ಪ್ರೀತಿಯ ಕಾಮ್ರೇಡ್ ಆರ್.ಜಯಕುಮಾರ್, ಇದೀಗ ತಾನೇ ನಿಮ್ಮ “ಕಾಡು ಹಾದಿಯ ಬೆಳಕಿನ ಜಾಡು” ಕೊಡಗಿನಲ್ಲಿ ಜೈಸಿ ಬದುಕಿದ ಮೂರು ತಲೆಮಾರಿನ ಜೀವನ ವೃತ್ತಾಂತ ಎಂಬ ಆತ್ಮಕತೆ ರೂಪದಲ್ಲಿರುವ ಪುಸ್ತಕವನ್ನು ಓದಿ ಮುಗಿಸಿದೆ. ಪುಸ್ತಕ ಓದುತ್ತಾ ಓದುತ್ತಾ ಕೆಲವು ಪಟಗಳ ಮೇಲೆ ಅರಿವಿಗೆ ಬಾರದೆ ಕಣ್ಣೀರ ಹನಿಗಳು ಜಾರಿದವು. ಕಣ್ಣು ಮಂಜಾಯಿತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ನಾವು ಕಂಡ, ನಮಗೆ ಪರಿಚಿತವಾಗಿದ್ದ ಒಬ್ಬ ಪತ್ರಕರ್ತನ ಬಾಳಲ್ಲಿ ಎಷ್ಟೊಂದು ಸಂಘರ್ಷ, ಕಠೋರ ಆದರ್ಶ, ನಿಷ್ಠುರನಡೆ ನುಡಿ, ಸಿಡಿದು ಚೂರಾಗುವಷ್ಟು ಆಕ್ರೋಶ ಇದ್ದರೂ ತಣ್ಣಗೆ ಬದುಕುತ್ತಿರುವ ನಿಮ್ಮ ಜೀವನ ಪ್ರೀತಿ ಎಲ್ಲಾ ನೆನಪಾಗಿ ಕಣ್ಣು ಮುಚ್ಚಿ ಕುಳಿತೆ.
ಆ ಕಾಲಕ್ಕೆ ಕೆಪಿಎಸ್ಸಿ ಪರೀಕ್ಷೆ ಪಾಸು ಮಾಡಿ ಆರ್ ಟಿ ಒ ಕಚೇರಿಯಲ್ಲಿ ನೌಕರಿ ಸಿಕ್ಕರೂ ಕಮ್ಯುನಿಸ್ಟ್ ವಿಚಾರಧಾರೆಯ ಆದರ್ಶಕ್ಕೆ ಮನಸೋತು ಕೆಲಸಕ್ಕೆ ರಾಜೀನಾಮೆ ಬಿಸಾಕಿ ಮತ್ತೆ ಹೋರಾಟಕ್ಕೆ ಧುಮುಕಿದ ನಿಮ್ಮ ಸಾಮಾಜಿಕ ಕಾಳಜಿಗೆ ಲಾಲ್ ಸಲಾಮ್.
ತಾಯಿ, ಅಣ್ಣ ಮತ್ತು ನೀವು ಈ ಮೂರು ತಲೆಮಾರಿನ ಜೀವನ ಪಯಣ ಎಷ್ಟೊಂದು ಯಾತನಮಯ. ಎಲ್ಲೂ ಕಂಡೂ ಕೇಳಿರದ ನಿಮ್ಮ ಕುಟುಂಬದ ಜೀವನ ವಿವರಗಳು ಓದುಗನಿಗೆ ಶಾಕ್ ನೀಡುವಂತಿವೆ. ಈ ಕೃತಿಯ ಕಥಾನಾಯಕಿ ತಾಯಿ ಕುಂಞ್ಞಮ್ಮ ಅವರಾದರೆ, ನಾಯಕ ಅಣ್ಣ ಪಿ.ಕೆ.ಚಂದ್ರಶೇಖರ್.
ಶ್ರೀಮಂತ ಎಸ್ಟೇಟ್ ಮಾಲೀಕ ಕೃಷ್ಣ ನಾಯರ್ ಅವರ ಪತ್ನಿಯಾಗಿ ಕೇರಳದ ಪಾಲ್ಘಾಟ್ ಸೇರಿದ ತಿಯಾ ಜಾತಿಯ ಹೆಣ್ಣುಮಗಳು ಕುಞ್ಞಮ್ಮ ಐದು ವರ್ಷದಲ್ಲಿ ಎರಡು ಮಕ್ಕಳನ್ನು ಹಡೆದು ಅನಿರೀಕ್ಷಿತವಾಗಿ ಪ್ರೀತಿಸಿ ಅಂತರ್ಜಾತೀಯ ಮದುವೆಯಾಗಿದ್ದ ಗಂಡನನ್ನು ಕಳೆದುಕೊಂಡು, ಮನೆಯವರ ಕೊಲೆ ಸಂಚಿನಿಂದ ತಪ್ಪಿಸಿಕೊಂಡು 280 ಕಿ.ಮೀ. ಕೊಡಗಿನ ಬೋಯೀಕೇರಿಗೆ ನಡೆದೇ ಬಂದು ಕೂಲಿಯಾಗಿ ಛಲದಿಂದ ಬದುಕು ಕಟ್ಟಿಕೊಂಡದ್ದು ಸಾಮಾನ್ಯ ವಿಷಯವೇನಲ್ಲ.
ಮಕ್ಕಳನ್ನು ಓದಿಸಿ ಆದರ್ಶ ವ್ಯಕ್ತಿಗಳಾಗಿಸಿದ್ದಕ್ಕೆ, ದೊಡ್ಡ ಸವಾಲು ಸ್ವೀಕರಿಸಿ ಗೆದ್ದ ದಿಟ್ಟ ತಾಯಿಗೆ ಲಾಲ್ ಸಲಾಮ್.
ತಾಯಿ ಕುಞ್ಣಮ್ಮ ಮತ್ತು ಚಂದ್ರಶೇಖರ್ ಅವರದ್ದು ಎರಡು ತಲೆಮಾರಿನ ತಲ್ಲಣಗಳಾದರೆ, ಈ ಕೃತಿಯ ಲೇಖಕ ಅಪ್ಪನ ಮುಖವನ್ನೇ ಕಾಣದ ಎರಡನೇ ಗಂಡನಿಗೆ ಹುಟ್ಟಿದ ಆರ್.ಜಯಕುಮಾರ್ ಅವರದ್ದು ಮೂರನೇ ತಲೆಮಾರಿನ ಸಂಘರ್ಷದ ಬದುಕಿನ ಕಥಾನಕ.
ಎಸ್ ಎಫ್ ಐ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷರಾಗಿ, ಹೋರಾಟಗಾರರಾಗಿ, ಪತ್ರಕರ್ತರಾಗಿ ಕೊನೆಗೆ ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ಮೈಸೂರಿಗೆ ಬಂದು ಕೃಷಿಕರಾಗಿ ಜೀವನದ ಕೊನೆಯ ದಿನಗಳನ್ನು ಪ್ರಕೃತಿಯ ನಡುವೆ ಕಳೆಯುತ್ತಿರುವ ಜಯಕುಮಾರ್ ನಿಮ್ಮ ಬಗ್ಗೆ ನನ್ನಲ್ಲಿ ಗೌರವ ಭಾವನೆ ಮೂಡಿ ಕಣ್ಣು ಒದ್ದೆಯಾದವು.
ನಿಮ್ಮ ಪುಸ್ತಕಕ್ಕೆ ಅರ್ಥಪೂರ್ಣ ಮುನ್ನುಡಿ ಬರೆದಿರುವ ಈ ಕೆಳಗಿನ ಸಾಲುಗಳು ನನ್ನನ್ನು ಕೆಣಕಿದವು. ಪುರುಷೋತ್ತಮ ಬಿಳಿಮಲೆ ಹೇಳುವಂತೆ “ನಾವೆಲ್ಲ ಜೊತೆಯಲ್ಲಿದ್ದರೂ ಪರಸ್ಪರ ಯಾಕೆ ತಿಳಿದುಕೊಂಡಿರುವುದಿಲ್ಲ. ಅವರು ಹೇಳುವುದಿಲ್ಲವೊ ಅಥವಾ ನಾವು ಕೇಳುವುದಿಲ್ಲವೋ? ವೈಯಕ್ತಿಕ ವಿಚಾರಗಳನ್ನು ತಿಳಿದುಕೊಳ್ಳುವುದು ಸುಸಂಸ್ಕೃತ ನಡವಳಿಕೆ ಅಲ್ಲವೇ? ಅದು ಹೌದಾದರೆ ಮತ್ಯಾಕೆ ನಾವೆಲ್ಲ ಆತ್ಮಚರಿತ್ರೆ ಬರೆಯುತ್ತೇವೆ? ಆಸಕ್ತಿಯಿಂದ ಓದುತ್ತೇವೆ. ಇಂತಹ ಗೊಂದಲದ ನಡುವೆ ಪುಸ್ತಕ ಓದುತ್ತಾ ಓದುತ್ತಾ ಉಸಿರು ಬಿಗಿಹಿಡಿದುಕೊಂಡೆ, ದಿಗಿಲುಗೊಂಡೆ, ನಿಟ್ಟುಸಿರು ಬಿಟ್ಟೆ”. ನಮ್ಮದು ಕೂಡಾ ಇದೆ ಪಾಡಾಯಿತು ಜಯಕುಮಾರ್.
ಅಣ್ಣನ ಬಗ್ಗೆ ಬರೆಯುತ್ತಾ ನೀವು ಹೇಳುವ “ಅವರ ಪಾಲಿಗೆ ಎಲ್ಲವೂ ಇತ್ತು. ಆದರೆ ಯಾವುದೂ ಇರಲಿಲ್ಲ. ಎಲ್ಲರೂ ಇದ್ದರೂ, ಆದರೆ ಯಾರೂ ಇರಲಿಲ್ಲ” ಎಂಬ ಮಾತುಗಳು ರೂಪಕದಂತೆ ಇವೆ. ನಮ್ಮ ಕಾಲದ ಜೀವನದ ಮೌಲ್ಯಗಳಂತಿವೆ. ಬಹುಶಃ ಮನುಕುಲದ ದುರಂತ ಅಡಗಿರುವುದೆ ಇಲ್ಲಿ. ಇದಕ್ಕೆ ನಾವ್ಯಾರು ಹೊರತಲ್ಲ ಎನ್ನುವುದು ಮಾತ್ರ ಸತ್ಯ.
ಜಿ.ಎಸ್.ಶಿವರುದ್ರಪ್ಪನವರ ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣಿನ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರಿತಿಸದಾದೆನು ನಮ್ಮೊಳಗೆ ಹತ್ತಿರವಿದ್ದು ದೂರನಿಲ್ಲುವೆವು ನಮ್ಮ ಅಹಂಮ್ಮಿನ ಕೋಟೆಯಲಿ ಎಂಬ ಪದ್ಯ ನೆನಪಾಯಿತು.
ನೀವೆ ಒಂದು ಕಡೆ ಹೇಳುತ್ತೀರಿ “ಬದುಕು, ಕ್ರಾಂತಿ, ನೆಮ್ಮದಿ ಎಂದು ಅಂಡಲೆದ ನಾನು ನಿಜಕ್ಕೂ ನೂರು ಕೋಟಿ ಕೊಟ್ಟರು ಸಿಗಲಾರದ ಸಾಮೀಪ್ಯದ ಅವಕಾಶವನ್ನು ಸ್ವಾರ್ಥಪರನಾಗಿ ಕಳೆದುಕೊಂಡೆ, ಅಂತಿಮವಾಗಿ ಜ್ಞಾನೋದಯವಾಗಿ ಅಣ್ಣ ಅತ್ತಿಗೆ ಇರುವ ಮೈಸೂರಿಗೇ ಹೋಗಿ ಮನೆ ಮಾಡಿ ಪತ್ನಿ ಡಾ.ಲೀಲಾ ಸಂಪಿಗೆಯವರೊಂದಿಗೆ ನೆಲೆಸಿದೆ. ಆದರೆ ಆಗಲೇ ತಡವಾಗಿತ್ತು. ಅದೇನು ದುರ್ವಿಧಿಯೋ, ನಾವು ಮೈಸೂರಿಗೆ ಹೋದ ಕೆಲವೇ ತಿಂಗಳಲ್ಲಿ ಅಣ್ಣ ಇಹಲೋಕ ತ್ಯಜಿಸಿದರು”. ಹೌದು ನಾವೆಲ್ಲರೂ ಹೀಗೆ ಎಲ್ಲರ ಜೊತೆ ಬದುಕಬೇಕು ಎಂಬ ವಿವೇಕ ಮೂಡುವ ಹೊತ್ತಿಗೆ ಎಲ್ಲರ ಕಾಲ ಮುಗಿದು ಕೊನೆಯ ಚರಣದಲ್ಲಿ ಹೀಗೆ ನರಳುತ್ತೇವೆ.
ಸಾವು ಹತ್ತಿರ ಇದೆ ಎಂದು ಗೊತ್ತಾಗಿ ಬದುಕುವುದು ನರಕ. ಆದರೂ ನಿಮ್ಮ ಜೀವನ ಉತ್ಸಾಹ ದೊಡ್ಡದು. ಇನ್ನೂ ಮೂರು ಪುಸ್ತಕಗಳನ್ನು ಬರೆಯುವ ನಿಮ್ಮ ಆಸೆ, ಹಂಬಲ ಕೈ ಗೂಡಲಿ. ನಿಮ್ಮ ಹಠ, ಛಲಕ್ಕೆ ಬೆರಗಾಗಿ ಯಮ ಪುಸ್ತಕ ಬರೆದು ಮುಗಿಸುವವರೆಗೂ ಕಾಯುತ್ತಾ ಕುಳಿತಿರಲಿ, ನೀವು ನೂರ್ಕಾಲ ಬದುಕಬೇಕು ಎನ್ನುವುದು ನಮ್ಮಂತವರ ಹಂಬಲ.
ಪತ್ರಿಕೋದ್ಯಮ, ಹೋರಾಟ, ಬದುಕಿನ ಕುರಿತು ಧ್ಯಾನಿಸುವ ಯುವಕರಿಗೆ ನಿಮ್ಮ ಈ ಕೃತಿ ಸ್ಫೂರ್ತಿದಾಯಕವಾಗಿದೆ.
ನಿಮ್ಮ ತೋಟದ ಮನೆಯ ಮೇಲಿನ ಗೋಡೆ ಬರಹ ಭೂಮಿ ಮನುಷ್ಯನ ಆಸೆಗಳನ್ನು ಪೂರೈಸಬಹುದೆ ಹೊರತು ದುರಾಸೆಯನ್ನಲ್ಲ – ಮಹಾತ್ಮ ಗಾಂಧಿ
ನೋಡಿ ಗೆಳೆಯ ಪಿ.ಓಂಕಾರ್ ಹೇಳಿದ್ದು ಅರ್ಥಪೂರ್ಣವಾಗಿತ್ತು. ಭೂಮಿ ಎನ್ನುವ ಕಡೆ ಪತ್ರಿಕೋದ್ಯಮ ಎಂದು ಓದಿಕೊಂಡರೆ ಜಗತ್ತು ಎಷ್ಟೋ ನೆಮ್ಮದಿಯಿಂದ ಇರುತ್ತದೆ. ಅಲ್ಲವೇ? ಮತ್ತೆ ಮತ್ತೆ ಸಿಗೋಣ. ನಿಮ್ಮ ಅತಿ ಚಿಕ್ಕ ಚೊಕ್ಕ ಅರಮನೆ ಇಷ್ಟವಾಯಿತು. ತೋಟದಲ್ಲಿ ಬೆಳೆಸಿದ ತೆಂಗು ಅಡಿಕೆ ಬಾಳೆ ಮಾವು ಹಲಸು ಚಿಕ್ಕು ಹೀಗೆ ಬಗೆ ಬಗೆಯ ಹಣ್ಣಿನ ಗಿಡಗಳು ನಿಮ್ಮ ಜೀವನ ಪ್ರೀತಿಯ ದ್ಯೋತಕವಾಗಿ, ಕುರುಹುಗಳಾಗಿ ಕಂಡವು.
ಕಾಮ್ರೇಡ್ ಮತ್ತೊಮ್ಮೆ ನಿಮಗೆ ಲಾಲ್ ಸಲಾಮ್.
ನಿಮ್ಮ ಪ್ರೀತಿಯ
- ಚಿನ್ನಸ್ವಾಮಿ ವಡ್ಡಗೆರೆ




