ಶಾಖ ಹೆಚ್ಚಳ ಸಮಸ್ಯೆಗಳ ನಿವಾರಣೆಗೆ ಮಾರ್ಗೋಪಾಯಗಳು

2 years ago

ಸುರಕ್ಷಿತ ಆರೋಗ್ಯಕ್ಕಾಗಿ ಜಿಲ್ಲಾಡಳಿತದಿಂದ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ

ಜಿಲ್ಲೆಯಲ್ಲಿ ಹೆಚ್ಚು ತಾಪಮಾನದ ಮುನ್ಸೂಚನೆ

ಧಾರವಾಡ: ಭಾರತ ಹವಾಮಾನ ಇಲಾಖೆ (ಐಎಂಡಿ) ಯು ಪ್ರಸಕ್ತ ವರ್ಷದಲ್ಲಿ ಅತೀ ಹೆಚ್ಚು ತಾಪಮಾನದ (heat wave) ಮುನ್ಸೂಚನೆ ನೀಡಿದ್ದು, ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಗರಿಷ್ಠ ತಾಪಮಾನವನ್ನು ಸೂಚಿಸಿದೆ. ಪ್ರಸ್ತುತ, ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳ ಕೆಲವು ಭಾಗಗಳಲ್ಲಿ ಸಾಮಾನ್ಯ ತಾಪಮಾನಕ್ಕಿಂತ 2-3 ಡಿಗ್ರಿಗಳಷ್ಟು ಅಧಿಕ ತಾಪಮಾನ ದಾಖಲಾಗುತ್ತಿದ್ದು, ಇದು ಮಾನವ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು 2024ರ ಏಪ್ರಿಲ್ 01 ರಂದು ಬಿಡುಗಡೆ ಮಾಡಿದ ಹವಾಮಾನ ಸಂಭವನೀಯತೆಯ ಮುನ್ನೋಟವನ್ನು ಆಧರಿಸಿ, ಕರ್ನಾಟಕ ರಾಜ್ಯದಲ್ಲಿ ಏಪ್ರಿಲ್-2024ರ ಮಾಹೆಯಿಂದ ಮೇ- 2024ರ ಅವಧಿಯಲ್ಲಿ ಮುಂಬರುವ ಬಿಸಿ ವಾತಾವರಣ ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಾಗಿ ಇರುತ್ತದೆ ಎಂದು ಸೂಚಿಸಿದೆ.

ತಾಪಮಾನದ ಮುನ್ಸೂಚನೆಯ ಹೆಚ್ಚಳ ರಾಜ್ಯದಾದ್ಯಂತ ಸಾಮಾನ್ಯ ಶಾಖದ ಅಲೆಗಳ ದಿನಗಳನ್ನು 2-14 ದಿನಗಳು ಮೀರುವ ಸಾಧ್ಯತೆಯಿದೆ. ಅಲ್ಲದೇ, ಈಗಾಗಲೇ ರಾಜ್ಯದಲ್ಲಿ 223 ತಾಲ್ಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿರುವುದರಿಂದ, ಅತೀ ಹೆಚ್ಚು ತಾಪಮಾನ (heat wave) ಪ್ರತಿಕೂಲ ಪರಿಣಾಮವನ್ನು ತಡೆಗಟ್ಟಲು ಮತ್ತು ತಗ್ಗಿಸಲು ಹವಾಮಾನ ಇಲಾಖೆ ಸಲಹೆ ಮತ್ತು ಸೂಚನೆಗಳನ್ನು ನೀಡಿದೆ. ವಿಪತ್ತು ನಿರ್ವಹಣಾ ಪ್ರಾಧಿಕಾರ ಸಾರ್ವಜನಿಕರ ಮಾಹಿತಿ ಮತ್ತು ಪಾಲನೆಗಾಗಿ ಹವಾಮಾನ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ.

ಹವಾಮಾನ ಇಲಾಖೆ ನೀಡಿರುವ ಮಾರ್ಗದರ್ಸಿ ಸೂತ್ರಗಳು:

  1. ಗರಿಷ್ಠ ತಾಪಮಾನದ ಅವಧಿಯಲ್ಲಿ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸುವುದು (ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯರವರೆಗೆ)
  2. ಕಾಲಕಾಲಕ್ಕೆ ಸಾಕಷ್ಟು ನೀರು ಕುಡಿಯಬೇಕು
  3. ಹಗುರವಾದ, ತಿಳಿ ಬಣ್ಣದ ಸಡಿಲವಾದ ಮತ್ತು ಹತ್ತಿಬಟ್ಟೆಗಳನ್ನು ಧರಿಸುವುದು
  4. ಬಿಸಿಲಿನಲ್ಲಿ ಹೋಗುವಾಗ ರಕ್ಷಣೆಗಾಗಿ ಕನ್ನಡಕಗಳು, ಛತ್ರಿ, ಟೋಪಿ, ಬೂಟುಗಳು ಅಥವಾ ಚಪ್ಪಲಿಗಳನ್ನು ಬಳಸುವುದು
  5. ಹೊರಗಿನ ಉಷ್ಣತೆಯು ಅಧಿಕವಾಗಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸುವುದು
  6. ಪ್ರಯಾಣ ಮಾಡುವಾಗ, ನೀರನ್ನು ಜೊತೆಯಲ್ಲಿ ಒಯ್ಯುವುದು
  7. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ತಪ್ಪಿಸುವುದು
  8. ಸಾಧ್ಯವಾದಷ್ಟು ಬಿಸಿ ಆಹಾರವನ್ನು ಸೇವಿಸುವುದು
  9. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡದಿರುವುದು
  10. ಮೂರ್ಛೆ ಅಥವಾ ಅನಾರೋಗ್ಯ ಅನಿಸಿದರೆ ತಕ್ಷಣ ವೈದ್ಯರನ್ನು ಭೇಟಿಮಾಡುವುದು.
  11. ನಿಂಬೆ ನೀರು, ಮಜ್ಜಿಗೆ ಮುಂತಾದ ಮನೆಯಲ್ಲಿ ತಯಾರಿಸಿದ ಪಾನೀಯಗಳು ಮತ್ತು ಒಆರ್ಎಸ್ ಗಳನ್ನು ಬಳಸುವುದು
  12. . ಸಾಕುಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ಒದಗಿಸುವುದು.
  13. ಮನೆಯನ್ನು ತಂಪಾಗಿರಿಸಲು ಪರದೆಗಳು, ಶಟರ್ಗಳು ಅಥವಾ ಸನ್ಶೇಡ್ಗಳನ್ನು ಬಳಸುವುದು ಸೂಕ್ತವೆಂದು ತಿಳಿಸಲಾಗಿದೆ.
    ಆಗಿಂದಾಗೆ ತಣ್ಣೀರು ಸ್ನಾನ ಮಾಡುವುದು, ಹೊರಗೆ ಹೋಗುವಾಗ ನೀರಿನ ಬಾಟಲಿ, ಛತ್ರಿ, ಟೋಪಿ ಅಥವಾ ಕ್ಯಾಪ್, ಹೆಡ್ನವರ್, ಹ್ಯಾಂಡ್ನವೆಲ್, ಹ್ಯಾಂಡ್ಯಾನ್, ಎಲೆಕ್ಯೂಲೈಟ್, ಗ್ಲೋಕೋಸ್, ಒಆರ್ಎಸ್ಗಳನ್ನು ಒಳಗೊಂಡಿರುವ ಅತೀ ಹೆಚ್ಚು ತಾಪಮಾನವನ್ನು (heat wave) ತಡೆಗಟ್ಟುವ ಕಿಟ್ಅನ್ನು ಹೊಂದಿರಬೇಕೆಂದು ತಿಳಿಸಲಾಗಿದೆ.

ಅತೀ ಹೆಚ್ಚು ತಾಪಮಾನದಿಂದ (heat wave) ಆರೋಗ್ಯದ ಮೇಲಾಗುವ ಪರಿಣಾಮಗಳು ಹಾಗೂ ಗುರುತಿಸುವಿಕೆ:
ಅತೀ ಹೆಚ್ಚು ತಾಪಮಾನದಿಂದ (heat wave) ಸಾಮಾನ್ಯವಾಗಿ ನಿರ್ಜಲೀಕರಣ, ಶಾಖ ಸೆಳತ, ಶಾಖದ ಬಳಲಿಕೆ ಅಥವಾ ಶಾಖದ ಅಘಾತದಂತಹ (sun stroke) ಆರೋಗ್ಯದ ದುಷ್ಟರಿಣಾಮಗಳು ಉಂಟಾಗುವ ಸಾಧ್ಯತೆ ಇದ್ದು, ಶಾಖ ಸೆಳೆತಗಳಿಂದ (Heat cramps): ಊತ ಮತ್ತು ಮೂರ್ಛೆ ಕಾಣಿಸುತ್ತದೆ, ಸಾಮಾನ್ಯವಾಗಿ 39 ಡಿಗ್ರಿ ಸೆಂಟಿಗ್ರೇಡ್ ಗಿಂತ ಅಂದರೆ 102 ಡಿಗ್ರಿ ಫ್ಯಾರನ್ ಹೀಟ್ ಗಿಂತ ಕಡಿಮೆ ಜ್ವರದಿಂದ ಕೂಡಿರುತ್ತದೆ. ಶಾಖದ ಬಳಲಿಕೆಯಿಂದ ಆಯಾಸ, ದೌರ್ಬಲ್ಯ, ತಲೆ ತಿರುಗುವಿಕೆ, ತಲೆ ನೋವು, ವಾಕರಿಕೆ, ವಾಂತಿ, ಸ್ನಾಯು ಸೆಳೆತ ಮತ್ತು ಬೆವರುವುದು ಉಂಟಾಗುತ್ತದೆ.

ಶಾಖಾಘಾತ (sun stroke): ದೇಹದ ಉಷ್ಣತೆಯು 40 ಡಿಗ್ರಿ ಸೆಂಟಿಗ್ರೇಡ್ ಅಂದರೆ 104 ಎಫ್ ಅಥವಾ ಅದಕ್ಕಿಂತ ಹೆಚ್ಚಾಗುವುದು ಹಾಗೂ ಉಸಿರಾಟದಲ್ಲಿ ವ್ಯತ್ಯಯ ಮತ್ತು ಪ್ರಜ್ಞ ತಪ್ಪುವುದು ಉಂಟಾಗುತ್ತದೆ.

ಅತೀ ಹೆಚ್ಚು ತಾಪಮಾನ (heat wave) ಕ್ಕೆ ಸಂಬಂಧಿತ ಕಾಯಿಲೆಗೆ ಪ್ರಥಮ ಚಿಕಿತ್ಸೆ:

  1. ಅತೀ ಹೆಚ್ಚು ತಾಪಮಾನದಿಂದ (heat wave) ತುತ್ತಾದ ವ್ಯಕ್ತಿಯನ್ನು ನೆರಳಿನ ಅಡಿಯಲ್ಲಿ ತಂಪಾದ ಸ್ಥಳಕ್ಕೆ ಸ್ಥಳಾಂತರಿಸುವುದು
  2. ಒದ್ದೆಯಾದ ಬಟ್ಟೆಯಿಂದ ಮೈ ಒರಸುವುದು
  3. ತಂಪಾದ ಒದ್ದೆ ಬಟ್ಟಿಯನ್ನು ಹಾಕುವುದು ಹಾಗೂ ದೇಹದ ಉಷ್ಣತೆಯನ್ನು ತಗ್ಗಿಸಲು ತಲೆಯ ಮೇಲೆ ನೀರನ್ನು ಹಾಕುವುದು
  4. ನೀರು ಅಥವಾ ಪುನರ್ಜಲೀಕರಣ ಪಾನೀಯಗಳಾದ ಓಆರ್ಎಸ್, ನಿಂಬೆ ಪಾನಕ ನೀಡುವುದು
  5. (ವ್ಯಕ್ತಿ ಇನ್ನೂ ಪ್ರಜ್ಞೆ ಹೊಂದಿದ್ದರೆ). ವ್ಯಕ್ತಿಗೆ ತಂಪಾದ ಗಾಳಿಯ ವ್ಯವಸ್ಥೆ ಮಾಡುವುದು.
  6. ಉತ್ತಮ ಗಾಳಿಗಾಗಿ ಬಟ್ಟೆಗಳನ್ನು ಸಡಿಲಗೊಳಿಸುವುದು.
  7. ರೋಗ ಲಕ್ಷಣಗಳು ಉಲ್ಬಣಗೊಂಡರೆ ಅಥವಾ ದೀರ್ಘಕಾಲದವರೆಗೆ ಇದ್ದರೆ ಅಥವಾ ವ್ಯಕ್ತಿಯು ಪುಜ್ಞಾಹೀನ ಸ್ಥಿತಿಯಲ್ಲಿದ್ದರೆ ವೈದ್ಯರನ್ನು ಕೂಡಲೇ ಸಂಪರ್ಕಿಸುವುದು.
  8. ಮದ್ಯಪಾನ, ಕಾಫಿ, ಶೇಖರಿಸಿದ ಪಾನೀಯವನ್ನು ನೀಡಬಾರದು ಎಂದು ಹೇಳಲಾಗಿದೆ.

ಅತೀ ಹೆಚ್ಚು ತಾಪಮಾನಕ್ಕೆ (heat wave)ಸಂಬಂಧಿತ ಅನಾರೋಗ್ಯವನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ನಿರ್ದಿಷ್ಟ ಕ್ರಮಗಳು:

  1. ಅತೀ ಹೆಚ್ಚು ತಾಪಮಾನಕ್ಕೆ (heat wave) ಸಂಬಂಧಿಸಿದಂತೆ ಐಎಂಡಿ ಮತ್ತು ಕೆಎಸ್ಎನ್ಡಿಎಂಸಿ ಯಿಂದ ನೀಡಿದ ಮುನ್ಸೂಚನೆ, ಎಚ್ಚರಿಕೆಗಳನ್ನು ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವುದು
  2. ಅತೀ ಹೆಚ್ಚು ತಾಪಮಾನದ (heat wave) ಪ್ರತಿಕೂಲ ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಮತ್ತು ಅತೀ ಹೆಚ್ಚು ತಾಪಮಾನದ (heat wave) ಸಮಯದಲ್ಲಿ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಇಲಾಖೆ ತಯಾರಿಸಿರುವ ಐಇಸಿ ಕಾರ್ಯ ಚಟುವಟಿಕೆಗಳನ್ನು ಜಾರಿಮಾಡಬೇಕು.
  3. ನಗರ, ಪಟ್ಟಣ, ಕೊಳಚೆ ಪ್ರದೇಶಗಳು, ಅತೀ ಹೆಚ್ಚು ತಾಪಮಾನಕ್ಕೆ (heat wave) ತುತ್ತಾಗುವಂತಹ ಹಳ್ಳಿಗಳನ್ನು ಗುರುತಿಸಿ ಮತ್ತು ಕುಡಿಯುವ ನೀರಿನ ಸೌಲಭ್ಯಗಳ, ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು.
  4. ಮಾರುಕಟ್ಟೆಗಳು, ಬಸ ನಿಲ್ದಾಣಗಳು, ಬಸ್ ಟರ್ಮಿನಲ್ಗಳು ಮತ್ತು ಜನರು ಸೇರುವ ಇತರ ಆಯಕಟ್ಟಿನ ಸ್ಥಳಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನೆರಳಿನ ಸೌಲಭ್ಯ ಕಲ್ಪಿಸುವುದು.
  5. ಪ್ರಾಣಿಗಳಲ್ಲಿ ಬಿಸಿಗಾಳಿಗೆ ಸಂಬಂಧಿತ ಕಾಯಿಲೆಯ ಚಿಕಿತ್ಸೆಗೆ ನಿಯಮಾನುಸಾರ ಸಂಬಂಧಿಸಿದ ಪಶು ವೈದ್ಯಕೀಯ ಔಷಧಗಳನ್ನು ಶೇಖರಣೆ ಮಾಡುವುದು
  6. ವಾಹನ ಚಾಲಕರಿಗೆ ಅವಶ್ಯ ಕುಡಿಯುವ ನೀರನ್ನು ಒದಗಿಸುವುದು ಹಾಗೂ ಜಿಲ್ಲೆಯ ಅತೀ ಹೆಚ್ಚು ತಾಪಮಾನದ (heat wave) ಪರಿಸ್ಥಿತಿಗಳ ಬಗ್ಗೆ, ಪ್ರವಾಸಿಗರಿಗೆ ಸಲಹೆಗಳನ್ನು ಪ್ರಚಾರ ಮಾಡುವುದು.
  7. ಧಾರ್ಮಿಕ ಸ್ಥಳಗಳಲ್ಲಿ ಯಾತ್ರಾರ್ಥಿಗಳಿಗೆ ಸುರಕ್ಷಿತ ಕುಡಿಯುವ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು
  8. ತಾತ್ಕಾಲಿಕ ನೆರಳಿನ ಪ್ರದೇಶಗಳನ್ನು ನಿರ್ಮಿಸುವುದು.
  9. ಸಾಮೂಹಿಕ ಸಭೆಯ ಹೊರಾಂಗಣ ಸ್ಥಳಗಳಲ್ಲಿ ಜನರಿಗೆ ತಾತ್ಕಾಲಿಕ ನೆರಳಿನ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು, ಸಾಕಷ್ಟು ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸಬೇಕು, ಆಸನಗಳ ನಡುವೆ ಸಾಕಷ್ಟು ಸ್ಥಳಾವಕಾಶ ಇರಬೇಕು, ಸಾಕಷ್ಟು ಒಆರ್ ಎಸ್ ಮತ್ತು ಇತರ ಔಷಧಿಗಳ ದಾಸ್ತಾನು ಮತ್ತು ವೈದ್ಯಕೀಯ ಸಿಬ್ಬಂದಿ ಇರಬೇಕು.
  10. ಅತೀ ಹೆಚ್ಚು ತಾಪಮಾನಕ್ಕೆ (heat wave) ತುತ್ತಾದ ವ್ಯಕ್ತಿಗೆ ಪ್ರತ್ಯೇಕ ವಿಶ್ರಾಂತಿ ಸ್ಥಳವನ್ನು ಖಚಿತಪಡಿಸಿಕೊಳ್ಳಬೇಕು. ಅನುಕೂಲಕರ ತಾಪಮಾನವನ್ನು ಖಚಿತಪಡಿಸಿಕೊಳ್ಳಲು ಮತ್ತು ಸ್ಥಳದಲ್ಲಿ ಸಾಕಷ್ಟು ಗಾಳಿ ಸಂಚಾರ ಇರುವುದನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಸಂಖ್ಯೆಯ ಫ್ಯಾನ್, ಏರ್ರ್ಕೂಲರ್ಗಳು ಇರಬೇಕು. ಸಾಧ್ಯವಾದಷ್ಟು ಮಟ್ಟಿಗೆ ಸಭೆ, ಸಮಾರಂಭಗಳನ್ನು ತಂಪಾದ ವಾತಾವರಣವಿರುವ ಅವಧಿಯಲ್ಲಿ (ಬೆಳಿಗ್ಗೆ ಅಥವಾ ಸಂಜೆ) ಸಮಯದಲ್ಲಿ ನಡೆಸಬೇಕು ಎಂದು ತಿಳಿಸಲಾಗಿದೆ.

Leave a Reply