ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ಮಂತ್ರಿ ಸ್ಥಾನ ತ್ಯಜಿಸುತ್ತೇನೆ: ಕೆ.ಎನ್.ರಾಜಣ್ಣ

2 years ago

ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಕುತೂಹಲ ಮೂಡಿಸಿವೆ. ಇದೀಗ ತಾವು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳಿರುವ ಸಹಕಾರ ಸಚಿವ ಕೆ ಎನ್ ರಾಜಣ್ಣ ತಮಗೆ ಈ ಹುದ್ದೆ ನೀಡಿದರೆ ಸಚಿವ ಸ್ಥಾನ ತೊರೆಯುವುದಾಗಿ ಘೋಷಿಸಿದ್ದಾರೆ.

ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ತಾವು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಎಷ್ಟು ದಿನ ಮುಂದುವರಿಯುತ್ತೇನೋ ಗೊತ್ತಿಲ್ಲ. ಅಷ್ಟರೊಳಗೆ ಪಕ್ಷವನ್ನು ಪ್ರಬಲವಾಗಿ ಸಂಘಟಿಸುವತ್ತ ಗಮನ ಹರಿಸುತ್ತೇನೆ ಎಂದಿದ್ದರು.

ಇದಕ್ಕೆ ಇದೀಗ ಪ್ರತಿಕ್ರಿಯೆ ನೀಡಿರುವ ಸಹಕಾರ ಸಚಿವ ಕೆ ಎನ್ ರಾಜಣ್ಣ ತಾವು ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿದ್ದೇನೆ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹುದ್ದೆಗೆ ಹೈಕಮಾಂಡ್ ನನ್ನನ್ನು ಆಯ್ಕೆ ಮಾಡುವುದಾದರೆ ತನು-ಮನ ಪೂರ್ವಕವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ನಾನು ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ. ಹೀಗಾಗಿ ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಯಾವುದೇ ರಾಜಕೀಯ ಅಧಿಕಾರವನ್ನೂ ಕೇಳುವುದಿಲ್ಲ ಎಂದರು.

ಕಳೆದ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ದೆಹಲಿಯಲ್ಲಿ ನಡೆದ ಚರ್ಚೆಯ ಬಗ್ಗೆ ಹೈಕಮಾಂಡ್ 3 ವಿಚಾರಗಳನ್ನು ಹೇಳಿತ್ತು. ಅದರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿದ್ದಾರೆ. ಡಿ.ಕೆ.ಶಿವಕುಮಾರ್ ಏಕೈಕ ಉಪಮುಖ್ಯಮಂತ್ರಿ, ಲೋಕಸಭಾ ಚುನಾವಣೆವರೆಗೂ ಅವರನ್ನೇ ಪಕ್ಷದ ಅಧ್ಯಕ್ಷರನ್ನಾಗಿ ಮುಂದುವರೆಸಲಾಗುವುದು ಎಂದು ತಿಳಿಸಿತ್ತು. ಯಾರೇ ಆದರೂ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಹೇಳಿದ್ದರು. ಅದಕ್ಕೆ ಈಗಲೂ ಎಲ್ಲರೂ ಬದ್ಧರಾಗಿರುತ್ತಾರೆ ಎಂದುಕೊಂಡಿದ್ದೇನೆ ಎಂದರು.

ಲೋಕಸಭೆ ಚುನಾವಣೆಯ ಫಲಿತಾಂಶ ಹೊರ ಬಿದ್ದ ನಂತರ ರಾಜಕೀಯ ದೃವೀಕರಣ ಆರಂಭವಾಗಲಿದೆ. ಬೆಳವಣಿಗೆಗಳು ಯಾವ ಸ್ವರೂಪ ಪಡೆದುಕೊಳ್ಳಲಿವೆ ಎಂಬುದನ್ನು ಈಗ ಹೇಳುವುದು ಕಷ್ಟ ಎಂದರು.

ವಿಧಾನಪರಿಷತ್ ಚುನಾವಣೆಯಲ್ಲಿ ಅವಕಾಶ ವಂಚಿತರಿಗೆ ಮಣೆ ಹಾಕಬೇಕು. ಯಾರಿಗೆ ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಅಥವಾ ಈವರೆಗೂ ವಿಧಾನಪರಿಷತ್, ವಿಧಾನಸಭೆಯಲ್ಲಿ ಪ್ರಾತಿನಿಧ್ಯ ದೊರೆಯದೆ ಇರುವ ತಳ ಸಮುದಾಯದವರಿಗೆ ಅವಕಾಶ ನೀಡಬೇಕು. ನನ್ನ ಕಡೆಯಿಂದ ಯಾವ ಅಭ್ಯರ್ಥಿಯೂ ಇಲ್ಲ ಎಂದರು.

ಪೆನ್ ಡ್ರೈವ್ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಎಂದು ಕೇಂದ್ರಸರ್ಕಾರ, ರಾಜ್ಯಸರ್ಕಾರ, ಎಸ್ಐಟಿ ಎಲ್ಲರಿಗೂ ಗೊತ್ತಿದೆ. ಆದರೆ ಕಾನೂನು ಪ್ರಕಾರ, ಸಹಜ ನ್ಯಾಯದಂತೆ ಆರೋಪಿಗೆ ಕಾಲಾವಕಾಶ ನೀಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಕಾನೂನಿನ ಲೋಪಗಳಾಗದಂತೆ ಈಗಿನಿಂದಲೇ ಎಚ್ಚರಿಕೆ ವಹಿಸಲಾಗುತ್ತಿದೆ ಎಂದರು.

ಪ್ರಜ್ವಲ್ ರೇವಣ್ಣ ಅವರ ವಿಚಾರಕ್ಕೆ ಸಂಬಂಧಪಟ್ಟಂತೆ ಎಷ್ಟು ವಿಡಿಯೋಗಳಿವೆ, ಎಷ್ಟು ಜನ ಸಂತ್ರಸ್ತೆಯರು ಎಂಬುದನ್ನು ಖುದ್ದು ಅವರೇ ಹೇಳಬೇಕು. ನಾನಂತೂ ಇಂತ ವಿಚಾರಗಳಿಂದ ದೂರ. ಯಾರಾದರೂ ಹೆಣ್ಣು ಮಗಳು ಕರೆ ಮಾಡಿ, ನಾನು ಬೆಳಗಾವಿ, ಬಾಗಲಕೋಟೆ ಎಂದು ಹೇಳಿಕೊಂಡರೆ, ಪಕ್ಷದ ಕಾರ್ಯಕರ್ತೆ ಎಂದು ಪರಿಚಯಿಸಿಕೊಂಡರೆ ತಕ್ಷಣವೇ ನಾನು ಆ ನಂಬರ್ಗಳನ್ನು ಬ್ಲಾಕ್ ಮಾಡುತ್ತೇನೆ. ನನ್ನ ಮೊಬೈಲ್ ಬೇಕಾದರೆ ನಿಮಗೆ ಕೊಡುತ್ತೇನೆ, ಎಷ್ಟು ಬ್ಲಾಕ್ ನಂಬರ್ಗಳಿವೆ ಎಂದು ಪರಿಶೀಲಿಸಿ ಎಂದು ಪತ್ರಕರ್ತರಿಗೆ ಹೇಳಿದರು.

ಲಿಂಕ್ ಕೆನಲ್ ಮೂಲಕ ರಾಮನಗರಕ್ಕೆ ಹೇಮಾವತಿ ನೀರು ತೆಗೆದುಕೊಂಡು ಹೋಗುವುದರಿಂದ ತುಮಕೂರು, ಕೊರಟಗೆರೆ, ಮಧುಗಿರಿ, ಗುಬ್ಬಿ, ತುರುವೇಕೆರೆ ಸೇರಿದಂತೆ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆಯಾಗುತ್ತಿದೆ. ಇದಕ್ಕೆ ನಮ್ಮ ವಿರೋಧವಿದೆ. ಮುಖ್ಯಮಂತ್ರಿ ಬಳಿ ಈ ವಿಚಾರವಾಗಿ ಚರ್ಚೆ ಮಾಡುತ್ತೇನೆ ಎಂದರು.

ಮಾದಕ ವಸ್ತುಗಳ ಪಿಡುಗನ್ನು ತಪ್ಪಿಸಲು ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಮತ್ತಷ್ಟು ಕ್ರಮಗಳು ಅಗತ್ಯ ಎಂದರು.

Leave a Reply