ಉಪೇಂದ್ರ ಅವರದು ಸಮುದಾಯ ಮಾತ್ರವಲ್ಲದೇ ಸಂವಿಧಾನಕ್ಕೂ ಮಾಡಿದ ಅಪಚಾರ: ಡಾ.ಎಚ್.ಸಿ.ಮಹದೇವಪ್ಪ

3 years ago

#Upendra #disservice #community #constitution #HCMahadevappa

ಬೆಂಗಳೂರು: ಉಪೇಂದ್ರ ಅವರು ಒಬ್ಬ ಖ್ಯಾತ ನಟ, ನಿರ್ಮಾಪಕ ಮತ್ತು ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಮೂಲಕ ಸಾರ್ವಜನಿಕ ಜೀವನದಲ್ಲಿ ಇರಲು ಬಯಸುತ್ತಿರುವ ವ್ಯಕ್ತಿ. ಇಂತಹ ವ್ಯಕ್ತಿಗೆ ಭಾರತದ ಇತಿಹಾಸ, ಚರಿತ್ರೆ ಸಾಂಸ್ಕೃತಿಕ ಬದುಕಿನ ಅರಿವು, ಸಾಮಾಜಿಕ ಅಸಮಾನತೆಗಳ ಪ್ರಜ್ಞೆ ಅಗತ್ಯವಾಗಿ ಇದೆ ಅಂದುಕೊಂಡಿದ್ದೆ. ಆದರೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅವರು ಜಾತಿ ಹೆಸರನ್ನು ಕರೆಯುತ್ತಿರುವುದನ್ನು ನೋಡಿದರೆ ಇದು ಸಮುದಾಯ ಮಾತ್ರವಲ್ಲದೇ ಸಂವಿಧಾನಕ್ಕೂ ಮಾಡಿದ ಅಪಚಾರ ಆಗಿದೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ನಟ ಮತ್ತು ಪ್ರಜಾಕೀಯ ಪಕ್ಷದ ಅಧ್ಯಕ್ಷ ಉಪೇಂದ್ರ ಸಾಮಾಜಿಕ ಜಾಲತಾಣದ ನೇರಪ್ರಸಾರದಲ್ಲಿ ಮಾತನಾಡುತ್ತಿದ್ದ ವೇಳೆ “ಊರು ಎಂದ ಮೇಲೆ ಹೊಲಗೇರಿ ಇದ್ದದ್ದೇ” ಎಂಬ ಮಾತುಗಳು ರಾಜ್ಯದಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಈ ವಿಷಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಎಚ್.ಸಿ.ಮಹದೇವಪ್ಪ, ಇನ್ನು ಸೂಕ್ಷ್ಮವಾಗಿ ಗಮನಿಸುವಾಗ ಉಪೇಂದ್ರ ಅವರು ತಮ್ಮ ಮಾತುಗಳಿಗೆ ಪೂರಕವಾಗಿ ಹೊಲಗೇರಿ ಎಂಬ ಪದವನ್ನು ಬಳಸಿರುವುದೇ ಅಪ್ರಸ್ತುತ. ಜೊತೆಗೆ ಅವರು ಕ್ಷಮೆಯಾಚನೆಯಲ್ಲೂ ಸಹ ನಾನೂ ಕೂಡಾ ಬಡತನದಿಂದ ಬಂದಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ಬಡತನವೇ ಬೇರೆ ಜಾತಿ ಆಧಾರಿತವಾದ ಸಾಮಾಜಿಕ ಅಸಮಾನತೆಯೇ ಬೇರೆ ಎಂಬ ಸಂಗತಿಯು ಉಪೇಂದ್ರ ಅವರಿಗೆ ಸಹಜವಾಗಿ ತಿಳಿದಿಲ್ಲ ಎಂದು ಕಾಣುತ್ತದೆ ಎಂದಿದ್ದಾರೆ.

ಹೀಗಾಗಿ ಸಾರ್ವಜನಿಕ ಜೀವನದಲ್ಲಿ ಇರುವ ಅವರು ಈ ದೇಶದ ಅಸಮಾನತೆ ಮತ್ತು ನೋವಿನ ಚರಿತ್ರೆಯನ್ನೇ ತಿಳಿಯದಿದ್ದ ಮೇಲೆ ಇವರ ಸಮಾಜ ಬದಲಾಯಿಸುವಂತಹ ಮಾತುಗಳಿಗೆ ಯಾವ ಅರ್ಥವಿದೆ. ಈಗಾಗಲೇ ಬಹುತೇಕ ದಲಿತ ಸಂಘಟನೆಗಳು ಈ ಕುರಿತಂತೆ ಮನವಿ ಸಲ್ಲಿಸುತ್ತಿರುವ ಕಾರಣ ಮುಂದೆ ಶೋಷಿತ ಸಮುದಾಯಗಳನ್ನು Taken for granted ಆಗಿ ಉಲ್ಲೇಖಿಸುವ ಪ್ರವೃತ್ತಿಯನ್ನು ನಿಲ್ಲಿಸಲು ಮತ್ತು ಸಮುದಾಯಗಳಿಗೆ ಸಂವಿಧಾನದಲ್ಲೇ ಇರುವ ಸಮಾನ ಘನತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Leave a Reply