ತುಮಕೂರು ಮೆಟ್ರೋ ಕುರಿತು ಬಿಜೆಪಿ ನಾಯಕರು ಹೇಳಿದ್ದೇನು?

5 months ago

ಬೆಂಗಳೂರು: ಬೆಂಗಳೂರು – ತುಮಕೂರು ಮೆಟ್ರೋ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ವಿಪಕ್ಷ ಬಿಜೆಪಿ ನಾಯಕರಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ.

ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಕೇಂದ್ರ ರೈಲ್ವೆ ಸಚಿವ ಹಾಗೂ ತುಮಕೂರು ಸಂಸದ ವಿ.ಸೋಮಣ್ಣ, ತುಮಕೂರಿಗೆ ಮೆಟ್ರೋ ಹಾಗೂ ನಾಲ್ಕು ಲೈನ್ ಹೈವೆ ಸಹ ಬರುತ್ತದೆ. ಅದಕ್ಕಾಗಿ ಈಗ ಡಿಪಿಆರ್ ಸಹ ಆಗುತ್ತಿದೆ. ತುಮಕೂರು, ಕೋಲಾರ, ರಾಮನಗರ ಸೇರಿದಂತೆ ಬೆಂಗಳೂರು ಗಡಿಭಾಗದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ರೈಲ್ವೆ ಇಲಾಖೆ ತನ್ನದೇಯಾದ ಕೊಡುಗೆ ಕೊಡುತ್ತಿದೆ ಎಂದಿದ್ದಾರೆ.

ಆದರೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾತ್ರ ತುಮಕೂರಿಗೆ ಮೆಟ್ರೋ ಯೋಜನೆ ಕಲ್ಪಿಸುವ ರಾಜ್ಯ ಸರ್ಕಾರದ ನಿರ್ಧಾರ ಹಾಸ್ಯಾಸ್ಪದ ಹಾಗೂ ಅವೈಜ್ಞಾನಿಕವಾದ ಕ್ರಮವಾಗಿದೆ ಎಂದು ಟೀಕಿಸಿದ್ದಾರೆ.

ಈ ಯೋಜನೆಯನ್ನು ಅವೈಜ್ಞಾನಿಕ ಎಂದಿರುವ ತೇಜಸ್ವಿ ಸೂರ್ಯ, ಮೆಟ್ರೋ ಹೆಸರೇ ಹೇಳುವ ರೀತಿ ಇದು ನಗರ ಪ್ರದೇಶದ ದಟ್ಟಣೆಯನ್ನು ಕಡಿಮೆ ಮಾಡಲು ಇರುವ ಯೋಜನೆಯಾಗಿದೆ. ಅದನ್ನು ಬಿಟ್ಟು ಅಂತರ ಜಿಲ್ಲೆ ನಡುವೆ ಯೋಜನೆ ಜಾರಿಗೆ ತರಲು ಮುಂದಾಗಿರುವುದು ಹಾಸ್ಯಾಸ್ಪದ ಕ್ರಮ ಎಂದು ತಕರಾರು ತೆಗೆದಿದ್ದಾರೆ.

ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಸುದೀರ್ಘ ಪೋಸ್ಟ್ ಹಾಕಿರುವ ಅವರು, ಇದೊಂದು ಸಂಪೂರ್ಣ ರಿಯಲ್ ಎಸ್ಟೇಟ್ ಯೋಜನೆ ಆಗಿದೆ. ಇದರಿಂದ ಜನಸಾಮಾನ್ಯರಿಗೆ ಯಾವುದೇ ಅನುಕೂಲ ಆಗುವುದಿಲ್ಲ ಎಂದಿದ್ದಾರೆ.

ರಿಯಲ್ ಎಸ್ಟೇಟ್ ಲಾಬಿಗಳಿಗೆ ಸಹಾಯವಾಗೋ ರೀತಿಯಲ್ಲಿ ಯೋಜನೆ ಮಾಡುತ್ತೇವೆ ಅಂತಾ ಹೊರಟರೆ ಬರುವ ಐಡಿಯಾಗಳು ಇದೇ ರೀತಿಯವು. ಬೆಂಗಳೂರಿನ ಸಮಗ್ರ ನಗರ ಯೋಜನೆ ಪ್ರಕಾರ 2031ರಲ್ಲಿ ಬೆಂಗಳೂರು ನಗರಕ್ಕೆ 300 ಕಿಲೋಮೀಟರ್ ಮೆಟ್ರೋ ಆಗಬೇಕು. ಮೊದಲು ಅದನ್ನು ಮಾಡಿ ಎಂದಿದ್ದಾರೆ.

ತುಮಕೂರಿಗೆ ಮೆಟ್ರೋ ಸಂಪರ್ಕಕ್ಕೆ ವಿರೋಧ ಮಾಡುತ್ತಾ ಇದ್ದೇವೆ ಅಂತಾ ಜನ ಅಂದುಕೊಳ್ಳಬಾರದು. ಮುಂಬೈನಿಂದ ಠಾಣೆಗೆ, ದೆಹಲಿಯಿಂದ ಹರಿಯಾಣದ ಗುರುಗ್ರಾಮಕ್ಕೆ ಹೇಗೆ ರ್ಯಾಪಿಡ್ ರೈಲ್ ಟ್ರಾನ್ಸಿಟ್ ಸಿಸ್ಟಮ್ (RRTS) ಮಾಡಿದ್ದಾರೋ ಅದೇ ರೀತಿ ಇಲ್ಲಿಯೂ ಮಾಡಬಹುದು. ಒಂದು ಕಿಲೋಮೀಟರ್ ಮೆಟ್ರೋ ವಿಸ್ತರಣೆಗೆ 450 ಕೋಟಿ ರೂಪಾಯಿ ಖರ್ಚಾಗುತ್ತದೆ. ಅದೇ RRTS ಅಥವಾ ಸಬ್ ಅರ್ಬನ್ ರೈಲು ಮಾಡುತ್ತೇವೆ ಅಂದರೆ 150 ಕೋಟಿ ರೂಪಾಯಿ ಆಗಲಿದೆ ಎಂದಿದ್ದಾರೆ.

ಕಡಿಮೆ ಜನ ಕುಳಿತುಕೊಳ್ಳುವುದು ಮತ್ತು ಜಾಸ್ತಿ ಜನ ನಿಲ್ಲಲು ಅವಕಾಶ ಇರುವ ರೀತಿ ಮೆಟ್ರೋ ಡಿಸೈನ್ ಇದೆ. ವೈಟ್ ಫೀಲ್ಡ್ ನಿಂದ ವಿಜಯನಗರಕ್ಕೆ 26 ಕಿ.ಮೀ. ದೂರವನ್ನು ನಿಂತುಕೊಂಡು ಬರಬೇಕು. ಹೀಗಿರುವಾಗ ತುಮಕೂರಿನಿಂದಲೂ ಜನ ನಿಂತುಕೊಂಡು ಬರಬೇಕಾ? ನಿಮಗೆ ಸಲಹೆ ಕೊಡ್ತಾ ಇರೋದು ಯಾರು ಎಂದು ಕೇಳಿದ್ದಾರೆ.

Leave a Reply