ಅನಂತಕುಮಾರ ಹೆಗಡೆಯವರದು ಆಚಾರವಿಲ್ಲದ ನಾಲಿಗೆ: ರಾಮಲಿಂಗಾರೆಡ್ಡಿ

2 years ago

ಆರ್ಎಸ್ಎಸ್ ನಿಮ್ಮ ತಂದೆ -ತಾಯಿ ನಿಮಗೆ ಕಲಿಸಿರುವ ಸಂಸ್ಕೃತಿ ಇದೇನಾ?

ಬೆಂಗಳೂರು: ನಾಲಿಗೆ ಕುಲವನ್ನು ಹೇಳುತ್ತದೆ ಎಂಬ ಮಾತಿನಂತೆ ನಿಮ್ಮ ಸಂಸ್ಕಾರ ಏನು ಎಂಬುದು ನೀವು ಆಡಿರುವ ಈ ಮಾತಿನಿಂದ ಪ್ರತಿಬಿಂಬಿತವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಅನಂತಕುಮಾರ ಹೆಗಡೆಯವರು ನೀಡಿರುವ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದು, ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿರುವ ರಾಮಲಿಂಗಾರೆಡ್ಡಿ, ಆರ್ಎಸ್ಎಸ್ ನಿಮ್ಮ ತಂದೆ -ತಾಯಿ ನಿಮಗೆ ಕಲಿಸಿರುವ ಸಂಸ್ಕೃತಿ ಇದೇನಾ? ಏನು ನಿಮ್ಮ ಆಚಾರ ವಿಚಾರ, ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ದಾಸರ ವಾಣಿಯನ್ನು ಪರಿಪಾಲಿಸಬೇಕಾದ ಸ್ಥಿತಿಗೆ ನೀವು ಬಂದು ನಿಂತಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾತು ಆಡಿದರೆ ಹೋಯಿತು ಮುತ್ತು ಉದುರಿದರೆ ಹೋಯ್ತು ಎಂಬಂತೆ ನೀವು ಮುಖ್ಯಮಂತ್ರಿಗಳ ಬಗ್ಗೆ ಬಳಸಿರುವ ಪದ ಆರೂವರೆ ಕೋಟಿ ಕನ್ನಡದ ಜನತೆಯ ಕುರಿತು ಆಡಿದ ಮಾತಾಗಿರುತ್ತದೆ. ಅವರಿಗೆ ಮಾಡಿದ ಅಪಮಾನವಾಗುತ್ತದೆ ಎಂದಿದ್ದಾರೆ.

ಸಂಸದ ಹೆಗಡೆ ಅವರೇ ನೀವು ಆಡಿರುವ ಮಾತು ಬಳಸಿರುವ ಪದ ನಿಮ್ಮ ಮಾನಸಿಕ ಸ್ಥಿತಿಯ ಪ್ರತೀಕ. ಸಣ್ಣ ಮಾತು ಆಡುವುದರಿಂದ ನೀವು ದೊಡ್ಡವರಾಗುವುದಿಲ್ಲ. ಹಿಂದೆ ಕೇಂದ್ರ ಸಚಿವರಾಗಿದ್ದಾಗ ಸಂವಿಧಾನ ಬದಲಿಸುತ್ತೇನೆ ಅದಕ್ಕಾಗಿಯೇ ಅಧಿಕಾರಕ್ಕೆ ಬಂದಿರುವುದು ಎಂದು ಹೇಳಿದ್ದೀರಿ ಈಗ ಇಂತಹ ಮಾತು ನಿಮಗೆ ಮರ್ಯಾದೆ ತರುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಪಕ್ಷಕ್ಕೆ ಕಿಂಚಿತ್ತಾದರು ಮಾನ ಮರ್ಯಾದೆ, ಆಚಾರ-ವಿಚಾರ ಇದ್ದರೆ ಅನಂತ್ಕುಮಾರ್ ಹೆಗಡೆ ವಿರುದ್ಧ ಕ್ರಮ ಜರುಗಿಸಬೇಕು. ಇಷ್ಟು ದಿನ ಅಡ್ರೆಸ್ ಇಲ್ಲದಂತೆ ಕಳೆದು ಹೋಗಿದ್ದ ನೀವು ಈಗ ಚುನಾವಣೆ ಸಮಯದಲ್ಲಿ ಮತ ಗಳಿಸಲು ರೋಷ ಆವೇಶದ ಮಾತುಗಳನ್ನಾಡಿದ್ದೀರಿ, ಬೇರೆಯವರಿಗೂ ಮಾತನಾಡಲು ಬರುತ್ತದೆ. ಆದರೆ, ನಿಮ್ಮ ಮಟ್ಟಕ್ಕಿಳಿಯವುದು ಅನಾಗರಿಕತೆ ಆಗುತ್ತದೆ. ಜನ ದಡ್ಡರಲ್ಲ. ಈ ಬಾರಿ ನಿಮಗೆ ಪಾಠ ಕಲಿಸುತ್ತಾರೆ. ಶಾಶ್ವತವಾಗಿ ಅಡ್ರೆಸ್ ಇಲ್ಲದಂತೆ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply