ಬೆಂಗಳೂರು: ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಆಹಾರದ ಜೊತೆಗೆ ವ್ಯಾಯಾಮ ಅತ್ಯಗತ್ಯ. ಪ್ರತಿಯೊಬ್ಬರು ವ್ಯಾಯಾಮ ತೊಡಗಿಸಿಕೊಳ್ಳುವ ಮೂಲಕ ದೇಹದ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಕರೆ ನೀಡಿದರು.
ಯಲಹಂಕದ ಸಿಂಗನಾಯಕನಹಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ನಿರ್ಮಿಸಲಾಗಿರುವ ಅಂತರಾಷ್ಟ್ರೀಯ ಮಟ್ಟದ ಉಪಕರಣಗಳ ತೆರೆದ ವ್ಯಾಯಾಮ ಶಾಲೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸದೃಢ ಆರೋಗ್ಯಕ್ಕೆ ವ್ಯಾಯಾಮ ಅತ್ಯವಶ್ಯಕ. ಪ್ರತಿಯೊಬ್ಬರು ದಿನಕ್ಕೆ ಕನಿಷ್ಠ ಒಂದು ಗಂಟೆಯಾದರು ವ್ಯಾಯಾಮ ಮಾಡಬೇಕು ಎಂದು ಸಲಹೆ ನೀಡಿದರು.
ಗ್ರಾ.ಪಂ. ವ್ಯಾಪ್ತಿಗಳಲ್ಲಿ ಇದೇ ಮೊಟ್ಟಮೊದಲಬಾರಿಗೆ ಸಿಂಗನಾಯಕನಹಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ಅತ್ಯಾಧುನಿಕ ಸಲಕರಣೆಯುಳ್ಳ ತೆರೆದ ವ್ಯಾಯಾಮ ಶಾಲೆ ಲೋಕಾರ್ಪಣೆ ಮಾಡಲಾಗಿದೆ. ಪ್ರತಿಯೊಬ್ಬರು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು.
ರಾಜ್ಯದಲ್ಲಿ ಕೊವಿಡ್-19 ಎರಡನೆ ಅಲೆ ಆರಂಭವಾಗಿದೆ. ನಗರದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ನಿಯಂತ್ರಿಸಲು ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದರು.
ಸರ್ಕಾರದ ನಿಯಮಗಳ ಜೊತೆಗೆ, ಜನ ನಿಯಮಗಳನ್ನು ಪಾಲಿಸಬೇಕು. ಪ್ರತಿಯೊಬ್ಬರು ಅಂತರ ಕಾಪಾಡಿಕೊಳ್ಳುವ ಮೂಲಕ ಮಾಸ್ಕ್ ಧರಿಸಬೇಕು. ಜೊತೆಗೆ ಪೋಷಕಾಂಶಯುಕ್ತ ಆಹಾರ ಸೇವಿಸಿ, ವ್ಯಾಯಾಮ ಮಾಡುವ ತಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಈ ಮೂಲಕ ಕೋವಿಡ್ ವೈರಸ್ ಕೊಂಡಿಯನ್ನು ಕಳಚಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ, ಸದಸ್ಯರಾದ ಎಸ್.ಜಿ.ಪ್ರಶಾಂತ್ ರೆಡ್ಡಿ, ಬಾಬು, ಮಲ್ಲೇಶ್ ಸೇರಿ ಇನ್ನಿತರರು ಹಾಜರಿದ್ದರು.



