ಬೇರೆಯವರ ಕಡೆ ಬೆರಳು ತೋರಿಸುವವರೇ ಹೆಚ್ಚು

1 year ago

ತಮ್ಮ ವ್ಯಾಪಾರಕ್ಕೆ ಅನುಗುಣವಾಗಿ ಆದಾಯ ತೆರಿಗೆಯನ್ನು, ವೃತ್ತಿ ತೆರಿಗೆಯನ್ನು ಪಾವತಿಸದೆ ಸರ್ಕಾರಕ್ಕೆ ವಂಚಿಸುವವರು ಬಹಳಷ್ಟು ಮಂದಿ ಹೇಳುತ್ತಾರೆ, ಎಲ್ಲರೂ ಭ್ರಷ್ಟರಾಗಿದ್ದಾರೆ ಎಂದು.

ಸರ್ಕಾರಿ ನೌಕರರು ತಮ್ಮ ಪಾಲಿನ ಕರ್ತವ್ಯವನ್ನ ಪ್ರಾಮಾಣಿಕವಾಗಿ ಮಾಡದೆ ಉಳ್ಳವರಿಗೊಂದು ಬಡವರಿಗೊಂದು ರೀತಿಯಲ್ಲಿ ನಡೆದುಕೊಳ್ಳುತ್ತಾ, ಸಂಬಳದ ಜೊತೆಗೆ ಲಂಚ ಪಡೆದುಕೊಳ್ಳುವ ಒಂದಷ್ಟು ಮಂದಿ ಹೇಳುತ್ತಾರೆ, ವ್ಯವಸ್ಥೆ ಹಾಳಾಗಿದೆ ಎಂದು.

ಶಾಲಾ ಕಾಲೇಜುಗಳಲ್ಲಿ ಬಡ ಮಕ್ಕಳಿಗೆ ಸರಿಯಾಗಿ ಪಾಠ, ಪ್ರವಚನ ಮಾಡದೆ ಮನೆಯ ಪಾಠದ ಮೂಲಕ ಉಳ್ಳವರ ಮಕ್ಕಳಿಗೆ ವಿಶೇಷ ತರಬೇತಿ ನೀಡುವ, ಒಂದಷ್ಟು ಬೋಧಕ ಸಿಬ್ಬಂದಿಯವರು ಹೇಳುತ್ತಾರೆ, ಸರ್ಕಾರ ಸರಿ ಇಲ್ಲ, ನಮ್ಮನ್ನಾಳುವ ಜನ ಭ್ರಷ್ಟರು ಎಂದು.

ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಚಿಕಿತ್ಸೆ ನೀಡಲು ಉದಾಸೀನ ತೋರಿಸಿ, ಖಾಸಗಿ ಆಸ್ಪತ್ರೆಗಳಲ್ಲಿ ತಮ್ಮ ಅನುಭವ ಹಾಗೂ ಜ್ಞಾನವನ್ನು ಬಳಸುತ್ತಾ ಶ್ರೀಮಂತರ ಆರೋಗ್ಯಕ್ಕೆ ಕಾಳಜಿ ವಹಿಸುವ ಕೆಲವು  ಮಂದಿ ಮಾತ್ರ ಹೇಳುತ್ತಾರೆ, ದೇಶಾಭಿಮಾನ ಯಾರಿಗೂ ಇಲ್ಲ ಯಾರಿಗೂ ಬದ್ಧತೆ ಇಲ್ಲ ಎಂದು.

ಸರ್ಕಾರಿ ಸೌಲಭ್ಯಗಳಿಗೆ ಸುಳ್ಳು ದಾಖಲೆಗಳನ್ನು ಕೊಟ್ಟು ತನ್ನದಲ್ಲದ ಪಾಲನ್ನು ಸರ್ಕಾರದಿಂದ ಮತ್ತೆ ಮತ್ತೆ ಪಡೆದುಕೊಂಡು ಸುಖದಲ್ಲಿ ಬದುಕುವ ಒಂದಷ್ಟು ಮಂದಿ ಹೇಳುತ್ತಾರೆ, ಪ್ರಾಮಾಣಿಕರಿಗೆ ಮತ್ತು ಸತ್ಯವಂತರಿಗೆ ಇದು ಕಾಲ ಅಲ್ಲ ಎಂದು.

ಸರ್ಕಾರಿ ಸೌಕರ್ಯ ಸೌಲಭ್ಯಗಳಲ್ಲಿ ವಿದ್ಯೆಯನ್ನ ಪಡೆದು ಉನ್ನತ ಪದವಿಗಳನ್ನ ಹೊಂದಿದಂತಹ ಒಂದಷ್ಟು ಮಂದಿ, ವಿದೇಶದ ನೆಲದಲ್ಲಿ ನಿಂತು ಅಲ್ಲಿಯೇ ಬದುಕನ್ನು ಕಟ್ಟಿಕೊಂಡು ಹೇಳುತ್ತಾರೆ, ದೇಶಾಭಿಮಾನ ಯಾರಿಗೂ ಇಲ್ಲ, ಸ್ವಾರ್ಥಿಗಳು ಹೆಚ್ಚಾಗಿದ್ದಾರೆ ಎಂದು.

ಕಾನೂನನ್ನ ಉಲ್ಲಂಘನೆ ಮಾಡುತ್ತಾ ತಮ್ಮ ಕುಟುಂಬದವರು ಅನ್ಯಾಯ ಅಕ್ರಮಗಳನ್ನು ಎಸಗಿದರು ಆ ತಪ್ಪುಗಳನ್ನ ಮುಚ್ಚಿಕೊಳ್ಳುವ ಅಥವಾ ಮುಚ್ಚಿ ಹಾಕುವ ಪ್ರಯತ್ನವನ್ನು ತಮ್ಮ ಪ್ರಭಾವಗಳಿಂದ ಬಳಸಿ ಸಾಗುವ ಒಂದಷ್ಟು ಮಂದಿ ಹೇಳುತ್ತಾರೆ, ಇಲ್ಲಿ ಯಾರಿಗೂ ಕಾನೂನಿನ ಭಯವಿಲ್ಲ, ಅಪರಾಧಿಗಳು ಎಷ್ಟೇ ದೊಡ್ಡವರಾದರೂ ಶಿಕ್ಷೆ ಆಗಬೇಕು ಎಂದು.

ಇಲ್ಲಿ ಎಲ್ಲರೂ ಅನ್ಯರ ತಪ್ಪುಗಳನ್ನ ತೋರಿಸಿ ಮಾತನಾಡುವರೇ ಹೊರತು ತಮ್ಮ ತಮ್ಮ ಪಾಲಿನ ತಪ್ಪುಗಳನ್ನು ಒಪ್ಪಿಕೊಳ್ಳುವ ದೊಡ್ಡತನ ಯಾರಲ್ಲೂ ಇಲ್ಲ, ಎಲ್ಲರ ಮಾತು ಸಿನಿಕತನದಿಂದ ಕೂಡಿರುತ್ತದೆ.

ಟೀಕೆ ಮಾಡುವುದು, ಸಲಹೆ ನೀಡುವುದು, ಆಕ್ರೋಶ ವ್ಯಕ್ತಪಡಿಸುವುದು ಇಂದು ಅರ್ಥ ಕಳೆದುಕೊಳ್ಳುತ್ತಿದೆ. ಅದೊಂದು ಫ್ಯಾಶನ್ ಆಗಿದೆ.

ಇಂತಹ ವ್ಯವಸ್ಥೆಯ ನಡುವೆಯೂ ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಿರುವ ಮಂದಿ, ಪ್ರಾಮಾಣಿಕವಾಗಿ ಶಿಕ್ಷಕರ ವೃತ್ತಿಯನ್ನು ಮಾಡುತ್ತಿರುವವರು, ವೈದ್ಯರ ವೃತ್ತಿ ಧರ್ಮ ಅನುಸರಿಸಿರುವವರು, ಎಷ್ಟೇ ಕಷ್ಟ ಬಂದರೂ ತಮ್ಮ ಜ್ಞಾನವನ್ನು ಈ ದೇಶದ ಜನರಿಗಾಗಿಯೇ ಬಳಸುತ್ತಿರುವ ಮಂದಿ, ಭ್ರಷ್ಟರ ನಡುವೆ ಇದ್ದರೂ, ಸುಲಭವಾಗಿ ಹಣ ಗಳಿಸಬಹುದಾದ ಅವಕಾಶಗಳಿದ್ದರೂ, ತಾವು ಮಾತ್ರ ತಮ್ಮ ಪ್ರಾಮಾಣಿಕತೆಯನ್ನು ಬಿಟ್ಟು ಕೊಡದೆ ಉಳಿದುಕೊಂಡಿರುವ ಅಪರೂಪದ ಒಂದಷ್ಟು ಮಂದಿಯಿಂದ ಸಮಾಜವಿನ್ನು ಉಳಿದಿದೆ. ನಿರಾಶರಾಗುವ ಮಾತಿಲ್ಲ ಇನ್ನೂ ಉಳಿದಿದ್ದಾರೆ ಕೈ, ಬಾಯಿಗಳನ್ನ, ಶುದ್ಧವಾಗಿ ಇಟ್ಟುಕೊಂಡಿರುವ ಮಂದಿ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply