ಬಿಎಂಟಿಸಿ ಬಸ್ ನಲ್ಲಿ ರಾಹುಲ್ ಗಾಂಧಿ ಸಂಚಾರ: ಜನಸಾಮಾನ್ಯರ ಅಳಲು ಆಲಿಸಿದ ನಾಯಕ

3 years ago

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಸೋಲಿನ ಹಣೆಪಟ್ಟಿ ಕಳಚಿಕೊಂಡು ಹೊರಬರಬೇಕೆಂದು ಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್ ಗೆ ಹೊಸ ಹುರುಪು ತರುವ ನಿಟ್ಟಿನಲ್ಲಿ ಯುವ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಪ್ರಯತ್ನಗಳು ಗಮನ ಸೆಳೆದಿವೆ.

ಬಿಜೆಪಿ ಅಭ್ಯರ್ಥಿಗಳ ಪರ ಬೆಂಗಳೂರಿನಲ್ಲಿ ಭರಾಟೆ ರೋಡ್ ಶೋ ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಗಮನ ಸೆಳೆದರೆ, ಜನಸಾಮಾನ್ಯರೊಂದಿಗೆ ಮುಕ್ತವಾಗಿ ಬೆರೆತು ಅವರ ಅಹವಾಲು ಆಲಿಸುವ ಮೂಲಕ ರಾಹುಲ್ ಗಾಂಧಿ ಹೊಸ ರೀತಿಯ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದಾರೆ.

ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದ ಅವರು ನಿನ್ನೆ ಸ್ವಿಗ್ಗಿ ಝೋಮ್ಯಾಟೋ ಸೇರಿದಂತೆ ಇ ಕಾಮರ್ಸ್ ಡೆಲಿವರಿ ಬಾಯ್ ಗಳೊಂದಿಗೆ ಸಂವಾದ ನಡೆಸಿದ್ದರು.

ಇಂದು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‍ನಲ್ಲಿ ಪ್ರಯಾಣಿಸುವ ಮೂಲಕ ಜನ ಸಾಮಾನ್ಯರ ಜೊತೆ ಬೆರೆತರು. ಇಂದು ಬೆಳಗ್ಗೆ ಚ್ಯೂಯಿಂಗಮ್ ರಸ್ತೆಯ ಕಾಫಿ ಡೇಯಲ್ಲಿ ಕಾಫಿ ಕುಡಿದು ಅಲ್ಲಿಯೇ ಸಮೀಪದಲ್ಲಿದ್ದ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ತೆರಳಿ ಜನ ಸಾಮಾನ್ಯರ ಜೊತೆ ಸಮಾಲೋಚನೆ ನಡೆಸಿದರು. ಬಸ್ ನಿಲ್ದಾಣದಲ್ಲಿದ್ದ ವಿದ್ಯಾರ್ಥಿನಿಯರು, ಉದ್ಯೋಗಕ್ಕೆ ತೆರಳುತ್ತಿದ್ದ ಮಹಿಳೆಯರ ಜೊತೆ ಮಾತುಕತೆ ನಡೆಸಿದರು.

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಹಿಳೆಯರ ಜೊತೆ ವಿಚಾರ ವಿನಿಮಯ ನಡೆಸಿದರು. ಬಿಎಂಟಿಸಿ ಹಾಗೂ ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಘೋಷಣೆ ಮಾಡಲಾಗಿರುವ ಶಕ್ತಿ ಯೋಜನೆ, ಬೆಲೆ ಏರಿಕೆಯಿಂದ ತತ್ತರಿಸಿರುವ ಗೃಹಿಣಿಯರಿಗೆ ಅಡುಗೆ ಅನಿಲ ಖರೀದಿ ಹಾಗೂ ಇತರ ವೆಚ್ಚಗಳ ನಿಭಾವಣೆಗೆ ಮನೆಯ ಯಜಮಾನಿಗೆ ಮಾಸಿಕ ಎರಡು ಸಾವಿರ ರೂಪಾಯಿ ನೀಡುವ ಗೃಹ ಲಕ್ಷ್ಮೀ ಗ್ಯಾರಂಟಿ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿದರು.

ಈ ವೇಳೆ ಮಹಿಳೆಯರು ಪ್ರಯಾಣದ ವೇಳೆ ಅನುಭವಿಸುವ ಸಮಸ್ಯೆಗಳು ಹಾಗೂ ಬೆಲೆ ಏರಿಕೆಯಿಂದ ತಮ್ಮ ಕುಟುಂಬದ ಖರ್ಚುವೆಚ್ಚಕ್ಕೆ ಉಂಟಾಗಿರುವ ಸಂಕಷ್ಟಗಳ ಬಗ್ಗೆ ರಾಹುಲ್‍ಗಾಂಧಿಯೊಂದಿಗೆ ಹೇಳಿಕೊಂಡರು.

ಅಲ್ಲಿಂದ ರಾಹುಲ್‍ಗಾಂಧಿ ರಾಮಮೂರ್ತಿನಗರ ಮಾರ್ಗದ ಬಿಎಂಟಿಸಿ ಬಸ್ ಹತ್ತಿ ಜನ ಸಾಮಾನ್ಯರಂತೆ ಪ್ರಯಾಣ ಬೆಳೆಸಿದರು. ದಾರಿಯುದ್ದಕ್ಕೂ ಬಸ್ ಪ್ರಯಾಣಿಕರ ಜೊತೆ ಸಮಾಲೋಚನೆ ನಡೆಸಿದರು. ಅವರು ಅನುಭವಿಸುತ್ತಿರುವ ಕಷ್ಟಗಳು ಕುರಿತು ಚರ್ಚಿಸಿದರು. ಲಿಂಗರಾಜಪುರಂ ಬಳಿ ಬಸ್ ಇಳಿದರು.

ರಸ್ತೆಯಲ್ಲಿ ಹಾಗೂ ಬಸ್‍ನಲ್ಲಿ ರಾಹುಲ್‍ಗಾಂಧಿಯವರನ್ನು ಕಂಡ ಜನ ಸಾಮಾನ್ಯರು ಪುಳಕಿತರಾರು. ಅವರ ಕೈ ಕುಲುಕಿ, ಸೆಲ್ಫಿತೆಗೆದುಕೊಂಡು ಸಂಭ್ರಮಿಸಿದರು. ಕೆಲವರ ಜೊತೆ ರಾಹುಲ್‍ಗಾಂಯೇ ಸೆಲ್ಫಿ ತೆಗೆದುಕೊಂಡರು. ಇನ್ನೂ ಕೆಲವರ ಮೊಬೈಲ್ ಪಡೆದುಕೊಂಡು ತಾವೇ ಫೋಟೋ ತೆಗೆದು ಕೊಟ್ಟರು. ಇದಕ್ಕೂ ಮೊದಲು ಕಾಫಿ ಡೇಯಲ್ಲಿಯೂ ಗ್ರಾಹಕರ ಜೊತೆ ಜಿಎಸ್‍ಟಿ ಬಗ್ಗೆ ಚರ್ಚೆ ನಡೆಸಿದರು.

Leave a Reply