25 ವರ್ಷಗಳಲ್ಲಿ ವಿಶ್ವದಲ್ಲೇ ನಾವು ಮೊದಲನೆ ಸ್ಥಾನಕ್ಕೆ ಬರಲಿದ್ದೇವೆ: ಯಡಿಯೂರಪ್ಪ

3 years ago

ಬೆಂಗಳೂರು: ರಾಜ್ಯದಲ್ಲಿ ಬುಧವಾರ ನಡೆಯಲಿರುವ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ರೈತರಿಗೆ ನೀಡುತ್ತಿರುವ ಹಾಲಿನ ಪ್ರೋತ್ಸಾಹ ಧನ ‌ಹೆಚ್ಚಳ ಮಾಡಲಿದೆ ಎಂದು ಪ್ರಕಟಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ರೈತರ ಹಾಲಿಗೆ ನೀಡುತ್ತಿದ್ದ ಬೆಂಬಲ ಬೆಲೆಯನ್ನು ಪ್ರತಿ ಲೀಟರ್‍ಗೆ 5ರೂ. ನಿಂದ 7ರೂ.ಗೆ ಹೆಚ್ಚಳ ಮಾಡಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಈ ಬಾರಿ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಖಚಿತ. ಯಾವ ತಂತ್ರಗಳೂ ಕೂಡ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿಯೊಬ್ಬ ರೈತರಿಗೆ 10 ಸಾವಿರ ರೂ. ನಗದನ್ನು ಅವರ ಖಾತೆಗೆ ಜಮೆ ಮಾಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ರೈತಸಿರಿ ಯೋಜನೆ ಮಾಡಲಿದ್ದೇವೆ. ಇದಕ್ಕಾಗಿ 10 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದೇವೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಆಡಳಿತದಲ್ಲಿರುವುದರಿಂದ ಅತ್ಯಂತ ವೇಗದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ರಸ್ತೆ, ರೈಲ್ವೆ, ಬಂದರು, ವಿಮಾನ ನಿಲ್ದಾಣ, ಮೂಲಭೂತ ಸೌಕರ್ಯಗಳು ಶರವೇಗದಲ್ಲಿ ಅಭಿವೃದ್ಧಿಯಾಗುತ್ತಿವೆ. ಮನೆಮನೆಗೆ ಶುದ್ಧ ಕುಡಿಯುವ ನೀರಿನ ಪೂರೈಕೆ, ಪ್ರತಿ ಮನೆಗೂ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕೊರೊನಾ ಸಂದರ್ಭದಲ್ಲಿ ಪ್ರಧಾನಿಯವರು ದೇಶದ ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ನೀಡಿ ಆರೋಗ್ಯ ರಕ್ಷಣೆ ಮಾಡಿದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಆರ್ಥಿಕ ಪ್ರಗತಿಯೂ ಆಗಿದೆ. ವಿಶ್ವದಲ್ಲೇ ನಮ್ಮ ದೇಶ ಆರ್ಥಿಕತೆಯಲ್ಲಿ ಐದನೆ ಸ್ಥಾನ ಪಡೆದಿದೆ. ಇನ್ನು 25 ವರ್ಷಗಳಲ್ಲಿ ವಿಶ್ವದಲ್ಲೇ ನಾವು ಮೊದಲನೆ ಸ್ಥಾನಕ್ಕೆ ಬರಲಿದ್ದೇವೆ ಎಂದರು.

ಪ್ರಧಾನಿಯವರು ರಾಜ್ಯದುದ್ದಗಲಕ್ಕೂ ಪ್ರವಾಸ ಮಾಡಿ ಅನೇಕ ಕಡೆ ರೋಡ್ ಶೋ ನಡೆಸಿದ್ದಾರೆ. ಪ್ರತಿಯೊಬ್ಬ ಮತದಾರರ ನಾಡಿಮಿಡಿತ ಅರಿಯುವ ಕೆಲಸ ಮಾಡಿದರು. ನಾವು 130 ರಿಂದ 135 ಸ್ಥಾನಗಳನ್ನು ಗೆಲ್ಲುತ್ತೇವೆ. ಇದು ಸೂರ್ಯ-ಚಂದ್ರರಿರುವಷ್ಟೇ ಸತ್ಯ ಎಂದು ಹೇಳಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಆ ಸಮುದಾಯ ನಮಗೆ ಸಂಪೂರ್ಣ ಬೆಂಬಲ ಕೊಟ್ಟಿದೆ. ಭಾಗ್ಯಲಕ್ಷ್ಮಿ ಯೋಜನೆ, ರೈತರ ಬಜೆಟ್, ರೈತರಿಗೆ ಉಚಿತ ವಿದ್ಯುತ್, ವಿದ್ಯಾನಿ ಮಾಸಿಕ ವೇತನ ಹೆಚ್ಚಳ ಮಾಡಿದ್ದೇವೆ ಎಂದರು.

ನಾವು ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ. ಹಿಂದು, ಮುಸ್ಲಿಂ ಎಲ್ಲರೂ ಒಂದೇ ಎಂದು ಭಾವಿಸಿದ್ದೇವೆ. ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು ಎಂಬುದು ನಮ್ಮ ಸಿದ್ಧಾಂತ. ಲಿಂಗಾಯತ, ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ಮುಳುಗುತ್ತಿರುವ ಹಡಗು. ರಾಹುಲ್‍ ಗಾಂಧಿ, ಪ್ರಿಯಾಂಕಾ ವಾಧ್ರಾ ಉತ್ತರ ಪ್ರದೇಶದಲ್ಲಿ ಪ್ರಚಾರ ನಡೆಸಿದರು. ಆದರೆ, ಗೆದ್ದಿದ್ದು ನಾಲ್ಕು ಸ್ಥಾನ ಮಾತ್ರ. ಮೋದಿಯವರಿಗೆ ರಾಹುಲ್ ಎಲ್ಲಿಯೂ ಸಮಾನರಲ್ಲ. ಅವರ ಮೇಲೆ ಒಂದೇ ಒಂದು ಸಣ್ಣ ಆರೋಪವೂ ಇಲ್ಲ ಎಂದರು.

Leave a Reply