ಮುಂದುವರೆದ ಅಕ್ಕಿ ರಾಜಕಾರಣ: ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಲು ಸರ್ಕಾರದ ನಿರ್ಧಾರ

3 years ago

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಹತ್ತು ಕಿಲೋ ಅಕ್ಕಿ ವಿತರಿಸಲು ರಾಜ್ಯ ಸರ್ಕಾರ ಪರದಾಡತೊಡಗಿದೆ. ಕೇಂದ್ರ ಸರ್ಕಾರ ಲೆವಿ ನೀತಿ ಪರಿಷ್ಕರಣೆ ಮಾಡಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಗೆ ಸರ್ಕಾರ ತೀರ್ಮಾನಿಸಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ದೆಹಲಿ ಭೇಟಿಯ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಅಕ್ಕಿ ವಿತರಣೆಯಲ್ಲಿ ರಾಜಕೀಯ ಬೇಡ ಎಂದು ಮನವಿ ಮಾಡಿದ್ದಾರೆ.

ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ನಿನ್ನೆ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾರವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅಕ್ಕಿ ವಿತರಣೆ ಬಗ್ಗೆ ರಾಜಕೀಯ ಅಥವಾ ದ್ವೇಷದ ರಾಜಕಾರಣ ಬೇಡ ಎಂದು ತಿಳಿಸಿದ್ದೇನೆ ಎಂದರು.

ಭಾರತ ಆಹಾರ ನಿಗಮದ ವಿಭಾಗೀಯ ಅಧಿಕಾರಿ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ನೀಡಲು ಒಪ್ಪಿಗೆ ಪತ್ರವನ್ನು ನೀಡಿ ಮರುದಿನವೇ ಅಕ್ಕಿ ವಿತರಣೆಯನ್ನು ರಾಜ್ಯಗಳಿಗೆ ಸ್ಥಗಿತಗೊಳಿಸಿರುವ ವಿಚಾರವನ್ನೂ ಅಮಿತ್ ಶಾರವರ ಗಮನಕ್ಕೆ ತಂದಿದ್ದೇನೆ ಎಂದರು.

ಕೇಂದ್ರ ಸಚಿವ ಅಮಿತ್ ಶಾರವರು ತಮ್ಮ ಮಾತುಗಳಿಗೆ ಸಕರಾತ್ಮಕವಾಗಿ ಸ್ಪಂದಿಸಿದ್ದು, ಸಂಬಂಧಪಟ್ಟ ಮಂತ್ರಿಗಳೊಂದಿಗೆ ಮಾತನಾಡುವ ಭರವಸೆಯನ್ನು ನೀಡಿದ್ದಾರೆ ಎಂದರು.

ಕೇಂದ್ರ ಸರ್ಕಾರದ ಹೊಸ ನೀತಿ ಆಹಾರ ಭದ್ರತಾ ಕಾಯ್ದೆಗೆ ವಿರುದ್ಧವಾಗಿದೆ. ಇದು ಬಡವರ ಎರಡು ಹೊತ್ತಿನ ಊಟಕ್ಕೆ ತೊಂದರೆಯುಂಟು ಮಾಡುತ್ತಿದೆ. ರಾಜ್ಯ ಸರ್ಕಾರಗಳಿಗೆ ಆಹಾರಧಾನ್ಯ ಪೂರೈಕೆ ಮಾಡದಿರುವ ನೀತಿಯನ್ನು ಬದಲಾಯಿಸುವುದು ಒಳಿತು ಎಂದು ಹೇಳಿದ್ದಾಗಿ ತಿಳಿಸಿದರು.

ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆಯೂ ಈ ಭೇಟಿ ಸಂದರ್ಭದಲ್ಲಿ ಚರ್ಚೆಗಳಾಗಿವೆ. ರಾಜ್ಯಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಎರಡು ಐಆರ್‌ಪಿ ಬೆಟಾಲಿಯನ್‌ನ್ನು ಒದಗಿಸಿದ್ದು, ಇನ್ನು ಎರಡು ಬೆಟಾಲಿಯನ್‌ನ್ನು ನೀಡುವಂತೆ ಕೋರಿದ್ದೇನೆ ಎಂದು ಹೇಳಿದರು.

ಸಿಗದ ಭೇಟಿ: ಮತ್ತೊಂದೆಡೆ ಹೆಚ್ಚುವರಿ ಅಕ್ಕಿಗಾಗಿ ಬೇಡಿಕೆ ಸಲ್ಲಿಸಲು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಲು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ದೆಹಲಿಯಲ್ಲಿ ನಡೆಸಿದ ಎಲ್ಲಾ ಪ್ರಯತ್ನ ವಿಫಲವಾಯಿತು. ಇದರಿಂದ ಬೇಸರಗೊಂಡು ಅಸಮಾಧಾನ ಹೊರ ಹಾಕಿದ ಅವರು, ನಂತರ ಇಲಾಖೆಯ ಹಿರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು.

ಈ ನಡುವೆ ಎಲ್ಲಾ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ನಾವು ಜನರಿಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳುತ್ತೇವೆ. ವಿರೋಧ ಪಕ್ಷಗಳು ಬಹಳ ಟೀಕೆ ಮಾಡುತ್ತಿವೆ, ಮಾಡಲಿ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು, ನಾವು ಪುಗಸಟ್ಟೆ ಅಕ್ಕಿ ಕೇಳುತ್ತಿಲ್ಲ. ಅಕ್ಕಿ ಪೂರೈಕೆಗೆ ನಮ್ಮ ಸರ್ಕಾರ ಬೇರೆ ರಾಜ್ಯಗಳ ಜತೆ ಸಂಪರ್ಕದಲ್ಲಿದೆ ಎಂದರು.

ಶೋಭಕ್ಕ ಅವರು, ಈ ಯೋಜನೆ ಘೋಷಣೆ ಮಾಡುವ ಮುನ್ನ  ಕಾಂಗ್ರೆಸ್ ಮುಖಂಡರಿಗೆ ಮಿದುಳು ಇರಲಿಲ್ಲವೇ ಎಂದು ಕೇಳಿದ್ದಾರೆ. ವಿದೇಶದಿಂದ ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ, ರೈತರ ಆದಾಯ ಡಬಲ್ ಮಾಡುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಾಗ ಅವರ ತಲೆಯಲ್ಲಿ ಮಿದುಳು ಇರಲಿಲ್ಲವೇ?ಎಂದು ಪ್ರಶ್ನಿಸಿದರು.

ನಮ್ಮ ಪಕ್ಷ ಅವರ ಪಕ್ಷಕ್ಕಿಂತ ವಿಭಿನ್ನವಾಗಿದೆ. ಅವರು ನಾಲ್ಕು ವರ್ಷ ಆಡಳಿತ ಮಾಡಿದರೂ ಅವರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಈಡೇರಿಸಲಿಲ್ಲ. 1 ಲಕ್ಷವರೆಗಿನ ರೈತರ ಸಾಲಮನ್ನಾ ಮಾಡುತ್ತೇವೆ ಎಂದಿದ್ದರು ಆದರೆ ಮಾಡಲಿಲ್ಲ. ನಾವು ಘೋಷಣೆ ಮಾಡಿರುವ ಯೋಜನೆ ಜಾರಿಗೆ ಮುಂದಾಗಿದ್ದೇವೆ. ನಮಗೆ ಬಡವರ ಬಗ್ಗೆ ಅಷ್ಟಾದರೂ ಕಾಳಜಿ ಇದೆ. ಅವರು ತಾಳ್ಮೆಯಿಂದ ಇದ್ದರೆ ಉತ್ತಮ ಎಂದರು.

ಕೇಂದ್ರ ಸರ್ಕಾರ ಸಹಕಾರ ನೀಡದಿದ್ದರೆ ಮುಂದಿನ ಆಯ್ಕೆ ಏನು ಎಂದು ಕೇಳಿದಾಗ, ‘ಮುಖ್ಯಮಂತ್ರಿಗಳು ಹಾಗೂ ಸಚಿವರು ಚರ್ಚೆ ಮಾಡುತ್ತಿದ್ದಾರೆ. ಸ್ವಲ್ಪ ತಡವಾದರೂ ನಾವು ಈ ಯೋಜನೆ ಜಾರಿ ಮಾಡಿಯೇ ಮಾಡುತ್ತೇವೆ. ಆರಂಭದಲ್ಲಿ ಎಫ್ ಸಿಐ ಅಕ್ಕಿ ನೀಡುವುದಾಗಿ ತಿಳಿಸಿತ್ತು. ಆದರೆ ನಂತರ ತಮ್ಮ ನೀತಿ ಬದಲಿಸಿರುವುದಾಗಿ ತಿಳಿಸಿದೆ. ಅವರಿಗೆ ರಾಜಕಾರಣವೇ ಮುಖ್ಯವಾಗಿದೆ’ ಎಂದು ತಿಳಿಸಿದರು.

ವಿಧಾನಸೌಧದ ಮುಂದೆ ಧರಣಿ: ಮತ್ತೊಂದೆಡೆ, ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯ ಸರ್ಕಾರ ಭರವಸೆ ನೀಡಿದಂತೆ ಎಲ್ಲ ಐದು ಗ್ಯಾರಂಟಿಗಳನ್ನು ತಕ್ಷಣವೇ ಜಾರಿಗೆ ತರಬೇಕು ಇಲ್ಲವಾದರೆ ವಿಧಾನಸೌಧದ ಮುಂಭಾಗದಲ್ಲಿ ಧರಣಿ ಕೂರುತ್ತೇನೆ ಎಂದು ಎಚ್ಚರಿಸಿದರು.

ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ನೀಡಿದ ವಾಗ್ದಾನದಂತೆ ನಡೆದುಕೊಳ್ಳಬೇಕು. ಇದರಲ್ಲಿ ತಮ್ಮ ಪಕ್ಷ ರಾಜಕಾರಣ ಮಾಡುವುದಿಲ್ಲ. ಜನರ ಪರವಾಗಿ ವಿಧಾನ ಸೌಧ ಮತ್ತು ಹೊರಗಡೆ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ತನ್ನ 5 ಗ್ಯಾರಂಟಿಗಳನ್ನು ಜುಲೈ 4ರೊಳಗೆ ಈಡೇರಿಸಬೇಕು. ಇಲ್ಲದಿದ್ದರೆ ಜುಲೈ 5ರಿಂದ ಸದನದೊಳಗೆ ಹಾಗೂ ಹೊರಗೆ ಹೋರಾಟ ನಡೆಸಲಾಗುವುದು. ಹಲವು ಷರತ್ತುಗಳನ್ನು ಮೇಲೆ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದ್ದು ಬಿಟ್ಟರೆ ಒಂದುವರೆ ತಿಂಗಳಿನಿಂದ ಉಳಿದ ಗ್ಯಾರಂಟಿಗಳನ್ನು ಜಾರಿಗೊಳಿಸಿಲ್ಲ’ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರ ಜನರನ್ನು ಮರಳು ಮಾಡಲು ಕಾಂಗ್ರೆಸ್ ದಿನಕ್ಕೊಂದು ನಾಟಕವಾಡುತ್ತಿದೆ. ಚುನಾವಣೆಯಲ್ಲಿ ಗೆಲ್ಲಬೇಕು ಅಂತ ಸಿದ್ದರಾಮಯ್ಯ ಭರವಸೆ ಕೊಟ್ಟಿದ್ದಾರೆಯೇ ಹೊರತು ಕೇಂದ್ರವನ್ನು ಕೇಳಿ ಅಕ್ಕಿ ನೀಡುವ ಭರವಸೆ ನೀಡಿಲ್ಲ. ಕೇಂದ್ರ ಸರ್ಕಾರ ಈಗಾಗಲೇ 5 ಕೆ.ಜಿ. ಅಕ್ಕಿ‌ ನೀಡುತ್ತಿದ್ದು, ಭರವಸೆ ನೀಡಿದಂತೆ 10 ಕೆ.ಜಿ ಸೇರಿ 15 ಕೆ.ಜಿ. ಅಕ್ಕಿ ನೀಡಬೇಕು. ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಲಿ’ ಎಂದು ವಾಗ್ದಾಳಿ ನಡೆಸಿದರು.

ರಾಜಕಾರಣ ಇಲ್ಲ: ಇದರ ನಡುವೆ ಚಾಮರಾಜನಗರದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಬಡವರಿಗೆ ಅಕ್ಕಿ ಕೊಡಬಾರದು ಎಂದು ಹೇಳುವ ನೀಚ ಬುದ್ಧಿ ರಾಜ್ಯ ಬಿಜೆಪಿ ನಾಯಕರಿಗಿಲ್ಲ. ಇವರಂತೆ ನೀಚ ರಾಜಕಾರಣ ಮಾಡಿ‌ ಬಡವರ ಹೊಟ್ಟೆಗೆ ‌ಹೊಡೆಯುವುದಿಲ್ಲ. ದೇಶದಲ್ಲಿ ಆಹಾರ ಭದ್ರತೆಗಾಗಿ ರಾಜ್ಯಗಳಿಗೆ ಅಕ್ಕಿ ಮಾರಾಟ ಮಾಡದಿರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾಡಿದೆ’ ಎಂದು ಹೇಳಿದರು.

’13 ಬಜೆಟ್ ಕೊಟ್ಟ ಕೂಡಲೇ ಗದ್ದೆಯಲ್ಲಿ ಭತ್ತ ಬೆಳೆದು ಅಕ್ಕಿ ಕೊಡುವುದಕ್ಕೆ ಆಗುವುದಿಲ್ಲ. ಕುಣಿಯಲಾರದವನು ನೆಲ ಡೊಂಕು ಅಂದನಂತೆ ಎಂಬ ಗಾದೆಯಂತೆ ಈಗ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅಕ್ಕಿ ಕೊಡುತ್ತೇನೆ ಎಂದು ಹೇಳುವಾಗ ಇವರಿಗೆ ಪರಿಜ್ಞಾನ ಇರಲಿಲ್ಲವೇ? ‘ನನಗೂ, ನಿಮಗೂ, ನಮ್ಮ ಮನೆಯವರಿಗೂ, ನಿಮ್ಮ ಮನೆಯವರಿಗೂ ಅಕ್ಕಿ ಕೊಡುತ್ತೇನೆ ಎಂದು ಹೇಳಿದ್ದ ಸಿದ್ದರಾಮಯ್ಯ ಅವರ ಟವಲ್ ಹೆಗಲಿನಿಂದ ಎಲ್ಲಿ ಹೋಯಿತು? ಏನಾದರೂ ಆಗಲಿ, ಕೊಡುತ್ತೇನೆ ಎಂದು ಹೇಳಿದ್ದರು. ಮುಖ್ಯಮಂತ್ರಿಯಾಗುವವರಿಗೆ ಮುಂದಾಲೋಚನೆ ಇರಬೇಕು’ ಎಂದು ಟೀಕಿಸಿದರು.

Leave a Reply