ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನೇರ ನೇಮಕಾತಿ ಹಾಗೂ ಬಡ್ತಿ ಮೂಲಕ ತುಂಬ ಬೇಕಾಗಿರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಕೋರಿ ಮುಖ್ಯಮಂತ್ರಿಗಳಿಗೆ ಹಾಗೂ ಸಂಪುಟದ ಎಲ್ಲಾ ಸಚಿವರಿಗೆ ಭಾರತ ಸಂವಿಧಾನ ಅನುಚ್ಚೇದ 371(ಜೆ) ಅಡಿ ಹೊರಡಿಸಲಾಗಿರುವ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಪರಾಮರ್ಶಿಸುವ ಕುರಿತು ಪತ್ರ ಬರೆಯಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
2023ರ ಆಗಸ್ಟ್ 17ರಂದು ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾದ ತೀರ್ಮಾನದಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಸ್ಥಳೀಯ ವೃಂದದಲ್ಲಿನ ಮೀಸಲಿರಿಸಿರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕಿರುವುದರಿಂದ ಈ ಪತ್ರಗಳನ್ನು ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ಹೇಳಿದ್ದಾರೆ.
ಭಾರತ ಸಂವಿಧಾನ ಅನುಚ್ಛೇದ 371 (ಜೆ) ಅಡಿಯಲ್ಲಿ ಇಲಾಖಾವಾರು ಭರ್ತಿ ಮಾಡಲು ಬಾಕಿ ಇರುವ ನೇರ ನೇಮಕಾತಿ ಹಾಗೂ ಮುಂಬಡ್ತಿಯಲ್ಲಿ ಹುದ್ದೆಗಳ ವಿವರಗಳನ್ನು ಪತ್ರದ ಜೊತೆ ನೀಡಲಾಗಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ನೇರ ನೇಮಕಾತಿ ಮೂಲಕ 28,023 ಹುದ್ದೆಗಳನ್ನು ಭರ್ತಿ ಮಾಡಬೇಕಿದ್ದು, ಇವುಗಳಲ್ಲಿ 12,945 ಹುದ್ದೆಗಳನ್ನು ಭರ್ತಿ ಮಾಡುವ ಕ್ರಮ ಲೋಕಸೇವಾ ಆಯೋಗ ಹಾಗೂ ಇನ್ನಿತರ ಸಂಸ್ಥೆಗಳ ಮೂಲಕ ನಡೆಯುತ್ತಿದೆ. ಉಳಿದಂತೆ 15,078 ಹುದ್ದೆಗಳು ಖಾಲಿ ಇದ್ದು ಭರ್ತಿ ಪ್ರಕ್ರಿಯೆ ಆರಂಭಗೊಳ್ಳಬೇಕಿದೆ. ಇವುಗಳಲ್ಲಿ ಎ,ಬಿ,ಸಿ ಹಾಗೂ ಡಿ ವೃಂದದ ಹುದ್ದೆಗಳು ಸೇರಿವೆ ಎಂದು ಮಾಹಿತಿ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ 9,905 ವಿವಿಧ ಹುದ್ದೆಗಳನ್ನು ಬಡ್ತಿ ಮೂಲಕ ತುಂಬ ಬೇಕಿದ್ದು, ಇದಕ್ಕೆ ಸಂಬಂಧಪಟ್ಟಂತೆ ಕ್ರಮಕೈಗೊಳ್ಳುವಂತೆ ಸಂಪುಟದ ಸಚಿವರಿಗೆ ಪತ್ರದಲ್ಲಿ ಕೋರಲಾಗಿದೆ. ಇಲಾಖೆಯ ಅಧಿಕಾರಿಗಳ ಸಭೆ ಕರೆದು ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸಲು ಸಹಕಾರ ನೀಡಬೇಕೆಂದೂ ಸೂಚಿಸಲಾಗಿದೆ ಎಂದಿದ್ದಾರೆ.




