ಜಲ ಜೀವನ ಮಿಷನ್ ಹಣವನ್ನು ತಕ್ಷಣವೇ ಬಿಡುಗಡೆ ಮಾಡಿ: ಸಿದ್ದರಾಮಯ್ಯ

7 months ago

ಶ್ರೀ ನರೇಂದ್ರ ಮೋದಿ ಅವರಿಗೆ, ನಿಮಗೆ ಚೆನ್ನಾಗಿ ಅರಿವಿರುವಂತೆ, ಕರ್ನಾಟಕ ರಾಜ್ಯದಲ್ಲಿ ಜಲ ಜೀವನ ಮಿಷನ್ (JJM) ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ. ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸಾಧಿಸಿರುವ ಭೌತಿಕ ಪ್ರಗತಿ ಅತ್ಯಂತ ಗಮನಾರ್ಹವಾಗಿದೆ. ಈಗಾಗಲೇ ಶೇ.86ಕ್ಕಿಂತ ಹೆಚ್ಚು ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸಲಾಗಿದ್ದು, ಎಲ್ಲವೂ ಕಾರ್ಯನಿರ್ವಹಿಸುತ್ತಿವೆ. ಎಲ್ಲ ಯೋಜನೆಗಳು ಮತ್ತು ಕಾಮಗಾರಿಗಳು ತ್ವರಿತವಾಗಿ ನಡೆಯುತ್ತಿದ್ದು, ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತಿದೆ.

ರಾಜ್ಯ ಮಟ್ಟದ ಯೋಜನಾ ಮಂಜೂರಾತಿ ಸಮಿತಿ (SLSSC) ಒಟ್ಟು ರೂ.69,487.60 ಕೋಟಿ ವೆಚ್ಚದ ಯೋಜನೆಗಳಿಗೆ ಅನುಮೋದನೆ ನೀಡಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು ನಿಗದಿತ ಪ್ರಮಾಣದಲ್ಲಿದೆ. ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ನಿರಂತರವಾಗಿ ಈ ಯೋಜನೆಗೆ ಹೆಚ್ಚಿನ ಹಣವನ್ನು ಮೀಸಲಿಡುತ್ತಾ ಬಂದಿದೆ. ಆದರೆ ಯೋಜನೆಯನ್ನು ನಿಗದಿತ ಅವಧಿಗೆ ಪೂರ್ಣಗೊಳಿಸಲು ಹಾಗೂ ಯಶಸ್ವಿಯಾಗಿ ಜಾರಿಗೆ ತರಲು ಕೇಂದ್ರ ಸರ್ಕಾರದ ನಿರಂತರ ಬೆಂಬಲ ಅತ್ಯಗತ್ಯವಾಗಿದೆ.

ಇದುವರೆಗೆ ಈ ಯೋಜನೆಯಡಿ ಒಟ್ಟು ರೂ.35,698.58 ಕೋಟಿ ಖರ್ಚು ಮಾಡಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಕೊಡುಗೆ ರೂ.24,598.45 ಕೋಟಿ ಇದ್ದರೆ, ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಮೊತ್ತ ಕೇವಲ ರೂ.11,786.63 ಕೋಟಿ ಮಾತ್ರ. ಕೇಂದ್ರದಿಂದ ಬಂದ ಈ ಪೂರ್ತಿ ಹಣವನ್ನು ರಾಜ್ಯ ಸಂಪೂರ್ಣವಾಗಿ ಖರ್ಚು ಮಾಡಿದೆ. ಆದರೆ 2025-26ರ ಅಂತ್ಯದವರೆಗೆ ಕರ್ನಾಟಕಕ್ಕೆ ಕೊಡಬೇಕಾದ ಪಾಲಿನಲ್ಲಿ ರೂ.13,004.63 ಕೋಟಿ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ.
2024-25ರ ಹಣಕಾಸು ವರ್ಷದಲ್ಲಿ ಹಂಚಿಕೆಯಾಗಬೇಕಿದ್ದ 3,804.41 ಕೋಟಿ ರೂ. ಪೈಕಿ ಕೇವಲ 570.66 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರವು ಸ್ವೀಕರಿಸಲಾಗಿದೆ ಎಂಬ ವಿಚಾರವನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ.

ಆದರೂ ರಾಜ್ಯ ಸರ್ಕಾರ ತಾನೇ ಮುಂಗಡವಾಗಿ ರೂ.7,045.64 ಕೋಟಿ ಬಿಡುಗಡೆ ಮಾಡುವ ಮೂಲಕ, ಯೋಜನೆಯ ಯಶಸ್ಸಿಗೆ ಅಗತ್ಯ 7,602.99 ಕೋಟಿ ರೂ. ಮೊತ್ತವನ್ನು ಒದಗಿಸಲಾಗಿದೆ. ಕಾಮಗಾರಿಗಳು ನಿಂತುಹೋಗದಂತೆ ತಡೆಯಲು ರಾಜ್ಯ ತನ್ನ ಜೇಬಿನಿಂದಲೇ ಹಣ ಹಾಕುತ್ತಾ ಬಂದಿದೆ. ಈಗಿನ 2025-26ನೇ ಸಾಲಿನಲ್ಲಿ ಕೇಂದ್ರದಿಂದ ಇನ್ನೂ ಒಂದು ರೂಪಾಯಿಯೂ ಬಂದಿಲ್ಲ. ಆದರೂ ರಾಜ್ಯ ಮುಂಗಡವಾಗಿ ರೂ.1,500 ಕೋಟಿ ಬಿಡುಗಡೆ ಮಾಡಿದೆ. ಪ್ರಸ್ತುತ 1,700 ಕೋಟಿ ರೂ. ಮೊತ್ತದ ಬಿಲ್‌ಗಳು ಪಾವತಿಗೆ ಬಾಕಿ ಇವೆ ಮತ್ತು 2,600 ಕೋಟಿ ರೂ. ಮೊತ್ತದ ಬಿಲ್ಲುಗಳು ಸಲ್ಲಿಕೆಯಾಗಬೇಕಿದೆ.

ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಅತ್ಯಂತ ಮುಖ್ಯವಾದ ಕೇಂದ್ರದ ಯೋಜನೆಯಾಗಿದೆ. ಇದನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಕೇಂದ್ರ ಸರ್ಕಾರದ ಸಹಾಯ ಅನಿವಾರ್ಯ. ಆದ್ದರಿಂದ, ಜಲ ಜೀವನ ಮಿಷನ್ ಯೋಜನೆಯಡಿ ರಾಜ್ಯಕ್ಕೆ ಬಾಕಿ ಇರುವ ಕೇಂದ್ರದ ಪಾಲಿನ ಹಣವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಕೋರಿಕೊಳ್ಳುತ್ತೇನೆ. ಈ ನಿಟ್ಟಿನಲ್ಲಿ ನಿಮ್ಮ ನಿರಂತರ ಬೆಂಬಲಕ್ಕಾಗಿ ಕಾಯುತ್ತಿದ್ದೇನೆ.

– ಸಿದ್ದರಾಮಯ್ಯ, ಸಿಎಂ

Leave a Reply