ಆತ್ಮೀಯರೇ, ನಾನು ಅನುವಾದಿಸಿದ್ದ ಡಾ.ಬಿ.ಆರ್.ಅಂಬೇಡ್ಕರರ ಬ್ರಾಹ್ಮಣಧರ್ಮದ ದಿಗ್ವಿಜಯ! ಎಂಬ ಸ್ಫೋಟಕ ಕೃತಿಯ ಮೂರನೇ ಮುದ್ರಣ ಇದೀಗ ಹೊರಬಂದಿದೆ. ಆದಿಮ ಪ್ರಕಾಶನದ ಈ ಪ್ರಕಟಣೆಯ ಪ್ರತಿಗಾಗಿ ಎಚ್.ಎಂ.ರಾಮಚಂದ್ರ (94490 41430) ಅಥವಾ ಕೊಮ್ಮಣ್ಣ (94802 73292) ಅವರನ್ನು ಸಂಪರ್ಕಿಸಬಹುದು. ನಿಮ್ಮ ಅವಗಾಹನೆಗಾಗಿ ನನ್ನ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ:

ಚರಿತ್ರೆಯ ಕಗ್ಗಾಡಿನಲ್ಲಿ…
ಪ್ರಾಚೀನ ಭಾರತ ಇತಿಹಾಸ ಎಂಬುದೊಂದು ಕಗ್ಗಾಡು. ಗಾಳಿ ಬೆಳಕಿಲ್ಲದ, ಹಾದಿಗಳ ಸುಳಿವೇ ಇಲ್ಲದ ಈ ದುರ್ಗಮ ದಟ್ಟಡವಿಯನ್ನು ಹೊಕ್ಕು, ದಾರಿ ಕಂಡುಕೊಂಡು ಅದರ ನಕಾಶೆ ಬಿಡಿಸುವುದು ಭೀಮ ಸಾಹಸವೇ ಸರಿ.
ನಮ್ಮ ವರ್ತಮಾನದ ಅಸಮಾನತೆಯ ಸಮಾಜ ಕಂಡು ಬೆಚ್ಚಿ ಬಿದ್ದಿದ್ದ ಡಾ.ಬಿ.ಆರ್.ಅಂಬೇಡ್ಕರ್, ಈ ಅನ್ಯಾಯಗಳ ಮೂಲ ಶೋಧಿಸಲು ಚರಿತ್ರೆಯೆಂಬ ಕಗ್ಗಾಡು ಹೊಕ್ಕರು.
ಜೀವಮಾನವಿಡೀ ತಮ್ಮ ಹೆಸರಿಗೆ ಅನ್ವರ್ಥವಾದ ಭೀಮಶ್ರದ್ಧೆ, ವಿದ್ವತ್ತು, ಪ್ರತಿಭೆಗಳಿಂದ ಸತ್ಯಶೋಧನೆಯ ತಪಸ್ಸಿಗೆ ಕೂತರು. ಹಿಂದೂ ಚರಿತ್ರೆಯಲ್ಲಿ ಹುದುಗಿರುವ ಭಯಾನಕ ಸತ್ಯಗಳನ್ನು ಒಂದೊಂದಾಗಿ ಸಾಕ್ಷ್ಯಾಧಾರ ಸಮೇತ ಎತ್ತಿ ಬೆಳಕಿಗೊಡ್ಡಿದರು.
ಪ್ರಸ್ತುತ ಬ್ರಾಹ್ಮಣಧರ್ಮದ ದಿಗ್ವಿಜಯ – ಅವರ ಈ ಸಂಶೋಧನೆಯ ಫಲವಾಗಿ ಹೊರಬಂದ ಸ್ಫೋಟಕ ಕೃತಿಗಳಲ್ಲೊಂದು. ಇಲ್ಲಿ ಕ್ರಿಸ್ತಪೂರ್ವ ವಿದ್ಯಮಾನಗಳ ಆಳಕ್ಕಿಳಿಯುವ ಅಂಬೇಡ್ಕರ್, ಈಗಿನ ಎಷ್ಟೋ ಸಂಕಟಗಳ ಬೇರುಗಳನ್ನು ಪತ್ತೆ ಮಾಡುತ್ತಾರೆ. ಇಂದಿಗೂ ಕೊನೆಯಿಲ್ಲದ ವಿವಾದಗಳ ಕೇಂದ್ರವಾಗಿರುವ ಮನುಸ್ಮೃತಿಯ ಅರ್ಥ- ತಥ್ಯವೇನು, ಇತಿಹಾಸದಲ್ಲಿ ಬ್ರಾಹ್ಮಣಧರ್ಮ ಯಾವ ಬಗೆಯ ಏರಿಳಿತಗಳನ್ನು ಕಂಡಿದೆ, ಹಿಂದೂ ಸಮಾಜದಲ್ಲಿ ಶೂದ್ರರು ಮತ್ತು ಸ್ತ್ರೀಯರು ಹೀನಾಯ ಸ್ಥಿತಿ ತಲುಪಿದ್ದು ಹೇಗೆ, ಬೌದ್ಧಧರ್ಮವನ್ನು ಬ್ರಾಹ್ಮಣಧರ್ಮ ಹೇಗೆ ಸಮರದ ನೆಲೆಯಲ್ಲಿ ಎದುರುಗೊಂಡಿತು, – ಇವೇ ಮುಂತಾದ ಜಿಗುಟು ಒಗಟುಗಳನ್ನು ಎದುರಿಸುವ ಅಂಬೇಡ್ಕರರ ಬೆಂಕಿಯಂಥ ನೋಟ, ಎಲ್ಲ ಹುಸಿ ಆವರಣಗಳನ್ನು ಸುಟ್ಟು ಭಸ್ಮ ಮಾಡುತ್ತದೆ. ನಿಚ್ಚಳ ಸತ್ಯಗಳನ್ನು ನಮ್ಮ ಮುಂದಿಡುತ್ತದೆ.
ತಮ್ಮ ಪ್ರತಿಯೊಂದು ಪ್ರತಿಪಾದನೆಗೂ ನಿಸ್ಸಂದಿಗ್ಧ ಆಧಾರ ಪುರಾವೆ ಒದಗಿಸುವ ಅಂಬೇಡ್ಕರ್ “ಭಾರತೀಯ ಇತಿಹಾಸವೆಂದರೆ ಬ್ರಾಹ್ಮಣಧರ್ಮ ಹಾಗೂ ಬೌದ್ಧಧರ್ಮಗಳ ಮಾರಕ ಕಾಳಗದ ಚರಿತ್ರೆಯೇ ಆಗಿದೆ” ಎಂಬ ತೀರ್ಮಾನಕ್ಕೆ ಬರುತ್ತಾರೆ. ನಿಸ್ಸಂಶಯವಾಗಿ ನಮ್ಮ ನಾಡಿನ ಸರ್ವಶ್ರೇಷ್ಠ ಸಂಶೋಧಕ – ಇತಿಹಾಸಕಾರರಾದ ಅಂಬೇಡ್ಕರರ ಶೋಧನೆಗಳಿಂದ ಹಿಂದೂ ಸಮಾಜ ಉಪಕೃತವಾಗಿದೆ.
ಅಪಾರ ಚಾರಿತ್ರಿಕ ಮಹತ್ವದ ಈ ಕೃತಿಯನ್ನು ಕನ್ನಡಕ್ಕೆ ತರುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟವೆಂದು ತಿಳಿದಿದ್ದೇನೆ.
- ಎನ್.ಎಸ್. ಶಂಕರ್, ಹಿರಿಯ ಪತ್ರಕರ್ತರು ಮತ್ತು ನಿರ್ದೇಶಕರು




