ಉರಿವ ಹ್ಯೂಸ್ಟನ್ ಬಿಸಿಲಿನಲ್ಲಿ ಅವಳ ಫೋಟೋ ಶೂಟ್ ಸಂಭ್ರಮ ನೋಡುತ್ತಾ

3 years ago

#Watching #excitement #photoshoot #blazing #Houston bharathibv

ಹ್ಯೂಸ್ಟನ್‌ನಲ್ಲಿ ಒಂದು ದಿನ ನಾನು, ಸಂದೀಪ್, ಮಾನಸಾ ಹೋಗ್ತಿರಬೇಕಾದರೆ ದೊಡ್ಡದೊಂದು ಪಾರ್ಕ್‌ನಲ್ಲಿ ಕೆಂಪು ಮಿಣಿಮಿಣಿ ಗೌನ್ ಹಾಕಿದ ಹುಡುಗಿಯೊಬ್ಬಳನ್ನು ಕಂಡೆ. ಪ್ರೀ ವೆಡ್ ಶೂಟ್ ಇರಬೇಕಾ ಈ ನಡುಮಧ್ಯಾನದ ಉರಿಬಿಸಿಲಿನಲ್ಲಿ ಎಂದುಕೊಂಡೆ. ಆದರೆ ಹತ್ತಿರದಲ್ಲಿ ಅವಳ ಜೊತೆಯಾಗಬಲ್ಲಂಥ ತರುಣ ಕಾಣಿಸಲಿಲ್ಲ. ಹಾಗಾಗಿ ಕುತೂಹಲದಿಂದ ‘ಅದೇನು ಪ್ರಿ ವೆಡ್ ಶೂಟಾ’ ಅಂತ ಕೇಳಿದೆ‌. ಮಾನಸಾ ‘ಅಲ್ಲ ಅಲ್ಲ ಅದು ಕಿನ್ಸೆಅನ್ಯೇರಾ’ ಅಂದಳು.

ನಮ್ಮೂರಲ್ಲಿ ದೊಡ್ಡೋರಾಗೋದರ ಆರತಿ ಥರಾನಾ ಅಂತ ಗಾಬರಿಯಾಯಿತು. ಮೊದಲ ಬಾರಿ ಅದರ ಹೆಸರು ಕೇಳಿದ್ದು. ‘ಏನೇ ಹಾಗಂದ್ರೆ’ ಅಂದೆ.‌ ಹಾಗೆಂದರೆ ’15 ವರ್ಷದ ಹುಡುಗಿ’ ಅಂತ ಅರ್ಥವಂತೆ. ಮೆಕ್ಸಿಕೊ ದೇಶದಲ್ಲಿನ ಆಚರಣೆಯಂತೆ ಇದು. ಹೆಣ್ಣು ಮಗು ತನ್ನ ಬಾಲ್ಯಾವಸ್ಥೆ ಕಳೆದು, 15 ನೆಯ ವಯಸ್ಸಿನ ತನ್ನ ಕೌಮಾರ್ಯಕ್ಕೆ ಕಾಲಿಟ್ಟ ದಿನದ ಸೆಲೆಬ್ರೇಷನ್ ಅದು.

ಕ್ರಿ ಪೂ 500 ರ ಕಾಲದಿಂದಲೂ ಇದು ಆಚರಣೆಯಲ್ಲಿದೆಯಂತೆ. ಆಗೆಲ್ಲ ಅದು ಗಂಡು ಯುದ್ಧಕ್ಕೆ ಸಿದ್ಧನಾದ ಅಂತಲೂ, ಹೆಣ್ಣು ಮದುವೆಗೆ ಸಿದ್ಧಳಾದಳು ಅಂತಲೂ ಸೂಚಿಸುವ ದಿನವಾಗಿತ್ತಂತೆ. ಅಷ್ಟರಲ್ಲಿ ಹೆಣ್ಣಿಗೆ ಅಡುಗೆ ಕಲಿಸಿ, ಮನೆಗೆಲಸ ಕಲಿಸಿ, ಮಕ್ಕಳು ಮರಿಯನ್ನು ಸಾಕುವ ಬಗೆ ಕಲಿಸಿರುತ್ತಿದ್ದರಂತೆ. ಕರ್ಮಾನಪ್ಪ ಯಾವ ದೇಶವೇ ಆಗಲಿ, ಹೆಣ್ಣುಮಕ್ಕಳ ಸ್ವಾತಂತ್ರ್ಯಕ್ಕೊಂದು ಬೇಲಿ ಬಿಗಿಯುವುದೇ ಆಯ್ತು. ಬಾಲ್ಯ ದಾಟಿದಳು ಅಂದರೆ ಇನ್ನು ಮದುವೆಯಾಗು, ಸಂಸಾರದ ಜವಾಬ್ದಾರಿ ಹೊರು, ಮಕ್ಕಳು ಹೆರು, ಅವುಗಳನ್ನು ಬೆಳೆಸು…. ಇದೇ ಚೌಕಟ್ಟು.

ಆದರೆ ಪುಣ್ಯಕ್ಕೆ ಕಾಲ ಕಳೆಯುತ್ತ ಹೋದಂತೆ, ಆ ದಿನ 15 ವರ್ಷಕ್ಕೆ ಕಾಲಿಟ್ಟ ಹೆಣ್ಣು ಮಗುವಿನ ಬದುಕನ್ನು celebrate ಮಾಡುವ ದಿನವಾಗಿ ಪರಿವರ್ತಿತವಾಗಿದೆಯಂತೆ. ಆ ದಿನ ಪೂರ್ತಿ ಅವಳ ದಿನ ❤❤.‌ ಅವತ್ತು ಅವಳಿಗೆ ದೊಡ್ಡವರು ಹಾಕಿಕೊಳ್ಳುವಂಥ ಗೌನ್‌ಗೆ promotion ಸಿಗುತ್ತದಂತೆ. ಅವತ್ತಿನ ದಿನ ಚರ್ಚ್‌ಗೆ ಹೋಗಿ ದೇವರ ಆಶೀರ್ವಾದ ಪಡೆದು, ಚೆಂದದ ಗೌನ್ ಧರಿಸಿ, ಗೆಳೆಯ – ಗೆಳತಿಯರನ್ನು ಕರೆದು, ಕೇಕ್ ಕಟ್ ಮಾಡಿ ಸಂಭ್ರಮಿಸುವ ದಿನ.

ಅವತ್ತು ಅವಳು ಹೈ ಹೀಲ್ಡ್ ಶೂ ಧರಿಸುವ ಮೊದಲ ದಿನವೂ ಆಗಿರುತ್ತದಂತೆ. ಆ ಶೂ ಅನ್ನು ಅವಳ ತಂದೆಯೇ ಮಗಳಿಗೆ ತೊಡಿಸುತ್ತಾರಂತೆ. ಹೈ ಹೀಲ್ಡ್ ಶೂ ಹಾಕಿದ ಅಪ್ಪ, ತನ್ನ ಮಗಳ ಜೊತೆ ಡ್ಯಾನ್ಸ್ ಮಾಡುತ್ತಾರಂತೆ ಅವತ್ತು ❤❤

ಅವತ್ತು ಅವಳ ಬದುಕಿನ ಕೊನೆಯ ಬೊಂಬೆಯ ದಿನವೂ ಅಂತೆ.‌ ಅವತ್ತಿನ ದಿನ ಹುಡುಗಿ ಪುಟ್ಟ ಮಗುವೊಂದಕ್ಕೆ ಬೊಂಬೆಯನ್ನು ಕೊಟ್ಟು ತಾನು ದೊಡ್ಡವಳಾದೆ ಅಂತ ಘೋಷಿಸುವ ದಿನ ಕೂಡ. ಆ ನಂತರ ಅವಳು ಬೊಂಬೆಯ ಜೊತೆ ಆಡುವಂತಿಲ್ಲ.

ಹೆಚ್ಚು ಆಧುನಿಕರಾದ ಹೆಣ್ಣುಮಕ್ಕಳಿಗೆ ಅದು ‘ಡೇಟಿಂಗ್’ ಆರಂಭಿಸುವ ಲೈಸೆನ್ಸ್ ಸಿಗುವ ದಿನವೂ ಅಂತೆ.‌ ಈಗೀಗ ಹೆಣ್ಣುಮಕ್ಕಳು ಇದನ್ನೆಲ್ಲ ಒಪ್ಪದೆ, ಅದೇ ಖರ್ಚಿನಲ್ಲಿ ಸ್ವತಂತ್ರರಾಗಿ ಟೂರ್ ಹೋಗಿ ಬರುತ್ತಾರಂತೆ.

ಈಗೀಗ ಅವತ್ತಿನ ದಿನ ಪ್ರೀವೆಡ್ ಶೂಟ್ ಥರ, ಚೆಂದದ ಜಾಗಗಳಲ್ಲಿ ಫೋಟೋ ಶೂಟ್ ನಡೆಸುವ ಅಭ್ಯಾಸ ಹುಟ್ಟಿಕೊಂಡಿದೆಯಂತೆ. ಈಗ ನಾವು ನೋಡಿದ್ದೂ ಅದೇ ಫೋಟೋ ಶೂಟ್. ಅಂದಮೇಲೆ ಅದೀಗ ಒಂದು ಕಮರ್ಷಿಯಲ್ ಆಚರಣೆಯ ಸ್ವರೂಪ ಪಡೆದಿರುವುದು ಖಂಡಿತ.

ಆ ದಿನಕ್ಕೆ ಗೌನ್ ಮಾರುವ ಸ್ಪೆಷಲ್ ಅಂಗಡಿಗಳು… ಸ್ವಲ್ಪ ಹೆಚ್ಚು ಶ್ರೀಮಂತರಾದರೆ customized ಗೌನ್‌ಗಳನ್ನು ಹೊಲಿಸುವುದು, ಹರಳಿನ ಹೆಡ್ ಬ್ಯಾಂಡ್‌ಗಳು, ಸ್ಪೆಷಲ್ ಕೇಕುಗಳು, ಲಕ್ಷಗಟ್ಟಲೆ ಹಣ ಚಾರ್ಜ್ ಮಾಡುವ ಫೋಟೋಗ್ರಾಫರ್‌ಗಳು, ಫಂಕ್ಷನ್ ಹಾಲ್‌ಗಳು… ಎಲ್ಲ ಸೇರಿಕೊಂಡಿದೆ. ಅಂದರೆ ಒಂದು ಫಂಕ್ಷನ್‌ಗೆ 10 ಸಾವಿರದಿಂದ 80 ಸಾವಿರ ಡಾಲರ್ ಖರ್ಚಾಗುತ್ತದಂತೆ 🙄🙄🙄.

ಥು ಖರ್ಚಿನ ಲೆಕ್ಕಾಚಾರ ಅತ್ಲಾಗಿರಲಿ… ಚೆಂದಕ್ಕೆ ಅಲಂಕರಿಸಿಕೊಂಡಿದ್ದ ಹೆಣ್ಣು ಮಗು ಮುದ್ದಾಗಿ ಕಾಣುತ್ತಿತ್ತು.‌ ಉರಿವ ಹ್ಯೂಸ್ಟನ್ ಬಿಸಿಲಿನಲ್ಲಿ ಅವಳ ಫೋಟೋ ಶೂಟ್ ಸಂಭ್ರಮ ನೋಡುತ್ತಾ ಅಲ್ಲಿಂದ ದಾಟಿ ಮುಂದೆ ಹೋದರೆ ಮತ್ತೊಂದು ಜಾಗದಲ್ಲಿ ಮತ್ತೊಂದು ಕಿನ್ಸೆಅನ್ಯೇರಾ ಶೂಟ್ ನಡೆಯುತ್ತಿತ್ತು. ಅಲ್ಲಿ ತಿಳಿ ಗುಲಾಬಿ ಬಣ್ಣದ ಗೌನ್ ಧರಿಸಿದ್ದ ಹೆಣ್ಣುಮಗುವೊಂದು ಫೋಟೋ ಶೂಟ್‌ಗೆ ಪೋಸ್ ಕೊಡುತ್ತಾ ನಿಂತಿತ್ತು…

ವಿಸೂ:
ಏನಾದರೊಂದು ಕಂಡ ಕೂಡಲೇ ಅದೇನಂತ ಹುಡುಕುವ ಚಟದ ನಾನು, ಇವನ್ನೆಲ್ಲ ಕಾರಿನಲ್ಲಿ ಕೂತು ಓದಿದ ವಿಷಯಗಳು.

ಹಾಗಾಗಿ ಗೂಗಲ್ ಮಾಡಿದ್ದಾಳೆ ಅನ್ನುವ ಮಹಾನ್ ಶೋಧವನ್ನೇನೂ ಮಾಡಲು ಹೋಗಬೇಡಿ. ಹೌದು… ಇದೆಲ್ಲ ಗೂಗಲಕ್ಕ ಕೊಟ್ಟ ವಿವರಗಳೇ 😊😊

ಅಅಅಅಮೆರಿಕಾ 63

  • ಭಾರತಿ ಬಿ ವಿ ಲೇಖಕಿ

Leave a Reply