ವಿಜಯನಗರ: ಕೊಪ್ಪಳದ ಬಲ್ಡೋಟ ಉಕ್ಕು ಕಾರ್ಖಾನೆಯ ಬಗ್ಗೆ ವಿಸ್ತೃತ ವರದಿ ನೀಡುವಂತೆ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದ್ದು, ವರದಿ ಪರಿಶೀಲಿಸಿದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ರೀತಿಯ ಹಣದ ಕೊರತೆಯಿಲ್ಲ. ಕಳೆದ ವರ್ಷದಂತೆ ಈ ಸಾಲಿನ ಬಜೆಟ್ ನಲ್ಲಿಯೂ ಗ್ಯಾರಂಟಿಗಳಿಗೆ ಹಣ ಮೀಸಲಿರಿಸಲಾಗಿದೆ ಎಂದರು.
ಸರ್ಕಾರ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಸಾಧನಾ ಸಮಾವೇಶವನ್ನು ವಿಜಯನಗರದ ಹೊಸಪೇಟೆಯಲ್ಲಿ ಮೇ 20 ರಂದು ಆಯೋಜಿಸಿದ್ದು, ಕಾರ್ಯಕ್ರಮಕ್ಕೆ ಸುಮಾರು ಮೂರು ಲಕ್ಷ ಜನ ಆಗಮಿಸುವ ಸಾಧ್ಯತೆಯಿದೆ ಎಂದರು.
ಬೆಂಗಳೂರು ಬೃಹತ್ ಆಗಿ ಬೆಳೆದಿದ್ದು, ವಿಭಾಗಗಳನ್ನು ರಚಿಸಬೇಕೆಂದು ಬಿಜೆಪಿ ಸರ್ಕಾರದ ನಗರಾಭಿವೃದ್ಧಿ ಸಚಿವರಾಗಿದ್ದ ಸುರೇಶ್ ಕುಮಾರ್ ಅವರು ಯೋಜಿಸಿದ್ದರು. ಬೆಂಗಳೂರಿನಲ್ಲಿ ಒಂದೂವರೆ ಕೋಟಿ ಜನ ನೆಲೆಸಿದ್ದು, ಈ ನಗರದ ಆಡಳಿತವನ್ನು ಒಂದು ಮಹಾನಗರ ಪಾಲಿಕೆ ನಿರ್ವಹಿಸುವುದು ಕಷ್ಟಸಾಧ್ಯ ಎಂದರು.
ಆದ್ದರಿಂದ ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ಮಹಾನಗರಕ್ಕೆ ಮೂರು ಅಥವಾ ಹೆಚ್ಚು ಮಹಾನಗರ ಪಾಲಿಕೆಗಳನ್ನು ರಚಿಸಬೇಕೆಂಬ ಚಿಂತನೆಯಿಂದ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಬಿ.ಎಸ್.ಪಾಟೀಲ್, ಸಿದ್ದಯ್ಯ ಅವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿತ್ತು. ಆದ್ದರಿಂದ ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿರುವುದರಿಂದ, ಈ ಚಿಂತನೆಯನ್ನು ಕಾರ್ಯರೂಪಕ್ಕೆ ತರುತ್ತಿದೆ ಎಂದರು.
ಗಂಗಾವತಿ ಶಾಸಕರಾಗಿದ್ದ ಜನಾರ್ದನ ರೆಡ್ಡಿ ಅವರಿಗೆ ನ್ಯಾಯಾಲಯ ಏಳು ವರ್ಷಗಳ ಶಿಕ್ಷೆಗೆ ಗುರಿಪಡಿಸಿದ್ದು, ಸಂವಿಧಾನದ ನಿಯಮದಂತೆ ಅವರು ಅನರ್ಹರಾಗುತ್ತಾರೆ. ಈ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದರೆ ಯಾರು ಅಭ್ಯರ್ಥಿಯಾಗುತ್ತಾರೆ ಎಂದು ಪಕ್ಷ ತೀರ್ಮಾನಿಸುತ್ತದೆ. ಗಂಗಾವತಿ ವಿಧಾನಸಭೆಯ ಉಪಚುನಾವಣೆಯಲ್ಲಿ ನಾವು ಖಂಡಿತ ಗೆಲ್ಲುತ್ತೇವೆ. ಪ್ರಜಾಪ್ರಭುತ್ವದಲ್ಲಿ ಟೀಕಿಸುವುದು ಸಹಜ. ಆದರೆ ನಮ್ಮ ಸರ್ಕಾರದ ಸಾಧನೆ, ನಮ್ಮ ಬದ್ಧತೆಯ ಬಗ್ಗೆ ಜನರಿಗೆ ತಿಳಿದೇ ತಿಳಿಯುತ್ತದೆ ಎಂದರು.
2008-2013ರವರೆಗೆ ವಿರೋಧ ಪಕ್ಷದ ನಾಯಕನಾಗಿದ್ದಾಗ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರ ಅಕ್ರಮ ಗಣಿಗಾರಿಕೆಯ ವರದಿ ಆಧರಿಸಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲಾಗಿತ್ತು. ಅಂದು ಬಿಜೆಪಿ ಸರ್ಕಾರ ನನ್ನ ಪಾದಯಾತ್ರೆಯನ್ನು ವಿರೋಧಿಸಿತ್ತು. ಅಂದು ಅಕ್ರಮ ಗಣಿಗಾರಿಕೆ ವಿರುದ್ಧ ನಡೆಸಿದ ಹೋರಾಟಕ್ಕೆ ಇಂದು ಫಲ ದೊರೆತಿದೆ. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರಿಗೆ ಶಿಕ್ಷೆಯಾಗಬೇಕು ಹಾಗೂ ಅಕ್ರಮ ಗಣಿಗಾರಿಕೆ ನಿಲ್ಲಬೇಕು ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿಯವರು ಗೆಲ್ಲಲು ನಾನು ಸಹಾಯ ಮಾಡಿದ್ದೆ ಎನ್ನುವುದು ಅಪ್ಪಟ ಸುಳ್ಳು. ಜನಾರ್ದನ ರೆಡ್ಡಿಯವರು ಬಿಜೆಪಿ ಪಕ್ಷದವರಾಗಿದ್ದು, ಅವರಿಗೆ ಸಹಾಯ ಮಾಡಲು ಹೇಗೆ ಸಾಧ್ಯ? ನಾನು ನನ್ನ ರಾಜಕೀಯ ಜೀವನದುದ್ದಕ್ಕೂ ಬಿಜೆಪಿ ಹಾಗೂ ಆರ್ ಎಸ್ ಎಸ್ ಸಿದ್ಧಾಂತವನ್ನು ವಿರೋಧಿಸುತ್ತಾ ಬಂದವನು, ಈ ವರೆಗೆ ಸೈದ್ಧಾಂತಿಕವಾಗಿ ರಾಜಿಮಾಡಿಕೊಂಡವನಲ್ಲ ಎಂದರು.




