ಬೆಂಗಳೂರು: ತಮ್ಮ ಮದುವೆ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ. ಇದು ಸತ್ಯಕ್ಕೆ ದೂರ. ವನ್ಯಜೀವಿ ಸಂರಕ್ಷಣಾ ಕಾಯ್ದೆ, ಅದರ ಗಂಭೀರತೆ ಬಗ್ಗೆ ನನಗೆ ಖಂಡಿತಾ ಅರಿವಿದೆ ಎಂದು ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಹುಲಿ ಉಗುರು ಧರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಸ್ಪರ್ಧಿ ಸಂತೋಷ್ ವರ್ತೂರ್ ಬಂಧನ ನಂತರ ನಿಖಿಲ್ ಕುಮಾರಸ್ವಾಮಿ, ವಿನಯ್ ಗುರೂಜಿ, ದರ್ಶನ್, ರಾಕ್ ಲೈನ್ ವೆಂಕಟೇಶ್, ಬಿಜೆಪಿ ರಾಜ್ಯಸಭೆ ಸದಸ್ಯ ಜಗ್ಗೇಶ್ ಮತ್ತು ಇತರರ ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿಯಲ್ಲಿ ದೂರು ದಾಖಲಾಗಿತ್ತು.
ಈ ಹಿನ್ನೆಯಲ್ಲಿ ಪ್ರತಿಕ್ರಿಯೆ ನೀಡಿರುವ ನಿಖಿಲ್ ಕುಮಾರಸ್ವಾಮಿ, ನಾನು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಕೃತಕವಾದದ್ದೇ ಹೊರತು ನೈಜವಾದುದ್ದಲ್ಲ. ಅದನ್ನು ನನ್ನ ಮದುವೆ ಸಮಯದಲ್ಲಿ ಉಡುಗೊರೆ ನೀಡಿದ್ದು. ಅದು ಈಗಲೂ ನನ್ನ ಬಳಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬಹುದು ಎಂದು ಹೇಳಿದ್ದಾರೆ.
ದಯಮಾಡಿ ಯಾರೂ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ವಿನಂತಿ ಮಾಡಿಕೊಂಡಿದ್ದಾರೆ.




