ಬೆಳಗಾವಿ: ಬರ ಪರಿಹಾರ ನೆರವು ಬಿಡುಗಡೆ ವಿಷಯದಲ್ಲಿ ದಿನಕ್ಕೊಂದು ಹೇಳಿಕೆ ನೀಡಿ ಕಾಲಾಹರಣ ಮಾಡುತ್ತಿರುವುದನ್ನು ಗಮನಿಸಿದರೆ ರಾಜ್ಯ ಸರಕಾರ ದಿವಾಳಿ ಆಗಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದರು.
ವಿಧಾನಸಭೆಯಲ್ಲಿ ಬರಗಾಲ ಕುರಿತ ವಿಶೇಷ ಚೆರ್ಚೆ ಮುಂದುವರಿಸಿ ಗುರುವಾರ ಮಾತನಾಡಿದ ಅವರು, ರಾಜ್ಯದ ಹಣಕಾಸು ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಬರಗಾಲದಿಂದ ಕಂಗಾಲಾಗಿರುವ ರೈತ ಸಮುದಾಯಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಬೆಳೆಗಾರರ ಎರಡು ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡಬೇಕು, ಶಾಸಕರ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಗಳಿಗೆ ಪರಮಾಧಿಕಾರ ನೀಡಿ ಪ್ರತಿ ತಾಲ್ಲೂಕಿಗೆ ಐದು ಕೋಟಿ ರೂ. ನೀಡಬೇಕು, ಸ್ಥಗಿತಗೊಳಿಸಿರುವ ವಿದ್ಯಾನಿಧಿ ಯೋಜನೆ ಮತ್ತೆ ಆರಂಭಿಸಬೇಕು, ಕುಡಿಯುವ ನೀರು, ಮೇವು ಖರೀದಿ, ಗೋಶಾಲೆ ಆರಂಭಿಸಲು ಅನುದಾನ ನಿಗದಿ ಮಾಡಿ ಆದೇಶಗಳನ್ನು ತಕ್ಷಣವೇ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ನೆರವಿನ ಕಿಸಾನ್ ಸನ್ಮಾನ್ ಯೋಜನೆಗೆ ಕೇಂದ್ರದ ಆರು ಸಾವಿರಕ್ಕೆ ನಮ್ಮ ಸರಕಾರ ನಾಲ್ಕು ಸಾವಿರ ಸೇರಿಸಿ ಹತ್ತು ಸಾವಿರ ರೂ. ನೀಡುತ್ತಿತ್ತು. ಅದನ್ನು ಮತ್ತೆ ಆರಂಭಿಸಬೇಕು. ಬರಗಾಲದ ವೇಳೆ ಗರ್ಭಿಣಿಯರು, ಬಾಣಂತಿಯರು ಮತ್ತು ನವಜಾತ ಶಿಶುಗಳಿಗೆ ಪೌಷ್ಟಿಕ ಆಹಾರ ಒದಗಿಸಬೇಕು, ಜಾನುವಾರುಗಳಿಗೆ ಬರಗಾಲದಲ್ಲಿ ಬರಬಹುದಾದ ಕಾಯಿಲೆಗಳಿಂದ ರಕ್ಷಿಸಲು ಲಸಿಕೆ ಹಾಕಬೇಕು, ಬಡವರು, ಕೃಷಿ ಕಾರ್ಮಿಕರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಜನರು ವಾಸಿಸುವ ಪ್ರದೇಶಗಳಲ್ಲಿ ನಮ್ಮ ಸರಕಾರ ವಿತರಿಸಿದ್ದಂತೆ ಆಹಾರ ಕಿಟ್ ವಿತರಿಸಬೇಕು ಎಂದೂ ಆಗ್ರಹಿಸಿದರು.




