ಕಾರು ನುಗ್ಗಿಸಿ ಪರಾರಿಯಾಗುತ್ತಿದ್ದ ಆಹಾರ ನಿರೀಕ್ಷಕನನ್ನು ಬೆನ್ನಟ್ಟಿ ಬಂಧಿಸಿದ ಪೊಲೀಸರು

3 years ago

#police #chased #arrested #foodinspector #running #away

ಬೆಂಗಳೂರು: ಆಹಾರೋತ್ಪನ್ನಗಳ ವ್ಯಾಪಾರ ಪರವಾನಗಿ ಪರಿಶೀಲನೆ ನಡೆಸಲು  ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳ ಮೇಲೆ ಕಾರು ನುಗ್ಗಿಸಿ ಪರಾರಿಯಾಗುತ್ತಿದ್ದ ಆಹಾರ ನಿರೀಕ್ಷಕ (ಫುಡ್ ಇನ್ಸ್‌ಪೆಕ್ಟರ್)ನನ್ನು ಬೆನ್ನಟ್ಟಿ ಬಂಧಿಸಲಾಗಿದೆ.

ಒಂದು ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟು ಅದರಲ್ಲಿ 43 ಸಾವಿರ ರೂ ಸ್ವೀಕರಿಸುತ್ತಿದ್ದಾಗ ಫುಡ್ ಇನ್ಸ್‌ಪೆಕ್ಟರ್ ಮಹಾಂತೇಗೌಡ ಬಿ ಕಡಬಾಳುನನ್ನು ಬೆನ್ನಟ್ಟಿ ಬಂಧಿಸಿರುವ ಲೋಕಾಯುಕ್ತ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.

ಆಹಾರೋತ್ಪನ್ನಗಳ ಮಾರಾಟ ಪರವಾನಗಿ ನೀಡಲು ರಂಗಧಾಮಯ್ಯರಿಂದ 1 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಮಹಾಂತೇಗೌಡ, ಮುಂಗಡವಾಗಿ 10 ಸಾವಿರ ಪಡೆದುಕೊಂಡಿದ್ದು,ಈ ಬಗ್ಗೆ ರಂಗಧಾಮಯ್ಯ ಲೋಕಾಯುಕ್ತದ ಮೊರೆ ಹೋಗಿದ್ದರು. ತಡರಾತ್ರಿ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದ ಲೋಕಾಯುಕ್ತ ಇನ್ಸ್‌ಪೆಕ್ಟರ್ ಶ್ರೀಕಾಂತ್ ನೇತೃತ್ವದ ತಂಡ 43 ಸಾವಿರ ರೂ. ಲಂಚದ ಹಣ ಸ್ವೀಕರಿಸುತ್ತಿದ್ದ ಮಹಾಂತೇಗೌಡನನ್ನು ವಶಕ್ಕೆ ಪಡೆಯಲು ಮುಂದಾಗಿತ್ತು. ಈ ವೇಳೆ ಲೋಕಾಯುಕ್ತ ಪೊಲೀಸರ ತಂಡವನ್ನು ಕಂಡ ಮಹಾಂತೇಗೌಡ ಅಧಿಕಾರಿಗಳ ಮೇಲೆ ಕಾರು ನುಗ್ಗಿಸಲು ಯತ್ನಿಸಿದ್ದಾನೆ.

ಸರಿಸುಮಾರು 15 ಕಿ.ಮೀ ದೂರು ಬೆನ್ನಟ್ಟಿದ ಲೋಕಾಯುಕ್ತ ಪೊಲೀಸರು ನೆಲಮಂಗಲದ ಸೊಂಡೆಕೊಪ್ಪ ಬಳಿ ಆರೋಪಿಯನ್ನು ತಡೆದು ಹಣದ ಸಮೇತ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ವಿರುದ್ಧ ವಿಚಾರಣೆ ಮುಂದುವರೆದಿದೆ ಎಂದು ಲೋಕಾಯುಕ್ತ ಅಧಿಕಾರಿ ತಿಳಿಸಿದ್ದಾರೆ.

Leave a Reply