ಮನೆ ಬಿಟ್ಟು ಹೋಗುವ ಬಯಕೆ ಹರೆಯದ ಸಮಯದಲ್ಲಿ ಒಮ್ಮೆಯಾದರೂ ಬರಲೇ ಇಲ್ಲವೆಂದರೆ ಅವು ಎಕ್ಸೆಪ್ಷನಲ್ ಕೇಸುಗಳು.
ಬೆರಳನ್ನು ಹಿಡಿದುಕೊಂಡು ಓಡಾಡುವಾಗಲೇ, ಅದನ್ನು ಬಿಟ್ಟು ಅತ್ತಿತ್ತ ಓಡುವ ಹುಮ್ಮಸ್ಸು ಮಗುವಿಗೂ ಇರುತ್ತದೆ. ‘ಹೇಯ್, ಓಡಬೇಡ ಬಿದ್ದು ಬಿಡ್ತೀಯಾ’ ಅಂತ ಪೋಷಕರು ತಮ್ಮತ್ತ ಎಳೆದುಕೊಳ್ಳುತ್ತಿರುತ್ತಾರೆ. ನಂತರ ಶಾಲೆ, ನಂತರ ಮನೆ, ಮತ್ತೆಲ್ಲಿಗಾದರೂ ಅಂದ್ರೆ ಕಟ್ಟುನಿಟ್ಟಿನ ಅಪ್ಪಣೆ; ಹೀಗೆ ಕಳೆಯುವ ಶಾಲಾದಿನಗಳ ನಂತರ, ರೆಕ್ಕೆಪುಕ್ಕ ಬಲಿಯೋದು ಅಂತಂದ್ರೆ ಕಾಲೇಜಿಗೆ ಹೋದ ನಂತರ. ಅಲ್ಲೂ ಕಣ್ಗಾವಲಿನಲ್ಲಿರದಿದ್ದರೂ ಕಿವಿಗಾವಲಿನಲ್ಲಾದರೂ ತಮ್ಮ ಅಂಕೆಯಲ್ಲಿಟ್ಟುಕೊಳ್ಳುವ ಪೋಷಕರು.
ಹದಿಹರೆಯದವರಿಗೆ ತಮ್ಮದೇನೋ ಆಸೆ, ಧೋರಣೆ, ಕನಸುಗಳು. ಅವೆಲ್ಲಾ ಆಗೊಲ್ಲ. ಇದನ್ನು ಮಾಡಿದರೆ ಹೀಗೆ ಆಗತ್ತೆ. ಅದನ್ನು ಮಾಡಿದರೆ ಹಾಗೆ ಆಗತ್ತೆ ಅಂತ ಪೋಷಕರೂ ತಮಗೆ ತಿಳಿದಿರುವ ಉದಾಹರಣೆಗಳ ಚೌಕಟ್ಟಿಗೆ ಮಕ್ಕಳನ್ನು ಫಿಕ್ಸ್ ಮಾಡಲು ಯತ್ನಿಸುತ್ತಿರುತ್ತಾರೆ. ಅವರೊಂದು ವಿಷಯವನ್ನೇ ಮರೆತುಬಿಟ್ಟಿರುತ್ತಾರೆ. ತಾವು ಎತ್ತಿಕೊಂಡು, ಬೆರಳನ್ನು ಹಿಡಿದುಕೊಂಡು ಹೋಗುವ ಮಗುವಾಗಿಯೇ ಈ ನಮ್ಮ ಮಕ್ಕಳು ಉಳಿದಿಲ್ಲ. ತಮಗಿಂತ ಹೆಚ್ಚಿನ ಮಾಹಿತಿಯನ್ನು ಅವರು ಪಡೆದಿದ್ದಾರೆ. ಅವರು ನಮಗಿಂತ ಮುಂದುವರಿದಿರುವ ಪೀಳಿಗೆ! ಪೋಷಕರಿಗೆ ಈ ಸತ್ಯ ಅರ್ಥವಾದರೆ ಮಾತ್ರವೇ ತಮ್ಮ ಮಕ್ಕಳನ್ನು ಸದಾ ಅಧೀನದಲ್ಲಿಟ್ಟುಕೊಳ್ಳುವ ಚಾಳಿಯನ್ನು ಬಿಡಲು ಸಾಧ್ಯ.
ಮತ್ತೆ ಕೆಲವು ಪೋಷಕರೋ ಪಕ್ಕಾ ವ್ಯವಹಾರಸ್ಥರು. ಹೆತ್ತಿದ್ದೇವೆ, ಹೊತ್ತಿದ್ದೇವೆ, ಸಾಕಿದ್ದೇವೆ, ಸಲಹಿದ್ದೇವೆ, ಓದಿಸಿದ್ದೇವೆ, ಅದ್ಯಾವಾಗಲೋ ಜ್ವರ ಬಂದಾಗ ರಾತ್ರಿಯೆಲ್ಲಾ ಎದ್ದಿದ್ದೇವೆ, ಭುಜದ ಮೇಲೆ ಹಾಕಿಕೊಂಡು ಆಸ್ಪತ್ರೆ ಆಸ್ಪತ್ರೆಗೆ ಓಡಿದ್ದೇವೆ, ಆ ಮರಣಾಂತಕ ಖಾಯಿಲೆ ಬಂದಾಗ ನರ್ಸಿಂಗ್ ಹೋಂಗೆ ಅಷ್ಟೆಲ್ಲಾ ಸುರಿದಿದ್ದೇವೆ, ರಾತ್ರಿ ಹಗಲೂ ನೋಡಿಕೊಂಡಿದ್ದೇವೆ. (ವರದಕ್ಷಿಣೆ ತೆಗೆದುಕೊಳ್ಳುವಾಗಲೂ ಇಂತಹ ಮಾತುಗಳನ್ನು ವರನ ಮನೆಯವರ ಕಡೆಯಿಂದ ಕೇಳಿದ್ದೇನೆ. ಹುಡುಗಿಯ ಮನೆಯವರು ತಮ್ಮ ಬೆಳೆದ ಮಗಳನ್ನು ಯಾವುದೋ ಮರದಿಂದ ಪುಗಸಟ್ಟೆ ಬಿಡಿಸಿಕೊಂಡು ಬಂದಿರುವಂತೆ). ಅದಕ್ಕೆ ಅವರೂ ನಮ್ಮನ್ನು ನೋಡಿಕೊಳ್ಳಬೇಕು. ಹೇಳಿದ ಮಾತು ಕೇಳಬೇಕು. ಅವತ್ತಿನ ದಿನ ನಾವು ನೋಡಿಕೊಳ್ಳದೇ ಹೋಗಿದ್ದರೆ ಈಗ ನಮ್ಮ ಎದುರು ನೀನು ಇರುತ್ತಲೇ ಇರಲಿಲ್ಲ! ನಮ್ಮ ವೃದ್ಧಾಪ್ಯದಲ್ಲಿ ಅವರು ನಾವು ಮಲಗಿದಾಗ ಆರೈಕೆ ಮಾಡಬೇಕು, ಇತ್ಯಾದಿ.
ಇಂತಹ ಮಾತುಗಳು, ಗೊಣಗಾಟಗಳು, ಕನವರಿಕೆಗಳು ಸ್ವತಂತ್ರ ನಿಲುವನ್ನು ತೆಗೆದುಕೊಳ್ಳುವ ಯುವಕರಲ್ಲಿ ಸಂಬಂಧವನ್ನು ಸಡಿಲ ಮಾಡುವುದಲ್ಲದೇ ಗಟ್ಟಿಯಾಗಿಸುವುದಿಲ್ಲ. ಬದಲಿಗೆ ನಾವೇನು ನಿಮಗೆ ಕೇಳಿದ್ದೆವಾ ಅವೆಲ್ಲಾ ಮಾಡಕ್ಕೆ ಅಂತ ಪ್ರಶ್ನೆ ಹುಟ್ಟಿದರೂ ಆಶ್ಚರ್ಯವಿಲ್ಲ. ಒಂದು ವೇಳೆ ಅವರು ಹಾಗೆ ಕೇಳಿಬಿಟ್ಟರೆ ಒಂದು ಎಮೋಶನಲ್ ಸೀನ್ ಭರಿತ ಮೆಲೋಡ್ರಾಮ ಆರಂಭವಾಗಿಬಿಡುತ್ತದೆ.
ಹೀಗಾಗಿಯೇ ಎಷ್ಟೋ ಯುವ ಜನಕ್ಕೆ ಮನೆಯಲ್ಲಿ ತಮ್ಮಿಚ್ಚೆಯಂತೆ ಇರಲಾಗದು, ಅವರಿಚ್ಚೆಯಂತೆ ನಡೆದುಕೊಳ್ಳಲಾಗದು! ಆಗಲೇ ಆ ತುಡಿತ ‘ಮನೆ ಬಿಟ್ಟು ಹೋಗಿಬಿಡಬೇಕು’ ಅಂತ.
ಒಂದು ಜಗಳ, ಮನಸ್ತಾಪ, ಎದುರಾದರೂ ಮಾತಾಡಿರುವಂತಹ ಸಂದರ್ಭಗಳು ಇವುಗಳೆಲ್ಲಾ ಬಂದು ಒಂದು ದಿನ ಹೇಳದೇ ಕೇಳದೇ ಹೋಗಿಬಿಡುವುದೋ, ಅಥವಾ ತನ್ನ ಕನಸನ್ನು ನನಸನ್ನಾಗಿ ಮಾಡಿಕೊಳ್ಳುವ ಅವಕಾಶ ಸಿಕ್ಕಿತೆಂದು ರೋಫ್ ಹಾಕಿಯೇ ಹೋಗುವುದೋ, ಅಥವಾ ತನ್ನ ಸ್ನೇಹಿತರದ್ದೋ, ಹೊರಗಿನ ಹಿತೈಷಿಗಳದ್ದೋ ಬೆಂಬಲವೋ, ವಾಗ್ದಾನವೋ ಸಿಕ್ಕಿತೆಂದು ಹೊರಟು ಹೋಗುವುದೋ; ಎಂಥದ್ದೋ ಒಂದು ಆಗುತ್ತದೆ.
ತಾಯಿ ಮತ್ತು ಮಗಳ ಮಧ್ಯೆ, ತಂದೆ ಮತ್ತು ಮಗನ ಮಧ್ಯೆ, ಎಕ್ಸಪ್ಷನಲ್ ಕೇಸುಗಳಲ್ಲಿ ತಾಯಿ ಮಗ, ತಂದೆ ಮಗಳೂ ಇರಬಹುದು, ಒಟ್ಟಿನಲ್ಲಿ ಸಂಘರ್ಷದ ಫಲವಾಗಿ ಹೊರಬಿದ್ದು, ಅವರಿಗೆ ತಾನು ಏನು ಅಂತ ನಿರೂಪಿಸಬೇಕು ಎಂದು ಹಪಹಪಿಸುತ್ತಾ ಹೊರಗೆ ಬದುಕುತ್ತಾರೆ. ಇನ್ನೂ ಕೆಲವು ಯುವಜನ ತಮ್ಮ ಗುರಿ ಸಾಧನೆಯಾಗುವವರೆಗೂ ಮನೆಗೆ ಮರಳುವುದಿಲ್ಲ ಎಂಬ ಶಪಥವಂ ಕೂಡ ಗೈದಿರುತ್ತಾರೆ.
ಮನೆ ಬಿಟ್ಟ ಮೇಲೆ ಎರಡು ರೀತಿಯ ಪರಿಣಾಮಗಳಾಗಬಹುದು. ಒಂದು, ಪ್ರಾರಂಭದಲ್ಲಿ ಮನೆ ಬಿಟ್ಟು ಹೋಗುತ್ತಿರುವ ನೋವಿದ್ದು, ನಂತರ ತಾನು ನೆಲೆ ಕಂಡುಕೊಂಡು, ಸಕಾರಾತ್ಮಕವಾಗಿ ತಾನು ಅಂದುಕೊಂಡಂತೆ ಎಲ್ಲವೂ ನಡೆಯುತ್ತಿದ್ದರೆ, ಕ್ರಮೇಣ ಅಗಲಿಕೆಯ ನೋವನ್ನು ಮರೆತು ತಮ್ಮ ಸಾಧನೆಯ ಪಟ್ಟಿಯ ಸಮೇತ ಮನೆಗೆ ಆಗಾಗ ಬಂದು ಹೋಗುವುದು. ಇನ್ನೊಂದು, ಮನೆಯನ್ನು ಬಿಟ್ಟೆ, ನಾನು ಇನ್ನು ಸ್ವತಂತ್ರ ಮತ್ತು ಮುಕ್ತ ಎಂಬ ಸ್ವಚ್ಛಂದ ಭಾವನೆಯಿಂದ ಬೇಕು ಬೇಕಾದಂತೆ ವರ್ತಿಸಿ, ತನ್ನ ಕೆಲಸಗಳೇನೂ ಕೈಗೂಡದೇ, ಮನೆಯವರ ಬಳಿ ಯಾವ ಬಿಲ್ಡ್ ಅಪ್‌ನ್ನೂ ಕಟ್ಟಿಕೊಡಲಾಗದೇ, ನಿಧಾನವಾಗಿ ಏನೋ ಮಾಡಿಕೊಂಡು ಜೀವನವನ್ನು ಸವೆಸುವುದು, ಅಥವಾ ಸಂಧಾನಕಾರರ ಮೂಲಕ ಮನೆಯ ಜೊತೆಗೆ ಸಂಪರ್ಕ ಸಾಧಿಸುವುದು, ಇತ್ಯಾದಿ. ಆದರೆ ಮನೆ ಬಿಟ್ಟು ಹೋಗುವ ತುಡಿತದ ಯುವ ಜನತೆಯೊಂದಿಗೆ ಹಂಚಿಕೊಳ್ಳಲು ಕೆಲವು ವಿಷಯಗಳಿವೆ.
ಪೋಷಕರ ಬಗ್ಗೆ ನೈತಿಕವಾದಂತಹ ಮತ್ತು ಭಾವನಾತ್ಮಕವಾದಂತಹ ನೆಲೆಗಳನ್ನು ಸಮಾಜವೇ ನಿಮಗೆ ಕಟ್ಟಿಕೊಟ್ಟಿರುವುದರಿಂದ ನೀವು ವ್ಯಕ್ತಿಗತವಾದ ಯಾವುದೇ ನಿಲುವುಗಳನ್ನೂ ವ್ಯಕ್ತಪಡಿಸಲಾಗುವುದಿಲ್ಲ. ನನ್ನ ತಾಯಿ ಗಯ್ಯಾಳಿ, ಬಾಯಾಳಿ, ಆಕೆಯನ್ನು ಸೈರಿಸಿಕೊಳ್ಳುವುದೆಂದಿಗೂ ಆಗದು ಎಂದೋ, ನನ್ನ ತಂದೆ ಅನಗತ್ಯವಾದ ಹಟಮಾರಿ, ಸರ್ವಾಧಿಕಾರಿ ಆತನ ಧೋರಣೆಗಳನ್ನು ಎಂದಿಗೂ ಕ್ಷಮಿಸೆನು ಎಂದೋ ನೀವು ಯಾರೊಡನೆಯೇ ಹೇಳಿದರೂ, ಅವರಿಂದ ಬರುವ ಉತ್ತರ; “ಏನೇ ಆದರೂ ಅವರು ನಿನ್ನ ತಂದೆ ತಾಯಿಗಳು!” ಜೊತೆಗೆ ಹೆತ್ತಿದ್ದಾರೆ, ಹೊತ್ತಿದ್ದಾರೆ…. ಅವರ ಪಟ್ಟಿ ಮುಂದುವರಿಯುತ್ತದೆ.
ಇದೊಂದು ರಂಗ ಗೀತೆಯ ಸಾಲು ನೆನಪಿಗೆ ಬರುತ್ತದೆ. “ಮನೆಯನು ತೊರೆದು ಹೋಗುವೆ ಎಲ್ಲಿಗೆ ನಿನ್ನ ಮನವೇ ಮನೆಯಾಗಿರಲು, ಆ ಮನೆಯಲ್ಲೇ ಇರುವರು ಎಲ್ಲಾ, ಯಾರೂ ಬೇಡವೆಂದುಕೊಂಡಿರಲು, ಮನೆಯ ತೊರೆಯುವೆ ಮನವ ತೊರೆಯುವೆಯಾ, ಎಲ್ಲಿಗೇ ಹೋದರೂ ನೆನಪ ಅಳಿಸುವೆಯಾ?” ಹೌದು, ಹೊರಗೆ ಹೋದ ಮೇಲೂ ಕಾಡುವ ಅಪರಾಧ ಪ್ರಜ್ಞೆಯಲ್ಲಿ ಬದುಕಬೇಕು.
ಹಾಗಾದರೆ ಮಾಡುವುದಾದರೂ ಏನು? ನೋವೂ ಆಗಬಾರದು, ಬಾವೂ ಇರಬಾರದು. ಅದಕ್ಕೂ ಇದೆ ಮದ್ದು. ಮುಂದೆ ನೋಡೋಣ.
ಮನೆಗೆ ಮರಳಿ ಬಾರಾ ಮಗನೇ…
ಮನೆಯನ್ನು ಬಿಟ್ಟು ಬರುವ ಯುವಕ ಅಥವಾ ಯುವತಿಯರಲ್ಲಿ ನಾನಾ ವಿಧಗಳನ್ನು ಗುರುತಿಸಬಹುದು.
ತಮ್ಮ ಯಾವುದೋ ಒಂದು ಅತ್ಯಂತ ತುಡಿತದ ಕಾರ್ಯ ಸಾಧನೆಗೆ ಮನೆಯವರು ಸಮ್ಮತಿಸದೇ, ಬದಲಿಗೆ ಮತ್ತೊಂದನ್ನು ಮಾಡಲು ಒತ್ತಾಯಿಸುತ್ತಿದ್ದಾಗ, ಆ ಒತ್ತಡವನ್ನು ಸಹಿಸದೇ ಮನೆಯಿಂದ ಓಡಿಬಂದು ತಮ್ಮ ಆಯ್ಕೆಯ ಕ್ಷೇತ್ರದಲ್ಲಿ ದುಡಿಯುವುದು.
ಇಂತಹ ಸಂದರ್ಭಗಳಲ್ಲಿ ಉಂಟಾಗುವ ಘರ್ಷಣೆಗಳು ವ್ಯಕ್ತಿಗಳ ನಡುವಿನದಾಗಿರದೇ, ವಸ್ತು ಕಾರಣದ್ದಾಗಿರುತ್ತದೆ. ಇಲ್ಲಿ ವ್ಯಕ್ತಿ ನಿಂದನೆಗಳಿರುವುದಿಲ್ಲ ಅಥವಾ ಇರಕೂಡದು. ವ್ಯಕ್ತಿಗಳನ್ನು ನಿಂದಿಸುವವನು ಮತ್ತು ತನ್ನನ್ನು ಸರಿಯೆಂದು ಪ್ರದರ್ಶಿಸಿಕೊಳ್ಳುವಂತಹ ವ್ಯಕ್ತಿಯು ಸಾಮಾನ್ಯವಾಗಿ ವಸ್ತುನಿಷ್ಟತೆಯಿಂದ ದೂರವಾಗುತ್ತಾ ಸ್ವಪ್ರೇಮ ಮತ್ತು ಸ್ವಪ್ರತಿಷ್ಟೆಯ ಅಹಂಕಾರಕ್ಕೆ ಜಾರುವ ಎಲ್ಲಾ ಗುಣಲಕ್ಷಣಗಳಿರುತ್ತವೆ. ವಿಚಾರಗಳ ನಿರಾಕರಣೆಗಳೇ ಬೇರೆ, ವ್ಯಕ್ತಿಗಳ ಖಂಡನೆಗಳೇ ಬೇರೆ. ಈ ವ್ಯತ್ಯಾಸದ ಸೂಕ್ಷ್ಮತೆಯನ್ನು ಅರಿಯದ ಜನರಿಂದಾಗಿಯೇ ಅನಗತ್ಯವಾದ ವ್ಯಕ್ತಿ ಘರ್ಷಣೆಗಳು ಉಂಟಾಗುವುದು.
ಮನೆ ಬಿಟ್ಟು ಬರುವಾಗ ಉಂಟಾಗುವ ತಳಮಳಕ್ಕಿಂತ, ವ್ಯಕ್ತಿಗಳಿಂದ ದೂರಾಗುತ್ತಿದ್ದೇವೆ ಎಂಬುವ ಸಂಕಟಕ್ಕಿಂತ, ತಾವೇನನ್ನೋ ಸಾಧಿಸುತ್ತಿದ್ದೇವೆ ಎಂದು ಬರುವ ಯುವಕ ಅಥವಾ ಯುವತಿಯರ ಬಗ್ಗೆ ನನಗೆ ಸಾಕಷ್ಟು ಅನುಮಾನಗಳು ಮೂಡುತ್ತವೆ.
ಅಮ್ಮ, ಅಪ್ಪ, ಸಹೋದರ ಅಥವಾ ಸಹೋದರಿಯರು ಹುಟ್ಟಿದಾಗಿನಿಂದ ಜೊತೆಯಲ್ಲಿಯೇ ಇರುವವರು. ಹೊರಗಿನ ಯಾವುದೇ ವ್ಯಕ್ತಿಗಿಂತಲೂ ಹೆಚ್ಚು ತಿಳಿದುಕೊಳ್ಳಲು ಸಾಧ್ಯತೆಗಳು ಇರುವಂತವರು. ಅಂತಹ ತಿಳುವಳಿಕೆಯನ್ನು ಹೊಂದಿರ ಬಹುದಾದಂತಹ ವ್ಯಕ್ತಿಗಳ ಜೊತೆಗಿದ್ದೇ ತಮ್ಮದನ್ನು ಸಾಧಿಸಿಕೊಳ್ಳಲಾಗದಂತಹದ್ದು, ಹೊರಗೆ ಹೋಗಿ ಅಪರಿಚಿತರೊಡನೆ ಒಡನಾಡಿ, ಅವರನ್ನು ಅರ್ಥ ಮಾಡಿಕೊಂಡು, ಹೊಸ ಸಂಬಂಧವನ್ನು ಬೆಸೆದುಕೊಂಡು, ಅದನ್ನು ಆಪ್ತತೆಯಿಂದ ಆತ್ಮೀಯತೆಗೆ ತಂದುಕೊಂಡು ಎಂತಹ ಕಾರ್ಯ ಸಾಧನೆ ಮಾಡಿಕೊಳ್ಳಲು ಸಾಧ್ಯವೆಂದು ನನ್ನ ಯೋಚನೆ.
ಹಳೆಯ ಸಂಬಂಧಗಳನ್ನು ಸರಿಪಡಿಸಿಕೊಳ್ಳಲಾಗದವರು ಹೊಸ ಸಂಬಂಧಗಳನ್ನು ಎಂತು ಹುಟ್ಟುಹಾಕಿಕೊಳ್ಳುವುದು ನನ್ನ ಪ್ರಶ್ನೆ. ಯಾರೊಂದಿಗಾದರೂ ಮಾನುಷ ಸಹಜವಾದಂತಹ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಇದು ಮನೆಯವರೊಂದಿಗಾಗಲಿ, ಸ್ನೇಹಿತರೊಂದಿಗಾಗಲಿ, ಸಮಾನ ಮನಸ್ಕರೊಂದಿಗಾಗಲಿ, ಹೊರತಲ್ಲ. ಆದರೆ, ಪ್ರತಿ ಭಿನ್ನಾಭಿಪ್ರಾಯಗಳಿಂದಾಗಿ ವ್ಯಕ್ತಿಯನ್ನು ತ್ಯಜಿಸುತ್ತಾ ಹೋಗುತ್ತೇವೆಂದರೆ ಇಡೀ ಪ್ರಪಂಚದಲ್ಲಿ ನಮಗೆ ಹೊಂದುವವರು ಸಿಕ್ಕು ಅವರೊಡನೆ ಬಾಳ್ವೆಯೆಂಬುದು ಸಾಧ್ಯವೇ?
ಮನೆಯನ್ನು ಬಿಟ್ಟು ಬರುವವರಿಗೆ ಇಲ್ಲಿ ದೂಷಿಸುತ್ತಿದ್ದೇನೆಂದರೆ ಅದು ಖಂಡಿತ ತಪ್ಪು. ಆದರೆ, ಸಂದರ್ಭಾನುಸಾರವಾಗಿ, ತಮ್ಮ ಪ್ರತಿಕ್ರಿಯೆ ಅಥವಾ ಪ್ರತಿಭಟನೆಯ ಸಂಕೇತವಾಗಿ ಬಂದವರು ಮತ್ತೆ ಮನೆಗೆ ಮರಳದೇ ಹಟವನ್ನು ಸಾಧಿಸುವವರ ಬಗ್ಗೆ ನನ್ನ ಪ್ರಶ್ನೆ. ಇಲ್ಲಿ ಕಾರ್ಯ ಸಾಧನೆ ಮತ್ತು ಹಟ ಸಾಧನೆ ಈ ಎರಡರ ಮಧ್ಯೆ ಮಹತ್ತರವಾದಂತಹ ವ್ಯತ್ಯಾಸವಿದೆ.
ಕಾರ್ಯಸಾಧನೆಯಲ್ಲಿ, ತಾವು ನಂಬಿರುವಂತಹ ಕ್ಷೇತ್ರ ಅಥವಾ ತತ್ವ-ಸಿದ್ಧಾಂತದ ಬದ್ಧತೆಯು ಕಂಡುಬಂದರೆ, ಹಟಸಾಧನೆಯಲ್ಲಿ ಆಯಾ ವ್ಯಕ್ತಿಯ ಅಹಂಕಾರವಲ್ಲದೇ ಇನ್ನೇನೂ ಕಾಣುವುದಿಲ್ಲ. ಸ್ವಾಭಿಮಾನಕ್ಕೂ ಮತ್ತು ಅಹಂಕಾರಕ್ಕೂ ವ್ಯತ್ಯಾಸವನ್ನು ತಿಳಿಯದ ಯುವಜನ ತನ್ನ ಉದ್ದೇಶವನ್ನು ಸಾಧಿಸುವವರೆಗೂ ತಾನು ಮನೆಗೆ ಹೋಗುವುದಿಲ್ಲವೆಂದೋ, ತಂದೆ ತಾಯಿಗಳ ಮುಖವನ್ನು ನೋಡುವುದಿಲ್ಲವೆಂದೋ ಶಪಥವಂ ಗೈದಂತವರಾದರೆ ಅವರು ತಮ್ಮ ಪ್ರಾಮಾಣಿಕತೆಯಲ್ಲಿ ಮತ್ತು ವಸ್ತು ನಿಷ್ಟತೆಯಲ್ಲಿ ಎಡವಿದ್ದಾರೆಂದೇ ಅರ್ಥ.
ಹದಿ ಹರೆಯದವರಲ್ಲಿರುವ ಸಾಮರ್ಥ್ಯ ಮತ್ತು ಪುಟಿಯುವಂತಹ ಚೈತನ್ಯದ ಹರಿವಿನಿಂದಾಗಿ ಸ್ವಾಭಿಮಾನವು ಹುಟ್ಟುವುದಾದರೂ ಹಿರಿಯರಿಗಿರುವ ಸ್ವಪ್ರತಿಷ್ಟೆಯಂತೆಯೇ ಆಗಿ ಬಿಟ್ಟರೆ ಪರಸ್ಪರ ಅಹಂಕಾರದ ಮೇಲಾಟಗಳಾಗಿ ಪರಿಣಮಿಸುತ್ತದೆಯೇ ಹೊರತು ಇನ್ನೇನೂ ಆಗುವುದಿಲ್ಲ.
ಕಾಲೇಜಿಗೆ ಹೋಗಿ, ಬಾರಿಗೆ ಹೋಗಿ; ಯುವ ಜನರು ಮಾತಾಡುವ ಭಾಷೆಯನ್ನು ಗಮನಿಸಿ. ತನ್ನನ್ನು ಮೀರಿದರೆ ಇನ್ನಾರೂ ಇಲ್ಲವೆಂಬಂತಹ ಹುಂಬತನದ ಮಾತುಗಳೇ. ಚಿಟಿಕೆ ಹೊಡೆಯುತ್ತಾ ಮಾತಾಡುವ ಯುವಕರು, ಕಣ್ಣಲ್ಲಿ ಕಣ್ಣಿಟ್ಟು ನೋಡುವಂತಹ ತನ್ನಂತದ್ದೇ ಇನ್ನೊಂದು ವ್ಯಕ್ತಿಗೆ ಏನು ಗುರಾಯಿಸುತ್ತೀಯಾ ಎಂದು ಮೇಲೇರಿ ಹೋಗುವ ಯುವಕರು, ರಸ್ತೆಯಲ್ಲಿ ಗಾಡಿಯ ಮೇಲೆ ಹೋಗುತ್ತಿದ್ದಾಗ, ತನ್ನ ಗಾಡಿಗೆ ಅಗತ್ಯಕ್ಕಿಂತ ಹೆಚ್ಚಾದ ವೇಗದಲ್ಲಿ ಅಥವಾ ಗತಿಯಲ್ಲಿ ಸೈಡ್ ಹೊಡೆಯುವ ಇನ್ನೊಬ್ಬ ಗಾಡಿವಾಲನ ಮೇಲೆ ಜಗಳಕ್ಕೆ ಹೋಗುವ ಹುಡುಗರು; ತಮ್ಮಲ್ಲಿರುವ ಅಹಂಕಾರವನ್ನು ಮತ್ತು ಅತೃಪ್ತ ಭಾವನಾತ್ಮಕ ಸಂಬಂಧಗಳನ್ನು ತೋಡಿಕೊಳ್ಳುವ ರೀತಿಗಳೆಂದೇ ತೋರುತ್ತದೆ.
ಮಾತಿಗೆ ಮುಂಚೆ, ತಮಗೆ ಅಸಹನೆಯುಂಟಾದಾಗೆಲ್ಲಾ ಸೊಂಟದ ಕೆಳಗಿನ ಮಾತುಗಳನ್ನು ಆಡುವ ಯುವಜನರಲ್ಲಿ ಅಥವಾ ಯಾರಲ್ಲೇ ಆಗಲಿ ಸಂಸ್ಕೃತಿಯ ಬಗ್ಗೆಯೋ, ಶೀಲ ಮತ್ತು ನೈತಿಕತೆಯ ಬಗ್ಗೆಯೋ ಅರಿವಿಲ್ಲವೆಂದು ತಿಳಿದಿರುವಿರಾ? ವಾಸ್ತವವಾಗಿ ಅವರೇ ಅದರ ಬಗ್ಗೆ ಹೆಚ್ಚು ಮಾತಾಡುವವರು. ಆದರೆ ತಮಗೇ ತಿಳಿಯದಂತೆ, ಸಹಜ ಸ್ವಾಭಾವಿಕವೆಂಬಂತೆ ಅವರ ಮಾತುಗಳಲ್ಲಿ ಆಗ್ರಹಪೂರ್ವಕವಾದಂತಹ ಲೈಂಗಿಕ ಚಟುವಟಿಕೆಗಳು ಮಾತಿನ ರೂಪದಲ್ಲಿ ಬರುತ್ತಿರುವುದು ಅವರ ಸುಪ್ತದಲ್ಲಿ ಅತೃಪ್ತವಾದಂತಹ ಭಾವನಾತ್ಮಕವಾದ ಸಂಬಂಧಗಳೇ.
ಹಾಗೆಯೇ ಮನೆಯನ್ನು ಬಿಟ್ಟು ಹೋಗುವಾಗಲೂ ತಮ್ಮ ಸುಪ್ತವಾದ ಅಹಂಕಾರದಿಂದಾಗಿ ಅದಕ್ಕೆ ಸ್ವಾಭಿಮಾನದ ಲೇಪವನ್ನು ಹಚ್ಚಿ, ಕಾರ್ಯ ಸಾಧನೆಯ ಫಲಕವನ್ನು ಮುಂದಿಟ್ಟುಕೊಂಡು ಸಂಬಂಧಗಳನ್ನು ತೊರೆಯುತ್ತಾರೆ. ಅಲ್ಲಿರುವ ಇನ್ನೊಂದು ಸುಪ್ತವಾದ ವಿಚಾರವೆಂದರೆ, ಇದು ಡಿವೊರ್ಸ್ ಅಲ್ಲ ಎಂಬುದು ಕೂಡ. ಗಂಡ ಹೆಂಡರ ಸಂಬಂಧದಷ್ಟು ಸಡಿಲವಾದಂತಹ ಸಂಬಂಧವು ಹೆತ್ತವರೊಂದಿಗೆ ಮತ್ತು ಸಹೋದರೊಂದಿಗೆ ಇಲ್ಲವಾದ್ದರಿಂದ, ಕ್ರಮಬದ್ಧವಾಗಿ ಕಡಿದುಕೊಳ್ಳುವಂತಹ ಸ್ಥಿತಿಯಿಲ್ಲದಿರುವುದರಿಂದ, ಮತ್ತೆ ಎಂದಾದರೂ ಹೊಂದಿಕೊಳ್ಳಬಹುದೆಂಬ ಆಶಾಭಾವನೆಯಿಂದಲೂ ಕೂಡ ಸಂಬಂಧಗಳಿಗೆ ಬೆನ್ನು ತೋರಿಸುವ ಸಾಧ್ಯತೆಗಳಿರುತ್ತವೆ.
“ಆಡಿದ್ದು ಸಾಕು, ಓಡಾಡಿದ್ದು ಸಾಕು, ಅಲ್ಲಿಲ್ಲಿ ಅಲೆದಾಡಿದ್ದು ಸಾಕು, ನೆಮ್ಮದಿಗೆಂದಿಗೂ ಮನೆಯೇ ಆಗಬೇಕು, ಬಾರೋ ಮನೆಗೆ ಮಗನೇ” ಎಂದು ಹಲವಾರು ಪೋಷಕರು ನೇರವಾಗಿ ಹೇಳದೇ ಇದ್ದರೂ ಟ್ರಾನ್ಸಿಸ್ಟರಿಂದ ಬೇಕಾದ ರೇಡಿಯೋ ಸ್ಟೇಷನ್ನನ್ನು ಟ್ಯೂನ್ ಮಾಡಿಕೊಳ್ಳುವಂತೆ ಪೋಷಕರ ಮನಸ್ಥಿತಿಗೆ ಟ್ಯೂನ್ ಮಾಡಿಕೊಂಡರೆ ಈ ಹಾಡು ಕೇಳುತ್ತಿರುತ್ತದೆ. “ರೊಕ್ಕ ಕೊಟ್ಟು ರೊಟ್ಟಿ ತಿಂದು ಎಷ್ಟು ಗಟ್ಟಿಯಾಗುವೆ, ಅಮ್ಮನ ಅಕ್ಕರೆಯ ಅನ್ನದಲ್ಲಿ ಬಲವಿದೆ, ಮಂದಿ ಕೈ ತಾಳಕ್ಕೆ ಕುಣಿದರೆ ಬಂಧಿಯಾಗುವೆ, ನಿನ್ನ ಹಾಡಿಗೆ ತಾಳ ಹಾಕೋ ಅಮ್ಮನಲ್ಲಿ ಒಲವಿದೆ, ಬಾರೋ ಮನೆಗೆ ಮಗನೇ” ಎಂದು ಹಾಡುತ್ತಿರುತ್ತಾಳೆ.
ಒಟ್ಟಾರೆ ಹೇಳುವುದಿಷ್ಟೇ, ಸಂಬಂಧಗಳಿಗೆ ಬೆನ್ನು ತಿರುಗಿಸಿ ಯಾವುದೇ ಕಾರಣಕ್ಕೆ ಹೋದರೂ, ಆ ಸಂಬಂಧದ ಎಳೆ ಭಾವನಾತ್ಮಕವಾಗಿಯಷ್ಟೇ ತಂತುಗಳಲ್ಲಿ ಉಳಿದಿರುವುದು. ಜೈವಿಕವಾದಂತಹ ಸಂಬಂಧಗಳು ಪ್ರಕೃತಿಯಲ್ಲಿ ಸಹಜವೇ. ಆದರೆ ಅದನ್ನು ಉಳಿಸಿಕೊಳ್ಳುವುದಾಗಲಿ, ಬೆಳೆಸಿಕೊಳ್ಳುವುದಾಗಲಿ ಇರುವುದು ಒಬ್ಬೊಬ್ಬ ವ್ಯಕ್ತಿಯೂ ಹೊಂದಿರುವಂತಹ ಭಾವನಾತ್ಮಕವಾದ ನೆಲೆಗಳಿಂದ.
ಬ್ಲಡ್ ಈಸ್ ಥಿಕ್ಕರ್ ದ್ಯಾನ್ ವಾಟರ್ ಎಂಬುದು ಸಂಬಂಧಗಳ ವಿಷಯದಲ್ಲಿ ಶುದ್ಧಾಂಗ ಸುಳ್ಳು. ತಮ್ಮ ರಕ್ತ ಸಂಬಂಧಿಗಳಿಗಿಂತ ತಮ್ಮ ಸ್ನೇಹಿತರನ್ನು, ಗುರುಗಳನ್ನೋ, ಶಿಷ್ಯರನ್ನೋ ಹಚ್ಚಿಕೊಂಡಿರುವಂತಹ, ಆತುಕೊಂಡಿರುವಂತಹ ವ್ಯಕ್ತಿಗಳನ್ನು ಗಮನಿಸಿ.
ಮನೆಗೆ ಮರಳಿ, ಸ್ವಾಭಿಮಾನಕ್ಕೂ ಮತ್ತು ಅಹಂಕಾರಕ್ಕೂ ಇರುವಂತಹ ವ್ಯತ್ಯಾಸವನ್ನು ಗುರುತಿಸಿ. ಅಹಂಕಾರವನ್ನು ಸ್ವಾಭಿಮಾನದಿಂದ ಸಮರ್ಥಿಸಿಕೊಳ್ಳುವುದರಿಂದ ಜೈವಿಕ ಸಂಬಂಧವನ್ನು ನಿರಾಕರಿಸಲಿಕ್ಕೆ ಸಾಧ್ಯವಿದೆ. ಆದರೆ ನೀವು ಭಾವನಾಶೂನ್ಯರು ಎಂದು ಖಂಡಿತ ಸಾಬೀತಾಗುತ್ತದೆ. ಅವರನ್ನು ಒಪ್ಪದವನು, ಅವರೊಂದಿಗೇ ಹೊಂದದವನು ನೀನು ನನ್ನನ್ನೇನು ಹೊಂದುತ್ತೀಯೇ? ನನ್ನನ್ನೇನು ಒಪ್ಪುತ್ತೀಯೇ? ನಾನೂ ಕೂಡ ಅವರಂತೆ ಮನುಷ್ಯನೇ. ಅವರಲ್ಲಿರುವಂತಹ ಕಪ್ಪು ಬಿಳುಪುಗಳು, ಉಬ್ಬರವಿಳಿತಗಳು, ಮಾನುಷ ಸಹಜವಾದಂತಹ ಎಲ್ಲಾ ಗುಣಧರ್ಮಗಳೂ ನನ್ನಲ್ಲಿವೆ. ಅಲ್ಲವೇ!!
– ಯೋಗೇಶ್ ಮಾಸ್ಟರ್, ರಂಗಕರ್ಮಿ




