ಆತ ನನ್ನ ಯುವ ಮಿತ್ರ.
ಹಾಗೇ ಕ್ಯಾಶುಯಲ್ ಆಗಿ ಕೇಳಿದೆ, “ಮಗಾ, ಯಾರನ್ನಾದರೂ ಲವ್ಹ್ ಗಿವ್ಹ್ ಮಾಡ್ತಿದ್ದೀಯಾ?” ಅಂತ.
“ಇಲ್ಲ, ಯಾರೂ ಇಲ್ಲ” ಅಂತಂದ.
“ಹೋಗ್ಲಿ ಬಿಡು, ಕೆಲಸ ಕಾರ್ಯಗಳು ಸರಾಗವಾಗಿ ನಡೀತಾವೆ” ಅಂತಂದೆ. ಅಷ್ಟೇ ಕ್ಯಾಶುಯಲ್ ಆಗಿ.
“ಅವೆಲ್ಲಾ ಕಳೆದು ಹೋದ ಕಥೆಗಳು” ಎಂದ ಅವನ ಗಂಭೀರ ರಿಯಾಕ್ಷನ್‌ನಿಂದ ಕ್ಯಾಶುಯಲ್ ಟಾಕ್ ಸ್ವಲ್ಪ ಸೀರಿಯಸ್ ಆಗುವ ಲಕ್ಷಣಗಳನ್ನು ತೋರಿತು.
“ಅಂದರೆ, ನಿನ್ನ ಲವ್ಹ್ ಸ್ಟೋರಿ ಫ್ಲಾಷ್ ಬ್ಯಾಕ್ ಆಗಿದೆ…” ಅಂದೆ.
“ಪ್ಚ್, ಹೌದಲ್ಲವಾ? ಸತ್ತೋಗಿರೋದು ಮತ್ತೆ ಹುಟ್ಟೋದಿಲ್ಲವಲ್ಲ” ಅಂತಂದ.
ಅಲ್ಲಿಗೆ ಮುಗಿಯಿತು. ಇನ್ನೇನೂ ಕೇಳುವಷ್ಟಿಲ್ಲ. ಹೇಳುವುದು ಸಾಕಷ್ಟಿದ್ದರೂ ಕೇಳುವ ಕಿವಿಗಳು ತೆರೆದಿರುವುದಿಲ್ಲ. ಏನು ಹೇಳುವುದು ತನ್ನ ಪ್ರೇಮವು ಸತ್ತು ಹೋಯಿತೆಂದು ಹೇಳಿದ ಮೇಲೆ. ಅದು ಹುಟ್ಟುವುದೂ ಇಲ್ಲವೆಂದೂ ದೃಢ ಪಡಿಸಿದ ಮೇಲೆ.
ಸುಟ್ಟುಹೋಗಿರುವ ಪಕ್ಷಿ ಬೂದಿಯಿಂದೆದ್ದು ಬರುವ ಫೀನಿಕ್ಸ್ ಕಥೆಗಳನ್ನು, ಶಿಲುಬೆಯ ಮೇಲೆ ಸತ್ತಿರುವ ಯೇಸುವು ಮೂರನೆಯ ದಿನಕ್ಕೆ ಸಮಾಧಿಯಿಂದೆದ್ದು ಬರುವ ಪುನರುತ್ಥಾನದ ಕಥೆಯನ್ನು, ಸತ್ತ ಸತ್ಯವಾನನು ಸಾವಿತ್ರಿಯ ಪಾತಿವ್ರತ್ಯದ ಬಲದಿಂದ ಜೀವತಳೆವುದನ್ನು, ಹರಿಶ್ಚಂದ್ರನು ತನ್ನ ಮಗನ ಕೊಂದ ನಂತರವೂ ಶಿವನ ಅನುಗ್ರಹದಿಂದ ಲೋಹಿತಾಶ್ವನು ಅಪ್ಪಾ ಎಂದು ಎದ್ದೋಡಿ ಬರುವುದನ್ನೆಲ್ಲಾ ನಂಬುವ ನಮ್ಮ ಹರೆಯದವರು ತಮ್ಮದೇ ಪ್ರೀತಿಯು ಷಾಜಹಾನನ ತಾಜ್‌ಮಹಲ್ಲಿನಲ್ಲೋ ಅಥವಾ ಅನಾರ್ಕಲಿಯು ಜೀವಂತವಾಗಿ ಉಸಿರುಬಿಡುವ ಗೋರಿಯಲ್ಲೋ ಶಾಶ್ವತವಾಗಿ ಸಮಾಧಿಯಾಗಿಬಿಟ್ಟ ಪ್ರೇಮದ ಪ್ರೇತಾತ್ಮಗಳ ನೆರಳಿಂದ ಮಂಕಾಗಿರುವ ಮುಖ ಹೊತ್ತುಕೊಂಡು ಒಲವಿನ ಬಗ್ಗೆ ಸೊಲ್ಲೆತ್ತುವ ಸಮಯ ಬಂದಾಗೆಲ್ಲಾ ನೀರಸ ನಗೆ ನಕ್ಕು ನಿಟ್ಟುಸುರು ಬಿಡುತ್ತಾರೆ. ಅಂತಹ ಪ್ರೇಮಾಘಾತವಾದ ಮೇಲೂ, ಭಗ್ನಹೃದಯದಿಂದ ಜೀವವನ್ನು ಹಿಡಿದುಕೊಂಡು ಬಾಳುತ್ತಿರುವುದೇ ಹೆಚ್ಚು ಎನ್ನುವಂತೆ.
ಈ ಹರೆಯದವರ ಪ್ರೇಮೋಪಖ್ಯಾನವೇ ನನಗೆ ಅರ್ಥವಾಗದು. ಅವರು ಯಾವುದನ್ನು ಪ್ರೇಮವೆನ್ನುತ್ತಾರೆ ಎನ್ನುವುದರ ಬಗ್ಗೆ ದೀರ್ಘಕಾಲದಿಂದ ಸಂಶೋಧನೆ ಮಾಡಿದ್ದೇನೆ. ಆದರೆ ವಿಫಲನಾಗಿ ಭಗ್ನಹೃದಯಿಯಾಗಿದ್ದೇನೆ.
ಈಗ ನಾನೂ ಒಂದು ನೀರಸ ನಗೆ ನಕ್ಕು, ನಿಟ್ಟುಸುರೊಂದನ್ನು ಬಿಟ್ಟು ‘ಅದೇನು ಪ್ರೇಮವೋ ಪ್ರೀತಿಯೋ ಹೋಗತ್ತ’ ಅನ್ನುವಷ್ಟರ ಮಟ್ಟಿಗೆ ಜಿಗುಪ್ಸಿತನಾಗಿ ಆ ಹರೆಯದ ಮುಖಗಳ ಮೇಲೆ ಕಾಣುವ ಸ್ಕ್ರಾಪ್ ಬಾಳ ಬಂಡಿಯ ನೆರಳನ್ನು ನೋಡುತ್ತಾ ಸ್ಕಾಚ್ ಆರ್ಡರ್ ಮಾಡುವ ಅವರ ಗೋಳಾಟದ ಕೂಟದಲ್ಲಿ ಕಿವುಡು ಕೇಳುಗನಾಗಿ ಕುಡಿದೆದ್ದು ಬರುತ್ತೇನೆ.
ಪ್ರೇಮದ ಬಗ್ಗೆ ಉತ್ತೇಜಿಸುವಂತೆ ಮಾತಾಡಿದರೆ, ‘ಈ ಪ್ರೇಮ ಗೀಮ ಎಲ್ಲಾ ಸಾಕಾಯ್ತು ಸಾರ್’ ಅಂತ ಹೊಗೆ ಬಿಡುತ್ತಾ ಹೊಗೆ ಹಾಕಿಸಿಕೊಳ್ಳುವ ಮಾತೇ ಆಡುತ್ತಿರುವ ಈ ಹುಡುಗರನ್ನು ನೋಡಿದರೆ ಯಾಕಪ್ಪಾ ಹೀಗೆ ಇಷ್ಟೊಂದು ಜೀವನದಲ್ಲಿ ಜಿಗುಪ್ಸೆ ಬಂದು ಬಿಟ್ಟಿದೆ ಅಂತಂದ್ರೆ, ‘ಜೀವನದಲ್ಲಿ ಜಿಗುಪ್ಸೆ ಅಲ್ಲ ಸಾರ್, ಈ ಪ್ರೇಮ ಗೀಮ ಎಲ್ಲಾ ಬೋರಾಗಿಬಿಟ್ಟಿದೆ. ನಾವು ಜೀವನದಲ್ಲಿ ಅದೇ ದೊಡ್ಡದು ಅಂತ ಫುಲ್ ಕಮಿಟ್‌ಮೆಂಟಲ್ಲಿ, ಫುಲ್ ಟೈಂ ಕೊಟ್ರೆ ಆ ಹುಡುಗಿರು ನಮ್ಮಪ್ಪಾ ಅಮ್ಮಾ ಅಂತ ಸೆಂಟಿಮೆಂಟಲ್ ಡೈಲಾಗ್ ಹೊಡ್ಕೊಂಡು ಅವರವರ ದಾರಿ ನೋಡ್ಕೊಂಡು ಹೋಗ್ಬಿಟ್ರೆ, ಇನ್ನು ಪ್ರೀತಿ ಪ್ರೇಮ ಅಂತನ್ನೋದರಲ್ಲಿ ಏನಾದರೂ ಇಂಟರಸ್ಟ್ ಬರತ್ತಾ ಸಾರ್. ಸ್ವಾರ್ಥಿಗಳು ಸಾರ್, ಎಲ್ಲಾ ಸ್ವಾರ್ಥಿಗಳು. ಚಾಲೆಂಜ್ ಮಾಡ್ತೀನಿ ಸಾರ್, ನಾನು ಲವ್ಹ್ ಮಾಡೋಂಗೆ ಅವಳ ಗಂಡ ಲವ್ಹ್ ಮಾಡಲ್ಲ ಸಾರ್. ನನ್ನ ಫೀಲಿಂಗ್ ಅರ್ಥನೇ ಮಾಡ್ಕೊಳ್ಲಿಲ್ಲ ಸಾರ್’ ಅಂತ ಫುಲ್ ಫೀಲಿಂಗಲ್ಲಿ ದಿಲ್ ಮೇಲೆ ದಬದಬ ಅಂತ ಹೊಡ್ಕೊಂಡು ಡಲ್ ಹೊಡಿತಾರೆ.
ಯಾವುದೋ ಸಮಯೋಚಿತವಾದ ಕಾರಣಕ್ಕೆ, ಸಾಂದರ್ಭಿಕ ಸಂಭಾವ್ಯಕ್ಕೆ ಒಳಗಾಗುವ ಪ್ರೇಮಿಗಳು ತಾವು ಎದುರಿಸುವ ವಿರಹ ಮತ್ತು ವಿರಸಗಳಲ್ಲಿಯೂ ಒಂದಾಗುವ ಕನಸು ಕಾಣುತ್ತಾ, ಮಿಲನ ಮಹೋತ್ಸವದ ನಿರೀಕ್ಷೆಯಿಂದ ಮುಂದಿನ ಸರಸಮಯವಾದ ಗಳಿಗೆಗಳ ಮೇಲೆ ಭರವಸೆಯಿಡಬಹುದು. ಆದರೆ ಸ್ವರ್ಗದಲ್ಲೇ ಆಗಿರಬಹುದಾದಂತಹ ಈ ಮದುವೆ ಎಂಬ ಪವಿತ್ರವಾದ ಹಾಗೂ ಜನ್ಮಜನ್ಮಾಂತರದ ಅನುಬಂಧದ ಬಂಧನ ಇರುವುದರಿಂದ ಯಾವನೋ ತಾನು ತಿಳಿಯದೇ ಇರುವವನೂ, ತನ್ನಷ್ಟು ಪ್ರೀತಿಸಲಾಗದವನೂ ತನ್ನ ಪ್ರೇಮಿಯನ್ನು ಅಗ್ನಿಸಾಕ್ಷಿಯಾಗಿ ಕೈ ಹಿಡಿದು, ಸಪ್ತಪದಿ ತುಳಿದು, ಪವಿತ್ರವಾದ ಮೂರುಗಂಟನ್ನು ಹಾಕಿ ಮಾಂಗಲ್ಯ ಕಟ್ಟಿ ಮೂಗುದಾರ ಹಾಕಿ ಕರೆದುಕೊಂಡು ಹೋದಮೇಲೆ ಈ ಪ್ರೇಮಿ ಆ ಕೊಟ್ಟಿಗೆಗೆಂದೂ ಹೋಗುವ ಹಾಗಿಲ್ಲ.
ಭಗ್ನಹೃದಯವೇ ಗತಿ. ‘ಪ್ರೇಮದಾ ಕಾದಂಬರಿ, ಬರೆದೆನು ಕಣ್ಣೀರಲಿ, ಕಥೆಯೇ ಮುಗಿದು ಹೋದರೂ, ಮುಗಿಯದಿರಲಿ ಬಂಧನ’ ಅಂತ (ಅವರ ಕಣ್ಣೆದುರೇ ಊರಲ್ಲಿದ್ದರೆ) ಹಾಡಿಕೊಂಡು ಅವರ ಬಂಧನ ಗಟ್ಟಿಯಾಗಿರಲಿ ಅಂತ ಹಾರೈಸಿಕೊಂಡು ಇರಬೇಕು. ಅಥವಾ ಊರಾಚೆ, ವಿಶಾಲವಾದ ಧೂಳು ತುಂಬಿದ, ಗಣಿಗಾರಿಕೆಯ ಪ್ರದೇಶದಲ್ಲೇನಾದರೂ ಇದ್ದರೆ ‘ನೀನೇ ಸಾಕಿದ ಗಿಣಿ, ನಿನ್ನಾ ಮುದ್ದಿನಾ ಗಿಣಿ, ಹದ್ದಾಗಿ ಕುಕ್ಕಿತಲ್ಲೋ’ ಎಂದು ತಾನು ಮಾಲುಗಳಲ್ಲಿ ಆಕೆಯನ್ನು ಸುತ್ತಿಸಿದ ದೃಶ್ಯಗಳನ್ನು, ಇಬ್ಬರೂ ಕಾಲೇಜಿಗೆ ಬಂಕ್ ಹೊಡೆದು ಪಾರ್ಕಲ್ಲಿ ಕುಳಿತುಕೊಂಡು (ನೆನೆಸಿಕೊಂಡರೆ ಏನೊಂದೂ ನೆನಪಿಗೆ ಬಾರದ) ಮಾತುಗಳನ್ನು ಆಡುತ್ತಿದ್ದುದ್ದನ್ನು ಫ್ಲಾಶ್‌ಕಟ್‌ಗಳಲ್ಲಿ ನೋಡುತ್ತಾ ಬಿಳಿಯ ಜುಬ್ಬ ಮತ್ತು ಜೀನ್ಸು ಪೂರ್ತಿ ಕೆಂಪಗಾಗುವವರೆಗೂ ಬಿದ್ದು ಹೊರಳಾಡಬಹುದು.
ಆ ಯುವಮಿತ್ರನಿಗೆ ನಾನೊಂದು ಪ್ರಶ್ನೆ ಕೇಳಿದೆ. “ಮಗಾ, ಈ ಲವ್ಹ್ ಅಂತನ್ನೋದು ಯಾವಾಗಾಯ್ತು ಮಗಾ?” ಅಂತ.
“ಆನ್ಸರ್ರೇ ಮಾಡಕ್ಕಾಗ್ದೇ ಇರೋ ಕೊಶ್ಚನ್ ಕೇಳಿದ್ರೆ ಏನು ಹೇಳೋದು” ಅಂತನೇ ಅವನು ಹೇಳಿದ್ದು.
“ಅಲ್ಲಾ ಮಗಾ, ನಿನಗೆ ಯಾವಾಗ ಈ ಲವ್ಹ್ ಅನ್ನೋ ಫೀಲಿಂಗ್ ಶುರುವಾಗಿದ್ದೂಂತ” ಅಂತ ಸ್ಪಷ್ಟ ಪಡಿಸಿದರೆ, ತನ್ನ ಡವ್ ಅನ್ನು ಫಸ್ಟ್ ಟೈಮ್ ನೋಡಿದ್ದು, ಅವಳ ರಿಯಾಕ್ಷನ್ನು, ತಾನು ಅವಳಿಗೆ ಅಪ್ರೋಚ್ ಮಾಡಿದ್ದು, ಅದಕ್ಕೆ ಅವಳು ರೆಸ್ಪಾಂಡ್ ಮಾಡಿದ್ದು, ಆಮೇಲೆ ಎರಡನೇ ಸಲ ಸಿಕ್ಕಿದ್ದು ಇತ್ಯಾದಿಗಳ ಕ್ರೋನಾಲಜಿ ಆರ್ಡರ್ ಸಿಕ್ಕೀತು.
“ಅಲ್ಲೋ ಮಗಾ, ನೀನು ಹುಟ್ಟಿದಾಗಿಂದ ನಿಮ್ಮಪ್ಪ, ಅಮ್ಮ ಇವರುಗಳೆಲ್ಲಾ ಪ್ರೀತಿ ಮಾಡ್ತಿರೋದು, ನಿನ್ನ ಗೆಳೆಯರು ನಿನಗೆ ಸಾಥ್ ಕೊಟ್ಟುಕೊಂಡು, ನಿನ್ನ ಜೊತೆ ಹುಟ್ಟಿರುವವರು ನಿನ್ನ ಮೇಲೆ ಇಟ್ಟಿರೋ ಪ್ರೀತಿಗೆಲ್ಲಾ ನೀನು ಹೇಗೋ ರೆಸ್ಪಾಂಡ್ ಮಾಡ್ತಿದ್ದೀಯಾ? ಅವಳು ಯಾರೋ ಅವಳ ತಂದೆ ತಾಯಿ ಮಾತು ಕೇಳ್ಕೊಂಡು ನಿನ್ನ ಫೀಲಿಂಗ್ಸ್ ನ ಅರ್ಥ ಮಾಡಿಕೊಳ್ಳದೇ ಹೋದಾಗ ಇಷ್ಟೊಂದು ಡಿಸ್ಟರ್ಬ್ ಆಗೋ ಟೈಮಲ್ಲಿ ನಿನಗೆ ಇವರ‍್ಯಾರೂ ಜ್ಞಾಪಕನೇ ಬರೋದಿಲ್ಲವಾ? ಆ ಪ್ರೇಮ ಯಾವುದು? ಈ ಪ್ರೇಮ ಯಾವುದು? ಅವಳು ನಿನ್ನ ಪವಿತ್ರವಾದ ಪ್ರೇಮವನ್ನು ನಿರಾಕರಣೆ ಮಾಡಿದ್ದು ಮೋಸವಾದರೆ, ಅವಳ ಪ್ರೇಮದ ಗುಂಗಲ್ಲಿ ಇವರನ್ನು ಮರೆತಿರುವುದನ್ನು ಏನೆಂದು ಅನ್ನಬಹುದು ಕಂದಾ?” ಅಂತ ಕೇಳಿದರೆ, ಉತ್ತರವಿಲ್ಲ.
ಆದರೂ ಹೇಳಿದ ನನ್ನ ಯುವಮಿತ್ರ “ಅದೇ ಸಾರ್ ಈಗ ಗೊತ್ತಾಗ್ತಾ ಇರೋದು” ಅಂತ.
“ಒಬ್ಬರಂತೂ ನೀನಿಲ್ಲದೇ ಇರೋದಿಕ್ಕೇ ಸಾಧ್ಯವಿಲ್ಲ. ಅವರನ್ನೇ ನೀನು ಮರೆತು ಬಿಡ್ತೀಯಲ್ಲೋ? ಎಂಥಾ ದ್ರೋಹಿಯೋ ನೀನು” ಅಂತ ಹೇಳಿದೆ.
“ಯಾರು?” ಅವನ ಹುಬ್ಬು ಮೇಲೇರಿತು ಆಶ್ಚರ್ಯಾಘಾತಗಳಿಂದ.
“ನೀನೇ” ಎಂದೆ.
- ಯೋಗೇಶ್ ಮಾಸ್ಟರ್, ರಂಗಕರ್ಮಿ




