ಅರ್ಥ ಮಾಡ್ಕೊಳಿ….. ಇದು ಹಾಸನದವರ ಧರ್ಮಸಂಕಟ!

2 years ago

ಹೀಗೊಂದು ಅನುಭವ

ಮೊನ್ನೆ ಬೇಸಿಗೆ ರಜೆ ಪ್ರಯುಕ್ತ ಮಕ್ಕಳು ಮೊಮ್ಮಕ್ಕಳೊಟ್ಟಿಗೆ ಒಂದು ಸಣ್ಣ ಟ್ರಿಪ್ ಗೆ ಹೋಗಿದ್ದೆ. ಅಲ್ಲಿ, ಇಲ್ಲಿ ಸುತ್ತಾಡಿ ಕೊನೆಗೆ ಮುರುಡೇಶ್ವರದ ಬೀಚು ತಲುಪಿದೆವು. Age is just a number ಅಂತಾರಲ್ಲ, ಅದು ಒಮ್ಮೊಮ್ಮೆ ನಮ್ಮ ಜೀವನದಲ್ಲೂ ನಿಜವಾಗಿಬಿಡುತ್ತೆ. ಅದರಲ್ಲೂ ಮುದ್ದುಮುದ್ದಾದ ಮೊಮ್ಮಕ್ಕಳೊಟ್ಟಿಗೆ ಸಮಯ ಕಳೆವಾಗ, ನಾವು ಕೂಡಾ ನಮ್ಮ ವೃದ್ಧಾಪ್ಯ ಮರೆತು ತೀರಾ ಮಕ್ಕಳಾಗಿಬಿಡುತ್ತೇವೆ. ಫ್ಯಾಮಿಲಿಯ ಜೊತೆಗಿದ್ದ ಖುಷಿ, ನೆತ್ತಿ ಸುಡುವ ಸೂರ್ಯನ ಬಿಸಿಲು, ಎದುರಿಗೆ ಹರವಿಕೊಂಡಿದ್ದ ವಿಶಾಲ ಜಲಧಿ, ಆಮಿಷವೊಡ್ಡಿ ಸೆಳೆಯುತ್ತಿದ್ದ ಆ ಮೋಹಕ ಅಲೆಗಳು…. ರಿಟೈರ್‍ಡ್ ಆಗಿ ಹತ್ತು ವರ್ಷವಾಯ್ತು ಅನ್ನೋದನ್ನೇ ಮರೆತು ನಾನು ಕೂಡಾ ಸಮುದ್ರದ ನೀರಿಗಿಳಿದು ಆಟವಾಡಿದೆ. ಜೀವನದ ದುಡಿಮೆಯ ಧಾವಂತದಲ್ಲಿ ನಾನು ಕಳೆದುಕೊಂಡಿದ್ದ ಖುಷಿಯನ್ನೆಲ್ಲ ಸಮುದ್ರ ಒಮ್ಮೆಲೇ ತಂದು ನನ್ನ ಮೇಲೆ ಎರಚಿದಂತಹ ಅನುಭವ. ಸಂತಸಕ್ಕೆ ಪಾರವಿಲ್ಲ. ಆದರೂ ಖುಷಿಯಿಂದ ಬೇರ್ಪಟ್ಟು ಬದುಕಿಗೆ ಮರಳುವುದು ಅನಿವಾರ್ಯವಲ್ಲವೇ….. ಆ ಮರಳುವಿಕೆಯನ್ನು ನೆನಪಿಸುವ ಸಲುವಾಗಿಯೇ ಸಮುದ್ರ ತನ್ನ ತೀರದ ಉದ್ದಕ್ಕೂ ಮರಳು ಚೆಲ್ಲಿಕೊಂಡು ಮಲಗಿದೆಯೇನೋ ಅನ್ನಿಸುತ್ತೆ.

ಅಂತೂ ಸಮುದ್ರದ ಖುಷಿಯಿಂದ ಬಿಡಿಸಿಕೊಂಡು ಹೊರಬಂದಾಗ, ಮೈಯೆಲ್ಲ ಅಂಟಂಟು. ಉಪ್ಪು ನೀರಿನ ಲವಣದ ಪರಿಣಾಮ. ಅದನ್ನು ಶುದ್ಧ ಮಾಡಿಕೊಳ್ಳದೆ ಬಟ್ಟೆ ತೊಡಲು ಸಾಧ್ಯವೇ ಇಲ್ಲವೆನ್ನುವಷ್ಟು ಕಿರಿಕಿರಿ. ನಮ್ಮಂತವರಿಗೆಂದೇ, ಅಲ್ಲಿನ ಅಕ್ಕಪಕ್ಕದ ಮನೆಯವರು ತಮ್ಮತಮ್ಮ ಜಾಗಗಳಲ್ಲಿ ಸ್ನಾನಗೃಹಗಳನ್ನು ಮಾಡಿಕೊಂಡಿದ್ದಾರೆ. ಅವರಿಗೆ ಒಂದಷ್ಟು ದುಡಿಮೆ, ನಮಗೆ ಉಪ್ಪಿನ ಅಂಟಿನಿಂದ ಒಂದಷ್ಟು ಮುಕ್ತಿ.

ಅಂತದ್ದೇ ಒಂದು ಸ್ನಾನಗೃಹ ಹೊಕ್ಕು ನಾವು ಸ್ನಾನ ಮುಗಿಸಿ, ಹೊರಗೆ ಮೈ ಒರೆಸಿಕೊಳ್ಳುತ್ತಾ ಬಟ್ಟೆ ಹಾಕಿಕೊಳ್ಳುತ್ತಿರುವಾಗ ನಾಲ್ವರು ಯುವಕರು ಉಪ್ಪಿನ ಮಜ್ಜನದಿಂದ ಮೇಲೆದ್ದು ಬಂದವರಂತೆ, ಅತ್ತ ಸ್ನಾನಕ್ಕಾಗಿ ಬಂದರು. ಅದು ಬ್ಯಾಚಲರ್‍ಸ್ ಟ್ರಿಪ್ ಅನ್ನೋದು ಮೇಲ್ನೋಟಕ್ಕೇ ತಿಳಿಯಿತು. ಒಬ್ಬರಿಗೊಬ್ಬರು ತಮಾಷೆ ಮಾಡಿಕೊಂಡು, ಗೊಳ್ಳೆಂದು ನಗು ಉಕ್ಕಿಸುತ್ತಾ, ಬಲು ಮಜದ ಮೂಡಿನಲ್ಲಿದ್ದರು.

ಅವರನ್ನು ಮಾತಿಗೆಳೆವ ಮನಸ್ಸಾಯ್ತು. ಸಾಮಾನ್ಯವಾಗಿ ಅಪರಿಚಿತರೊಟ್ಟಿಗೆ ನಾವು ಮಾತು ಶುರು ಮಾಡುವುದೇ ಅವರ ಸ್ಥಳಪುರಾಣದ ಕುರಿತು ಪ್ರಶ್ನಿಸುವ ಮೂಲಕ. ನಾನೂ ಅದನ್ನೇ ಪೀಠಿಕೆಯಾಗಿ ಬಳಸಿಕೊಂಡು, “ಯಾವ ಊರಿಂದ ಬಂದಿದೀರಪ್ಪಾ ಎಲ್ರೂ?” ಎಂದೆ.

ಪ್ರಶ್ನೆ ಅವರನ್ನು ತುಸು ಕಸಿವಿಸಿಗೆ ದೂಡಿತೇನೊ ಅನ್ನಿಸುತ್ತೆ. ಲವಲವಿಕೆಯನ್ನು ಕಳೆದುಕೊಂಡರು. ಸ್ವಲ್ಪ ಗ್ಯಾಪ್ ನ ನಂತರ ಅವರಲ್ಲೊಬ್ಬ “ತುಮಕೂರಿನಿಂದ ಬಂದೀದೀವಿ ಅಂಕಲ್” ಅಂದ. ಅವರ ಉತ್ತರಕ್ಕಿಂತಲೂ, ನನ್ನ ಪ್ರಶ್ನೆಯಿಂದ ಅವರು ಅನುಭವಿಸಿದ ಕಸಿವಿಸಿಯ ಬಗ್ಗೆಯೇ ನನಗೆ ಕುತೂಹಲ ಹೆಚ್ಚಾಯ್ತು. ಮತ್ತೇನೋ ಕೇಳಲು ಮುಂದಾಗುತ್ತಿದ್ದೆ, ಅಷ್ಟರಲ್ಲಿ ಉತ್ತರ ಕೊಟ್ಟ ಆ ಯುವಕನ ಜೊತೆಗಿದ್ದ ಉಳಿದ ಮೂವರು ಗೊಳ್ಳನೆ ನಗಲು ಶುರು ಮಾಡಿ, ಮತ್ತಷ್ಟು ದಿಗ್ಭ್ರಾಂತಿಗೆ ಕಾರಣರಾದರು!

ನನಗೆ ಉತ್ತರಕೊಟ್ಟಿದ್ದ ಆ ಯುವಕ ನಗುತ್ತಿದ್ದ ತನ್ನ ಸ್ನೇಹಿತರ ಮುಖಗಳನ್ನು ಪೆಕರುಪೆಕರನಂತೆ ನೋಡಿ, ತಾನೂ ನಗಲಾರಂಭಿಸಿದ. ಈಗ ಕಸಿವಿಸಿಗೊಳ್ಳುವ ಸರದಿ ನನ್ನದು. ನನ್ನ ಗೊಂದಲ ಅವರಿಗೆ ಅರ್ಥವಾಯಿತೇನೊ, ಅದರಲ್ಲೊಬ್ಬ “ಅಂಕಲ್, ಈ ನನ್ ಮಗ ಸುಳ್ಳ್ ಹೇಳ್ತಾ ಇದಾನೆ. ನಮ್ದು ತುಮಕೂರಲ್ಲ, ಹಾಸನ!” ಎಂದು ನಗು ಮುಂದುವರೆಸಿದ.

ಆಗ ಮೊದಲು ಉತ್ತರಕೊಟ್ಟಿದ್ದ ಯುವಕ, “ಇನ್ನೇನ್ ಮಾಡೋದು ಅಂಕಲ್…… ನಾವು ಟ್ರಿಪ್ ಹೊರಟಾಗಿಂದ ನೋಡ್ತಾ ಇದೀವಿ. ನಿಮ್ಮೊಂತೋರು ಹೀಗೆ ಊರು ಹೆಸ್ರು ಕೇಳ್ತಾರೆ. ನಾವು ಹಾಸನ ಅಂದಕೂಡಲೇ, `ಓಹೋ… ಪೆನ್ ಡ್ರೈವ್….!! ನಿಮಗೂ ಸಿಕ್ತಾ?’ ಅಂತ ಕಳ್ಳ ನೋಟದಲ್ಲಿ ರೇಗಿಸ್ತಾರೆ. ಅದಕ್ಕೆ ಸಾಕಾಗಿ, ತುಮಕೂರು ಅಂದೆ” ಅಂದ. ಹಾಗೆ ಹೇಳುತ್ತಾ ಅವರು ಸ್ನಾನಕ್ಕೆ ಹೊರಟರು.

ಪ್ರಸ್ತಾಪವಾಗಿದ್ದ ಪೆನ್ ಡ್ರೈವ್ ವಿಷಯವನ್ನು ಕೆದಕಿ ಮಾತಾಡಲು ನನಗೂ, ಅವರಿಗೂ ವಯಸ್ಸಿನ ದೊಡ್ಡ ತಡೆಗೋಡೆ, ಮುಜುಗರದ ಕಂದಕಗಳು ಅಡ್ಡ ನಿಂತಿದ್ದರಿಂದ ನಾನು ಹೆಚ್ಚು ಮಾತಿಗಿಳಿಯಲಿಲ್ಲ. ಆದರೆ ಒಂದಂತೂ ಸತ್ಯ… ಪಾಪಾ, ತಾವೇ ಅಭಿಮಾನದಿಂದ ಬೆಂಬಲಿಸಿ, ಪ್ರೋತ್ಸಾಹಿಸಿದ ಒಂದು ಕುಟುಂಬದ ಕಾರಣಕ್ಕೆ ಇವತ್ತು ಹಾಸನದವರು ತಮ್ಮ ಊರಿನ ಹೆಸರು ಹೇಳಿಕೊಳ್ಳುವುದಕ್ಕೂ ಮುಜುಗರ ಅನುಭವಿಸಬೇಕಾದ ಧರ್ಮಸಂಕಟಕ್ಕೆ ಸಿಲುಕಿದ್ದಾರೆ. ನನ್ನ ಈ ಅನುಭವ ನಿಮಗೆ ತಮಾಷೆಯಾಗಿ ಕಾಣಬಹುದು; ಆದರೆ ವ್ಯಕ್ತಿಯೇ ಆಗಲಿ, ವಸ್ತುವೇ ಆಗಲಿ ಸರಿಯಾದುದದನ್ನು ನಾವು ಆಯ್ಕೆ ಮಾಡಿಕೊಳ್ಳದೆ ಹೋದರೆ ಅದರಿಂದ ಒಂದಲ್ಲ ಒಂದು ದಿನ ಇಂತಹ ಮುಜುಗರವನ್ನು ಅನುಭವಿಸಲೇಬೇಕಾಗುತ್ತೆ ಎಂಬ ನೀತಿಪಾಠ ಆ ಹುಡುಗರಿಂದ ನನಗೆ ಅರ್ಥವಾಯ್ತು!

– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

Leave a Reply