ್ ಮೇಲ್ ಮಾಡಲು ಪ್ರಯತ್ನ ಮಾಡುತ್ತಿದ್ದಾರಾ? ಅಥವಾ ವಿರೋಧ ಪಕ್ಷದ ನಾಯಕ ಆಗಲು ಟ್ರೈ ಮಾಡುತ್ತಿದ್ದಾರಾ? ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಅವರಲ್ಲಿ ಇರುವ ಪೆನ್ಡ್ರೈವ್ನಲ್ಲಿ ಏನಿದೆ ಹಾಗೂ ಅದರಲ್ಲಿರುವ ಕಂಟೆಂಟ್ ಏನು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಬಿಜೆಪಿಗರು ತಾನೆ ಹೇಳಿದ್ದು ಪೆನ್ ಡ್ರೈವ್ ನಲ್ಲಿ ಏನೆನೋ ಇದೆ ಅಂತ. ಆದರೆ ಎಸ್ಪಿ ರೋಡ್ ಗೆ ಹೋದರೆ ಅಂತಹ ಸಾವಿರಾರು ಪೆನ್ಡ್ರೈವ್ ಸಿಗುತ್ತದೆ ಎಂದರು.

ಸಾಕ್ಷಿ ಏನಿದೆ ಅಂತ ತೋರಿಸುವುದು ಮುಖ್ಯವಾಗುತ್ತದೆ. ಅಂದು ಪಿಎಸ್ಐ ಹಗರಣದ ಸಾಕ್ಷಿ ಕೇಳಿದ್ರು, ಸಾಕ್ಷಿ ತೊರಿಸಿದ್ರೆ, ಪ್ರಿಯಾಂಕ್ ಖರ್ಗೆ ಹುಷಾರಾಗಿರಿ, ತನಿಖೆಯಲ್ಲಿ ನಿಮ್ಮ ಹೆಸರು ಬರುತ್ತೆ ಎಂದು ಹೇಳಿದರು. ಅಂದು ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರ ತನಿಖೆಗೆ ಕೊಡಬಹುದಿತ್ತು. ಇವಾಗ ನಾವು ಕೊಟ್ಟರೆ ರಾಜಕೀಯ ದ್ವೇಷ ಅಂತಿದ್ದಾರೆ ಎಂದರು.

ಆಜಾನ್, ಹಲಾಲ್, ಜಟ್ಕಾ ಕಟ್ ಎಂದು ಹುಯಿಲೆಬ್ಬರಿಸಿದರು, ಆದರೆ ಇವಾಗ ಏನಾದವು. ಕೇಸರಿ ಶಾಲು ಹಾಕಿಸಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋದ್ರು. ಬಿಜೆಪಿ ಆತ್ಮಾಲೋಕನ ಮಾಡಬೇಕು. ದಯವಿಟ್ಟು ನಮಗೆ ಆಡಳಿತ ಮಾಡಲು ಅವಕಾಶ ನೀಡಬೇಕು. ಜೊತೆಗೆ ಬಿಜೆಪಿಯವರು ಮೊದಲು ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿ. ಆಡಳಿತದಲ್ಲಿ ಲೋಪ ಇದ್ರೆ ತೋರಿಸಲಿ. ನಿಜವಾದ ಪ್ರತಿಭಟನೆ ಮಾಡುವ ಮೂಲಕ ನಮಗೆ ಸಹಾಯ ಮಾಡಲಿ ಎಂದರು.

ಕೇಂದ್ರ ಸರ್ಕಾರದಿಂದ ನನ್ನ ಇಲಾಖೆಗೆ 1,300 ಕೋಟಿ ರೂ. ಬರಬೇಕು. ಉದ್ಯೋಗ ಖಾತ್ರಿ ಯೋಜನೆಗೆ ಬರಬೇಕು ಅದನ್ನು ತರಿಸಿಕೊಡಿ. ಈ ಪ್ರತಿಭಟನೆಗೆ ಬಿಜೆಪಿ ಬರುತ್ತಾ ಬರಲ್ಲ, ಬದಲಾಗಿ ಅಸ್ತಿತ್ವಕ್ಕೆ ಈ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರದ ಹತ್ತಿರ ಮಾತನಾಡುವ ಧೈರ್ಯ ನಮಗಿದೆ. ನಮ್ಮನ್ನು ಬೆಂಬಲಿಸಿ, ಕೇಂದ್ರ ಅನುದಾನ ತರೋಣ. ಕನ್ನಡಿಗರಿಗೆ ಒಳ್ಳೆಯದಾಗುತ್ತೆ ಅಲ್ವಾ? ವಿಡಿಯೋ ಪ್ರಕರಣ ಎಲ್ಲ ಬಿಟ್ಟು ಅನುದಾನದ ಬಗ್ಗೆ ಮಾತನಾಡಿ ಎಂದು ಸಲಹೆ ನೀಡಿದರು.

ಉಡುಪಿ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿಗರು ನಿರ್ಧಾರ ಮಾಡಬೇಕು ಯಾರನ್ನು ನಂಬುತ್ತಾರೆ ಎಂದು. ಬಿಜೆಪಿ ಕಾಲದ ಅಧಿಕಾರಿಗಳು ಈಗಲೂ ಅಲ್ಲೇ ಇದ್ದಾರೆ. ಪ್ರಕರಣದಲ್ಲಿ ಯಾವುದೇ ರೀತಿಯ ಕ್ರಿಮಿನಲ್ ಉದ್ದೇಶ ಇರಲಿಲ್ಲ ಹಾಗೂ ಎಲ್ಲೂ ವಿಡಿಯೋ ಸಿಕ್ಕಿಲ್ಲ ಎಂದು ಸ್ವತಃ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಹೇಳಿದ್ದಾರೆ. ಹಾಗಿದ್ದರೂ, ವಿಡಿಯೋ ಓಡಾಡುತ್ತಿದೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಹಾಗಾದರೆ ಬಿಜೆಪಿ ಅವರು ವಿಡಿಯೋವನ್ನು ತೊರಿಸಲಿ, ವಿಡಿಯೋ ಯಾವ ಸಾಮಾಜಿಕ ಜಾಲತಾಣದಲ್ಲಿದೆ ಎಂದು ತಿಳಿಸಲಿ ಎಂದು ಸವಾಲು ಹಾಕಿದರು.

Leave a Reply