ಅಧಿಕಾರಸ್ಥರ ಎದುರು ಬಾಗದೆ ಸೆಟೆಸಿ ನಿಲ್ಲುವ ಬರೆಹಗಳು

2 years ago

ದಿನೇಶ್ ಅಮಿನ್ ಮಟ್ಟು ಅವರು ಸಂಪಾದಿಸಿರುವ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಬರಹಗಳ ಸಂಕಲನ ‘ಬೇರೆಯೇ ಮಾತು’ ಕುರಿತು ರಂಗನಾಥ ಕಂಟನಕುಂಟೆ ಅವರ ಟಿಪ್ಪಣಿ…

ವಡ್ಡರ್ಸೆ ರಘುರಾಮ ಶೆಟ್ಟರ ಬಗೆಗೆ ಬೇರೆಯವರ ಮಾತಿನಿಂದ ಕೇಳಿ ತಿಳಿದಿದ್ದೆ ಹೆಚ್ಚು. ಅವರ ಗರಡಿಯಲ್ಲಿ ಪಳಗಿದವರು ಅವರ ಬಗೆಗೆ ಮತ್ತೆ ಮತ್ತೆ ಉಲ್ಲೇಖಿಸುತ್ತಲೇ ಇದ್ದುದನ್ನು ಕೇಳಿ ಅವರ ಬಗೆಗೆ ಒಂದು ಚಿತ್ರಣವಿತ್ತು. ಅವರ ಬರೆಹಗಳನ್ನು ಹೆಚ್ಚು ಓದಿರಲಿಲ್ಲ. ‘ಬಹುರೂಪಿ ಅರಸು’ ಎಂಬ ಒಂದು ಕೃತಿಯನ್ನು ಮಾತ್ರ ಓದಿದ್ದೆ. ಅವರ ಈ ಬರೆಹಗಳು ಪ್ರಕಟವಾಗುವ ಹೊತ್ತಿಗೆ ನಾನು ಐದಾರನೆಯ ತರಗತಿ ವಿದ್ಯಾರ್ಥಿ. ಆಗ ಅವರ ಈ ಬರೆಹಗಳನ್ನು ಓದುವುದು ಸಾಧ್ಯವೇ ಇರಲಿಲ್ಲ. ನನ್ನನ್ನು ಒಳಗೊಂಡಂತೆ ನಮ್ಮ ತಲೆಮಾರಿನ ಬಹುತೇಕರಿಗೆ ವಡ್ಡರ್ಸೆಯವರ ವ್ಯಕ್ತಿತ್ವ ಮತ್ತು ಅವರ ಬರೆಹಗಳ ನೇರ ಪರಿಚಯವಿಲ್ಲ.

ಸದ್ಯ ಅವರ ಬರೆಹಗಳನ್ನು ಕಟ್ಟುಗೊಳಿಸಿ ‘ಬೇರೆಯೇ ಮಾತು’ ಎಂಬ ಹೆಸರಿನಲ್ಲಿ ಪ್ರಕಟಿಸಿರುವುದು ಮಹತ್ವದ ಸಂಗತಿ. ಇಂತಹ ಕಟ್ಟು ಈ ಮೊದಲೇ ಪ್ರಕಟವಾಗಬೇಕಿತ್ತು. ಸದ್ಯ ಈಗಲಾದರೂ ಪ್ರಕಟವಾಗಿದೆ ಎಂಬುದೇ ಸಂತಸದ ಸಂಗತಿ. ಈ ಕೃತಿ ಪ್ರಕಟಣೆಗೆ ಮೊದಲು ಕರಡು ರೂಪದಲ್ಲಿ ಓದಲು ಪ್ರಕಾಶಕರಾದ ಅಕ್ಷತಾ ಅವರು ಕೊಟ್ಟಿದ್ದರು. ಈ ಕಟ್ಟಿನಲ್ಲಿನ ಬರೆಹಗಳನ್ನು ಓದಿ ನನ್ನ ಅರಿವನ್ನು ವಿಸ್ತರಿಸಿಕೊಂಡಿದ್ದೇನೆ. ಅಂದರೆ ವಡ್ಡರ್ಸೆಯವರ ಬರೆಹಗಳು ಈ ಕಾಲದ ಓದುಗರ ತಿಳುವಳಿಕೆಯನ್ನು ನಿಜಕ್ಕೂ ಹಿಗ್ಗಿಸುತ್ತವೆ.

ಅಲ್ಲದೆ ಸ್ವತಂತ್ರ ಭಾರತ ಮತ್ತು ಕರ್ನಾಟಕದ ಮೊದಲ ನಲವತ್ತು ವರ್ಷಗಳ ರಾಜಕೀಯ ಚರಿತ್ರೆಯನ್ನು ಕಟ್ಟಿಕೊಡುತ್ತವೆ. ಇಲ್ಲಿ ದಾಖಲಾಗಿರುವ ಹಲವು ಸಂಗತಿಗಳು ನಮ್ಮ ವರ್ತಮಾನವನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ. ಹಾಗೆಯೇ ಚರಿತ್ರೆಯಿಂದ ಕಲಿಯಬೇಕಿರುವ ಪಾಠಗಳನ್ನು ಎತ್ತಿ ತೋರಿಸುತ್ತಿವೆ. ಕೆಲವು ಮಾಹಿತಿಗಳು ಹಳತೆನಿಸಿದರೂ ಒಟ್ಟು ಬರೆಹಗಳ ಆಶಯ, ರಾಜಕೀಯ ನಿಲುವುಗಳು ಪ್ರಸ್ತುತವಾಗಿವೆ. ಆಳುವ ವರ್ಗಗಳು, ಮೇಲ್ಜಾತಿಗಳು ತಳಸಮುದಾಯಗಳನ್ನು ವಂಚಿಸುತ್ತ ಬಂದಿರುವುದನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ. ಎಲ್ಲ ದಮನಿತ ಸಮುದಾಯಗಳು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬದಲಿಯಾದ ಚಿಂತನೆಯನ್ನು ರೂಪಿಸಿಕೊಳ್ಳಬೇಕಿರುವ ಅಗತ್ಯವನ್ನು ಇಲ್ಲಿನ ಬರೆಹಗಳು ಎತ್ತಿ ತೋರಿಸುತ್ತವೆ. ಬಲಿಷ್ಠ ಜಾತಿಗಳು ತಳಸಮುದಾಯಗಳನ್ನು ಹೇಗೆ ವಂಚಿಸಿವೆ ಎಂಬುದರ ವಿವರಗಳೂ ಇಲ್ಲಿವೆ.

ಅವರ ನಿಷ್ಟುರ, ಸರಳ ಮತ್ತು ಪಾರದರ್ಶಕ ಭಾಷೆ ಓದುಗರನ್ನು ಸೆಳೆಯುತ್ತವೆ. ‘ಸರಳವಾಗಿ ಬರೆಯುವುದು ಎಂದರೇನು?’ ಎಂದು ಹಲವರು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ತಕ್ಕ ಎತ್ತುಗೆ ಮತ್ತು ಮಾದರಿ ಎಂದರೆ ಈ ಕೃತಿಯೇ ಆಗಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಅಲ್ಲದೆ ಬರೆಹ ಯಾವುದೇ ಸೋಗನ್ನು ಹಾಕಿಕೊಳ್ಳದೆ ನೇರ ಮತ್ತು ಕನ್ನಡಿಯಂತಿರಬೇಕು ಎಂಬುದಕ್ಕೆ ಇದು ಮಾದರಿ.

ಪ್ರೊ. ನಂಜುಂಡಸ್ವಾಮಿ ಮತ್ತು ಲಂಕೇಶರ ಬಗೆಗೆ ಮಾಡಿರುವ ಒಂದು ಟಿಪ್ಪಣಿ ಅವರ ನಿಷ್ಟುರತೆಯ ದ್ಯೋತಕ. ಅವರಿಬ್ಬರೂ ಏಳ್ಗೆಯ ಉತ್ತುಂಗದಲ್ಲಿದ್ದಾಗ ಅವರ ವ್ಯಕ್ತಿಗತ ನಡವಳಿಕೆಗಳು ಹೇಗೆ ಕರ್ನಾಟಕದ ಜನಪರ ರಾಜಕಾರಣವನ್ನು ನಾಶ ಮಾಡಿದವು ಎಂಬುದನ್ನು ದಾಖಲಿಸಿದ್ದಾರೆ. ಹೀಗೆ ಭಿನ್ನಮತವನ್ನು ದಾಖಲಿಸಲು ದೃಢವಾದ ನಿಲುವು ಹೊಂದಿರಲೇಬೇಕು. ಯಾವುದೇ ವಿಚಾರವನ್ನು ಪರಿಶೀಲಿಸುವಾಗಲೂ ಅದರ ಒಳಿತು ಮತ್ತು ಕೆಡುಕುಗಳನ್ನು ಸಮಚಿತ್ತದಿಂದ ಪರಿಶೀಲಿಸುತ್ತ ದೃಢವಾದ ಮತ್ತು ಖಚಿತವಾದ ನಿಲುವನ್ನು ಮಂಡಿಸಿದ್ದಾರೆ. ಎಲ್ಲಿಯೂ ಅಧಿಕಾರದೆದುರು ಬಾಗಿರುವ ಸಂಗತಿಗಳು ಎದ್ದು ಕಾಣಿಸುವುದಿಲ್ಲ.

ಈ ಕಟ್ಟಿನಲ್ಲಿ ಅಡಕವಾಗಿರುವ ಬರೆಹಗಳ ಒಟ್ಟು ಆಶಯವನ್ನು ಆಧರಿಸಿ ನಾವು ಇಂದು ಹೊಸ ಚರ್ಚೆಯನ್ನು ನಡೆಸಬೇಕಾಗಿದೆ. ಅಂತಹ ಚರ್ಚೆಯನ್ನು ಹುಟ್ಟಿಹಾಕುವ ಶಕ್ತಿ ಇಲ್ಲಿನ ಬರೆಹಗಳಿಗೆ ಇದೆ. ಬದಲಿ ರಾಜಕೀಯ ಚಿಂತನೆಯನ್ನು ಕಟ್ಟಿಕೊಳ್ಳುವವರಿಗೆ ಇಲ್ಲಿನ ಬರೆಹಗಳು ದಾರಿ ತೋರುತ್ತವೆ. ಇಂದು ಮಾಧ್ಯಮಗಳು ಆಳುವವರ ಪಾದಗಳ ಬಳಿ ತೆವಳುತ್ತಿರುವಾಗ ನಿಜವಾದ ಪತ್ರಕರ್ತರಾದವರು ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿಯೂ ಇಲ್ಲಿನ ಬರೆಹಗಳಿವೆ. ಇದನ್ನು ಸಂಪಾದಿಸಿರುವ ದಿನೇಶ್ ಅಮಿನ್‍ ಮಟ್ಟು ಮತ್ತು ಪ್ರಕಟಿಸಿರುವ ಅಕ್ಷತಾ ಇಬ್ಬರೂ ಅಭಿನಂದನಾರ್ಹರು.

  • ಡಾ.ರಂಗನಾಥ ಕಂಟನಕುಂಟೆ, ಅಧ್ಯಾಪಕರು

Leave a Reply