ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿಸಲು ಎರಡು ಬಾರಿ ಪ್ರಯತ್ನ ನಡೆದಿದೆ: ಕೆ ಎನ್ ರಾಜಣ್ಣ

1 year ago

ಬೆಂಗಳೂರು: ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿಸಲು ಪ್ರಯತ್ನ ನಡೆದಿದೆ ಎಂದು ಆರೋಪಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಕೋಲಾಹಲಕ್ಕೆ ಕಾರಣವಾಗಿರುವ ಸಹಕಾರ ಸಚಿವ ಕೆ ಎನ್ ರಾಜಣ್ಣ ತಮ್ಮನ್ನು ಇದರಲ್ಲಿ ಸಿಲುಕಿಸಲು ಒಂದಲ್ಲಾ ಎರಡು ಬಾರಿ ಪ್ರಯತ್ನ ನಡೆದಿತ್ತು ಎಂದರು.

ಎರಡು ಬಾರಿಯೂ ಒಬ್ಬನೇ ಹುಡುಗ ಆದರೆ ಹುಡುಗಿಯರು ಬೇರೆ. ಒಮ್ಮೆ ಬಂದ ಹುಡುಗಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಕಿದ್ದಳು. ಎರಡನೇ ಬಾರಿ ಬಂದವಳು ನಾನು ಲಾಯರ್ ಎಂದು ಹೇಳಿದ್ದಳು. ಖಾಸಗಿಯಾಗಿ ಮಾತನಾಡಬೇಕು ಒಳಗೆ ಬನ್ನಿ ಎಂದು ಕರೆದಿದ್ದಳು. ಈ ಎಲ್ಲವೂ ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ಸರ್ಕಾರಿ ಅತಿಥಿಗೃಹದಲ್ಲಿ ನಡೆದ ವಿದ್ಯಮಾನವಾಗಿದೆ ಎಂದರು.

ಈ ಕುರಿತು ಮೂರು ಪುಟಗಳ ದೂರಿನ ಪ್ರತಿಯನ್ನು ಸಿದ್ಧಪಡಿಸಿದ್ದು, ಗೃಹ ಸಚಿವ ಪರಮೇಶ್ವರ ಅವರಿಗೆ ನೀಡುತ್ತಿದ್ದೇನೆ. ತಮ್ಮನ್ನು ಈ ಜಾಲದಲ್ಲಿ ಸಿಲುಕಿಸುವ ವ್ಯಕ್ತಿಗಳು ಮುಂದೆ ಬಂದರೆ ಇಲ್ಲದೆ ಫೋಟೋ ತೋರಿಸಿದರೆ ಗುರುತು ಹಿಡಿಯುತ್ತೇನೆ. ಆದರೆ ಸರ್ಕಾರಿ ಗೃಹದಲ್ಲಿ ಸಿಸಿ ಕ್ಯಾಮೆರಾ ಇಲ್ಲ. ಹೀಗಾಗಿ ಅಲ್ಲಿ ಅವರ ಚಲನವಲನಗಳು ದಾಖಲಾಗಿಲ್ಲ. ಒಂದು ವೇಳೆ ಅವರು ನಮ್ಮ ಖಾಸಗಿ ಮನೆಗೆ ಬಂದಿದ್ದರೇ ಎಲ್ಲವೂ ದಾಖಲಾಗುತ್ತಿತ್ತು. ನಮ್ಮ ಖಾಸಗಿ ನಿವಾಸಕ್ಕೆ ಸಿಸಿ ಕ್ಯಾಮರಾ ಕಣ್ಗಾವಲು ಇದೆ ಎಂದರು.

ಜೋರು ದನಿಯಲ್ಲಿ ಮಾತನಾಡುವವರನ್ನು ಮಣಿಸಲು ಹನಿಟ್ರ್ಯಾಪ್‌ನಂತಹ ಕೃತ್ಯಗಳು ಚಾಲ್ತಿಯಲ್ಲಿವೆ. ಇದ್ಯಾವುದೂ ಹೊಸದಲ್ಲ. ಎಲ್ಲ ವಿಚಾರವನ್ನು ಮುಖ್ಯಮಂತ್ರಿಗಳ ಬಳಿ ಚರ್ಚೆ ಮಾಡಿದ್ದು, ಅವರ ಸೂಚನೆಯ ಅನುಸಾರ ದೂರು ನೀಡುತ್ತಿದ್ದೇನೆ. ಹಲವು ಪೂರ್ವ ನಿರ್ಧಾರಿತ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕಾಗಿದ್ದರಿಂದ ಇಷ್ಟು ದಿನ ದೂರು ಬರೆಯಲು ಸಾಧ್ಯವಾಗಿರಲಿಲ್ಲ ಎಂದರು.

ಮೊದಲ ಬಾರಿ ತುಂಬಾ ಖಾಸಗಿಯಾಗಿ ರಹಸ್ಯವಾಗಿ ಮಾತನಾಡಬೇಕೆಂದು ಬಂದಿದ್ದರು. ಎರಡನೇ ಬಾರಿ ಹೈಕೋರ್ಟ್‌ ವಕೀಲರು ಎಂದು ಹೇಳಿಕೊಂಡು ಬಂದಿದ್ದರು. ಈ ಎರಡೂ ಬಾರಿಯೂ ಒಬ್ಬ ಹುಡುಗ ಸಾಮಾನ್ಯವಾಗಿ ಬರುತ್ತಿದ್ದ ಈ ಎಲ್ಲವನ್ನು ತಮ್ಮ ದೂರಿನಲ್ಲಿ ವಿವರವಾಗಿ ಬರೆದಿದ್ದೇನೆ ಎಂದರು.

ಪ್ರಕರಣ ದಾಖಲಾಗಿ ಎಫ್‌ಐಆರ್‌ ಆಗಲಿ. ಅದಕ್ಕೆ ಸೂಕ್ತ ಪುರಾವೆಗಳನ್ನು ಒದಗಿಸಲಾಗುವುದು. ಅಧಿವೇಶನದಲ್ಲಿ ಇದು ಚರ್ಚೆಯಾಗಿರುವುದು, ದೂರು ಕೊಡಲು ವಿಳಂಬವಾಗಿರುವ ಬಗ್ಗೆ ಯಾವೆಲ್ಲಾ ಸಂಗತಿಗಳು ನಡೆದಿವೆ ಎಂಬುದನ್ನು ವಿವರವಾಗಿ ಮೂರು ಪುಟಗಳ ದೂರಿನಲ್ಲಿ ನಾನೇ ಖುದ್ದಾಗಿ ಬರೆದಿದ್ದೇನೆ ಎಂದರು.

ಇಂತಹ ವಿಚಾರಗಳನ್ನು ಸಚಿವ ಸಂಪುಟ ಸಭೆಗಳಲ್ಲಿ ಚರ್ಚೆ ಮಾಡಬೇಕಿತ್ತು. ಬಹಿರಂಗ ಹೇಳಿಕೆ ಅಗತ್ಯವಿರಲಿಲ್ಲ ಎಂಬುದು ನನಗೂ ಅರ್ಥವಾಗುತ್ತದೆ. ಆದರೆ, ವಿಧಾನಸಭೆಯಲ್ಲಿ ನನ್ನ ಹೆಸರು ಪ್ರಸ್ತಾಪವಾಯಿತು. ಅದಕ್ಕೂ ಮೊದಲು ಮಾಧ್ಯಮಗಳಲ್ಲಿ ಹನಿಟ್ರ್ಯಾಪ್‌ ಬಗ್ಗೆ ಸಾಕಷ್ಟು ವಿಚಾರಗಳು ಚರ್ಚೆಯಾಗಿದ್ದವು. ಆದರೆ ಎಲ್ಲೂ ನನ್ನ ಹೆಸರು ಪ್ರಸ್ತಾಪವಾಗಿರಲಿಲ್ಲ ಎಂದರು.

ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನನ್ನ ಹೆಸರು ಪ್ರಸ್ತಾಪ ಮಾಡಿದರು. ಅದಕ್ಕೆ ಪ್ರತಿಕ್ರಿಯೆ ನೀಡದೇ ಇದ್ದರೆ ಮೌನಂ ಸಮತಿ ಲಕ್ಷಣಂ ಎಂಬಂತಾಗುತ್ತದೆ. ಈ ಹಿನ್ನೆಲೆಯಲ್ಲಿ ನಾನು ಹೇಳಿಕೆ ನೀಡಬೇಕಾಯಿತು ಎಂದರು.

ಈ ಹಿಂದೆ ರಮೇಶ್‌ ಜಾರಕಿಹೊಳಿ ಸೇರಿದಂತೆ ಹಲವಾರು ಮಂದಿಗೆ ಈ ರೀತಿ ಸಮಸ್ಯೆಯಾಗಿದೆ. ಕೆಲವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಇರುವ ಕಾನೂನಿನಲ್ಲೇ ಇದನ್ನು ಹದ್ದುಬಸ್ತಿಗೆ ತರಲು ಸಾಕಷ್ಟು ಅವಕಾಶಗಳಿವೆ. ಯಾರು ಇಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ತಮ್ಮ ಒತ್ತಾಯ ಎಂದರು.

Leave a Reply