“ನಾನು ಚಿತ್ರರಂಗವನ್ನೇ ನಂಬಿಕೊಂಡು ಬೇರೇನೂ ಕೆಲಸಕ್ಕೆ ಹೋಗದೇ ಬಂದುಬಿಟ್ಟಿದ್ದೇನೆ. ಅವಕಾಶಗಳು ಸಿಗುತ್ತಿಲ್ಲ. ಸಿಕ್ಕ ಕಡೆಗಳಲ್ಲಿ ನನ್ನ ಪ್ರತಿಭೆಯನ್ನು ಬಳಸಿಕೊಳ್ಳುತ್ತಿಲ್ಲ. ನನಗಿಂತ ಕಡಿಮೆ ಪ್ರತಿಭಾವಂತರು ನನ್ನ ಅವಮಾನ ಮಾಡುತ್ತಾರೆ. ನನಗಿರುವ ಟ್ಯಾಲೆಂಟು, ನಾಲೆಡ್ಜು, ಟೆಕ್ನಿಕ್ಕು ಅವನಿಗೆ ಏನೂ ಗೊತ್ತಿಲ್ಲ. ಆದರೆ ನನ್ನ ನಾಯಿಗಿಂತ ಕೀಳಾಗಿ ನೋಡ್ಕೋತ್ತಾನೆ. ನಮ್ಮ ಡೈರೆಕ್ಟರ್‌ಗೆ ವಿಪರೀತ ಅಹಂಕಾರ. ಈಗ ಹಿಂದಿರುಗಿ ಹೋಗುವಂತಿಲ್ಲ. ಮನೆಯಲ್ಲಿ ಛಾಲೆಂಜ್ ಮಾಡಿ ಬಂದುಬಿಟ್ಟಿದ್ದೇನೆ. ಮಾಡಿದ ಕೆಲಸವನ್ನು ಒಪ್ಪುವವರಿಲ್ಲ. ಕರೆದು ಕೆಲಸ ಕೊಡುವಷ್ಟು ಬೆಳೆದಿಲ್ಲ. ಕೈಯಲ್ಲಿ ಕಾಸಿಲ್ಲ. ಏನು ಮಾಡುವುದೆಂದು ತಿಳಿಯುತ್ತಿಲ್ಲ!”
ಚಲನಚಿತ್ರರಂಗದಲ್ಲಿ ಉದ್ಯೋಗ, ಪ್ರತಿಭಾ ಪ್ರದರ್ಶನದ ಅವಕಾಶ, ಹಣ, ಜನಪ್ರಿಯತೆ, ತಾನು ಏನು ಅಂತ ನಿರೂಪಿಸಲು ಒಂದು ಮಾಧ್ಯಮ ಇತ್ಯಾದಿಗಳನ್ನು ಅರಸುತ್ತಾ ಇಪ್ಪತ್ತರ ಆಸುಪಾಸಿನಲ್ಲಿರುವ ಅನೇಕರು ಮುಲುಗುಟ್ಟುವ ಮಾತುಗಳಿವು.
ಹಾಗೆ ಬಂದವರೆಲ್ಲಾ ಉಚ್ಚರಿಸುವ ಒಂದೇ ಘೋಷವಾಕ್ಯ “ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬುದು ನನ್ನ ಗುರಿ” ಎಂಬುದು.
ಆತನೊಬ್ಬ ನನ್ನ ಫೇಸ್‌ಬುಕ್ ಗೆಳೆಯ. ವಯಸ್ಸಿನಲ್ಲಿ ಅತಿ ಕಿರಿಯ. ಅವನಿಗೆ ತನ್ನ ಪ್ರತಿಭೆಯನ್ನು ಕಡೆಗಣಿಸುತ್ತಾರೆಂದು ಮನೆಯವರ ಮೇಲೆ ಕಿಚ್ಚು. ಸಿನಿಮಾದಲ್ಲಿ ಏನಾದರೂ ಸಾಧಿಸಲೇ ಬೇಕೆಂಬ ಕೆಚ್ಚು. ಅದಕ್ಕೆ ಹುಚ್ಚು ಹಿಡಿದವನಂತೆ ಆಡುತ್ತಾ ಮನೆಯನ್ನು ಬಿಟ್ಟು ಹೊರಟೇ ಬಿಟ್ಟ. ತನ್ನ ಸಾಮಾನು ಸರಂಜಾಮುಗಳನ್ನು ಮೂಟೆಗಟ್ಟಿ ಮನೆಯವರೊಂದಿಗೆ ಸಾರಿದ ಯುದ್ಧವನ್ನೂ, ತಾನು ಸಾಧಿಸ ಹೊರಟಿರುವ ಘನಂದಾರಿ ಪರಿಯನ್ನೂ ಘೋಷಿಸುವ ಫೋಟೋ ಕೂಡ ಮುಖ ಪುಸ್ತಕದಲ್ಲಿ ಪ್ರಕಟವಾಗಿ ಅನೇಕರು ಲೈಕ್ ಒತ್ತಿ ಅವನಿಗೆ ಆಲ್ ದ ಬೆಸ್ಟ್ ಹೇಳಿ ಕಾಮೆಂಟ್ ಕೂಡ ಹಾಕಿದ್ದರು.
“ಮಗಾ, ಮನೆಯವರೊಂದಿಗೆ ಮನಸ್ತಾಪ ಬರುವುದು ಸಹಜ. ಅದಕ್ಕೆ ಟ್ರಯಲ್ ಬೇಸಿಸ್‌ನಲ್ಲಿ ಸುಮ್ಮನೆ ಯಾವ ಘೋಷಣೆಗಳೂ ಇಲ್ಲದೇ ಹೊಸ ಕಾರ್ಯಕ್ಷೇತ್ರಕ್ಕೆ ಕಾಲಿಡು. ಅಲ್ಲಿ ಆಗುವ ಅನುಭವಗಳನ್ನು ಗಮನಿಸಿಕೋ. ಆಮೇಲೆ ನಿನ್ನ ನಿರ್ಧಾರ ತಿಳಿಸು” ಅಂತ ಹೇಳಿದರೆ, “ನಾನು ಇಷ್ಟೂ ದಿನ ಅದೇ ರೀತಿಯಲ್ಲಿ ಇದ್ದೆ. ಆದರೆ ಈಗ ನಾನು ಬೆಳೆದಿದ್ದೇನೆ. ನನ್ನ ನಿರ್ಧಾರವನ್ನು ತೆಗೆದುಕೊಳ್ಳುವಷ್ಟು ಸಮರ್ಥನಾಗಿದ್ದೇನೆ. ಈಗ ನಾನು ನನ್ನ ಕೆಲಸ ಸಾಧಿಸಿಕೊಳ್ಳುವವರೆಗೂ ಮನೆಗೆ ಹೋಗುವುದಿಲ್ಲ. ಚಿತ್ರರಂಗದಲ್ಲಿ ನನ್ನ ಪ್ರತಿಭೆ ಮತ್ತು ಸಾಮರ್ಥ್ಯವನ್ನು ನಿರೂಪಿಸಿ, ಅವರಾಗೇ ನನ್ನ ಬಳಿ ಬಂದರೆ ಹೋಗುವುದು. ಇಲ್ಲದಿದ್ದರೆ ಇಲ್ಲ” ಎಂದು ಸಿನಿಮಾ ಸಾಹಿತ್ಯ ಬರೆಯುವವರ ಹತ್ತಿರ ಬಂದಿಳಿದ. ಆ ಸಾಹಿತಿಗೆ ಸಿಗರೇಟು, ಟೀ ಮತ್ತು ರಾತ್ರಿ ಎಣ್ಣೆ ಸರಬರಾಜು ಮಾಡುತ್ತಲೇ ಒಂದು ದಿನ ನಾನಾ ಕಾರಣಗಳಿಂದ ಮನೆಗೆ ಮರಳಿದ.
“ಯಾಕೋ ಮನೆಗೆ ಹೋದೆ” ಅಂತ ಕೇಳಿದರೆ, ನನ್ನ ಅಕ್ಕ, ಭಾವ ಬೇಜಾರು ಮಾಡ್ಕೊಂಡರು, ನನ್ನ ಅಮ್ಮ ಉಪವಾಸ ಮಾಡ್ತಿದ್ದರು. ಅದಕ್ಕೆ ಹೊರಟು ಹೋದೆ. ನಮ್ಮಪ್ಪ ಕರೆದಿದ್ದರೆ ನಾನು ಖಂಡಿತ ಹೋಗುತ್ತಿರಲಿಲ್ಲ.
ಈ ಹುಡುಗರು ಯಾಕೆ ಹೀಗೆ ಮಾಡುತ್ತಾರೆ ಎಂದರೆ, ಅವರಿಗೆ ಅವರ ಗುರಿ ನಿಚ್ಚಳವಾಗಿದೆ. ಆಸೆ ಢಾಳಾಗಿದೆ ನಿಜ. ಆದರೆ ದಾರಿಯೆಂಬುದನ್ನು ಸ್ಪಷ್ಟಗೊಳಿಸಿಕೊಂಡಿರದೇ ಅವರ ಹಿನ್ನಡೆಗೆ ಕಾರಣ.
ಗುರಿ ಎಂಬುದು ಒಂದು ಘನವಾದ ವಸ್ತುಸ್ಥಳವಲ್ಲ. ಅಡ್ರೆಸ್ ಹಿಡಿಕುಕೊಂಡು ಹೋಗಿ ತಲುಪಿಬಿಡಲು. ಗುರಿ ಎಂಬುದು ದೃಷ್ಟಿಯಷ್ಟೇ.
ಬೀಜದಲ್ಲಿ ವೃಕ್ಷವಾಗುವ ಗುರಿಯಿದೆ. ಆದರೆ ವೃಕ್ಷವೆಂದರೆ ಇಂತಿಷ್ಟು ಎತ್ತರ, ಇಂತಿಷ್ಟು ಗಾತ್ರ, ಇಂತಿಷ್ಟು ಎಲೆಗಳು ಎಂಬ ಅಳತೆಗಳಲಿಲ್ಲ. ಬೀಜ ಮೊಳೆಯುವ ಮೊದಲ ಹಂತದಲ್ಲಿ ಒಂದು ಗುರಿ ಮುಟ್ಟಿರುತ್ತದೆ. ಬೆಳೆಯುವ ಸಸಿಯಲ್ಲಿ ಗುರಿಯೂ ಬೆಳೆಯುತ್ತಿರುತ್ತದೆ. ಬೀಜಕ್ಕಾಗಲಿ, ಸಸಿಗಾಗಲಿ ತಾನೊಂದು ದಿನ ವೃಕ್ಷವಾಗಿದ್ದೇನೆಂಬ ಅರಿವೂ ಇರುವುದಿಲ್ಲ. ಗುರಿಯನ್ನು ಸಾಧಿಸಿದ್ದೇನೆಂಬ ಅಮಲೂ ಇರುವುದಿಲ್ಲ. ಬೀಜವು ಮರವಾಗುವ ಪ್ರಕ್ರಿಯೆಯು ಒಂದು ಅತ್ಯಂತ ಸ್ವಾಭಾವಿಕವಾಗಿಯೂ ಮತ್ತು ಪ್ರಾಕೃತಿಕವಾಗಿಯೂ ಇರುತ್ತದೆ. ಬೀಜಕ್ಕೆ ಮರವಾಗುವ ಗುರಿಯಿದೆ ಎಂದು ಮಾನವ ಸಹಜ ಭಾಷೆಯಲ್ಲಿ ಕಲ್ಪನೆಯನ್ನು ಕಟ್ಟಿಕೊಡಬಹುದಷ್ಟೇ.
ಇಲ್ಲೂ ಅಷ್ಟೇ. ನನ್ನ ಗುರಿ ಸಿನಿಮಾ ಡೈರೆಕ್ಟರ್ ಆಗುವುದು ಎಂದು ಅದೆಷ್ಟೋ ಜನ ಹಪಹಪಿಸುವುದನ್ನು ನೋಡಿದ್ದೇನೆ. ಅದಕ್ಕೆ ತಮ್ಮ ಊರನ್ನು, ಮಾಡಬೇಕಾದ ಕೆಲಸವನ್ನು, ತೀರಿಸಬೇಕಾದ ಋಣವನ್ನು ಬಿಟ್ಟು ಗಾಂಧಿನಗರದ ಗರಡಿಯಾಳುಗಳ ಬೆಂಬತ್ತುತ್ತಾರೆ. ಅಲ್ಲಿ ಪ್ರತಿಯೊಬ್ಬರ ಸಂಪರ್ಕದಲ್ಲೂ ತಮಗೊಂದು ಅವಕಾಶ ಸಿಕ್ಕಿಬಿಡುತ್ತದೆ ಎಂಬ ಧಾವಂತದಲ್ಲಿ ತಮ್ಮತನವನ್ನು ಸಂಪೂರ್ಣ ಬದಿಗೊತ್ತಿ, ಬಲವಂತವಾಗಿ ತಮ್ಮನ್ನು ಅವರುಗಳ ಬಳಿ ತಳ್ಳಿಕೊಂಡು, ಒತ್ತಾಯ ಪೂರ್ವಕವಾಗಿ ಕೆಲಸ ಮಾಡುತ್ತಿರುತ್ತಾರೆ.
“ಸರ್ ನನ್ನ ಬಳಿ ಒಂದು ಕಥೆಯಿದೆ. ಅದನ್ನು ಸಿನಿಮಾ ಮಾಡಬೇಕೆಂದು ಪ್ರೊಡ್ಯೂಸರ್‌ಗೊಸ್ಕರ ಹುಡುಕುತ್ತಿದ್ದೇನೆ” ಎನ್ನುತ್ತಾರೆ.
ತಲೆಯಲ್ಲಿಯೇ, ಡೈರಿಯ ಪುಟಗಳಲ್ಲಿ ಅಥವಾ ಕಾಗದದ ಚೂರುಗಳಲ್ಲಿ ತಮಗೆ ತೋಚಿದಂತೆ ಬರೆದಿಟ್ಟುಕೊಂಡಿರುವ ಆ ಹುಡುಗರಿಗೆ ನಾನು ಯಾವಾಗಲೂ ಹೇಳುವುದು ಕಥೆಯನ್ನು ಕಥಾ ರೂಪದಲ್ಲಿಯೇ ಕಾಗದದ ಮೇಲೆ ಇಳಿಸಿ. ಅದನ್ನು ವಿವಿಧ ಕಾಲಾಂತರಗಳಲ್ಲಿ ನೀವೇ ಪದೇ ಪದೇ ಓದಿ. ಅದಕ್ಕೆ ಅಗತ್ಯವಿರುವ ಮಾರ್ಪಾಡುಗಳು ನಿಮ್ಮಿಂದಲೇ ಆಗುತ್ತಿರುತ್ತವೆ. ಏಕೆಂದರೆ ‘ಹೊಸಹೊಸಬನಾಗುವನು ಅನುಕ್ಷಣಂ ಮಾನವನು, ವಸುಧೆಯಾ ಮೂಸೆಯಲಿ ಪುಟಪಾಕವಾಂತು.’ ಅದು ಇನ್ನು ಮಾರ್ಪಾಡಿಗೆ ಒಳಗಾಗದಷ್ಟು ಪೂರ್ಣ ಪ್ರಬುದ್ಧವಾಗಿ ನಿಂತ ಮೇಲೆ ಅದನ್ನು ಜಗತ್ತಿಗೆ ಅರ್ಪಿಸಿ. ಸಮಾಜದ ಇತರ ಜನರೊಂದಿಗೆ ಹಂಚಿಕೊಳ್ಳಿ. ಅದು ಲೋಕಾರ್ಪಣೆಯಾದ ಮೇಲೆ ಅದು ಮುಂದೆ ಏನಾಗಬೇಕೋ ಅದಾಗುತ್ತದೆ.
ಇಂತಿಷ್ಟು ಗೌರವ, ಇಂತಿಷ್ಟು ಸಂಭಾವನೆ, ಇಂತಿಷ್ಟು ಮತ್ತಿಷ್ಟಿನ್ನೇನೋ ಅಲ್ಲ ನಿಮ್ಮ ಗುರಿ. ಅದು ಆಸೆಯ ಅಥವಾ ದುರಾಸೆಯ ಲೆಕ್ಕಾಚಾರ. ತಾನೆಷ್ಟು ಎತ್ತರದಲ್ಲಿದ್ದೇನೆ ಎಂದು ಡಾಂಭಿಕತನದಿಂದ ತನ್ನ ಜೊತೆಯವರನ್ನು ತನಗಿಂತ ಕಡಿಮೆ ಎಂದು ತೋರಿಸಿಕೊಡುವ ಮನಸ್ಥಿತಿ. ತಮ್ಮೊಳಗಿನ ತಮಗೇ ಅರಿವಿಲ್ಲದಂತಹ ಪ್ರತಿಭೆಯನ್ನು ಹಂತ ಹಂತವಾಗಿ ಅನಾವರಣ ಮಾಡುತ್ತಾ ಹೋಗುವ ದಾರಿಯಲ್ಲಿನ ಪ್ರತಿ ನಡೆಯಲ್ಲೂ ಅದರದೇ ಗುರಿಯಿದೆ. ಅಂತಿಮ ಗುರಿಯೆಂಬುದನ್ನು ಸಾಧಿಸುವುದಲ್ಲ. ಪೂರ್ಣ ಪ್ರಮಾಣದಲ್ಲಿ ವಿಕಸಿತವಾಗುವುದು.
ಹಾಗಾದರೆ ನಾವು ಕನಸು ಕಾಣುವುದು ಬೇಡವೇ?
ಕನಸೆಂಬುದು ಕತ್ತಲಲ್ಲಿ ತೋರುವ 70 ಎಂಎಂ ಸಿನಿಮಾ ಅಲ್ಲವೆಂಬುದು ಈ ಲೇಖನದ ಉದ್ದೇಶ. ಕನಸು ಎಂಬುದು ಕತ್ತಲೆಯ ಪರದೆಯ ಮೇಲೆ ಮೂಡುವ ಕಲ್ಪನೆಯ ಬಿಂಬಗಳಲ್ಲ. ಬದುಕಿನ ಪ್ರತಿಹೆಜ್ಜೆಯಲ್ಲಿಯೂ ನನಸಿನ ಗುರಿಯಿದೆ. ಏಕೆಂದರೆ ದಾರಿಗಳಲ್ಲಿ ನೀವು ಹಾಯುವುದು ಕನಸುಗಳನ್ನಲ್ಲ. ಹಾಯಬೇಕಾಗಿರುವುದು ನನಸುಗಳನ್ನು. ‘ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು, ದೊರೆತುದ ಹಸಾದವೆಂದುಣ್ಣು ಗೊಣಗಿಡದೆ’ ಎಂದರ್ಥ ಮಾಡಿಕೊಳ್ಳುವ ಮಂಕುತಿಮ್ಮರು ಅಳತೆಗಳ ಗುರಿಗಳನ್ನು ಕಣ್ತುಂಬಿಸಿಕೊಳ್ಳದೇ, ದಾರಿಗಳಲ್ಲಿ ಒಂದೊಂದೂ ಹೆಜ್ಜೆಗಳನ್ನು ಪೂರ್ಣಪ್ರಮಾಣದಲ್ಲಿಡುವವರು ನಿತ್ಯವೂ ಗುರಿಸಾಧಕರೇ ಆಗಿರುತ್ತಾರೆ.
– ಯೋಗೇಶ್ ಮಾಸ್ಟರ್, ರಂಗಕರ್ಮಿ



