ಪ್ರಕೃತಿಯ ಹಲವು ಕೌತುಕ ಘಟನೆಗಳು ನಡೆಯತ್ತವೆ. ಅಂತಹ ಮಹತ್ವದ ಘಟನೆಗೆ ಬೆಂಗಳೂರು ಇದೇ ಆಗಸ್ಟ್ 18ರಂದು ಸಾಕ್ಷಿಯಾಗಲಿದೆ. ಅಂದಹಾಗೆ ಇದು ಇದೇ ಮೊದಲ ಬಾರಿ ನಡೆಯುತ್ತಿರುವ ಘಟನೆಯೇನಲ್ಲ. 2023 ರಲ್ಲಿ ಎರಡನೇ ಬಾರಿಗೆ ಇಂತಹ ಘಟನೆ ನಡೆಯುತ್ತಿದೆ.
ಝೀರೋ ಶ್ಯಾಡೋ ಡೇ ಅಥವಾ ನೆರಳು ರಹಿತ ದಿನ ಎಂದು ಕರೆಯಲ್ಪಡುವ ಖಗೋಳದ ವಿದ್ಯಮಾನವನ್ನು ಬೆಂಗಳೂರಿನಲ್ಲಿ ನೀವೆಲ್ಲ ನೋಡಬಹುದು. ಇದೇ ಆಗಸ್ಟ್ 18 ರಂದು ಮಧ್ಯಾಹ್ನ 12:24 ಕ್ಕೆ ಈ ಅಪೂರ್ವ, ಅಪರೂಪದ ಮತ್ತು ವಿರಳ ಘಟನೆ ನಡೆಯಲಿದೆ. ಆದಿನ ನಗರದಲ್ಲಿ ಸೂರ್ಯ ನೇರವಾಗಿ ನೆತ್ತಿಯ ಮೇಲೆ ಬಂದ ಸಮಯದಲ್ಲಿ ಕಂಬಗಳು, ಕೋಲುಗಳು ಮತ್ತು ಜನ ಸೇರಿದಂತೆ ಇನ್ನಿತರ ವಸ್ತುಗಳ ನೆರಳು ನೆಲದ ಮೇಲೆ ಬೀಳುವುದಿಲ್ಲ.
ವರ್ಷಕ್ಕೆ ಎರಡು ಬಾರಿ ಇಂತಹ ಘಟನೆ ಜರುಗುತ್ತದೆ. ಏಪ್ರಿಲ್ 18 ರಂದು ಕೂಡ ಈ ಕೌತುಕ ನಡೆದಿತ್ತು. ಮಧ್ಯಾಹ್ನ 12.17 ಕ್ಕೆ ಈ ಘಟನೆ ನಡೆದಿತ್ತು. ಲಂಬ ವಸ್ತುಗಳು ಕೆಲವು ಕ್ಷಣಗಳ ಅವಧಿಯವರೆಗೆ ನೆರಳುರಹಿತವಾಗುತ್ತವೆ. ಇದೇ ಘಟನೆ ಹೈದರಾಬಾದ್ ನಲ್ಲಿ ಆಗಸ್ಟ್ 3 ರಂದು ಮಧ್ಯಾಹ್ನ 12:23 ಕ್ಕೆ ಮತ್ತು ಈ ಹಿಂದೆ ಮೇ 9 ರಂದು ಕಂಡುಬಂದಿತ್ತು.
ಆಗಸ್ಟ್ 18ರಂದು ಮಧ್ಯಾಹ್ನ 12.24ರ ಸುಮಾರಿಗೆ ನೆರಳು ಬೀಳುವ ವಸ್ತುಗಳ ನೆರಳು ಕಡಿಮೆಯಾಗುತ್ತ ಸಾಗಿ ಕೆಲವೇ ಸೆಕೆಂಡುಗಳಲ್ಲಿ, ನೆರಳು ಸಂಪೂರ್ಣವಾಗಿ ಕಣ್ಮರೆಯಾಗಿಬಿಡುತ್ತದೆ.



