ಈ ಬಾರಿ ಕಾಂಗ್ರೆಸ್ ಸಂಪೂರ್ಣ ನೆಲಸಮವಾಗಲಿದೆ: ಯಡಿಯೂರಪ್ಪ

3 years ago

ಬೆಂಗಳೂರು: ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಈ ಬಾರಿ ಕಾಂಗ್ರೆಸ್ ಸಂಪೂರ್ಣ ನೆಲಸಮವಾಗಲಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಎಸ್.ಬಾಲರಾಜು ಮತ್ತು ಅವರ ಬೆಂಬಲಿಗರ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಜೆಪಿ ಈ ಬಾರಿ 135 ರಿಂದ 140 ಸ್ಥಾನಗಳನ್ನು ಗೆದ್ದು, ಅಧಿಕಾರಕ್ಕೆ ಬರುವುದು ನಿಶ್ಚಿತ. ಭಾನುವಾರದಿಂದ ಚುನಾವಣಾ ಪ್ರವಾಸ ಆರಂಭವಾಗಲಿದೆ. ಆಗ ಯಾವ ರೀತಿ ಗಾಳಿ ಬೀಸುತ್ತಿದೆ ಎಂಬುದು ಅರ್ಥವಾಗುತ್ತದೆ. ನರೇಂದ್ರ ಮೋದಿ ಅವರು ಪ್ರಚಾರಕ್ಕೆ ಬಂದ ನಂತರ ಹೆಚ್ಚಿನ ಬಲ ಬರಲಿದೆ. ಬಿಜೆಪಿ ಸೇರಲು ಅನೇಕರು ತಮ್ಮನ್ನು ಭೇಟಿಯಾಗುತ್ತಿದ್ದಾರೆ. ಬಿಜೆಪಿ ತತ್ವ–ಸಿದ್ಧಾಂತ ಒಪ್ಪಿ ಬರುವುದಾದರೆ ಅಂತವರನ್ನು ಸ್ವಾಗತಿಸಲು ಸಿದ್ಧರಾಗಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.

ಬಾಲರಾಜು ಅವರ ಸೇರ್ಪಡೆಯಿಂದ ಚಾಮರಾಜನಗರದಲ್ಲಿ ಬಿಜೆಪಿಗೆ ಬಲ ಬಂದಿದೆ. 1999 ರಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಾಲರಾಜು ಅವರು ಕೇವಲ ನಾಲ್ಕು ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು. 2004 ರಲ್ಲಿ ಪಕ್ಷೇತರರಾಗಿ ಗೆಲುವು ಕಂಡಿದ್ದರು ಎಂದರು.

ಈ ಸಂದರ್ಭದಲ್ಲಿ ಬಾಲರಾಜು ಮಾತನಾಡಿ, ಜನಪ್ರಿಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತವನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಬಿಜೆಪಿಯಿಂದ ಈ ಹಿಂದೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಕಡಿಮೆ ಅಂತರದಿಂದ ಪರಾಭವಗೊಂಡಿದ್ದ ನನಗೆ ಇದೀಗ ಮತ್ತೆ ಪಕ್ಷಕ್ಕೆ ಕೆಲಸ ಮಾಡಲು ಹೆಮ್ಮೆ ಎನಿಸುತ್ತಿದೆ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.

Leave a Reply