ರಾಜ್ಯ ಸರ್ಕಾರ ಕಾಂಗ್ರೆಸ್ ಪಾಲಿಗೆ ಎಟಿಎಂ: ಬಿ.ಎಸ್.ಯಡಿಯೂರಪ್ಪ

2 years ago

#StateGovt #became #atm #Congress #BSYeddyurappa

ಬೆಂಗಳೂರು: ರಾಜ್ಯ ಸರ್ಕಾರ ಕಾಂಗ್ರೆಸ್ ಪಾಲಿಗೆ ಎಟಿಎಂ ಆಗಿದೆ. ಎಐಸಿಸಿ ಕಾಂಗ್ರೆಸ್ ಉಸ್ತುವಾರಿಗಳು ಕರ್ನಾಟಕಕ್ಕೆ ಬರುವುದೇ ಹಣ ವಸೂಲಿಗೆ ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ವಿದ್ಯಮಾನಗಳ ಕುರಿತು ಚರ್ಚಿಸಲು ದೆಹಲಿಯಿಂದ ಆಗಮಿಸುವ ನಾಯಕರು ಏನು ಮಾಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಆಡಳಿತ ಯಂತ್ರ ಸಂಪೂರ್ಣ ಹದಗೆಟ್ಟಿದೆ. ಈ ಬಗ್ಗೆ ಗಮನಹರಿಸದೆ, ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆ ಎಂದು ಆಪಾದಿಸಿದರು.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಸರಕಾರ ಮುಂದೆ ಹೋಗುತ್ತಿಲ್ಲ. ಚಕ್ರದಲ್ಲಿ ಗಾಳಿ ಇಲ್ಲದೆ ಮುಂದೆ ಹೋಗದ ವಾಹನದಂತಾಗಿದೆ ಸರಕಾರದ ಪರಿಸ್ಥಿತಿ ಎಂದು ವಾಗ್ದಾಳಿ ನಡೆಸಿದರು.

ಅಪಾರ ಭರವಸೆ ನೀಡಿದ ನಂತರ ಅಧಿಕಾರಕ್ಕೆ ಬಂದ ಈ ಸರಕಾರವು ತಮ್ಮ ಆಶ್ವಾಸನೆ ಈಡೇರಿಸಲು ಪರದಾಡುತ್ತಿದೆ. ಸಿದ್ದರಾಮಯ್ಯನವರು ಎರಡನೇ ಅವಧಿಯಲ್ಲಿ ಪಕ್ಷದ ಮೇಲೆ ಹಿಡಿತ ಇಲ್ಲದ, ಸರಕಾರದ ಮೇಲೆ ನಿಯಂತ್ರಣ ಇಲ್ಲದ ವಿಚಿತ್ರ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ವ್ಯಾಖ್ಯಾನಿಸಿದರು.

ಉಚಿತ ಬಸ್ ಪ್ರಯಾಣ ಯೋಜನೆ ಹೊರತುಪಡಿಸಿದರೆ ಬೇರೆ ಯಾವುದೇ ಯೋಜನೆ ಫಲಾನುಭವಿಗಳನ್ನು ತಲುಪಿಲ್ಲ ಗೃಹಲಕ್ಷ್ಮಿ ಯೋಜನೆಯು ಅರ್ಧದಷ್ಟು ಮಹಿಳೆಯರಿಗೆ ತಲುಪಿಲ್ಲ ಎಂದು ಆರೋಪಿಸಿದರು.

ಅಭಿವೃದ್ಧಿ ಯೋಜನೆ ಸ್ಥಗಿತಗೊಂಡಿವೆ. ಸರ್ಕಾರ ಉಚಿತ ಕೊಡುಗೆಗಳ ಸಂಪನ್ಮೂಲ ಕ್ರೋಡೀಕರಣಕ್ಕೆ ಕಸರತ್ತು ಮಾಡುತ್ತಿದೆ. ಉಚಿತ ವಿದ್ಯುತ್ ಕೊಡುವುದಾಗಿ ಹೇಳಿದವರು ವಿದ್ಯುತ್ ದರದಲ್ಲಿ ಭಾರಿ ಹೆಚ್ಚಳ ಮಾಡಿದ್ದಾರೆ ಎಂದರು.

ಬರ ಪೀಡಿತ ಪ್ರದೇಶಗಳಲ್ಲಿ ಯಾವುದೇ ಪರಿಹಾರ ‌ಕಾರ್ಯ ನಡೆಯುತ್ತಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ಆಪಾದನೆ ಮಾಡುವುದನ್ನು ಬಿಟ್ಟು ಬರಪೀಡಿತ ಪ್ರದೇಶಕ್ಕೆ ಮುಖ್ಯಮಂತ್ರಿ ಸೇರಿ ಒಬ್ಬರೇ ಒಬ್ಬ ಸಚಿವರೂ ಹೋಗಿ ಅಲ್ಲಿನ ವಾಸ್ತವಿಕ ಸ್ಥಿತಿ ತಿಳಿಯಲಿಲ್ಲ ಎಂದು ‌ಕಿಡಿಕಾರಿದರು.

ತಾಂಡಾ ನಿಗಮ, ಅಂಬೇಡ್ಕರ್ ನಿಗಮ, ಬೋವಿ ಅಭಿವೃದ್ಧಿ ನಿಗಮ, ವಾಲ್ಮೀಕಿ ನಿಗಮ ಸೇರಿ ಯಾವುದಕ್ಕೂ ಒಂದು ಪೈಸೆ ಹಣ ನೀಡಿಲ್ಲ. ಬರಗಾಲದ ಸಂಕಷ್ಟ ಅನುಭವಿಸುವ ಈ ಸಂದರ್ಭದಲ್ಲಿ ಕೃಷಿ ಪಂಪ್‍ಸೆಟ್‍ಗಳಿಗೆ ಟ್ರಾನ್ಸ್‍ಫಾರ್ಮರ್ ಸಹಿತ ಉಚಿತ ಮೂಲಸೌಕರ್ಯ ಒದಗಿಸುವ ಯೋಜನೆಯನ್ನು ರಾಜ್ಯ ಸರಕಾರ ರದ್ದು ಮಾಡಿದೆ ಎಂದು ಆರೋಪಿಸಿದರು.

ಆಡಳಿತ ಯಂತ್ರ ಕುಸಿದು ಬಿದ್ದಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ನಡುವೆ ನಾಯಕತ್ವಕ್ಕಾಗಿ ಬಣಗಳ ಜಗ್ಗಾಟ ನಡೆಯುತ್ತಿದೆ. ಉಪ ಮುಖ್ಯಮಂತ್ರಿ ಉಪಟಳಕ್ಕೆ ಕಡಿವಾಣ ಹಾಕಲು ಡಿನ್ನರ್ ಮೀಟಿಂಗ್ ಆರಂಭವಾಗಿದೆ. ಬರದ ಸಮಯದಲ್ಲಿ ರಾಜಕೀಯ ಮಾಡದೇ ಕೂಡಲೇ ಪೀಡಿತರ ನೆರವಿಗೆ ಧಾವಿಸಬೇಕಾಗಿತ್ತು ಎಂದರು.

Leave a Reply