ಇಲ್ಲಿ ಶೇಖರಿಸಿರುವ ಮದ್ಯದ ಬಾಟಲುಗಳು ಮೈಸೂರು ಸಮೀಪದ ಕೃಷ್ಣರಾಜ ಜಲಾಶಯದ ಹಿನ್ನೀರಿನಲ್ಲಿ ಕುಡಿದು ಬಿಸಾಡಿ ಹೋದ ಬಾಟಲುಗಳು.
ಸ್ಥಳೀಯ ಹಳ್ಳಿಯ ಗ್ರಾಮಸ್ಥರು ಇವುಗಳನ್ನು ಕಲೆ ಹಾಕಿ ಅಲ್ಲಿನ ಪರಿಸರವನ್ನು ಸ್ವಚ್ಛಗೊಳಿಸಿದ್ದಾರೆ.
ಈ ಗ್ರಾಮಸ್ಥರು ಇಂಜಿನಿಯರ್ ಅಥವಾ ಎಂಟೆಕ್ ಓದಿದವರಲ್ಲ ಅಥವಾ ಇನ್ಫೋಸಿಸ್ ನಂತಹ ಸಂಸ್ಥೆಗಳಲ್ಲಿ ದುಡಿದು ಲಕ್ಷಾಂತರ ರೂಪಾಯಿ ಸಂಬಳ ಪಡೆಯುವವರಲ್ಲ. ತಾವು ಬದುಕುತ್ತಿರುವ ಈ ಜಗತ್ತಿನ ನೆಲ ಮತ್ತು ಜಲ ಶುದ್ಧವಾಗಿರಬೇಕು ಎಂದು ನಂಬಿದವರು. ಮನುಷ್ಯ ನಡೆದ ಜಾಗದಲ್ಲಿ ಗರಿಕೆಯ ಹುಲ್ಲು ಬೆಳೆಯುವುದಿಲ್ಲ ಎಂಬ ನಮ್ಮ ಪೂರ್ವಿಕರ ಜ್ಞಾನ ಶಿಸ್ತುವನ್ನು ಸದಾ ಎದೆಯೊಳಗೆ ಕಾಪಿಟ್ಟುಕೊಂಡವರು.
ರಜೆಯ ದಿನಗಳಲ್ಲಿ ಇಂತಹ ಜಾಗಗಳಿಗೆ ಕಾರುಗಳಲ್ಲಿ ಬರುವ ವಿದ್ಯಾವಂತ ನಾಗರೀಕರೆಂಬ ಅನಾಗರೀಕರಿಗೆ ಕುಡಿದು ತಿಂದು ತೇಗಿದ ನಂತರ ಬಾಟಲ್ ಅಥವಾ ಪ್ಲಾಸ್ಟಿಕ್ ತಟ್ಟೆ ಲೋಟಗಳನ್ನು ವಾಪಸ್ ತೆಗೆದುಕೊಂಡು ಹೋಗಿ ಕಸದ ಬುಟ್ಟಿಗೆ ಹಾಕಬೇಕೆಂಬ ಕನಿಷ್ಠ ಜ್ಞಾನವಿಲ್ಲ.
ನಾನು ಪದೇ ಪದೆ ಓಡಾಡುತ್ತಿರುವ ಮೈಸೂರು- ಮಂಡ್ಯ ಮುಖ್ಯ ರಸ್ತೆಯಲ್ಲಿ ರಸ್ತೆ ಬದಿಯ ಸೇತುವೆ ಬಳಿ ಕಾರು ನಿಲ್ಲಿಸಿ ಕುಡಿದು ಬಿಸಾಡಿದ ಇಂತಹ ಕಸವನ್ನು ಪ್ರತಿ ಬಾರಿಯೂ ನೋಡುತ್ತಿದ್ದೇನೆ. ಈ ಅಯೋಗ್ಯರಿಗೆ ಅನಿರೀಕ್ಷಿತವಾಗಿ ದಕ್ಕಿದ ಶ್ರೀಮಂತಿಕೆ ಇವರನ್ನು ಮೃಗಗಳನ್ನಾಗಿ ಪರಿವರ್ತಿಸಿದೆ.
ಜಗದೀಶ್ ಕೊಪ್ಪ- ಹಿರಿಯ ಪತ್ರಕರ್ತರು




