ಬೆಂಗಳೂರು: ರಾಜ್ಯದೆಲ್ಲೆಡೆ ಬಿಜೆಪಿ ಪರವಾದ ಅಲೆ ಬೀಸುತ್ತಿದೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ವಿಶ್ವಾಸವಿಟ್ಟು ಸದ್ಯದಲ್ಲೇ ಕಾಂಗ್ರೆಸ್ ಮತ್ತು ಜೆಡಿಎಸ್ ನ ಪ್ರಮುಖರು ಬಿಜೆಪಿ ಸೇರುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪ್ರಯತ್ನ ನಡೆಸುತ್ತೇವೆ ಎಂದು ಹೇಳಿದರು
ಇಂದಿನಿಂದ ವಿಜಯ ಸಂಕಲ್ಪ ರಥಯಾತ್ರೆ ತಮ್ಮ ನೇತೃತ್ವದಲ್ಲಿ ನಡೆಯಲಿದೆ. ನಮ್ಮ ತಂಡವು ಹಳೆ ಮೈಸೂರಿನ 67 ಕ್ಷೇತ್ರಗಳಲ್ಲಿ ಸಂಚರಿಸಲಿದೆ. ರಥಯಾತ್ರೆ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಶತಸ್ಸಿದ್ಧ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳು ಜನ ಮೆಚ್ಚುಗೆ ಗಳಿಸಿವೆ. ಇದರಿಂದಾಗಿ
ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್‍ನ ಎ ಟೀಂ ಮತ್ತು ಬಿ ಟೀಮನ್ನು ಮನೆಗೆ ಕಳುಹಿಸಿ ಬಿಜೆಪಿಯನ್ನು ಜನರು ಗೆಲ್ಲಿಸಲಿದ್ದಾರೆ ಎಂದರು.
ಕಾಂಗ್ರೆಸ್ಸಿನ ಕೇಂದ್ರ ಸರಕಾರ ರಾಜ್ಯದ ಅಭಿವೃದ್ಧಿಗೆ ಕೊಡುತ್ತಿದ್ದ ಹಣದ ನಾಲ್ಕೈದು ಪಟ್ಟು ಹೆಚ್ಚು ಹಣವನ್ನು ಮೋದಿ ಸರಕಾರ ನೀಡುತ್ತಿದೆ. ಡಬಲ್ ಎಂಜಿನ್ ಸರಕಾರ ಇದ್ದರೆ ಹೆಚ್ಚು ಅಭಿವೃದ್ಧಿ ಸಾಧ್ಯ ಎಂದು ಜನ ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ಮೂರು ರಾಜ್ಯಗಳ ಚುನಾವಣೆಯಲ್ಲಿ ಎರಡು ರಾಜ್ಯಗಳಲ್ಲಿ ಬಿಜೆಪಿ ಬಹುಮತ ಪಡೆದಿದೆ. ಇನ್ನೊಂದು ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಬರಲಿದೆ , ದೇಶದ ಈಶಾನ್ಯ ಭಾಗ ಸೇರಿ ಎಲ್ಲೆಡೆ ಬಿಜೆಪಿ ಜಯಭೇರಿ ಬಾರಿಸುತ್ತಿದೆ. ಕರ್ನಾಟಕದಲ್ಲೂ ಜನರು ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.
ವಿಧಾನಸೌಧದ ಬದಲಾಗಿ ಪಂಚತಾರಾ ಹೋಟೆಲ್‍ನಿಂದ ಆಡಳಿತ ನಡೆಸಿದ್ದ ಕುಮಾರಸ್ವಾಮಿ ಅವರಿಂದ ನಾವೇನೂ ಪಾಠ ಕಲಿಯಬೇಕಾಗಿಲ್ಲ. ಸಿದ್ದರಾಮಯ್ಯ- ಕುಮಾರಸ್ವಾಮಿ ಆಡಳಿತದಲ್ಲಿದ್ದಾಗ ಸಿಎಂ, ಶಾಸಕರ ಮೇಲೆ 70ಕ್ಕೂ ಹೆಚ್ಚು ಪ್ರಕರಣಗಳಿದ್ದವು. ಹೀಗಾಗಿ ಲೋಕಾಯುಕ್ತವನ್ನೇ ಮುಚ್ಚಿ ಪ್ರಕರಣದ ತನಿಖೆ ಮಾಡದಂತೆ ನೋಡಿಕೊಂಡರು ಎಂದು ಆಪಾದಿಸಿದರು.
ಈ ವೇಳೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಚಿವ ಡಾ. ಅಶ್ವತ್ಥನಾರಾಯಣ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮತ್ತು ಇತರರು ಇದ್ದರು.




