‘ದ ಹಿಂದೂ’ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ/ವರದಿಯ ಪ್ರಕಾರ ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ರೋಹಿನ್ ಸಿಂಗ್ ಅವರು ‘ನಾವು ಎನ್ ಇಪಿ 2020ಯನ್ನು ತಿರಸ್ಕರಿಸಿದ್ದೇವೆ. ಹೀಗಾಗಿ ಎನ್ ಸಿಎಫ್ 2023ಯನ್ನು ಅನುಸರಿಸುವ ಅಗತ್ಯವಿಲ್ಲ, ಎನ್ ಸಿಎಫ್ 2005ನ್ನು ಅನುಸರಿಸುತ್ತೇವೆ’ ಎಂದು ಹೇಳಿದ್ದಾರೆ.
ಮಾನ್ಯ ಕಾರ್ಯದರ್ಶಿಗಳಿಗೆ ಕೆಲವು ಪ್ರಶ್ನೆಗಳು ಮತ್ತು ಎನ್ ಇಪಿ 2020ಯನ್ನು ರದ್ದುಗೊಳಿಸಿ ರಾಜ್ಯ ಶಿಕ್ಷಣ ನೀತಿ ರೂಪಿಸಲು ತುರ್ತಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು
1. ಕರ್ನಾಟಕ ಸರಕಾರ ಎನ್ ಇಪಿ 2020ಯನ್ನು ರದ್ದುಗೊಳಿಸಿ ಅಧಿಕೃತ ಆದೇಶ ಹೊರಡಿಸಿಲ್ಲ. ಅದು ಗೆಜೆಟ್ ನೋಟಿಫಿಕೇಶನ್ ಆಗಲಿಲ್ಲ. ವಿಧಾನ ಮಂಡಲದಲ್ಲಿಯೂ ಪ್ರಕಟವಾಗಿಲ್ಲ.
ಮು. ಮಂ. ಮತ್ತು ಸಚಿವರ ಹೇಳಿಕೆ ಆಧರಿಸಿ ಎನ್ ಇಪಿ ರದ್ದು ಅಂತ ಹೇಳಿದರೆ ಇದು ರದ್ದಾದಂತಲ್ಲ.
ಇಂದಿಗೂ ಎನ್ ಸಿಎಫ್ 2023ಯ ಮಾರ್ಗಸೂಚಿಯ ಅನುಸಾರ ತಯಾರಾದ 26 ಪೊಸಿಷನ್ ಪೇಪರ್ಸ್ ಶಿಕ್ಷಣ ಇಲಾಖೆಯ ಅಂತರ್ಜಾಲ ತಾಣದಲ್ಲಿ ದೊರಕುತ್ತದೆ. ಈ ಪೇಪರ್ಸ್ ನ್ನು ಅಧಿಕೃತವಾಗಿ ತಿರಸ್ಕರಿಸದೇ ಇರುವವರೆಗೂ ಎನ್ ಸಿಎಫ್ 2023 ಅನ್ವಯವಾಗುತ್ತದೆ. ಎನ್ ಸಿಎಫ್ 2005 ಅನ್ವಯವಾಗುವುದಿಲ್ಲ.
ಇದು ಆರ್ ಎಸ್ಎಸ್ ಸಿದ್ಧಾಂತಗಳ ದಸ್ತಾವೇಜು. ಇದನ್ನು ತಿರಸ್ಕರಿಸದೇ ಎನ್ ಇಪಿ ರದ್ದು ಮಾಡಲು ಸಾಧ್ಯವಿಲ್ಲ
2. ಉನ್ನತ ಶಿಕ್ಷಣದಲ್ಲಿ
ಎಲ್ ಎಂಎಸ್ ವ್ಯವಸ್ಥೆಯನ್ನು ಕೂಡಲೆ ರದ್ದುಗೊಳಿಸಬೇಕು. ಇದು ಬಹುಕೋಟಿ ಹಗರಣ ಮಾತ್ರವಲ್ಲ ಅನಗತ್ಯವಾಗಿ ಇಡೀ ಪದವಿ ಶಿಕ್ಷಣವನ್ನು ಆನ್ ಲೈನ್ ವ್ಯವಸ್ಥೆಗೆ ಬದಲಾಯಿಸುವ ಉದ್ದೇಶವಿದೆ. ಆದರೆ ಇದರ ಒಟ್ಟಾರೆ ರೂಪುರೇಷೆಗಳು ಸಹ ಕಳಪೆಯಾಗಿವೆ. ಉದಾಹರಣೆಗೆ ಆ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡುವ ಪಠ್ಯಗಳ ಗುಣಮಟ್ಟವನ್ನು ಯಾರು ಪರಿಶೀಲಿಸುತ್ತಾರೆ? ಯಾರು ಅನುಮೋದಿಸುತ್ತಾರೆ? ಇದಕ್ಕೆ ಅಧಿಕೃತತೆಯ ಮಾನ್ಯತೆ ಇದೆಯೇ?
ಇದಕ್ಕೆ ಅಗತ್ಯವಾದ ನಿರಂತರ ಅಂತರ್ಜಾಲ ಮತ್ತು ವಿದ್ಯುತ್ ಸೌಲಭ್ಯವನ್ನು ಯಾರು ಒದಗಿಸುತ್ತಾರೆ?
ಇನ್ನೂ ಹಲವಾರು ಕಾರಣಗಳಿಂದ ಎಲ್ ಎಂಎಸ್ ಒಂದು ಮರೆಮೋಸವಾಗಿದೆ.
ಇದು ಚಾಲ್ತಿಯಲ್ಲಿರುವವರೆಗೂ ಎನ್ ಇಪಿ ತಿರಸ್ಕರಿಸಲು ಸಾಧ್ಯವಿಲ್ಲ
3. ಶಾಲಾ ಶಿಕ್ಷಣದಲ್ಲಿ ಎನ್ ಇಪಿ ಜಾರಿಗೊಳಿಸಲು ಹಿಂದಿನ ಬಿಜೆಪಿ ಸರಕಾರವು ಮದನ್ ಗೋಪಾಲ್ ಅಧ್ಯಕ್ಷತೆಯಲ್ಲಿಲ್ಲಿ ಸಮಿತಿ ರಚಿಸಿದ್ದರು. ಈಗ ಸಮಿತಿಯ ಸ್ಟೇಟಸ್ ಏನು? ಅದು ತನ್ನ ಶಿಫಾರಸ್ಸುಗಳನ್ನು ಕೊಟ್ಟಿದೆಯೇ?
ಈ ಕುರಿತು ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವವರೆಗೂ ಎನ್ ಇಪಿ ರದ್ದುಗೊಳಿಸುವುದು ಕಷ್ಟ.
4. ಈಗ ಬಹುಶಿಸ್ತೀಯ ವ್ಯಾಸಂಗದ ಕುರಿತು ಅನಿವಾರ್ಯತೆ ಸೃಷ್ಟಿಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಹೆಜ್ಜೆಗಳನ್ನು ಇಡಬೇಕು.
5. ಮುಖ್ಯವಾಗಿ ಎನ್ ಇಪಿ ಅಡಿಯಲ್ಲಿ ಒಂದು ಬ್ಯಾಚ್ ಈಗಾಗಲೇ ಎರಡನೇ ವರ್ಷದ ನಾಲ್ಕನೇ ಸೆಮಿಸ್ಟರ್ ನಲ್ಲಿದ್ದಾರೆ. ಅವರ ಭವಿಷ್ಯವೇನು? ಅವರು ನಾಲ್ಕು ವರ್ಷ ಓದಬೇಕೆ? ಬೇಡವೇ?
ಈ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಬೇಕು. ಮತ್ತು ತೀರ್ಮಾನ ತಡವಾಗದಂತೆ ಎಚ್ಚರ ವಹಿಸಲು ಈ ಕೂಡಲೇ ಒಂದು ಸಮಿತಿಯನ್ನು ರಚಿಸಿ ಈ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದಂತೆ ಹದಿನೈದು ದಿನಗಳ ಯೋಜನೆಯ ನೀಲನಕ್ಷೆ ಕೊಡಲು ಸೂಚಿಸಬೇಕು.
6. ಕನಿಷ್ಠ ಒಂದು ಪಠ್ಯಕ್ರಮ ಚೌಕಟ್ಟಿನ ಅಗತ್ಯವಿದೆ. ಎನ್ ಸಿಎಫ್ 2023 ತಿರಸ್ಕರಿಸಿದರೆ ಕೂಡಲೆ ಸಮರೋಪಾದಿಯಲ್ಲಿ ಎಸ್ ಸಿಎಫ್ 2023 (ರಾಜ್ಯ ಪಠ್ಯ ಕ್ರಮ ಚೌಕಟ್ಟು) ರೂಪಿಸಿ ಪ್ರಕಟಿಸಿ ಜಾರಿಗೊಳಿಸಬೇಕು. ಅಲ್ಲಿಯವರೆಗೂ ಎನ್ ಸಿಎಫ್ 2023 (ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು) ಅನ್ವಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಅದು ಹೇಗೆ ಈಗ ವಿಸರ್ಜನೆಗೊಂಡಿರುವ ಎನ್ ಸಿಎಫ್ 2005ನ್ನು ಅನುಸರಿಸುತ್ತಾರೆ?
ನಾಳೆ ಕೇಂದ್ರ ಸರಕಾರ ತಾನು ವಿಸರ್ಜಸಿದ ಎನ್ ಸಿಎಫ್ 2005 ಅಡಿಯಲ್ಲಿ ರೂಪುಗೊಂಡ ಪಠ್ಯಪುಸ್ತಕಗಳಿಗೆ ಮಾನ್ಯತೆ ನೀಡದೇ ಹೋದರೆ?
ಮತ್ತೊಂದೆಡೆ ಕೇಂದ್ರ ಶಿಕ್ಷಣ ಇಲಾಖೆ ಮತ್ತು ಯುಜಿಸಿ ಎನ್ ಇಪಿ ಶಿಫಾರಸ್ಸಿನ ಅಡಿಯಲ್ಲಿ ದಿನನಿತ್ಯ ಹೊಸ ದಸ್ತಾವೇಜುಗಳನ್ನು, ಯೋಜನೆಗಳನ್ನು ಪ್ರಕಟಿಸುತ್ತಿದೆ. ಈಗ ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಏನು ಮಾಡಬೇಕು? ಅದನ್ನು ಅಳವಡಿಸಿಕೊಳ್ಳಬೇಕೇ? ಒಂದು ವೇಳೆ ಒಪ್ಪಿಕೊಂಡರೆ ಎನ್ ಇಪಿ ರದ್ದು ಮಾಡಲು ಸಾಧ್ಯವಿಲ್ಲ. ಹಾಗಿದ್ದರೆ ಬದಲಿ ಯೋಜನೆಗಳೇನು? ರಾಜ್ಯ ಸರಕಾರ ಯೋಚಿಸದಂತಿಲ್ಲ. ಇದು ಹೀಗೆ ಮುಂದುವರೆದರೆ ಶೈಕ್ಷಣಿಕ ಬಿಕ್ಕಟ್ಟು ಉಂಟಾಗುತ್ತದೆ.
7. ರಾಜ್ಯ ಶಿಕ್ಷಣ ನೀತಿ ರೂಪಿಸಲು
‘ರಾಜ್ಯ ಶಿಕ್ಷಣ ನೀತಿ ಆಯೋಗ’ ರಚಿಸಬೇಕು. ಇದಕ್ಕೆ ಶಾಸನಬದ್ಧ ಅಧಿಕಾರ ಕೊಡಬೇಕು.
ಮತ್ತು ಈ ಆಯೋಗವು 2024ರ ಮೇ ತಿಂಗಳ ಒಳಗೆ ತನ್ನ ವರದಿ ಮಂಡಿಸಬೇಕು.
ಇಷ್ಟೊಂದು ಜವಾಬ್ದಾರಿಗಳನ್ನು ಮುಂದಿಟ್ಟುಕೊಂಡು ಕೇವಲ ಬಾಯಿ ಮಾತಿನಲ್ಲಿ ಎನ್ ಇಪಿ ರದ್ದುಗೊಳಿಸಲು ಸಾಧ್ಯವೇ ಇಲ್ಲ.
ಈ ಕರೆಗಂಟೆ ಸರ್ಕಾರಕ್ಕೆ ಕೇಳಿಸುತ್ತಿದೆಯೇ?
– ಬಿ. ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು




