ಡಿ.ಕೆ ಶಿವಕುಮಾರ್ ಸಲ್ಲಿಸಲಾಗಿದ್ದ ನಾಮಪತ್ರ ಅಂಗೀಕಾರ

3 years ago

ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕನಕಪುರ ವಿಧಾನಸಭೆ ಕ್ಷೇತ್ರದಿಂದ ಆಯ್ಕೆ ಬಯಸಿ ಸಲ್ಲಿಸಲಾಗಿದ್ದ ನಾಮಪತ್ರ ಊರ್ಜಿತಗೊಂಡಿದೆ. ಇದರೊಂದಿಗೆ ಈ ಕುರಿತಾಗಿ ಉಂಟಾಗಿದ್ದ ಎಲ್ಲ ಗೊಂದಲಗಳು ಬಗೆಹರಿದಿವೆ.

ನಾಮಪತ್ರ ಸ್ವೀಕಾರಗೊಂಡ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿರುವ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಸತತ ಹೋರಾಟ ನಡೆಸುತ್ತಿರುವ ನನಗೆ ಕಿರುಕುಳ ನೀಡಲಾಗುತ್ತದೆ. ನನ್ನ ನಾಮಪತ್ರ ತಿರಸ್ಕರಿಸುವ ಷಡ್ಯಂತ್ರ ರೂಪಿಸಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ನನ್ನ ಸೋದರ ಪರ್ಯಾಯವಾಗಿ ನಾಮಪತ್ರ ಸಲ್ಲಿಸಿದ್ದರು ಎಂದು ಹೇಳಿದರು.

ಸುಧೀರ್ಘ ವರ್ಷಗಳಿಂದ ರಾಜಕೀಯದಲ್ಲಿರುವ ನನಗೆ ನಾಮಪತ್ರ ಹೇಗೆ ಭರ್ತಿ ಮಾಡಬೇಕು ಯಾವ ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬ ಸಂಪೂರ್ಣ ಅರಿವಿದೆ. ಆದರೂ ಬಿಜೆಪಿಯವರು ಯಾವುದೇ ರೀತಿಯ ಷಡ್ಯಂತ್ರ ರೂಪಿಸಿ ನನ್ನ ನಾಮಪತ್ರ ತಿರಸ್ಕರಿಸಬಹುದು ಎಂದು ಹಿತೈಷಿಗಳು ಸಲಹೆ ಮಾಡಿದ ಹಿನ್ನೆಲೆಯಲ್ಲಿ ಎಚ್ಚರಿಕೆಯ ನಡೆ ಇಡಲಾಗಿತ್ತು ಎಂದರು.

ಹದಿನೈದು ವರ್ಷಗಳಿಂದ ಒಂದು ಮನೆಯನ್ನು ಹೊರತು ಪಡಿಸಿ ನಾನು ಬೇರೆ ಯಾವ ಆಸ್ತಿಯನ್ನೂ ಖರೀದಿ ಮಾಡಿಲ್ಲ. ಆದರೂ ನನ್ನ ಆಸ್ತಿ ಪ್ರಮಾಣ ಹೆಚ್ಚಾಗಿರುವ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ರಾಜಕೀಯದಿಂದಲೇ ನಮ್ಮನ್ನು ಇಲ್ಲವಾಗಿಸಬೇಕು ಎಂಬ ಷಡ್ಯಂತ್ರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು

ನಾಮಪತ್ರದೊಂದಿಗೆ ನಾನು ಸಲ್ಲಿಸಿರುವ ಪ್ರಮಾಣ ಪತ್ರವನ್ನು ಐದು ಸಾವಿರ ಮಂದಿ ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಬಿಜೆಪಿಯ ಐಟಿ ಸೆಲ್ ಸೇರಿದಂತೆ ಅನೇಕ ಘಟಕಗಳು ನನ್ನ ಪ್ರಮಾಣ ಪತ್ರವನ್ನು ಪಡೆದುಕೊಂಡಿವೆ. ಕಳೆದ ಚುನಾವಣೆಯಲ್ಲೇ ನನ್ನ ನಾಮಪತ್ರವನ್ನು ತಿರಸ್ಕರಿಸುವ ಯತ್ನ ನಡೆಸಿತ್ತು ಎಂದು ಆರೋಪಿಸಿದರು.

ನನ್ನ ಆಸ್ತಿ ಮೌಲ್ಯ ಹೇಗೆ ಜಾಸ್ತಿಯಾಯಿತು ಎಂಬ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಕಳೆದ ಬಾರಿ ನಾನೇ ಖುದ್ದು ಆದಾಯ ತೆರಿಗೆ ಇಲಾಖೆಗೆ ತೆರಳಿ ವಿವರಣೆ ನೀಡಬೇಕಾಯಿತು. ಕಳೆದ ಹದಿನೈದು ವರ್ಷಗಳಿಂದ ನಾನು ಒಂದು ಮನೆ ಬಿಟ್ಟು ಬೇರೆ ಆಸ್ತಿ ಖರೀದಿ ಮಾಡಿಲ್ಲ. ಹಿಂದೆ ಹೊಂದಿದ್ದ ಆಸ್ತಿಯ ಮೌಲ್ಯ ಏರಿಕೆಯಾಗುತ್ತಿದೆ. ಅದನ್ನೇ ವ್ಯತಿರಿಕ್ತವಾಗಿ ಬಿಂಬಿಸಲಾಗುತ್ತಿದೆ ಎಂದು ಹೇಳಿದರು.

ನಾನು ಅಧ್ಯಕ್ಷನಾದ ಮೇಲೆ ನಡೆದ ಮೇಕೆದಾಟು, ಸ್ವತಂತ್ರ ನಡಿಗೆ, ಭಾರತ್ ಜೋಡೋ ಯಾತ್ರೆಗಳ ಯಶಸ್ಸು ಬಿಜೆಪಿಯವರ ಕಣ್ಣು ಕುಕ್ಕುತ್ತಿವೆ. ಕೋವಿಡ್ ವೇಳೆ ಬಿಜೆಪಿಯವರು ಭ್ರಷ್ಟಾಚಾರ ಮಾಡಿದರು. ನಾವು ಜನರ ಸೇವೆ ಮಾಡಿದೆವು. ಭ್ರಷ್ಟಾಚಾರಕ್ಕೆ ಸಂಬಂಸಿದಂತೆ ಸಚಿವರ ರಾಜೀನಾಮೆ ಪಡೆಯಲಿಲ್ಲ. ಡಿ.ಕೆ.ಶಿವಕುಮಾರ್ ರಾಜಕೀಯದಲ್ಲಿದ್ದರೆ ತಾನೇ ಇದೆಲ್ಲಾ ನಡೆಯಲು ಸಾಧ್ಯ ಎಂಬ ಕಾರಣಕ್ಕೆ ನನ್ನನ್ನು ರಾಜಕೀಯದಿಂದಲೇ ಇಲ್ಲವಾಗಿಸಲು ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ರಾಹುಲ್‍ಗಾಂಧಿ ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ ನಿಸ್ವಾರ್ಥಿ. ಭಾರತ್ ಜೋಡೋ ಯಾತ್ರೆಯಲ್ಲಿ ಯಾರ ಮನೆಗೂ ಬರದೇ ಬೀದಿಯಲ್ಲಿ ವ್ಯಾನ್ ನಿಲ್ಲಿಸಿಕೊಂಡು ಮಲಗಿದ್ದ ನಾಯಕ. ಅಂತಹವರನ್ನೇ ಬಿಡಲಿಲ್ಲ. ಸೋನಿಯಾ ಗಾಂಧಿ ಒಂದು ರೂಪಾಯಿಯನ್ನೂ ಪಡೆಯಲಿಲ್ಲ. ಅವರ ಮೇಲೆ ನ್ಯಾಷನಲ್ ಹೆರಾಲ್ಡ್ ಕೇಸು ಹಾಕಿದ್ದರು.

ಪಕ್ಷಕ್ಕೆ ಐದು, ಹತ್ತು ಲಕ್ಷ ನೀಡಿದವರನ್ನು ಬಿಡದೆ ವಿಚಾರಣೆ ಮಾಡಿ ಕಿರುಕುಳ ನೀಡಿದರು. ಪ್ರತಿ ಹಂತದಲ್ಲೂ ಬಿಜೆಪಿ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ಷಡ್ಯಂತ್ರ ರೂಪಿಸಿದೆ. ಹೀಗಾಗಿ ತಾವು ಮುನ್ನೆಚ್ಚರಿಕೆ ತೆಗೆದುಕೊಂಡು ನನ್ನ ಸಹೋದರ ಡಿ.ಕೆ.ಸುರೇಶ್‍ರಿಂದ ನಾಮಪತ್ರ ಹಾಕಿಸಿದ್ದೇನೆ ಎಂದು ಹೇಳಿದರು.

Leave a Reply