ಐತಿಹಾಸಿಕ ಮಹಿಳಾ ಮೀಸಲಾತಿ ಘೋಷಿಸಿದ ಶತಮಾನದಷ್ಟು ಹಿರಿಯ ಕಾಂಗ್ರೆಸ್
ಬದಲಾವಣೆ ಬಯಸುವವರು ನನ್ನ ಜೊತೆಯಾಗಿ ಎಂದ ಪ್ರಧಾನ ಕಾರ್ಯದರ್ಶಿ
ಲಖ್ನೋ: ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ಶೇಕಡಾ 40ರಷ್ಟು ಟಿಕೆಟ್ ನೀಡಲಿದೆ ಎಂದು ಉತ್ತರಪ್ರದೇಶ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕ ಗಾಂಧಿ ಘೋಷಿಸಿದರು.
ಲಖ್ನೋದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತಾಡಿದ ಅವರು, ಇದರೊಂದಿಗೆ, ರಾಜ್ಯದ ಅಭಿವೃದ್ಧಿಗೆ ಮಹಿಳೆಯರ ಭಾಗವಹಿಸುವಿಕೆ ಮುಖ್ಯ ಎಂದು ಬಯಸುತ್ತಿದ್ದೇನೆ. ಒಂದು ವೇಳೆ ಪಕ್ಷದಲ್ಲಿ ಕೇವಲ ತಮ್ಮ ಮಾತು ಮಾತ್ರ ನಡೆಯುತ್ತಿದ್ದರೆ, ತಾವು ಮಹಿಳೆಯರಿಗೆ ಶೇ.50 ರಷ್ಟು ಟಿಕೆಟ್ ನೀಡುತ್ತಿದ್ದೆ ಎಂದರು.
ಮಹಿಳೆಯರಿಂದ ಬದಲಾವಣೆ ತರಲು ಸಾಧ್ಯ. ಅವರಿಗೆ ಅವಕಾಶ ನೀಡಬೇಕು. ಉತ್ತರಪ್ರದೇಶದ ಹೆಣ್ಣುಮಕ್ಕಳಿಗಾಗಿ, ಯಾರು ಬದಲಾವಣೆ ಬಯಸುತ್ತಿದ್ದಾರೋ ಅಂಥ ಮಹಿಳೆಯರಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಉನ್ನಾವೋದಲ್ಲಿ ಅತ್ಯಾಚಾರಕ್ಕೀಡಾದ ಯುವತಿಯನ್ನು ಜೀವಂತವಾಗಿ ದಹಿಸಲಾಯಿತು. ಹತ್ರಾಸ್ ರೇಪ್ ಸಂತ್ರಸ್ತೆಗೆ ನ್ಯಾಯವೇ ಸಿಗಲಿಲ್ಲ. ಲಖಿಂಪುರ ಖೇರಿಗೆ ಭೇಟಿ ಕೊಟ್ಟಾಗ ಅಲ್ಲೊಬ್ಬಳು ಹುಡುಗಿ ತಾನು ಪ್ರಧಾನಿಯಾಗಬೇಕು ಎನ್ನುತ್ತಿದ್ದಳು. ಈ ರೀತಿ ಅನ್ಯಾಯಕ್ಕೆ ಒಳಗಾದ ಹುಡುಗಿಯರಿಗಾಗಿ, ರಾಜಕೀಯದಲ್ಲಿ ಮುಂದೆ ಬರುವ ಕನಸು ಹೊತ್ತ ಹುಡುಗಿಯರಿಗೋಸ್ಕರ ಕಾಂಗ್ರೆಸ್ ಈ ನಿರ್ಣಯಕ್ಕೆ ತೆಗೆದುಕೊಂಡಿದೆ. ಶೇ. 40ರಷ್ಟು ಟಿಕೆಟ್ ಗಳನ್ನು ನಾವು ಮಹಿಳೆಯರಿಗೆ ನೀಡಿ, ಗೆಲ್ಲಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಕಾಂಗ್ರೆಸ್ ಶೇ.40ರಷ್ಟು ಸ್ಥಾನಗಳನ್ನು ಪಂಜಾಬ್ ನಲ್ಲಿ ಮಹಿಳೆಯರಿಗೆ ಬಿಟ್ಟುಕೊಡಲಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಾವು ಕೇವಲ ಉತ್ತರ ಪ್ರದೇಶದ ಉಸ್ತುವಾರಿ. ಈ ನಿರ್ಣಯ ಉತ್ತರ ಪ್ರದೇಶಕ್ಕೆ ಸೀಮಿತವಾಗಿದೆ ಮತ್ತು ಪಂಜಾಬ್ ಅಥವಾ ಇನ್ನಾವುದೇ ರಾಜ್ಯದ ಕುರಿತು ನಂತರ ಯೋಚಿಸಲಾಗುವುದು ಎಂದರು.
ದೇಶದಲ್ಲಿ ರಾಜಕೀಯ ದ್ವೇಷ ಇದೆ. ಅದನ್ನು ಮಹಿಳೆಯರು ಮಾತ್ರ ಕೊನೆಗೊಳಿಸಬಹುದು. ಅಲ್ಲದೇ, ಇಲ್ಲಿ ಧರ್ಮರಾಜಕೀಯ ಇದೆ. ಅದರಿಂದ ಕೂಡ ದೇಶವನ್ನು ಪಾರುಮಡುವ ಶಕ್ತಿ ಮಹಿಳೆಯರಿಗಿದೆ. ರಾಜಕೀಯದಲ್ಲಿ ನನ್ನೊಂದಿಗೆ ಹೆಚ್ಚಿನ ಮಹಿಳೆಯರು ಹೆಗಲುಕೊಡಿ ಎಂದು ಅವರು ರಾಜ್ಯದ ಮಹಿಳೆಯರಿಗೆ ಕರೆನೀಡಿದರು. ಜೊತೆಗೆ, ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿರುವ ಮಹಿಳೆಯರು ಅರ್ಜಿ ಸಲ್ಲಿಸಬಹುದು. ನವೆಂಬರ್ 15ರಿಂದ ಅರ್ಜಿ ಸ್ವೀಕರಿಸಲಾಗುತ್ತದೆ ಎಂದರು.
ಪ್ರಿಯಾಂಕಾ ಕೇವಲ ಪ್ರವಾಸಕ್ಕಾಗಿ ಉತ್ತರ ಪ್ರದೇಶಕ್ಕೆ ಆಗಮಿಸುತ್ತಾರೆ ಎಂಬ ವಿರೋಧ ಪಕ್ಷದ ಮುಖಂಡರ ಟೀಕೆಗಳಿಗೆ ಉತ್ತರಿಸಿದ ಅವರು, ವಿರೋಧ ಪಕ್ಷಗಳ ಮುಖಂಡರು ತಮ್ಮ ಕ್ರಿಯಾಶೀಲತೆಯನ್ನು ಬಳಸಬೇಕು ಎಂದು ಸಲಹೆ ನೀಡಿದರು.




