ಜನವರಿ 1ರಿಂದ ಆರ್ಬಿಐನ ಹೊಸ ಸಿಬಿಲ್ ಸ್ಕೋರ್ ನಿಯಮಗಳೇನು?

1 year ago

ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು ಇಲ್ಲಿವೆ…

ಬ್ಯಾಂಕುಗಳಿಂದ ಸಾಲಗಳನ್ನು ಪಡೆಯುವಲ್ಲಿ ಕ್ರೆಡಿಟ್ ಸ್ಕೋರ್ ನಿರ್ಣಾಯಕ ಪಾತ್ರ ವಹಿಸುತ್ತದೆ. ಸಿಬಿಲ್ ಸ್ಕೋರ್ ಗಳಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಗದಿಪಡಿಸಿದ ಪ್ರಮುಖ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಇಲ್ಲಿ ತಿಳಿಯಿರಿ.

ಹಲವು ದೂರುಗಳ ಕಾರಣದಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಸಿಬಿಲ್ ಸ್ಕೋರ್ ಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಸುಲಭ ಸಾಲ ಅನುಮೋದನೆಗಳಿಗೆ ಉತ್ತಮ ಸಿಬಿಲ್ ಸ್ಕೋರ್ ಅತ್ಯಗತ್ಯವಾಗಿದೆ.

ಜನವರಿ 1, 2025ರಿಂದ ಜಾರಿಗೆ ಬರುವಂತೆ ಕ್ರೆಡಿಟ್ ಸ್ಕೋರ್ ಗಳನ್ನು ಪ್ರತಿ 15 ದಿನಗಳಿಗೊಮ್ಮೆ ನವೀಕರಿಸಲಾಗುತ್ತದೆ. ಇದು ಬ್ಯಾಂಕುಗಳಿಗೆ ಅರ್ಜಿದಾರರಿಗೆ ಸಾಲ ನೀಡುವ ವೇಳೆ ಅವರ ಮಾಹಿತಿಯನ್ನು ಒದಗಿಸಿ ಸಾಲ ಕೊಡಬಹುದಾದ ಅಥವಾ ನಿರಾಕರಿಸಬಹುದಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ಒದಗಿಸುತ್ತದೆ ಮತ್ತು ಕಳಪೆ ಸ್ಕೋರ್ ಗಳನ್ನು ಹೊಂದಿರುವ ಅರ್ಜಿದಾರರಿಗೆ ತಮ್ಮ ಸಿಬಿಲ್ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಿಕೊಳ್ಳಲು ಕೂಡ ಸದಾವಕಾಶ ಒದಗಿಸುತ್ತದೆ.

ಬ್ಯಾಂಕುಗಳು ಮತ್ತು ಬ್ಯಾಂಕೇತರ ಸಂಸ್ಥೆಗಳು ತಮ್ಮ ಕ್ರೆಡಿಟ್ ವರದಿಗಳನ್ನು ಪ್ರವೇಶಿಸಿದಾಗ ಅದರ ಕುರಿತ ಮಾಹಿತಿಯನ್ನು ಗ್ರಾಹಕರಿಗೆ ತಿಳಿಸಬೇಕು. ಈ ಅಧಿಸೂಚನೆಯನ್ನು ಎಸ್ಎಂಎಸ್ ಅಥವಾ ಇಮೇಲ್ ಮೂಲಕ ಕಳುಹಿಸಬಹುದು ಮತ್ತು ದೂರುಗಳ ಕಾರಣದಿಂದಾಗಿ ಹೀಗೆ ಮಾಹಿತಿಯನ್ನು ಗ್ರಾಹಕರಿಗೆ ಕಳುಹಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಸಾಲದ ಅರ್ಜಿಗಳನ್ನು ತಿರಸ್ಕರಿಸಿದ ಗ್ರಾಹಕರಿಗೆ ಸಾಲ ತಿರಸ್ಕಾರವಾದ ಕಾರಣವನ್ನು ತಿಳಿಸಬೇಕು. ಈ ಪಾರದರ್ಶಕತೆ ಅವರ ಸಾಲ ಪಡೆಯುವ ಅರ್ಹತೆಯ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತದೆ.

ಸಾಲ ಸಂಸ್ಥೆಗಳು ವಾರ್ಷಿಕವಾಗಿ ಉಚಿತ, ಸಮಗ್ರ ಕ್ರೆಡಿಟ್ ಸ್ಕೋರ್ ವರದಿಯನ್ನು ಗ್ರಾಹಕರಿಗೆ ಒದಗಿಸಬೇಕು. ಈ ವರದಿಯನ್ನು ಪ್ರವೇಶಿಸಲು ಲಿಂಕ್ ಸಂಸ್ಥೆಯ ವೆಬ್ಸೈಟ್ ನಲ್ಲಿ ಲಭ್ಯವಿರಬೇಕು.

ಮರುಪಾವತಿ ಮಾಡದ ಕಾರಣ ಅವರ ಖಾತೆ ಡೀಫಾಲ್ಟ್ ಆಗಿದ್ದರೆ ಗ್ರಾಹಕರಿಗೆ ಮುಂಚಿತವಾಗಿ ತಿಳಿಸಬೇಕು. ಕ್ರೆಡಿಟ್ ಸ್ಕೋರ್ ವಿವಾದಗಳನ್ನು ಪರಿಹರಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು.

ಸಾಲ ನೀಡುವ ಸಂಸ್ಥೆಗಳು ಗ್ರಾಹಕರ ದೂರುಗಳನ್ನು 30 ದಿನಗಳಲ್ಲಿ ಪರಿಹರಿಸಬೇಕು ಅಥವಾ ದಿನಕ್ಕೆ 100 ರೂ.ಗಳ ದಂಡವನ್ನು ಭರಿಸಬೇಕಾಗುತ್ತದೆ. ನಿರ್ದಿಷ್ಟ ಕಾಲಮಿತಿಗಳು ಮತ್ತು ದಂಡಗಳು ಬ್ಯಾಂಕುಗಳು ಮತ್ತು ಕ್ರೆಡಿಟ್ ಬ್ಯೂರೋಗಳಿಗೆ ಅನ್ವಯಿಸುತ್ತವೆ.

Leave a Reply