ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ರಾಷ್ಟ್ರೀಯ ಮೂಲನಿವಾಸಿ ಮಂಚ್ ವತಿಯಿಂದ ಸುದ್ದಿ ಗೋಷ್ಠಿಯಲ್ಲಿ ರಾಷ್ಟ್ರೀಯ ಮೂಲನಿವಾಸಿ ಮಂಚ್ ಸಂಸ್ಥಾಪಕ ಅಧ್ಯಕ್ಷ ಜೆ.ಸಿ.ಪ್ರಕಾಶ್, ಕರ್ನಾಟಕ ಅಹಿಂದ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಡಾ.ಮುತ್ತುರಾಜು, ದಲಿತ ಪರ ಹೋರಾಟಗಾರ ನರಸಿಂಹಮೂರ್ತಿ, ಮೂಲ ಮಾದಿಗ ಮೂಮೆಂಟ್ ಕಾರ್ಯಾಧ್ಯಕ್ಷ ಡಾ.ಎಚ್.ಲಕ್ಷ್ಮೀನಾರಾಯಣ್, ನಿವೃತ್ತ ಐ.ಆರ್.ಎಸ್.ಅಧಿಕಾರಿ ಎಚ್.ಆರ್.ಭೀಮಾಶಂಕರ್, ಲಕ್ಷ್ಮಿಸ್ವಾಮಿ, ರಘು, ಆನಂದ್ ಭಾಗವಹಿಸಿದ್ದರು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಆಗಸ್ಟ್ –01- 2024 ರಂದು, sc/st ಮೀಸಲಾತಿ ವರ್ಗೀಕರಣವನ್ನು ಕುರಿತಂತೆ ಸುಪ್ರೀಂ ಕೋರ್ಟ್ ನ ( seven Bench) ಏಳು ಸದಸ್ಯರ ಪೀಠವು ಐತಿಹಾಸಿಕವಾದ ತೀರ್ಪನ್ನು ನೀಡಿದೆ. ಅತೀ ಹಿಂದುಳಿದಿದ್ದ ಪರಿಶಿಷ್ಟ ಜನಾಂಗಕ್ಕೆ ಅವಕಾಶಗಳು ಸಿಗಲೆಂದು ಆಂಧ್ರಪ್ರದೇಶ, ತೆಲಂಗಾಣ, ಹರಿಯಾಣ, ಪಂಜಾಬ್ ರಾಜ್ಯ ಸರ್ಕಾರಗಳು ಒಳಮೀಸಲಾತಿ ನೀಡುವ ಪ್ರಯತ್ನ ಮಾಡಿದ್ದವು ತಾಂತ್ರಿಕ ಕಾರಣಗಳಿಂದ ಅಡ್ಡಿವುಂಟಾಗಿದ್ದವು. ಇಡೀ ದೇಶದಲ್ಲಿ 30 ವರ್ಷಗಳಿಂದಲೂ ಮಾದಿಗ ಸಮುದಾಯ ನಡೆಸಿದ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಹೋರಾಟಕ್ಕೆ ಸಂದ ಮಹತ್ವದ ತೀರ್ಪು ಇದಾಗಿದೆ. ಅತಿ ಶೋಷಿತ ಜನಾಂಗಗಳ ಅಭಿವೃದ್ಧಿಗೆ ಸುಪ್ರೀಂಕೋರ್ಟ್ ನೀಡಿರುವ ಈ ತೀರ್ಪು ಅಭಿನಂದನಾರ್ಹವಾದದ್ದಾಗಿದೆ. ಇದರಿಂದ ಭಾರತ ಮೂಲನಿವಾಸಿಗಳಿಗೆ ಚೈತನ್ಯ ಸಿಕ್ಕಿದಂತೆ ಆಗಿದೆ.
ಮಾದಿಗ ಜನಾಂಗದ ರಾಷ್ಟ್ರೀಯ ನಾಯಕರಾದ ಮಂದಕೃಷ್ಣ ಮಾದಿಗರನ್ನು ಒಳಗೊಂಡಂತೆ, ಕರ್ನಾಟಕದಲ್ಲಿ ಒಳಮೀಸಲಾತಿ ಹೋರಾಟದ ಸಂಸ್ಥಾಪಕರಾದ ಸಿ. ಕೆ. ಜಯರಾಮ್, ಎಂ. ಶಂಕರಪ್ಪ, ಮಾದಿಗ ದಂಡೋರವನ್ನು ಸೇರಿದಂತೆ ಕರ್ನಾಟಕದ ಅನೇಕ ಹೋರಾಟಗಾರರು, ಬರಹಗಾರರು, ಸಂಘಟನೆಗಳು ಒಳಮೀಸಲಾತಿಗಾಗಿ ಶ್ರಮಿಸಿವೆ. ಭಾರತದಾದ್ಯಂತ ಅನೇಕ ರಾಜ್ಯಗಳು ಒಳಮೀಸಲಾತಿ ಕೂಗಿಗೆ ದನಿಗಳಾಗಿವೆ. ಒಳಮೀಸಲಾತಿ ಜಾರಿಗೊಳ್ಳಬೇಕೆಂದು ಅನೇಕ ಜನ ಪ್ರಾಣ ತ್ಯಾಗವನ್ನು ಮಾಡಿದ್ದಾರೆ. ಕುಟುಂಬಗಳನ್ನ ತೊರೆದಿದ್ದಾರೆ. ತಮ್ಮ ಭವಿಷ್ಯದ ಕನಸುಗಳನ್ನು ತಾವೇ ಕೈಯಾರ ಚಿವುಟಿದ್ದಾರೆ. ಅವರೆಲ್ಲರ ತ್ಯಾಗ, ಶ್ರಮ, ಬಲಿದಾನದ ಫಲವಾಗಿ ಇಂದು ಸುಪ್ರೀಂ ಕೋರ್ಟ್ ನ ತೀರ್ಪು ಬಂದಿದೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮೂಲ ನಿವಾಸಿ ಮಂಚ್, ಮೂಲ ಮಾದಿಗ ಮೂಮ್ಮೆಂಟ್(M3) ಮತ್ತು ಕರ್ನಾಟಕ ಅಹಿಂದ ಹೋರಾಟ ಸಮಿತಿಗಳು ಜಂಟಿಯಾಗಿ ಸರ್ಕಾರವನ್ನು ಒತ್ತಾಯಿಸುವುದೇನೆಂದರೆ, ಸುಪ್ರೀಂಕೋರ್ಟ್ ನ ಈ ತೀರ್ಪಿನ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ವಿಶೇಷ ಅಧಿವೇಶನವನ್ನು ಕೂಡಲೇ ಕರೆದು ನ್ಯಾಯಮೂರ್ತಿ ಎ. ಜೆ. ಸದಾಶಿವ ಆಯೋಗದ ವರದಿಯನ್ನು ಮಂಡಿಸಿ, ಅದನ್ನು ಯಥಾವತ್ತು ಜಾರಿಗೆ ತರಬೇಕೆಂದು ಕೋರುತ್ತೇವೆ.
ಮಾದಿಗ ಜನಾಂಗದ ಮೂಲಪುರುಷನಾದ ಸಾಮ್ರಾಟ್ ಅಶೋಕನ ಜಯಂತಿಯನ್ನು ರಜೆ ನೀಡುವ ಮೂಲಕ ಸರ್ಕಾರ ಆಚರಿಸಬೇಕು. ಸಾಮ್ರಾಟ್ ಅಶೋಕನ ಹೆಸರಿನಲ್ಲಿ ರಾಷ್ಟ್ರೀಯ ಪುರಸ್ಕಾರವನ್ನು, ವಸತಿ ಶಾಲೆಗಳನ್ನು, ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಬೇಕು ಮತ್ತು ಅಶೋಕನ ಪುತ್ಥಳಿಯನ್ನು ವಿಧಾನಸೌಧದ ಮುಂಭಾಗದಲ್ಲಿ ಪ್ರತಿಷ್ಠಾಪಿಸಬೇಕೆಂದು ಕೋರುತ್ತೇವೆ.
ಪರಿಶಿಷ್ಟರ ಬದುಕಿನ ನಿರ್ವಹಣೆಗೆ, ಪ್ರತೀ ಕುಟುಂಬಕ್ಕೆ 5 ಎಕರೆ ವ್ಯವಸಾಯದ ಭೂಮಿಯನ್ನು ಸರ್ಕಾರ ಮಂಜೂರು ಮಾಡಬೇಕು. ಇದರನ್ವಯ ಎಸ್.ಸಿ.ಪಿ / ಟಿ.ಎಸ್.ಪಿ.ಕಾಯ್ದೆಯಡಿಯಲ್ಲಿ ಪ್ರತಿ ವರ್ಷವೂ ಬಜೆಟ್ ನಲ್ಲಿ ಮೀಸಲಿಡುತ್ತಿರುವ ಹಣದಲ್ಲಿ ಮಾದಿಗ ಮತ್ತು ಸಂಬಂಧಿತ ಜಾತಿಗಳ ಅಭಿವೃದ್ಧಿಗೆ ನ್ಯಾಯೋಚಿತವಾದ ಈರಿಡುತ್ತಿರುವ ಹಣವನ್ನು ಮೀಸಲಿಡಬೇಕೆಂದು ಕೋರುತ್ತೇವೆ – ಮಾದಿಗ ಜನಾಂಗದ ಅಭಿವೃದ್ಧಿಯ ನಿಗಮಗಳಾದ ಅದಿ ಜಾಂಬವ ಅಭಿವೃದ್ಧಿ ನಿಗಮ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಡಾ. ಬಾಬು ಜಗಜೀವನ್ ರಾಮ್ ಚರ್ಮ ಮತ್ತು ಕೈಗಾರಿಕೋದ್ಯಮ ಅಭಿವೃದ್ಧಿ ನಿಗಮ ( lidkar ) – ಇವುಗಳಿಗೆ ಹೆಚ್ಚಿನ ಅನುದಾನವನ್ನು ನೀಡಬೇಕೆಂದು ಕೋರುತ್ತೇವೆ.
ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರು, ಕುಲ ಸಚಿವರು, ಕುಲಪತಿಗಳ ಹುದ್ದೆಗೆ ಮಾದಿಗರನ್ನು ಗಣನೀಯವಾಗಿ ಪರಿಗಣಿಸಬೇಕಾಗಿ ಕೋರುತ್ತೇವೆ.
ಅಕಾಡೆಮಿ ಮತ್ತು ನಿಗಮ ಮಂಡಳಿಗಳ ಅಧ್ಯಕ್ಷರು, ಸದಸ್ಯರು, ನಿರ್ದೇಶಕರ ನೇಮಕದಲ್ಲಿ ಮಾದಿಗ ಸಮಾಜವನ್ನು ಕಡೆಗಣಿಸಲಾಗಿದ್ದು, ಮಾದಿಗರನ್ನು ವಿಶೇಷ ಕೋಟಾದಲ್ಲಿ ಕೂಡಲೇ ನೇಮಕ ಮಾಡಬೇಕೆಂದು ಕೋರುತ್ತೇವೆ.
ಪ್ರಸ್ತುತ SCP / TSP ಹಣವನ್ನ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವುದು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಿಗೆ ಮಾಡುತ್ತಿರುವ ದೊಡ್ಡ ಅನ್ಯಾಯವಾಗಿದೆ. ಕೂಡಲೇ 7(C) ಸೆಕ್ಷನ್ ಗೇ ತಿದ್ದುಪಡಿಯನ್ನು ತಂದು, ಹಣ ಪೋಲಾಗದಂತೆ, ಒಟ್ಟು ಹಣವೆಲ್ಲವೂ ಎಸ್ಪಿ /ಎಸ್ಪಿ ಗಳ ಅಭಿವೃದ್ಧಿಗೆ ಪೂರಕವಾಗುವಂತೆ ವಿನಿಯೋಗಿಸಬೇಕೆಂದು ಕೋರುತ್ತೇವೆ.
ಸುಮಾರು 30 ವರ್ಷಗಳ ಹೋರಾಟಗಳಲ್ಲಿ ಒಳಮೀಸಲಾತಿಗಾಗಿ ಜೀವತೆತ್ತವರ ಕುಟುಂಬಗಳಿಗೆ ಮಾಶಾಸನವನ್ನು ನೀಡಬೇಕೆಂದು ಕೋರುತ್ತೇವೆ.
ಆದಷ್ಟು ಬೇಗ ಒಳ ಮೀಸಲಾತಿಯನ್ನು ಜಾರಿಗೆ ತಂದು, ತದನಂತರದಲ್ಲಿ ಸರ್ಕಾರ ಉದ್ಯೋಗ ಭರ್ತಿಯನ್ನು ಮಾಡಬೇಕೆಂದು ಕೋರುತ್ತೇವೆ.
ಬಡ್ತಿ ಮೀಸಲಾತಿಯಲ್ಲಿ ಮಾದಿಗ ಜನಾಂಗದ ಅಧಿಕಾರಿ / ಉದ್ಯೋಗಸ್ಥರನ್ನು ಸಮಾನವಾಗಿ ಪರಿಗಣಿಸಬೇಕಾಗಿ ಕೋರುತ್ತೇವೆ.
ಹೊರ ರಾಷ್ಟ್ರದ ವಿವಿಗಳಲ್ಲಿ sc/st ಸಮುದಾಯದ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಮತ್ತು ಪಿಎಚ್. ಡಿ, ಪದವಿ ಗಳಿಸಲಿಕ್ಕೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಬುದ್ಧ ಯೋಜನೆ” ಇತ್ತು. ಪ್ರಸ್ತುತ ಸರ್ಕಾರ ಆ ಯೋಜನೆಯನ್ನು ರದ್ದುಗೊಳಿಸಿದೆ. ಕೂಡಲೇ ಈ ಯೋಜನೆಯನ್ನು ಮುಂದುವರಿಸಲಿಕ್ಕೆ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇವೆ.
ಪೌರಕಾರ್ಮಿಕರನ್ನು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಕಾಯಂ ಮಾಡಿಕೊಳ್ಳುವತ್ತ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇವೆ.
ಕಂದಾಯ ಇಲಾಖೆಯ ‘ಗ್ರಾಮ ಸಹಾಯಕ’ರನ್ನು ‘ಡಿ ಗ್ರೂಪ್’ ನೌಕರರೆಂದು ಪರಿಗಣಿಸಿ, ಅವರನ್ನು ಕಾಯಂಗೊಳಿಸಿ 7ನೇ ವೇತನ ಆಯೋಗದ ಎಲ್ಲಾ ಸವಲತ್ತುಗಳನ್ನು ನೀಡಬೇಕೆಂದು ಕೋರುತ್ತೇವೆ.
ಸುಪ್ರೀಂಕೋರ್ಟ್ ನ ಆದೇಶವನ್ನು ಕೂಡಲೇ ಜಾರಿಗೊಳಿಸುವ ಮೂಲಕ, ಮಾದಿಗ ಜನಾಂಗದ ಮೇಲಿನ ಬೇಡಿಕೆಗಳನ್ನು ಸರ್ಕಾರ ಅಂಗೀಕರಿಸಬೇಕೆಂದು ಕೋರುತ್ತೇವೆ. 30 ವರ್ಷಗಳಿಂದಲೂ ಮಾದಿಗ ಜನಾಂಗದ ಸಮಾನತೆಯ ಹೋರಾಟವನ್ನು ಕರ್ನಾಟಕ ಸರ್ಕಾರಗಳು ನಿರ್ಲಕ್ಷಿಸುತ್ತಲೇ ಬಂದಿವೆ. ಈಗಲಾದರೂ ಮಾನ್ಯ ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕೆಂದು ಕೋರುತ್ತೇವೆ. ಒಳಮೀಸಲಾತಿಯನ್ನು ಜಾರಿಗೊಳಿಸುವುದು ತಡವಾದಲ್ಲಿ, ಮಾದಿಗ ಜನಾಂಗ ಕರ್ನಾಟಕದಾದ್ಯಂತ ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂದು ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಿಚ್ಚಿಸುತ್ತೇವೆ ಎಂದು ಹೇಳಿದರು.




