ರಮೇಶ್ ಜಾರಕಿಹೊಳಿ ಸಿಡಿ ಹಿಂದೆ ವಿಜಯೇಂದ್ರ, ಡಿ.ಕೆ.ಶಿವಕುಮಾರ್ ಕೈವಾಡ: ಬಸನಗೌಡ ಪಾಟೀಲ್ ಯತ್ನಾಳ್

1 year ago

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ದೊಡ್ಡಮಟ್ಟದ ಸುದ್ದಿ ಮಾಡಿದ್ದ ಅಂದಿನ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿ.ಡಿ ಪ್ರಕರಣದ ಹಿಂದೆ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕೈವಾಡವಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಇಬ್ಬರೂ ರಾಜ್ಯದಲ್ಲಿ ಪೆನ್ ಡ್ರೈವ್ ಮತ್ತು ಸಿಡಿ ಕಾರ್ಖಾನೆ ನಡೆಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಅವರನ್ನು ಜಾಲದಲ್ಲಿ ಸಿಲುಕಿಸಿದವರು ಇವರೇ ಎಂದರು. 

ವಿಜಯೇಂದ್ರ ಅವರು ಡಿ.ಕೆ.ಶಿವಕುಮಾರ್ ಜತೆ ಸೇರಿ ರಮೇಶ್ ಜಾರಕಿಹೊಳಿ ಅವರ ಸಿಡಿ ಮಾಡಿಸಿದ್ದರು. ಈಗ ನಡೆದಿರುವ ಹನಿಟ್ರ್ಯಾಪ್ ಹಗರಣದಲ್ಲೂ ಇದೇ ತಂಡ ಇದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದರೆ ಸತ್ಯಾಂಶ ಹೊರಬರಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರುಸ್ವಜನಪಕ್ಷಪಾತ, ಭ್ರಷ್ಟಾಚಾರ ಮತ್ತು ಹೊಂದಾಣಿಕೆ ರಾಜಕೀಯವನ್ನು ಕೊನೆಗೊಳಿಸುವುದಾಗಿ ಯಾವಾಗಲೂ ಹೇಳುತ್ತಲೇ ಇದ್ದಾರೆ. ನಾನು ಕೂಡ ಅದಕ್ಕಾಗಿ ಧ್ವನಿ ಎತ್ತಿದ್ದೇನೆ. ಆದರೆ ಇದಕ್ಕಾಗಿ ನನ್ನನ್ನು ಪಕ್ಷದಿಂದ ಹೊರಹಾಕಿದ್ದಾರೆ. ಇದರಿಂದ ನಾವು ಗೆದ್ದಿದ್ದೇವೆ ಎಂದು ಅಪ್ಪ ಮಕ್ಕಳು ಭಾವಿಸಿದ್ದಾರೆ. ಆದರೆ ಅವರ ವಿರುದ್ಧ ನಡೆಸುತ್ತಿರುವ ನನ್ನ ಹೋರಾಟ ನಿಲ್ಲುವುದಿಲ್ಲ ಎಂದರು.

ರಾಜ್ಯ ಬಿಜೆಪಿಯಲ್ಲಿ ವಂಶಪಾರಂಪರ್ಯ ಆಡಳಿತವಿದೆ. ಅಪ್ಪ ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ, ಒಬ್ಬ ಮಗ ಸಂಸತ್ ಸದಸ್ಯ, ಮತ್ತೊಬ್ಬ ಮಗ ಶಾಸಕ ಹಾಗೂ ಪಕ್ಷದ ಅಧ್ಯಕ್ಷರಾಗಿದ್ದಾರೆ. ಇಂತಹ ಪ್ರವೃತ್ತಿ ಬದಲಾಗಬೇಕು ಎನ್ನುವುದು ತಮ್ಮ ಹೋರಾಟವಾಗಿದೆ ಎಂದರು.

ಇದರ ವಿರುದ್ಧ ಹೋರಾಟ ನಡೆಸಿದ ನನ್ನನ್ನು ಪಕ್ಷದಿಂದ ಹೊರಹಾಕಲಾಗಿದೆ. ಈ ಆದೇಶ ವಾಪಸ್ ಪಡೆಯಿರಿ ಎಂದು ನಾನು ಮನವಿ ಮಾಡುವುದಿಲ್ಲ. ಆದರೆ ನನ್ನ ಕೆಲವು ಹಿತೈಷಿಗಳು ಇಂತಹ ಮನವಿ ಮಾಡುತ್ತಿದ್ದು, ಅದು ಅವರಿಗೆ ಬಿಟ್ಟ ವಿಷಯವಾಗಿದೆ. ವಿಜಯದಶಮಿಯವರೆಗೆ ಕಾದು ನೋಡುತ್ತಿದ್ದು, ಆನಂತರ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.

ನಾವು ಒಗ್ಗಟ್ಟಾಗಿದ್ದೇವೆ. ಕರ್ನಾಟಕದ ಹೆಚ್ಚಿನ ಸಂಸದರು ಮತ್ತು ಶಾಸಕರು ನಮ್ಮನ್ನು ಬೆಂಬಲಿಸುತ್ತಿದ್ದಾರೆ. ಶೇ 75ರಷ್ಟು ಶಾಸಕರು ಸದ್ಯದ ನಾಯಕತ್ವದ ವಿರುದ್ಧ ಇದ್ದಾರೆ. ನಾವು ಪಕ್ಷವನ್ನು ಟೀಕಿಸುತ್ತಿಲ್ಲ, ನಾವು ಅದನ್ನು ವಂಶಪಾರಂಪರ್ಯ ರಾಜಕೀಯದಿಂದ ಮುಕ್ತಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.

ನಾನು ಬಿಜೆಪಿಯನ್ನು ಎಂದಿಗೂ ಟೀಕಿಸಿಲ್ಲ. ಅದು ನಮ್ಮ ಪಕ್ಷ ಮತ್ತು ನಾವು ಅದನ್ನು ಅಗೌರವಿಸುವುದಿಲ್ಲ. ಆದರೆ, ಯಡಿಯೂರಪ್ಪ ಕುಟುಂಬವನ್ನು ಬೆಂಬಲಿಸುವವರು ತಮ್ಮ ಕಾರ್ಯಗಳಿಂದ ಪಕ್ಷಕ್ಕೆ ಹಾನಿ ಮಾಡುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಹೊಸ ಪಕ್ಷ ರಚನೆಯಾದರೆ, ನಾವು ಬಿಜೆಪಿಯನ್ನು ಬಲಪಡಿಸುತ್ತೇವೆ ಮತ್ತು ಅದರ ಮೂಲ ಮೌಲ್ಯಗಳನ್ನು ಮರಳಿ ತರುತ್ತೇವೆ ಎಂದರು.

ನಾನು ಎಂದಿಗೂ ಕಾಂಗ್ರೆಸ್ ಅಥವಾ ಜೆಡಿಎಸ್ ಸೇರುವುದಿಲ್ಲ; ಬಿಜೆಪಿ ನನ್ನನ್ನು ಗೌರವದಿಂದ ವಾಪಸ್ ಕರೆದರೆ, ನಾನು ಬಿಜೆಪಿಯಲ್ಲಿಯೇ ಇರುತ್ತೇನೆ; ಇಲ್ಲದಿದ್ದರೆ, ವಿಜಯದಶಮಿಯಂದು ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದರು.

Leave a Reply