ಸುಜ್ಞಾನಮೂರ್ತಿ ಅವರ ಅನುವಾದ ಕನ್ನಡಕ್ಕೆ ಸದ್ದಿಲ್ಲದೆ ಮಾಡಿರುವ ದೊಡ್ಡ ಉಪಕಾರವೆಂದೇ ನನ್ನ ಭಾವನೆ

2 years ago

ಗೆಳೆಯ ಶ್ರೀ ಸುಜ್ಞಾನಮೂರ್ತಿ

ಸುಜ್ಞಾನಮೂರ್ತಿ ಎಂದೊಡನೆ ಕಣ್ಣೆದುರು ಬರುವ ಚಿತ್ರವೆಂದರೆ – ಜೋಳದದಂಟಿನಂತೆ ಸಣ್ಣಗೆ ಉದ್ದಕ್ಕಿರುವ ಕಪ್ಪುದೇಹ; ನೀಟಾಗಿ ಧರಿಸಿದ ಡ್ರೆಸ್ಸು; ಮುಖದಲ್ಲಿ ಕೀಟಲೆಯ ನಗು. ಅವರಿದ್ದಲ್ಲಿ ತಮಾಶೆ-ನಗು ಸಾಂಕ್ರಾಮಿಕ. ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಅವರು, ನನಗೆ ಮೂವತ್ತು ವರ್ಷಗಳ ಸಹೋದ್ಯೋಗಿ. ಅಧ್ಯಾಪಕ ಹುದ್ದೆಗೆ ಬರುವ ಅವಕಾಶವಿದ್ದರೂ, ಅವರು ಬೋಧಕೇತರ ಹುದ್ದೆಯನ್ನು ಯಾಕೆ ಆರಿಸಿಕೊಂಡರೊ ತಿಳಿಯದು. ಬಹುಶಃ ಪಾಠ- ಬರವಣಿಗೆ ಅವರಿಗೆ ಇಷ್ಟದ ಕೆಲಸವಾಗಿರಲಿಕ್ಕಿಲ್ಲ. ಆದರೆ ಅತ್ಯುತ್ತಮವಾದ ಸಾಹಿತ್ಯವನ್ನು ಹುಡುಕಿ ಓದುವುದರಲ್ಲಿ ಅವರೊಬ್ಬ ಮಹಾನ್ ಓದುಗ.

ಸುಜ್ಞಾನ್, ತೀವ್ರ ಇಷ್ಟಾನಿಷ್ಟಗಳನ್ನು ಹೊಂದಿರುವ ವಿಶಿಷ್ಟ ವ್ಯಕ್ತಿ. ಉಡುವ ಬಟ್ಟೆ, ನೋಡುವ ಸಿನಿಮಾ, ಓದುವ ಪುಸ್ತಕ, ಉಣ್ಣುವ ಊಟ, ಕೇಳುವ ಸಂಗೀತ, ಮಾತಾಡುವ ವ್ಯಕ್ತಿ, ಕಟ್ಟುವ ಮನೆ-ಏನೇಯಿರಲಿ, ಮೆಚ್ಚುವ-ತಿರಸ್ಕರಿಸುವ ಎರಡು ಖಚಿತ ತುದಿಗಳಲ್ಲೇ ಪ್ರತಿಕ್ರಿಯಿಸುವವರು. ಇವೆರಡರ ನಡುವಿನ ಮಧ್ಯಮ ಮಾರ್ಗವೊಂದು ಅವರಲ್ಲಿದ್ದಂತಿಲ್ಲ. ಅವರು ಬದುಕಿನಲ್ಲಿ ಎಚ್ಚರಿಕೆಯಿಂದ ಕೆಲವು ಅಭಿರುಚಿಗಳನ್ನು ರೂಢಿಸಿಕೊಂಡಿದ್ದಾರೆ. ಕೈಬರೆಹವೂ ಅಷ್ಟೆ. ಅದು ಕಪ್ಪುಶಾಯಿಯ ಪೆನ್ನಲ್ಲೇ ಆಗಬೇಕು. ಶರ್ಟನ್ನು ಹೀಗೇ ಹೊಲಿದಿರಬೇಕು. ನಿರ್ದಿಷ್ಟ ಅಕ್ಷರಗಳ ಫಾಂಟುಗಳೇ ಇರಬೇಕು. ಮುದ್ರಣದ ಕಾಗದದ ಗುಣಮಟ್ಟ ಹೀಗೇ ಇರಬೇಕು. ಬಣ್ಣಗಳ ವಿಷಯದಲ್ಲೂ ಹಾಗೇ. ಹಿಂದೂಸ್ತಾನಿ ಸಂಗೀತವೆಂದರೆ ಆಗದು. ದೈವೀಕರಣಕೊಂಡಿರುವ ಕೆಲವು ಪ್ರಸಿದ್ಧ ನಟರ ನಟನೆಯೆಂದರೆ ಅಲರ್ಜಿ. ಬದುಕಿನಲ್ಲಿ ಎಲ್ಲ ವಿಷಯಗಳಲ್ಲಿ ಅವರಿಗೊಂದು ಆಯ್ಕೆಯಿದೆ. ಅದರೊಳಗೊಂದು ಅವರದ್ದಾದ ಏಸ್ತೆಟಿಕ್ಸ್ ಇದೆ. ಅವರ ಈ ವೈಯಕ್ತಿಕ ವಿಶಿಷ್ಟ ಗುಣಗಳೇ, ಕನ್ನಡ ಪುಸ್ತಕ ಜಗತ್ತಿನಲ್ಲಿ ಅಪರೂಪದ ಪುಸ್ತಕ ವಿನ್ಯಾಸಗಾರರಾಗಲು ಕಾರಣವಾಗಿರಬೇಕು. ಅವರ ಮನೆ ಹೆಸರೂ `ವಿನ್ಯಾಸ’!

ಕನ್ನಡದಲ್ಲಿ ಪುಸ್ತಕಗಳು ದೊಡ್ಡ ಪ್ರಮಾಣದಲ್ಲಿ ಪ್ರಕಟವಾಗುತ್ತಿವೆ. ಮಾತ್ರವಲ್ಲ, ಅವು ಸುಂದರವಾಗಿ ಕೂಡ ಹೊರಬರುತ್ತಿವೆ. ನಾವು ಇಷ್ಟಪಡುವ ಹಿರಿಯ ತಲೆಮಾರಿನ ಅನೇಕ ಲೇಖಕರ ಶ್ರೇಷ್ಠ ಕೃತಿಗಳ ಮೊದಲ ಮುದ್ರಣಗಳನ್ನು ನೋಡಿದರೆ, ಸೋಜಿಗವೂ ಬೇಸರವೂ ಆಗುತ್ತದೆ. ಎಷ್ಟು ಸರಳ, ಸಪ್ಪೆ ಮತ್ತು ನಿರಲಂಕಾರ! ಅವನ್ನು ಚಂದಮಾಡುವ ಸೌಲಭ್ಯಗಳೂ ಆಗ ಬಹುಶಃ ಲಭ್ಯವಿರಲಿಲ್ಲ. ಆದರೆ ಈಗ ಪ್ರಕಟವಾಗುತ್ತಿರುವ ಪುಸ್ತಕಗಳನ್ನು ಓದುವ ಮೊದಲು, ಸುಮ್ಮನೆ ಕೈಯಲ್ಲಿ ಹಿಡಿದು ಹಾಳೆ ತಿರುವುತ್ತ ಸಂತೋಷಪಡಬೇಕು ಅನಿಸುತ್ತದೆ. ನಮಗೆ ಸಿನಿಮಾ ಎಂದೊಡನೆ ಅದರ ನಾಯಕ ನಾಯಕಿಯರು ನೆನಪಾಗುತ್ತಾರಷ್ಟೆ. ಆದರೆ ಛಾಯಾಚಿತ್ರಗಾರರು, ಸಂಗೀತ ನಿರ್ದೇಶಕರು, ಚಿತ್ರಕಥೆ ಬರೆದವರು, ಗೀತರಚನಕಾರರು, ಗಾಯಕರು, ಧ್ವನಿಮುದ್ರಕರು, ನಿರ್ದೇಶಕರು ಕೂಡಿ ಸಂಭವಿಸುವ ಪವಾಡವದು. ಇದರಂತೆ ಲೇಖಕರು, ಮುಖಪುಟದ ಚಿತ್ರಕಲಾವಿದರು, ಪುಸ್ತಕದ ವಿನ್ಯಾಸಗಾರರು, ಮುದ್ರಕರು ಒಗ್ಗೂಡಿ ಪುಸ್ತಕಗಳ ಚೆಲುವಿಗೆ ಕಾರಣಕರ್ತರಾಗಿದ್ದಾರೆ.

ಸುಜ್ಞಾನ್, ನನ್ನ ಅನೇಕ ಪುಸ್ತಕಗಳನ್ನು ವಿನ್ಯಾಸಗೊಳಿಸಿದರು. ಮೊದಲಿಗೆ ಪಲ್ಲವ ವೆಂಕಟೇಶ್ ಪ್ರಕಟಿಸಿದ `ಅಮೀರಬಾಯಿ ಕರ್ನಾಟಕಿ’ ಕೃತಿಗೆ ಅರುಣ್ ಮುಖಪುಟ ಮಾಡಿದರು. ಪುಟವಿನ್ಯಾಸ ಸುಜ್ಞಾನ್ ಅವರದು. ಅದಕ್ಕೆ `ಪುಸ್ತಕಸೊಗಸು’ ಪ್ರಶಸ್ತಿಯೂ ಲಭಿಸಿತು. ಓದುಗರು ಪುಸ್ತಕ ಕೈಯಲ್ಲಿ ಹಿಡಿದಾಗ ಕೇವಲ ಲೇಖಕರನ್ನಲ್ಲ, ಅದರ ಉತ್ಪಾದನೆಯ ಹಿಂದೆ ದುಡಿದಿರುವ ಅನೇಕರ ಪ್ರತಿಭೆಗಳನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುವಂತೆ ಪುಸ್ತಕವು ಒಂದು ಕೂಡುಸೃಷ್ಟಿ. ಸುಜ್ಞಾನ್ ಅವರು ಅಕ್ಷರಜೋಡಣೆ ಮಾಡುವ ಕಂಪ್ಯೂಟರಿನ ಹುಡುಗರ ಹಿಂದೆ ಕುಳಿತು, ಸರಿರಾತ್ರಿಯ ತನಕ ಊಟನಿದ್ರೆಗಳ ಪರಿವೆಯಿಲ್ಲದೆ ಒಳಪುಟಗಳ ವಿನ್ಯಾಸ ಮಾಡುವುದನ್ನು ಕಂಡಿರುವೆ; ಸಾಹಿತ್ಯ ಸಮ್ಮೇಳನಕ್ಕೆ ಬಿಡುಗಡೆಯಾಗಬೇಕೆಂದು, `ಕತ್ತಿಯಂಚಿನ ದಾರಿ’ಯ ಲೇಔಟನ್ನು ಕಲ್ಲುನೀರು ಕರಗುವ ಹೊತ್ತಿಗೆ ಮುಗಿಸಿಕೊಂಡು, ಕಮಲಾಪುರದಿಂದ ನಾವಿಬ್ಬರೂ ಬಂದಿದ್ದು ನೆನಪಾಗುತ್ತಿದೆ. ಅವರು ಯಾವುದೇ ಪುಸ್ತಕ ಹಿಡಿದೊಡನೆ ಅದರ ವಿನ್ಯಾಸದ ಚೆಲುವು-ದೋಷಗಳನ್ನು ತಟ್ಟನೆ ಗುರುತಿಸಿ ಚರ್ಚಿಸುತ್ತಾರೆ. ಅದೊಂದು ವಿಶೇಷ ಕುಶಲತೆ ಮತ್ತು ಪರಿಣತಿಯ ಕ್ಷೇತ್ರವೆಂದು ನನಗೆ ತಿಳಿದಿದ್ದೇ ಆಗ. ಕನ್ನಡದ ಅನೇಕ ಪುಸ್ತಕಗಳು ಸುಂದರವಾಗಿರಲು ಸುಜ್ಞಾನಮೂರ್ತಿ ಅವರಂತಹ ತೆರೆಮರೆಯಲ್ಲೇ ಉಳಿದುಬಿಡುವ ಸೌಂದರ್ಯಪ್ರಜ್ಞೆಯ ವಿನ್ಯಾಸಗಾರರು ಕಾರಣರು.

ನನಗೆ ನಿಜವಾಗಿಯೂ ಹೇಳಬೇಕಾಗಿರುವುದು ಸುಜ್ಞಾನ್ ಎರಡು ವಿಶಿಷ್ಟ ಸಾಧನೆಗಳ ಬಗ್ಗೆ.

ಮೊದಲನೆಯದಾಗಿ- ಅವರ ಓದುಗಾರಿಕೆ. ಅನೇಕ ಪ್ರಾಧ್ಯಾಪಕರೂ ಮಾಡದಷ್ಟು ಓದನ್ನವರು ಮಾಡಿ ಪೂರೈಸಿದ್ದಾರೆ. ಪುಸ್ತಕದಲ್ಲಿರುವ ಬರೆಹವು ಯಾವುದೇ ಪ್ರಕಾರದಲ್ಲಿರಲಿ, ಅದು ಕಳಪೆಯೊ ಶ್ರೇಷ್ಠವೊ ಹೇಳಿಬಿಡುತ್ತಾರೆ. ಸಂತೋಷ ಮತ್ತು ಹೊಸತಿಳಿವನ್ನು ಕೊಡದ ಬರೆಹದ ಬಗ್ಗೆ ಅವರಿಗೆ ಕಟುವಾದ ಧೋರಣೆಗಳಿವೆ. ಜಟಿಲವಾದ ಸಂವಹನ ಕಷ್ಟಕೊಡುವ ವಾಕ್ಯರಚನೆಗಳೆಂದರೆ ಕಿಡಿಕಿಡಿ. ಮನಬಂದಂತೆ ಕರಡುತಿದ್ದುವ ಲೇಖಕರ ಬಗ್ಗೆ ಅವರು ಸೃಷ್ಟಿಸಿರುವ ಹೀನೋಪಮೆಗಳನ್ನು ಹೇಳಬಾರದು. ಕೇಳಬಾರದು. ಅವರಿಗಿರುವ ವಿಡಂಬನ ಪ್ರಜ್ಞೆಯು ಬರಹವಾಗಿ ಬದಲಾಗಿದ್ದರೆ, ಅವರೊಬ್ಬ ಜನಪ್ರಿಯ ಲೇಖಕರಾಗಿರುತ್ತಿದ್ದರು. ಕಿರಂ ಶಿಷ್ಯರಾದರೂ ಅವರು ಕಾವ್ಯವನ್ನು ಮೆಚ್ಚಿ ಮಾತಾಡಿದ್ದು ನಾನು ಕೇಳಿಲ್ಲ. ಅವರು ಮುದ್ದಣನಂತೆ ಪದ್ಯಂ ವಧ್ಯಂ, ಗದ್ಯಂ ಹೃದ್ಯಂ. ಅವರ ಇಷ್ಟದ ಪ್ರಕಾರ ಲಲಿತಪ್ರಬಂಧ. ಅದರಲ್ಲೂ ಅವರ ಪ್ರಿಯ ಪ್ರಬಂಧಕಾರ ರಾಕು. ಅದರಲ್ಲೂ ಅವರ `ಗಾಳಿಪಟ’ವೆಂಬ ಪ್ರಬಂಧ. ಈ ಶ್ರೇಷ್ಠ ಪ್ರಬಂಧದ ಸಾಲುಸಾಲುಗಳನ್ನೆಲ್ಲ ಅವರು ನೆನಪಿಟ್ಟಿದ್ದಾರೆ. ಅವರು ಕನ್ನಡದ ಅತ್ಯುತ್ತಮ ಲಲಿತ ಪ್ರಬಂಧಗಳ ಬಗ್ಗೆ ಎದೆಹಿಗ್ಗಿನಿಂದ, ಮೊಗವರಳಿಸಿಕೊಂಡು ಕಣ್ಣ ಹೊಳಪಿಸಿಕೊಂಡು ಮಾತಾಡಿದ್ದನ್ನು ನೂರು ಸಲ ಆಲಿಸಿರುವೆ. ನಾನೂ ಲಲಿತಪ್ರಬಂಧ ಪ್ರಕಾರ ಇಷ್ಟಪಡುವನಾದ ಕಾರಣ, ಇಬ್ಬರೂ ಸೇರಿದಾಗ ಕನ್ನಡದ ಅತ್ಯುತ್ತಮ ಲಲಿತ ಪ್ರಬಂಧಗಳ ಸ್ವಾರಸ್ಯಕರ ಸನ್ನಿವೇಶಗಳನ್ನು ನೆನೆಯುತ್ತ ಸಂತೋಷ ಪಡುವುದುಂಟು. ಆಗ ನಮ್ಮ ಚರ್ಚೆಯಲ್ಲಿ ವಿಮರ್ಶೆಯಿಲ್ಲ; ಮೌಲ್ಯಮಾಪನವಿಲ್ಲ. ಮಕ್ಕಳು ತಮಗೆ ಇಷ್ಟವಾದ ತಿಂಡಿಯನ್ನು ಸವಿವಾಗ ಪಡುವ ಸುಖವದು. ಎಂತಲೇ ನೂರಾರು ಜನ ಪಿಎಚ್.ಡಿ,. ಮಾಡುವ ಜಾಗದಲ್ಲಿದ್ದರೂ, ಅವರು ಅಪಾರ ಓದುಗಾರಿಕೆಯಿರುವ ಲಲಿತ ಪ್ರಬಂಧಗಳ ಮೇಲೆ ಸಂಶೋಧನೆ ಮಾಡಲಿಲ್ಲ. ಚಿಂತೆಯಿಲ್ಲ. ಆದರೆ ಅವರು ತಮ್ಮ ಇಷ್ಟದ ಲಲಿತಪ್ರಬಂಧಗಳನ್ನು ಆರಿಸಿ, ಒಂದು ಸಂಕಲನ ಮಾಡಬೇಕು ಎಂದು ಆಗ್ರಹಿಸಬಹುದು.

ಎರಡನೆಯದಾಗಿ-ಅವರ ಅನುವಾದಗಳು. ಇದು ಅವರು ಕನ್ನಡಕ್ಕೆ ಸದ್ದಿಲ್ಲದೆ ಮಾಡಿರುವ ದೊಡ್ಡ ಉಪಕಾರವೆಂದೇ ನನ್ನ ಭಾವನೆ.  ತೆಲುಗಿನಿಂದ ಅವರು ಮೂರು ದಶಕಗಳಿಂದ ನಿರಂತರ ಅನುವಾದ ಮಾಡುತ್ತಿದ್ದಾರೆ. ಅದರಲ್ಲಿ ಮುಖ್ಯವಾದುದು ವಿಚಾರಸಾಹಿತ್ಯ. ಈ ವಿಚಾರ ಸಾಹಿತ್ಯದ ಅನುವಾದ ಮೂರು ಕಾರಣಗಳಿಂದ ಮಹತ್ವದ್ದಾಗಿದೆ.
೧. ಇಂಗ್ಲೀಶಿನ ಮಧ್ಯಸ್ಥಿಕತೆಯಿಲ್ಲದೆ ನೇರವಾಗಿ ತೆಲುಗಿನಿಂದ ಕನ್ನಡಕ್ಕೆ ಬರುತ್ತಿರುವುದು. ಭಾರತದ ಎರಡು ದೇಶೀ ಭಾಷೆಗಳ ನಡುವೆ ಹೀಗೆ ನಡೆವ ವಿನಿಮಯದಲ್ಲಿ, ಮೂಲದ ಸಾಂಸ್ಕೃತಿಕ ಸಂವೇದನೆಗಳು ಹೆಚ್ಚು ಮುರುಟದೆ ಕನ್ನಡಕ್ಕೆ ಆಗಮಿಸುತ್ತವೆ. ಕನ್ನಡದಲ್ಲಿ ಹೀಗೆ ಒಂದುಕಾಲಕ್ಕೆ ಮೂಲದಿಂದ ನೇರವಾಗಿ ಕನ್ನಡಕ್ಕೆ ಅನುವಾದಗೊಳ್ಳುತ್ತಿದ್ದುದು ಬಂಗಾಳಿ ಸಾಹಿತ್ಯ. ಈ ಪರಂಪರೆ ಈಚಿನವರೆಗೂ- ನನ್ನ ಮಿತ್ರ ಕುಮಾರಪ್ಪನವರು ನಿಧನರಾಗುವವರೆಗೂ- ಮುಂದುವರೆಯಿತು. ಈಗ ನಾಗ ಹುಬ್ಳಿ ಇದ್ದಾರೆ. ಆದರೆ ಮರಾಠಿ, ತಮಿಳು, ಮಲೆಯಾಳ ತೆಲುಗುಗಳಿಂದ ಮಾತ್ರವಲ್ಲ, ಒರಿಯಾದಿಂದಲೂಈಗ ನೇರವಾಗಿ ಅನುವಾದ ಮಾಡುವವರಿದ್ದಾರೆ- ಅಂಗ್ರೇಜಿಯ ಮಧ್ಯಂತರದ ಹಂಗಿಲ್ಲದೆ.
೨. ಯಾವುದೇ ಭಾಷೆಯಿಂದ ಹೆಚ್ಚಾಗಿ ಅನುವಾದಗೊಳ್ಳುವುದು ಕಥೆ ಕಾದಂಬರಿಗಳು. ವಿಚಾರ ಸಾಹಿತ್ಯವಲ್ಲ. ಸುಜ್ಞಾನ್, ತೆಲುಗಿನಿಂದ ಕನ್ನಡಕ್ಕೆ ತರುತ್ತಿರುವುದು ಅಪರೂಪದ ವಿಚಾರ ಸಾಹಿತ್ಯವನ್ನು. ಕನ್ನಡದಲ್ಲಿ ಹೀಗೆ ನಿರ್ದಿಷ್ಟ ಪ್ರಕಾರವನ್ನು ನೆಮ್ಮಿ ಅನುವಾದ ಮಾಡಿದವರು ಕಡಿಮೆ. ಅವರಿಂದ ಕಾಂಚ ಐಲಯ್ಯ, ರಂಗನಾಯಕಮ್ಮ ಮುಂತಾದ ತೆಲುಗಿನ ವಿಶಿಷ್ಟ ಚಿಂತಕರು ಕನ್ನಡಕ್ಕೆ ಬಂದರು. ಅವರ ಅನುವಾದಗಳಲ್ಲೆಲ್ಲ ಪಿ. ಸುಂದರಯ್ಯನವರ ‘ತೆಲಂಗಾಣ ಹೋರಾಟ’ ಬಹಳ ಮಹತ್ವದ್ದು.
೩. ಈ ವಿಚಾರ ಸಾಹಿತ್ಯವು ಅನುವಾದಗೊಳ್ಳುತ್ತಿರುವ ಚಾರಿತ್ರಿಕ ಪ್ರಸ್ತುತತೆ. ಸದ್ಯ, ಭಾರತವನ್ನು ಮತೀಯ ಉನ್ಮಾದ ಆವರಿಸಿಕೊಂಡಿದೆ; ವಿಮರ್ಶೆ-ವಿವೇಚನೆಯಿಲ್ಲದೆ ವ್ಯಕ್ತಿ ಮತ್ತು ಸಿದ್ಧಾಂತಗಳ ಆರಾಧನೆ ನಡೆದಿದೆ; ವೈಚಾರಿಕವಾಗಿ ಚಿಂತಿಸುವುದು ಮಾತನಾಡುವುದು ಬರೆಯುವುದು ಅಪರಾಧದಂತಾಗಿದೆ; ವಿಚಾರ-ವಿಚಾರವಾದಿ ಚಿಂತನೆ-ಚಿಂತಕ ಶಬ್ದಗಳು ನೇತ್ಯಾತ್ಮಕವಾದ ಕುರೂಪೀಕರಣದ ಪರಿಕಲ್ಪನೆಗಳಾಗಿ ಹೋಗಿವೆ. ಇದರ ಭಾಗವಾಗಿಯೇ ಧಾಬೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿಯವರ ದಾರುಣ ಕೊಲೆಗಳು ಘಟಿಸಿದವು. ಸ್ವತಂತ್ರವಾಗಿ ವಿಚಾರ ಮಾಡುವುದಕ್ಕೂ ಅಭಿವ್ಯಕ್ತಿಸುವುದಕ್ಕೂ ಒದಗಿರುವ ಬಿಕ್ಕಟ್ಟಿನ ಕಾಲವಿದು. ಒಂದು ಬಗೆಯಲ್ಲಿ ಸಮಾಜದ ಪತನದ ಕಾಲ ಕೂಡ.

ಇಂತಹ ಸಂದರ್ಭದಲ್ಲಿ ಸುಜ್ಞಾನ್, ವಿಚಾರಸಾಹಿತ್ಯವನ್ನು ಶ್ರದ್ಧೆಯಿಂದ ತರುತ್ತಿದ್ದಾರೆ. ಇದು ಪ್ರವಾಹದ ವಿರುದ್ಧ ಈಜು. ಈ ಈಜನ್ನು ನಮ್ಮ ಹಿರೀಕರು ಹಿಂದೆಯೇ ಆರಂಭಿಸಿದ್ದರು. ನರಸಿಂಹಯ್ಯನವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಕಾಲದಲ್ಲಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಜಿ.ಎಸ್.ಶಿವರುದ್ರಪ್ಪನವರು, ಕುವೆಂಪು ಅವರ `ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ `ವಿಚಾರಕ್ರಾಂತಿಗೆ ಆಹ್ವಾನ’ಗಳ ಪ್ರೇರಣೆಯಿಂದ ವಿಚಾರಸಾಹಿತ್ಯ ಎಂಬ ಪುಸ್ತಕಗಳನ್ನು ಪ್ರಕಟಿಸಿದ್ದರು. ಅವನ್ನು ಪಠ್ಯಪುಸ್ತಕವಾಗಿಸಿದ್ದರು ಕೂಡ. ಈ ಪುಸ್ತಕಗಳ ದೆಸೆಯಿಂದ ನೂರಾರು ವಿದ್ಯಾರ್ಥಿಗಳು ವೈಚಾರಿಕತೆಯನ್ನು ಬೆಳೆಸಿಕೊಂಡರು. ಈ ಕೆಲಸವನ್ನು ಸುಜ್ಞಾನರ ಅನುವಾದಗಳು ಮುಂದುವರೆಸುತ್ತಿವೆ. ಅವರು ವ್ರತದ ಹಾಗೆ ಕೈಗೆತ್ತಿಕೊಂಡಿರುವ ಈ ಕೆಲಸ ಮಹತ್ವವನ್ನು ಪ್ರಜ್ಞಾವಂತ ಕನ್ನಡಿಗರು ಖಂಡಿತವಾಗಿಯೂ ಒಂದುದಿನ ಮನಗಾಣುವರು. ಮುಂದಿನ ದಿನಗಳಲ್ಲಿ ನಮ್ಮನ್ನು ಆವರಿಸುತ್ತಿರುವ ತಮಂಧದ ಕೇಡನ್ನು ತೊಡೆಯುವ ಸಾಹಿತ್ಯವು ಅವರಿಂದ ಬರುತ್ತದೆ ಎಂದು ನನಗೆ ನಂಬಿಕೆಯಿದೆ.

– ಪ್ರೊ. ರಹಮತ್ ತರೀಕೆರೆ, ನಿವೃತ್ತ ಪ್ರಾಧ್ಯಾಪಕರು

ಸಂಪಾದಕರು: ಡಾ. ಪ್ರದೀಪ್ ಮಾಲ್ಗುಡಿ
ಪ್ರಕಾಶಕರು: ಪಲ್ಲವ ಪ್ರಕಾಶನ, ಚನ್ನಪಟ್ಟಣ
ಮುದ್ರಣ ವರ್ಷ: ೨೦೨೪
ಪುಟಗಳು: ೪೭೦
ಬೆಲೆ: ೪೦೦ ರೂ.
ಪ್ರತಿಗಳಿಗಾಗಿ ಸಂಪರ್ಕಿಸಿ: 8880087235

Leave a Reply