ನನಗೆ ಜೀವ ಬೆದರಿಕೆ ಇದೆ: ಜಿ.ಎಂ.ಸಿದ್ದೇಶ್ವರ್

2 years ago

ಬೆಂಗಳೂರು: ಲೋಕಸಭಾ ಚುನಾವಣೆಗೆ ವೇದಿಕೆ ಸಜ್ಜುಗೊಳ್ಳುತ್ತಿರುವ ಬೆನ್ನಲ್ಲೇ ರಾಜಕೀಯ ನಾಯಕರ ನಡುವಿನ ಆರೋಪ ಪ್ರತ್ಯಾರೋಪಗಳು ತೀವ್ರವಾಗಿವೆ. ಇದರ ನಡುವೆ ಬಿಜೆಪಿ ಹಿರಿಯ ನಾಯಕ ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರ್ ನನಗೆ ಜೀವ ಬೆದರಿಕೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಮಾಜಿ ಸಚಿವರೂ ಆಗಿರುವ ಇವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಗೆ ಕಾರಣವಾಗಿದೆ.

ದಾವಣಗೆರೆಯ ಹೊಂಡದ ಸರ್ಕಲ್ ಚಂದ್ರಮೌಳೇಶ್ವರ ದೇವಾಲಯದಲ್ಲಿ ದಾವಣಗೆರೆ ಜಿಲ್ಲಾ ಬಿಜೆಪಿ ಘಟಕ ವತಿಯಿಂದ ಸ್ವಚ್ಚತಾ ಕಾರ್ಯ ಕೈಗೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಜಿ.ಎಂ.ಸಿದ್ದೇಶ್ವರ್, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಜಿಲ್ಲಾ ಮುಖಂಡರು ಭಾಗವಹಿಸಿದ್ದರು.

ಜೈ ಶ್ರೀರಾಮ್ ಘೋಷಣೆಯೊಂದಿಗೆ ಸತತ ಒಂದು ಗಂಟೆಗಳ ಕಾಲ ಸ್ವಚ್ಛತಾ ಕಾರ್ಯದಲ್ಲಿ ಮುಳುಗಿದ್ದ ಸಂಸದ ಜಿ.ಎಂ.ಸಿದ್ದೇಶ್ವರ್, ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನನ್ನು ತೆಗೆಯಬೇಕು ಎಂದು ಕೆಲವರು ಕಾಯುತ್ತಿದ್ದಾರೆ. ಕಾಲು ತೆಗೆಯಬೇಕು ಎಂದು ಹೊಂಚು ಹಾಕಿದ್ದಾರೆ. ವಿಷ ಹಾಕಿ ಸಾಯಿಸಲು ಸಂಚು ರೂಪಿಸಿದ್ದಾರೆ. ಹಾಗಾಗಿ ಎಲ್ಲೇ ಹೋದ್ರೂ ಎಚ್ಚರದಿಂದ ಇರುತ್ತೇನೆ. ನನಗೆ ಯಾರು ಏನೇ ಕೊಟ್ಟರೂ ನಾನು ತಿನ್ನುವುದಿಲ್ಲ ಎಂದರು.

ದಾವಣಗೆರೆಯಿಂದ ತೆಗೆಯಲು ಹೊಂಚು ಹಾಕಿದ್ದಾರೆ. ನನ್ನ ಸ್ನೇಹ ಬಳಗದಲ್ಲೇ ಈ ರೀತಿಯಾಗಿ ಹೊಂಚು ಹಾಕುತ್ತಿದ್ದಾರೆ. ನನಗೆ ಜೀವ ಬೆದರಿಕೆ ಇದೆ ಎಂದು ತಮ್ಮ ಆತಂಕವನ್ನು ಮಾಧ್ಯಮದವರ ಮುಂದೆ ತೋಡಿಕೊಂಡರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ಕೆಲ ಮೂಲಗಳ ಪ್ರಕಾರ ಸ್ವತಃ ಜಿ.ಎಂ.ಸಿದ್ದೇಶ್ವರ್ 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಒಲವು ತೋರುತ್ತಿಲ್ಲ. ಇವೆಲ್ಲ ಬೆಳವಣಿಗೆಗಳ ನಡುವೆ ಅವರ ಈ ಮಾತುಗಳು ಸಂಚಲನಕ್ಕೆ ಕಾರಣವಾಗಿವೆ.

Leave a Reply