ಉಗಾದಿ ಮತ್ತು ಬೌದ್ಧ ಸಂಸ್ಕೃತಿ

5 years ago

ಯುಗಾದಿ ಹಬ್ಬವು ಭಾರತದ ಇತಿಹಾಸದಲ್ಲಿ ಬಹುದೊಡ್ಡ ಹಿನ್ನೆಲೆಯನ್ನು ಹೊಂದಿರುವ ಹಬ್ಬ. ಇದು ಇಲ್ಲಿನ ಜನ ಸಮೂಹದೊಳಗೆ ಬೆರೆತು, ವರ್ಷದ ಮೊದಲ ಸಂಭ್ರಮಾಚರಣೆಯಾಗಿ ಯುಗಾದಿಯು ಹುಟ್ಟಿಕೊಂಡಿದೆ. ಈ ಹಬ್ಬವು ಹಲವು ಸಾಂಸ್ಕೃತಿಕ ನೆಲೆಗಳಲ್ಲಿ ಬೆರೆತು ತನ್ನ ಮೂಲ ಸ್ವರೂಪವನ್ನು ಬದಲಾಯಿಸಿಕೊಂಡಿದ್ದರೂ, ಮೂಲ ಬೇರಿನಲ್ಲಿ ತನ್ನ ಶತಮಾನಗಳ ಪರಂಪರೆಯನ್ನು  ಉಳಿಸಿಕೊಂಡು ಬಂದಿದೆ.

ಯುಗಾದಿ ಹಬ್ಬವು ಅದು ಯುಗಾದಿ ಅಲ್ಲ. ಅದನ್ನು ಉಗಾದಿ ಎಂದು ಕರೆಯುತಿದ್ದರು. ಉಗಾದಿ ಎಂದರೆ ವರ್ಷದ ಆರಂಭ ಅಥವಾ ಋತು ಬದಲಾವಣೆ ಎಂದರ್ಥ. ಉಗಾದಿ ಹಬ್ಬವನ್ನು ಮೊದಲು ಆಚರಿಸಲ್ಪಟ್ಟವರು ಕೃಷಿಕರು. ಇಲ್ಲಿನ ಕೃಷಿಕ ಮತ್ತು ಶ್ರಮಿಕ ಜನ ಮಳೆಗಾಲದ ಸಂದರ್ಭವನ್ನು ನೋಡಿಕೊಂಡು ಫಸಲು ಅಥವಾ ಬೆಳೆ ಉತ್ತಮವಾಗಿ ಬರಲೆಂದು ಮಳೆ ಬೀಳುವ ಮುನ್ನ ಭೂಮಿಗೆ ಪೂಜೆ ಸಲ್ಲಿಸುತಿದ್ದರು. ಇದು ಅವರ ಮೊದಲ ಸಾಂಸ್ಕೃತಿಕ ಸಂಭ್ರಮ. ಉಗಾದಿಯನ್ನು ಕೃಷಿಕರು ಮೊದಲ ಸಾಂಸ್ಕೃತಿಕ ಸಂಭ್ರಮವಾಗಿ ಆಚರಿಸಿದರೆ, ಸಂಕ್ರಾಂತಿಯನ್ನು ಸುಗ್ಗಿಯ ಸಂಭ್ರಮವಾಗಿ ಆಚರಿಸುತ್ತಾರೆ. ಮಾರಿ, ಮಸಣಿ, ಸೇರಿದಂತೆ ಇತರೆ ಗ್ರಾಮದೇವತೆಗಳ ಹಬ್ಬಗಳನ್ನು ವರ್ಷದ ಕೊನೆಯಲ್ಲಿ ಆಚರಿಸುತ್ತಾರೆ. ಆ ಸಂದರ್ಭದಲ್ಲಿ ಋತುವಿನ ಕೊನೆ  ಮತ್ತು ಉಗಾದಿ ಪೂರ್ವ ದಿನಗಳನ್ನು ವರ್ಷದ ಅಂತ್ಯ ಎಂದೇ ಕರೆಯಲಾಗುತಿತ್ತು.

ಉಗಾದಿ ಹಬ್ಬದ ಸೊಗಡು ಗ್ರಾಮೀಣ ಭಾಗದ ಕೃಷಿಕರಿಗೆ ಚೆನ್ನಾಗಿ ತಿಳಿದಿದೆ. ಮೈಸೂರಿನ ಭಾಗವನ್ನು ಉದಾಹರಣೆಯಾಗಿ  ತೆಗೆದುಕೊಂಡು ವಿಶ್ಲೇಷಿಸಿದರೆ, ಮೈಸೂರಿನ ಪ್ರತಿಯೊಂದು ಹಳ್ಳಿಯಲ್ಲಿಯೂ ಕೃಷಿಕರು ಈ ಹಬ್ಬದ ದಿನ ಹೊನ್ನೇರು ಕಟ್ಟುತ್ತಾರೆ. ಹೊನ್ನೇರು ಎಂದರೆ ಚಿನ್ನದ ನೇಗಿಲು ಎಂದರ್ಥ. ಹಾಗಾದರೆ ಗ್ರಾಮೀಣ ಕೃಷಿಕ ಜನ ಚಿನ್ನದ ನೇಗಿಲಿನಿಂದ ಉಳುತ್ತಿದ್ದರೆ? ಈ ಪದ ಮತ್ತು ಪರಂಪರೆ ಹೇಗೆ ಜನರ ಆಚರಣೆ ಮತ್ತು ಜನಭಾಷಾ ಬಳಕೆಯಲ್ಲಿ ಬೆರೆತಿದೆ ಎಂದು ಹುಡುಕುತ್ತಾ ಹೋದರೆ ಸಂಶೋಧಕದಾದ ಪ್ರೊ.ಕೆ.ಎಸ್.ಭಗವಾನ್ ಅವರು ಬರೆದಿರುವ ‘ಬೇಸಾಯಗಾರರೆಲ್ಲಾ ಬೌದ್ಧರು’ ಎಂಬ ಕೃತಿಯಲ್ಲಿ ಈ ಉಗಾದಿ ಆಚರಣೆಯ ಇತಿಹಾಸ ಬೆಳಕು ಚೆಲ್ಲುತ್ತದೆ.

ಹೊನ್ನೇರು ಎಂದರೆ ಮುಂಗಾರಿನ ಮೊಟ್ಟ ಮೊದಲ ಉಳುಮೆ. ಇದು ಮೊದಲು ಕಟ್ಟುವ ಆರು ಎಂಬ ಅರ್ಥವನ್ನು ಕೊಡುತ್ತದೆ. ಹೊನ್ನಾರು ಅಥವಾ ಹೊನ್ನೇರು (ಹೊನ್ನು + ಆರು) ಎಂದರೆ ಅಕ್ಷರಶಃ ಚಿನ್ನದ ನೇಗಿಲು. ಬಹುತೇಕ ಜನ ಬಡವರಾಗಿದ್ದ ಕಾರಣ ನಮ್ಮ ರೈತರು ಹೇಗೆ ಚಿನ್ನದ ನೇಗಿಲಿನಲ್ಲಿ ಉಳುಮೆ ಮಾಡಲು ಸಾಧ್ಯ? ಹಾಗಾಗಿ ಕಬ್ಬಿಣ ಮಿಶ್ರಿತ ಮರದ ನೇಗಿಲಿನಿಂದ ಉಳುತ್ತಾರೆ.

ಚಿನ್ನದ ನೇಗಿಲಿಗೆ ಬಹಳಷ್ಟು ಇತಿಹಾಸವಿದೆ. ಚಿನ್ನದ ನೇಗಿಲಿನಿಂದ ಉಳುತ್ತಿದ್ದ ಏಕೈಕ ವ್ಯಕ್ತಿ ಎಂದರೆ ಗೌತಮ ಬುದ್ಧರ ತಂದೆ ಶುದ್ಧೋಧನ. ಕಪಿಲವಸ್ತುವಿನಲ್ಲಿ ದೊಡ್ಡ ವಾರ್ಷಿಕ ಉತ್ಸವ ನಡೆಯುತಿತ್ತು, ಅದೇ ಹೊನ್ನೇರಿನ ಉತ್ಸವ. ಮುಂಗಾರಿಗು ಮುನ್ನ ಚಿನ್ನ ಮತ್ತು ಬೆಳ್ಳಿ ನೇಗಿಲಿನಿಂದ ಉಳುತ್ತಿದ್ದರು. ಅದನ್ನು ನೆರವೇರಿಸುತಿದ್ದ ವ್ಯಕ್ತಿಯೇ ಶುದ್ಧೋಧನ. ಹಾಗಾಗಿ ಈ ಹೊನ್ನೇರು ಮತ್ತು ಉಗಾದಿ ಸಂಸ್ಕೃತಿಯು ಬೌದ್ಧ ಪರಂಪರೆಯಿಂದ ಹುಟ್ಟಿಕೊಂಡಿದೆ. ಅದರ ಜತೆಗೆ ಸಾಮಾನ್ಯರ ಆಚಯಣೆಯಲ್ಲಿ ಇದು ಬೆರೆತು ಹೋಗಿದೆ. ಉಗಾದಿ ಎಂಬ ಈ ಹಬ್ಬವು ಕಾಲಾನಂತರದಲ್ಲಿ ಪದೋಚ್ಚಾರಣೆಯಿಂದಲೋ ಅಥವಾ ಅಥವಾ ಅನ್ಯ ಸಂಸ್ಕೃತಿಯ ದಾಳಿಯಿಂದಲೋ ಯುಗಾದಿ ಎಂದು ರೂಪಾಂತರಗೊಂಡಿದೆ. ನಾವು ಇದನ್ನು ಉಗಾದಿ ಎಂದೇ ಕರೆಯಬೇಕು. ಇದು ಕೃಷಿಕರ ಮೂಲ ಹಬ್ಬವಾಗಿದ್ದು, ಜನ ಸಂಭ್ರಮದ ಮೊದಲ ಹೆಜ್ಜೆಯಾಗಿದೆ.

–  ಹಾರೋಹಳ್ಳಿ ರವೀಂದ್ರ, ಲೇಖಕರು

Leave a Reply