ಸಿಡಿ ಪ್ರಕರಣ ಆರೋಪದ ಹಿಂದೆ ಅಮಿತ್ ಶಾ, ಬೊಮ್ಮಾಯಿ ಪಿತೂರಿ: ರಮೇಶ್ ಬಾಬು

4 years ago

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಡಿರುವ ಆರೋಪಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬೊಮ್ಮಾಯಿ ಅವರ ಪಿತೂರಿ ಇದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ರಮೇಶ್ ಬಾಬು, ಮಾಜಿ ಸಚಿವರು ತಮ್ಮ ಸುದ್ದಿಗೋಷ್ಠಿಗೂ ಮುನ್ನ ಧಾರವಾಡದಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿರುವುದು, ಈ ಪ್ರಕರಣದ ವಿಚಾರವಾಗಿ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿರುವ ಬಗ್ಗೆ ಒಪ್ಪಿಕೊಂಡಿರುವುದೇ ಇದಕ್ಕೆ ಸಾಕ್ಷಿ ಎಂದರು.

ಈ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಸಾರ್ವಜನಿಕ ಒತ್ತಡಕ್ಕೆ ಮಣಿದು ಮಾರ್ಚ್ 2021 ರಲ್ಲಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಚುನಾವಣೆ ಸಮೀಪಿಸಿರುವ ಸಂದರ್ಭದಲ್ಲಿ ತಮ್ಮ ನಾಯಕರ ಜತೆ ಷಡ್ಯಂತ್ರ ರೂಪಿಸಿ ಪತ್ರಿಕಾಗೋಷ್ಠಿ ಮಾಡಿ ಆರೋಪ ಮಾಡಿದ್ದಾರೆ ಎಂದರು.

ಅಚ್ಚರಿ ವಿಚಾರ ಎಂದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ ರಿಪೋರ್ಟ್ ವಿಚಾರವಾಗಿ ಎಸ್ಐಟಿ ನೀಡಿರುವ ವರದಿ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಬಾಕಿ ಇದ್ದು, ಸಿಡಿ ಪ್ರಕರಣದಲ್ಲಿ ಇಲ್ಲಿಯವರೆಗೆ ಕ್ಲೀನ್ ಚಿಟ್ ದೊರೆತಿಲ್ಲ. ಈ ವಿಚಾರವಾಗಿ ಅವರು ಯಾವುದೇ ಪೊಲೀಸ್ ಠಾಣೆಗಳಲ್ಲಿ ದೂರು ನೀಡದೇ ಈಗ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲು ಕೋರುವುದಾಗಿ ಹೇಳಿರುವುದು ಅನುಮಾನಗಳಿಗೆ ಅವಕಾಶ ನೀಡಿದೆ ಎಂದರು.

ತಾವು ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿರುವುದಾಗಿ ಹೇಳಿರುವುದು ಅನೇಕ ಅನುಮಾನಗಳನ್ನು ಹುಟ್ಟಿಹಾಕಿದೆ. ಬಿಜೆಪಿ ಈ ತನಿಖಾ ಸಂಸ್ಥೆಗಳನ್ನು ತನ್ನ ಅಂಗಸಂಸ್ಥೆಗಳಂತೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಈ ಪ್ರಕರಣವನ್ನು ಸಿಬಿಐಗೆ ನೀಡಲು ಒತ್ತಾಯಿಸಲಾಗುತ್ತಿದೆ ಎಂದು ಆರೋಪಿಸಿದರು.

ಈ ಹಿಂದೆ ಜೆಡಿಎಸ್ ಬಿಜೆಪಿ ಮೈತ್ರಿ ಸರ್ಕಾರದ ಸಮಯದಲ್ಲಿ ಬಿಜೆಪಿಯಲ್ಲಿದ್ದ ಜನಾರ್ದನ ರೆಡ್ಡಿ ಅವರು ಆಗಿನ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಸಿಡಿ ಆರೋಪ ಮಾಡಿದಾಗ, ನಂತರ ಯಾವುದೇ ಸಿಡಿ ಬಿಡುಗಡೆ ಮಾಡಲಿಲ್ಲ. ಅಂದು ಆರಂಭವಾದ ಬಿಜೆಪಿಯ ಸಿಡಿ ಅಂಟು ರೋಗ, ಈಗ ಮುಂದುವರೆದಿದೆ ಎಂದರು.

ಪ್ರಾರಂಭದಲ್ಲಿ ಇವರ ಸಿಡಿ ಪ್ರಕರಣದಿಂದ ಅಂತರ ಕಾಯ್ದುಕೊಂಡಿದ್ದ ಬಿಜೆಪಿ, ಈಗ ಇವರನ್ನು ಸಮರ್ಥನೆ ಮಾಡಿಕೊಳ್ಳುವುದರ ಮೂಲಕ ತನ್ನ ನಿಜ ಬಣ್ಣವನ್ನು ಬಯಲು ಮಾಡಿದೆ ಮತ್ತು ಷಡ್ಯಂತ್ರದ ಭಾಗವಾಗಿ ಕೆಪಿಸಿಸಿ ಅಧ್ಯಕ್ಷರ ಮೇಲೆ ಅಪಪ್ರಚಾರ ಮಾಡಲು ಮುಂದಾಗಿದೆ ಎಂದರು.

ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಸಂಬಂಧ ಮುಖ್ಯಮಂತ್ರಿಗಳ ಹೆಸರನ್ನೂ ಇವರು ಬಳಸಿಕೊಂಡಿದ್ದು,ಅವರೂ ಕೂಡ ಈ ಷಡ್ಯಂತ್ರದಲ್ಲಿ ಭಾಗಿಯಾಗಿರುವ ಅನುಮಾನಗಳು ದಟ್ಟವಾಗುತ್ತಿವೆ ಎಂದರು.

ಪ್ರಚಾರದ ಹೆಸರಿನಲ್ಲಿ ಪದೇ ಪದೇ ಕರ್ನಾಟಕಕ್ಕೆ ಎಡತಾಕುತ್ತಿರುವ ಕೇಂದ್ರ ಗೃಹಸಚಿವರು ಸಿಡಿ ಆರೋಪಿಗಳಿಗೆ ಬೆಂಬಲ ನೀಡುತ್ತಿರುವುದು ಇವರ ಹೇಳಿಕೆಯಿಂದ ಸ್ಪಷ್ಟವಾಗುತ್ತಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಿಡಿಗಳ ವಿಚಾರವಾಗಿ ಹೆಚ್ಚು ಸುದ್ದಿಯಾಗುತ್ತಿದೆ. ತಾವು ಶುದ್ಧವಾಗಿರುವ ಬದಲು, ಬೇರೆಯವರ ಸಿಡಿ ಇದೆ ಎಂದು ಹೇಳುತ್ತಿರುವುದು ಅವರ ನಿಜವಾದ ಬಣ್ಣ ಬಯಲು ಮಾಡಿದೆ ಎಂದರು.

ರಾಮನ ಹೆಸರು ಬಳಸುವ ಪಕ್ಷದ ಸಂಸ್ಕೃತಿ ಮಹಿಳೆಯರನ್ನು ಯಾವ ರೀತಿ ನಡೆಸಿಕೊಳ್ಳುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ರಮೇಶ್ ಜಾರಕಿಹೊಳಿ ಅವರ ಮಾತುಗಳು ಸ್ಪಷ್ಟಪಡಿಸುತ್ತದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಇಂದು ಶಾಸಕಿಯಾಗಿ ತಮ್ಮ ವೈಯಕ್ತಿಕ ಸಾಮರ್ಥ್ಯದ ಆಧಾರದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಆದರೆ ರಮೇಶ್ ಅವರು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೀಳು ಮಟ್ಟದ ಟೀಕೆಗೆ ಮುಂದಾಗಿದ್ದಾರೆ ಎಂದರು.

ಸಾಮಾನ್ಯವಾಗಿ ಸಂತ್ರಸ್ತರು ದೂರು ನೀಡುತ್ತಾರೆ. ಈ ಪ್ರಕರಣದಲ್ಲಿ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಮಾಡದೇ, ಆರೋಪಿಯ ನಿರ್ದೇಶನದಂತೆ ಎಸ್ಐಟಿ ರಚಿಸಿ ತನಿಖೆ ಮಾಡಲಾಗಿದೆ. ಸಿಬಿಐ ತನಿಖೆ ಆಗಬೇಕು ಎನ್ನು ತ್ತಿರುವ ರಮೇಶ್ ಅವರಿಗೆ ರಾಜ್ಯ ಪೊಲೀಸರ ಮೇಲೆ ನಂಬಿಕೆ ಇಲ್ಲವೇ ಅಥವಾ ಸಿಬಿಐ ಮೂಲಕ ಬೇರೆಯವರ ಮೇಲೆ ಪ್ರಕರಣ ದಾಖಲಿಸಲು ಪ್ರಯತ್ನಿಸುತ್ತಿದ್ದಾರಾ? ಎಂದು ಪ್ರಶ್ನಿಸಿದರು.

ರಮೇಶ್ ಜಾರಕಿಹೊಳಿರವರು ಮಾಧ್ಯಮಗಳ ಜೊತೆ ಮಾತನಾಡುವಾಗ ಬೆಂಗಳೂರಿನ ಶಾಂತಿನಗರ ಹೌಸಿಂಗ್ ಸೊಸೈಟಿ ವಿಚಾರವನ್ನು ಪ್ರಸ್ತಾಪ ಮಾಡಿರುತ್ತಾರೆ. ಇದು ಜನರನ್ನು ಹಾದಿ ತಪ್ಪಿಸುವ ಪ್ರಯತ್ನವಾಗಿದ್ದು, ಅಂದಿನ ಸಹಕಾರ ಸಚಿವರಾಗಿ ಅಕ್ರಮಗಳನ್ನು ಮುಚ್ಚಿಟ್ಟ ಕಾರಣಕ್ಕೆ ಇವರ ಮೇಲೇ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬೇಕಾಗಿರುತ್ತದೆ ಎಂದರು.

ಸಹಕಾರ ಇಲಾಖೆಯ ಆದೇಶ ಸಂಖ್ಯೆ ಹೆಚ್ಎಸ್ 105/87-88 ದಿನಾಂಕ 10-03-1988ರ ಆದೇಶದ ಅನ್ವಯ ಕಲಂ 64ರ ಅಡಿಯಲ್ಲಿ ತನಿಖೆ ನಡೆಸಿರುವ ಆಂದಿನ ವಿಚಾರಣಾ ಅಧಿಕಾರಿಗಳು ಬೆಂಗಳೂರಿನ ಸುಮಾರು 98 ಹೌಸಿಂಗ್ ಸೊಸೈಟಿಗಳ ಸಂಬಂಧ ವರದಿಯನ್ನು ನೀಡಿರುತ್ತಾರೆ. ಇವುಗಳಲ್ಲಿ 45 ಸೊಸೈಟಿಗಳು ಗಂಭೀರ ಪ್ರಕರಣದಲ್ಲಿ 15 ಸೊಸೈಟಿಗಳು ಇತರ ಪ್ರಕರಣಗಳಲ್ಲಿ 26 ಸೊಸೈಟಿಗಳು ಸಾಮಾನ್ಯ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇತರೆ ಸೊಸೈಟಿಗಳು ಮಾಹಿತಿ ನೀಡಿರುವುದಿಲ್ಲವೆಂದು ವರದಿ ನೀಡಿರುತ್ತಾರೆ. 1988ರ ಸಮಯದಲ್ಲಿ ಶಿವಕುಮಾರ್ ಅವರು ಶಾಸಕರೇ ಆಗಿರಲಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಈ ಸಹಕಾರ ಸಂಘಗಳ ಮೇಲೆ ಸರ್ಕಾರದ ವತಿಯಿಂದ ನಿರ್ದಿಷ್ಟ ಕಾನೂನು ಕ್ರಮ ಜರುಗಿರುವುದಿಲ್ಲ. ರಾಜ್ಯದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇವುಗಳ ಮೇಲೆ ಕ್ರಮ ಕೈಗೊಳ್ಳದಿರುವ ಕುರಿತು ಸರ್ಕಾರ ಉತ್ತರಿಸಬೇಕಿದೆ. ಅಂದು ಈ ಪ್ರಕರಣವನ್ನು ಮುಚ್ಚಿಹಾಕಲು ಬಂದ ಒತ್ತಡಕ್ಕೆ ಮಣಿಯದಿದ್ದರೆ ಈ ವಿಚಾರವಾಗಿ ಅಗತ್ಯ ಕ್ರಮ ಕೈಗೊಳ್ಳಲಿಲ್ಲವೇಕೆ? ಈ ಪ್ರಕರಣವನ್ನು ಬಹಿರಂಗಪಡಿಸಲಿಲ್ಲವೇಕೆ? ಈ ಕುರಿತು ರಮೇಶ್ ಜಾರಕಿಹೊಳಿ ಅವರು ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಅವರದೇ ಸರ್ಕಾರ ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಈ ಪ್ರಕರಣದ ಕುರಿತ ಚರ್ಚೆಗೆ ನಾವು ಸಿದ್ಧವಿದ್ದು, ರಮೇಶ್ ಜಾರಕಿಹೊಳಿ ಅವರು ಈ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ ಅವರು, ರಮೇಶ್ ಜಾರಕಿಹೊಳಿ ಚುನಾವಣಾ ಸಮಯದಲ್ಲಿ ಸಲ್ಲಿಕೆ ಮಾಡಿರುವ ಪ್ರಮಾಣ ಪತ್ರದಲ್ಲಿ ಮಾಹಿತಿ ಮುಚ್ಚಿಟ್ಟಿರುವ ಸಂಬಂಧ ಕಾಂಗ್ರೆಸ್ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ರಮೇಶ್ ಜಾರಕಿಹೊಳಿ ಅನೇಕ ಬೇನಾಮಿ ಸಂಸ್ಥೆಗಳೊಂದಿಗೆ ತಮ್ಮ ವಹಿವಾಟನ್ನು ಇಟ್ಟುಕೊಂಡಿದ್ದು, ಸರ್ಕಾರ ಇದರ ತನಿಖೆಯನ್ನು ಸಿಬಿಐ ಮತ್ತು ಇಡಿಗೆ ನೀಡಲು ಒತ್ತಾಯಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪದಾಧಿಕಾರಿಗಳಾದ ದಿವಾಕರ್, ವಕ್ತಾರರಾದ ರಾಮಚಂದ್ರ ರೆಡ್ಡಿ, ಚಂದ್ರಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply