ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕವು ನಮ್ಮೆಲ್ಲರ ಹೆಮ್ಮೆ. ʼಮಾನವ ಜಾತಿ ತಾನೊಂದೆವಲಂʼ ಎಂದು ಸಾರಿದ ಪಂಪನು ನಮ್ಮ ಆದಿ ಕವಿ. ದೇವರಿಗೆ ಕನ್ನಡ ಕಲಿಸಿದ ವಚನಕಾರರು ನಮ್ಮವರು. ಈ ನಾಡಿನಲ್ಲಿ ಬೌದ್ಧ, ಜೈನ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಮೊದಲಾದ ಧಾರ್ಮಿಕ ಪರಂಪರೆಗಳೊಡನೆ, ಮಲೆ ಮಾದೇಶ್ವರ, ಜುಂಜಪ್ಪ, ಬೀರಪ್ಪ, ಮೈಲಾರ, ಎಲ್ಲಮ್ಮ, ಹುಲಿಗೆಮ್ಮ,
ಭೂತಾರಾಧನೆ ಮೊದಲಾದ ಜನಪದ ಪರಂಪರೆಗಳೂ ಕ್ರಿಯಾಶೀಲವಾಗಿವೆ. ಸುಮಾರು ೭೨ ಭಾಷೆಗಳಿರುವ ನಮ್ಮ ರಾಜ್ಯದಲ್ಲಿ ಹತ್ತು ಹಲವು ಸಮುದಾಯಗಳು ಸೌಹಾರ್ದಯುತವಾಗಿ ಬದುಕುತ್ತಿವೆ. ನಮ್ಮ ಹೆಣ್ಣು ಮಕ್ಕಳು ʼ ಹಬ್ಬಲಿ ಅವರ ರಸ ಬಳ್ಳಿʼ ಎಂದು ನಿತ್ಯವೂ ಹಾಡಿದವರು.
ಆದರೆ ಇವತ್ತು ನಮ್ಮ ರಾಜ್ಯ ವಿಷಮಯ ರಾಜಕೀಯದಿಂದಾಗಿ ತತ್ತರಿಸುತ್ತಿದೆ. ಈ ಸಂದರ್ಭದಲ್ಲಿ ನಮ್ಮ ನಾಡು ದೀರ್ಘ ಉಸಿರೆಳೆದುಕೊಂಡು ಮತ್ತೆ ಚೇತರಿಸಿಕೊಳ್ಳುತ್ತದೆಯೋ ಅಥವಾ ಇಲ್ಲವೊ ಎಂಬುದನ್ನು ಮುಂಬರುವ ಚುನಾವಣೆ ನಿರ್ಧರಿಸುತ್ತದೆ. ಅದಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ.
ಸ್ವಾತಂತ್ರ್ಯಾ ನಂತರದ ಇತಿಹಾಸದಲ್ಲೇ ಕಂಡಿಲ್ಲದ ಕೆಡುಕಿನ ದಿನಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕ ಕಂಡಿದೆ. ಜನಮತವಿಲ್ಲವಾದರೂ ಅಧಿಕಾರ ಕಬಳಿಸಿದ ಸರ್ಕಾರ ಈ ನಾಡಿಗೆ ತಂದದ್ದು ಅವನತಿ ಮಾತ್ರ. ಡಬಲ್ ಡ್ರಿಲ್ಲರ್ ಸರ್ಕಾರಗಳಿಂದ ಖಜಾನೆಗೆ ಡಬಲ್ ಕನ್ನ, ಎಂದೆಂದೂ ಕಾಣದಂತಹ ಭ್ರಷ್ಟಾಚಾರ, ಸಾಮಾನ್ಯರ ಬದುಕ ಹಿಂಡುವ ಬೆಲೆ ಏರಿಕೆ, ಶಿಕ್ಷಣ-ಆರೋಗ್ಯದ ಹೆಸರಿನಲ್ಲಿ ಹಗಲು ದರೋಡೆ, ದುಡಿವವರ ಅನಾಥರಾಗಿಸಿದ ಸಾಲುಸಾಲು ಕಾಯ್ದೆಗಳು, ಯುವಜನರ ಕನಸು ಕಮರಿಸುವ ನಿರುದ್ಯೋಗ, ಕುಸಿದು ಬಿದ್ದ ಆರೋಗ್ಯ ವ್ಯವಸ್ಥೆ, ದಿಕ್ಕುಗಾಣದಾಗಿರುವ ಮಾರುಕಟ್ಟೆ, ಕುಸಿದಿರುವ ವಹಿವಾಟು, ಮೂಗುಮಟ್ಟ ತಲುಪಿರುವ ಸಾಲಗಳು, ಮಿತಿಮೀರಿ ಹೆಚ್ಚಾಗಿರುವ ಮಹಿಳೆಯರ ಮೇಲಿನ ಹಿಂಸೆ – ಅತ್ಯಾಚಾರದ ಪ್ರಕರಣಗಳು, ಜಾತಿ ಹೆಸರಿನಲ್ಲಿ ದೌರ್ಜನ್ಯ – ದಂಡ – ಬಹಿಷ್ಕಾರಗಳು, ಸಿಕ್ಕದ ಪಾಲಿಗಾಗಿ ಜಾತಿಜಾತಿಗಳ ನಡುವೆ ಪೈಪೋಟಿ, ಬಾಯಿಬಿಟ್ಟರೆ ಧಾರ್ಮಿಕ ದ್ವೇಷದ ದುರ್ಗಂಧ – ಇವೆಲ್ಲಾ ಈ ಸರ್ಕಾರದ ಆಳ್ವಿಕೆಯ ಫಲಗಳು.
ಈ ದುರಂತಮಯ ವಾತಾವರಣದಿಂದ ಕರ್ನಾಟಕವನ್ನು ಹೊರತರುವ ಒಂದು ಸಾಧ್ಯತೆ ನಾಡಿನ ಮುಂದಿದೆ. ಈಗ ಚುನಾವಣೆ ಬರುತ್ತಿದೆ. ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಎಂಬುದಕ್ಕಿಂತ ಈ ಸುಲಿಗೆ ಸರ್ಕಾರ ಮೊದಲು ಸೋಲಬೇಕು, ಆಮೇಲೆ ಗೆದ್ದವರ ಜೊತೆ ಜನಹಿತದ ಮರುಸ್ಥಾಪನೆಗಾಗಿ ಗುದ್ದಾಡಬೇಕು – ಇದೇ ಪ್ರಜಾಪ್ರಭುತ್ವ ಉಳಿಸಿಕೊಳ್ಳುವ ಪ್ರಕ್ರಿಯೆ. ಈ ಪ್ರಕ್ರಿಯೆಯು ರಾಜ್ಯದ ಜನರ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ; ನಾಗರಿಕ ಸಮಾಜದ ಮುಂದಿರುವ ವಾಸ್ತವಿಕ ಮತ್ತು ಜವಾಬ್ದಾರಿಯುತ ಕರ್ತವ್ಯವಾಗಿದೆ.
ಇಂದು ಆಳುವವರ ವಿರುದ್ಧ ಜನರಲ್ಲಿ ಅಸಮಾಧಾನ ಮಡುಗಟ್ಟಿದೆ. ಇದನ್ನು ಅರಿವಾಗಿಸುವ ಕೆಲಸ ನಡೆಯಬೇಕಿದೆ. ಹಾಗಾಗಿ ನಾವಿಂದು ಕೈಕಟ್ಟಿ ಕೂರಲು ಸಾಧ್ಯವೇ ಇಲ್ಲ. ನಾಡಿನ ಅಸ್ಮಿತೆ, ಪರಂಪರೆ, ಬದುಕು ಮತ್ತು ಭವಿಷ್ಯವನ್ನು ಕಾಪಾಡಿಕೊಳ್ಳುವ ಕಾಯಕವನ್ನು ನಾವು ಕೈಗೆತ್ತಿಕೊಳ್ಳಲೇಬೇಕು. ‘ಅನುಭವಿಸಿದ್ದು ಸಾಕು, ಈಗಾದರೂ ಎಚ್ಚರಗೊಳ್ಳಲೇಬೇಕು’ ಎಂದು ಮನವರಿಕೆ ಮಾಡಿಸಬೇಕು. ಈ ಮಹತ್ವದ ಕೆಲಸದಲ್ಲಿ ನಾವೆಲ್ಲರೂ ಒಂದಲ್ಲಾ ಒಂದು ರೂಪದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ.
ಈಗ ಸಂತಸದ ವಿಚಾರವೆಂದರೆ, ಜನರನ್ನು ತಳಮಟ್ಟದಲ್ಲಿ ತಲುಪಬಲ್ಲ ಒಂದು ನೀತಿಬದ್ಧ ನಾಗರಿಕ ಅಭಿಯಾನವು ʼ ಎದ್ದೇಳು ಕರ್ನಾಟಕʼ ಹೆಸರಿನಲ್ಲಿ ಶುರುವಾಗಿದೆ. ಪಕ್ಷ, ಜಾತಿ, ಮತ, ಧರ್ಮಗಳ ಅಂಟುಗಳನ್ನು ಬಿಟ್ಟು ರಾಜ್ಯದ ಜನರನ್ನು ಎಚ್ಚರಿಸಲು ನಾವೆಲ್ಲರೂ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಪ್ರಜಾಪ್ರಭುತ್ವವನ್ನು ಉಳಿಸುವ, ಕರ್ನಾಟವನ್ನು ಕಾಪಾಡುವ ಈ ಮಹತ್ಕಾರ್ಯದಲ್ಲಿ ನೀವು ಕೂಡಾ ಸ್ವಯಂಸೇವಕರಾಗಿ ಭಾಗಿಯಾಗಬೇಕೆಂದು ನಾವು ಕೋರಿಕೊಳ್ಳುತ್ತಿದ್ದೇವೆ.
ಇದು ಎದ್ದೇಳು ಕರ್ನಾಟಕ ಬಳಗದ ಮನವಿ , ಈ ಬಳಗದಲ್ಲಿ ನೀವಿರಬೇಕು. ಸಿನಿಕತನ, ನಿರಾಶೆ ಬಿಟ್ಟು ನಮ್ಮ ಜೊತೆ ಸೇರಲು ಮಿಸ್ ಕಾಲ್ ಕೊಡಿ- 7406900778
-ಪುರುಷೋತ್ತಮ ಬಿಳಿಮಲೆ, ವಿದ್ವಾಂಸರು



