ರೋಗಿಗಳ ಸಾವು ಬಿಜೆಪಿ ಸರ್ಕಾರ ಮಾಡಿದ ಕಗ್ಗೊಲೆ!: ಕೆಪಿಸಿಸಿ

4 years ago

ಬೆಂಗಳೂರು: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಅಭಾವದಿಂದ ವೆಂಟಿಲೇಟರ್‌ನಲ್ಲಿದ್ದ ರೋಗಿಗಳು ಸಾವನ್ನಪ್ಪಿರುವ ಘಟನೆ ದುರಂತಮಯ ಹಾಗೂ ಖಂಡನೀಯವಾಗಿದೆ. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರದಿಂದಾಗಿ ಆಡಳಿತ ಯಂತ್ರ ಸ್ಥಗಿತಗೊಂಡಿರುವಂತೆ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೇ ವೆಂಟಿಲೇಟರ್ ಗಳು ಸ್ಥಗಿತಗೊಂಡಿವೆ. ಹಾಗಾಗಿ ವೆಂಟಿಲೇಟರ್‌ನಲ್ಲಿದ್ದ ರೋಗಿಗಳ ಸಾವು ಬಿಜೆಪಿ ಸರ್ಕಾರ ಮಾಡಿದ ಕಗ್ಗೊಲೆ! ಎಂದು ಕೆಪಿಸಿಸಿ ಆರೋಪಿಸಿದೆ.

ಬಳ್ಳಾರಿಯ ವಿಮ್ಸ್ ನಲ್ಲಿ ನಿನ್ನೆ ವಿದ್ಯುತ್ ನಿಲುಗಡೆಯಾದ ವೇಳೆ ಜನರೇಟರ್ ಸಂಪರ್ಕ ಇಲ್ಲದೆ ಇಬ್ಬರು ರೋಗಿಗಳು ಬಲಿಯಾಗಿದ್ದಾರೆ. ಈ ವಿಷಯವನ್ನು ಸದನದಲ್ಲಿ ಕೂಡ ಕಾಂಗ್ರೆಸ್ ಪ್ರಸ್ತಾಪಿಸಿದ್ದು, ಹೊರಗೆ ಕೂಡ ಜನಜಾಗೃತಿ ಮೂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ, ವೆಂಟಿಲೇಟರ್ ನಲ್ಲಿ 10 ಮಂದಿ ರೋಗಿಗಳಿದ್ದಾರೆ, ಈ ಸಮಯದಲ್ಲಿ ವಿದ್ಯುತ್ ಸಂಪರ್ಕ ಕಡಿವಾಗದಂತೆ ನೋಡಿಕೊಳ್ಳಬೇಕಾಗಿರುವುದು ಆಸ್ಪತ್ರೆಯ ಜವಾಬ್ದಾರಿಎಂದಿದೆ.

ಒಂದು ವೇಳೆ ವಿದ್ಯುತ್ ಕಡಿತವಾದರೆ ತಕ್ಷಣವೇ ಜನರೇಟರ್ ವ್ಯವಸ್ಥೆ ಮಾಡಬೇಕಾಗುತ್ತದೆ. ಸರ್ಕಾರ ಸರಿಯಾಗಿ ಕೆಲಸ ಮಾಡಿದ್ದರೆ ವಿದ್ಯುತ್ ಕಡಿತವೂ ಆಗುತ್ತಿರಲಿಲ್ಲ, ಆಸ್ಪತ್ರೆಯಲ್ಲಿ ಜನರೇಟರ್ ಕೆಲಸ ಮಾಡದೇ ನಿಲ್ಲುತ್ತಿರಲಿಲ್ಲ, ಸರ್ಕಾರದ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಉಸಿರು ಚೆಲ್ಲಬೇಕಾಗಿರಲಿಲ್ಲ ಎಂದಿದೆ.

Dr. Sudhakar K ಎಂಬ ಅಸಮರ್ಥ ವ್ಯಕ್ತಿಯ ಕೈಯಲ್ಲಿ ಆರೋಗ್ಯ ಇಲಾಖೆಯನ್ನು ಕೊಟ್ಟು ಇಡೀ ರಾಜ್ಯವೇ ಅನಾರೋಗ್ಯದಿಂದ ಬಳಲುವಂತೆ ಮಾಡಿದೆ ಬೊಮ್ಮಾಯಿ ಸರ್ಕಾರ ಎಂದಿದೆ.

ಕೋವಿಡ್ ಸಂದರ್ಭದಲ್ಲೇ ಇವರ ಕಾರ್ಯಕ್ಷಮತೆ ಎಷ್ಟರ ಮಟ್ಟಿಗೆ ಇತ್ತೆಂಬುದು ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಹಾಗಿದ್ದರೂ ಅವರನ್ನು ಆರೋಗ್ಯ ಸಚಿವರನ್ನಾಗಿ ಮುಂದುವರೆಸುತ್ತಿರುವುದರ ಹಿಂದಿನ ಉದ್ದೇಶವಾದರೂ ಏನು? ಎಂದು ಪ್ರಶ್ನಿಸಿದೆ.

ಕೋವಿಡ್ ನಂತಹ ಬಿಕ್ಕಟ್ಟಿನ ಸಮಯದಲ್ಲೂ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಭ್ರಷ್ಟಾಚಾರ ಮಾಡಿದಂತೆ ಆರೋಗ್ಯ ಇಲಾಖೆಯನ್ನೇ ದೋಚಬಹುದು ಎಂಬ ಉದ್ದೇಶವೇ? ಜನರ ಜೀವಗಳು ಎಂದರೆ ನೀವು ತೇಪೆ ಹಾಕಿ ಮೂರು ದಿನಕ್ಕೆ ಕಿತ್ತು ಹೋದ ರಸ್ತೆಗಳು ಎಂದುಕೊಂಡಿದ್ದೀರಾ? ಎಂದು ಕೇಳಿದೆ.

Leave a Reply